Site icon Vistara News

ವಿಸ್ತಾರ Explainer : Budget 2023: ಕೇಂದ್ರ ಬಜೆಟ್‌ ಎಂದರೇನು? ಸಂವಿಧಾನ ಏನೆನ್ನುತ್ತದೆ?

budget2023

ಬಜೆಟ್‌ ಎಂದರೇನು?

ಸರ್ಕಾರ ಮುಂಬರುವ ಆರ್ಥಿಕ ವರ್ಷಕ್ಕೆ (Fiscal year) ತನ್ನ ಉದ್ದೇಶಿತ ಖರ್ಚುಗಳು ಮತ್ತು ಆದಾಯದ ವಿವರಗಳನ್ನು ಬಜೆಟ್‌ ಮೂಲಕ ಮುಂದಿಡುತ್ತದೆ. ಆರ್ಥಿಕ ವರ್ಷ ಏಪ್ರಿಲ್‌ 1ರಂದು ಆರಂಭವಾಗಿ ಮಾರ್ಚ್‌ 31ಕ್ಕೆ ಅಂತ್ಯವಾಗುತ್ತದೆ. ಕೇಂದ್ರ ಬಜೆಟ್‌ ಅನ್ನಯ ಹಣಕಾಸು ಸಚಿವರು ಸಂಸತ್ತಿನಲ್ಲಿ ಮಂಡಿಸುತ್ತಾರೆ. ಮುಂಬರುವ ಆರ್ಥಿಕ ವರ್ಷಕ್ಕೆ ಸರ್ಕಾರದ ಆಯ-ವ್ಯಯದ ಸಮಗ್ರ ದಾಖಲೆ (ವಿಸ್ತಾರ Explainer : Budget 2023:) ಇದಾಗಿರುತ್ತದೆ.

ಬಜೆಟ್‌ಗೆ ಸಂಬಂಧಿಸಿ ಸಂವಿಧಾನ ಏನು ಹೇಳುತ್ತದೆ?

ಬಜೆಟ್‌ಗೆ ಸಂಬಂಧಿಸಿ ಸಂವಿಧಾನದಲ್ಲಿ ಕೆಲವು ನಿಬಂಧನೆಗಳು ಇವೆ. ಅವುಗಳ ವಿವರ ಇಲ್ಲಿದೆ.

  1. ಸಂವಿಧಾನದ 112ನೇ ವಿಧಿಯ ಪ್ರಕಾರ ಕೇಂದ್ರ ಬಜೆಟ್‌ ಅನ್ನು ಸಂಸತ್ತಿನಲ್ಲಿ ಫೆಬ್ರವರಿಯ ಕೊನೆಯ ದಿನ ಅಥವಾ ಮೊದಲ ದಿನಕ್ಕೆ ಮುನ್ನ ಮಂಡಿಸಬೇಕು.
  2. ಸಂವಿಧಾನದ 114ನೇ ವಿಧಿಯ ಪ್ರಕಾರ ಭಾರತದ ಒಟ್ಟು ನಿಧಿ, ಕೇಂದ್ರ ಸರ್ಕಾರದ ಆದಾಯ ಮತ್ತು ಸಂಪನ್ಮೂಲ, ಸಾಲದ ಮೂಲಕ ಪಡೆಯುವ ಫಂಡ್‌ಗಳ ಬಗ್ಗೆ ಪ್ರತ್ಯೇಕ ಲೆಕ್ಕಪತ್ರಗಳನ್ನು ನೀಡಬೇಕು. ಇದಕ್ಕಾಗಿ ಮುಂಗಡಪತ್ರವನ್ನು ಮಂಡಿಸಬೇಕು.
  3. ಸಂವಿಧಾನದ 266ನೇ ವಿಧಿಯ ಪ್ರಕಾರ ಸರ್ಕಾರ ತೆರಿಗೆ ಮತ್ತು ಇತರ ಮೂಲಗಳಿಂದ ಪಡೆಯುವ ಆದಾಯದ ಲೆಕ್ಕವನ್ನು ನೀಡಬೇಕು.
  4. ಸಂವಿಧಾನದ 266(2) ವಿಧಿಯ ಪ್ರಕಾರ ಸರ್ಕಾರ ಸಂಸತ್ತಿನಲ್ಲಿ ವಿಧೇಯಕ ಅಂಗೀಕಾರವಾದ ಬಳಿಕ ಒಟ್ಟು ನಿಧಿಯಿಂದ ಹಣವನ್ನು ಪಡೆಯಬಹುದು. ಸಂಸತ್ತಿನ ಅಂಗೀಕಾರ ಇಲ್ಲದೆ ವಿತ್‌ ಡ್ರಾ ಮಾಡಲು ಸಾಧ್ಯವಿಲ್ಲ.
  5. ಸಂವಿಧಾನದ 270ನೇ ವಿಧಿಯ ಪ್ರಕಾರ ಸರ್ಕಾರ ಪ್ರತಿ ರಾಜ್ಯದ ವೆಚ್ಚ ಮತ್ತು ಆದಾಯದ ಲೆಕ್ಕಾಚಾರವನ್ನು ಒಳಗೊಂಡ ಬಜೆಟ್‌ ಮಂಡನೆಯ ಅಗತ್ಯವಿದೆ.
  6. ಸಂವಿಧಾನದ 272ನೇ ವಿಧಿಯ ಪ್ರಕಾರ ಕೇಂದ್ರ ಸರ್ಕಾರ ಕೆಲವು ತೆರಿಗೆ ಮತ್ತು ಸುಂಕಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಹಿಸಬೇಕು.

ಕೇಂದ್ರ ಬಜೆಟ್‌ನ ಪ್ರಮುಖ ಭಾಗಗಳು:

ರೆವೆನ್ಯೂ ಬಜೆಟ್:‌ ತೆರಿಗೆ, ತೆರಿಗೆಯೇತರ ಆದಾಯ ಮತ್ತು ಕ್ಯಾಪಿಟಲ್‌ ರಿಸಿಪ್ಟ್‌ಗಳ ವಿವರ ಈ ವಿಭಾಗದಲ್ಲಿ ಇರುತ್ತದೆ. ತೆರಿಗೆ ಮತ್ತು ತೆರಿಗೆಯೇತರ ಮೂಲಗಳಿಂದ ಸರ್ಕಾರಕ್ಕೆ ಎಷ್ಟು ಆದಾಯ ಸಿಗುತ್ತದೆ ಎಂಬ ವಿವರ ಇಲ್ಲಿ ಸಿಗುತ್ತದೆ.

ಕ್ಯಾಪಿಟಲ್‌ ಬಜೆಟ್:‌ ಮೂಲಸೌಕರ್ಯ ಯೋಜನೆಗಳಿಗೆ ಸರ್ಕಾರ ಎಷ್ಟು ಹಣ ಖರ್ಚು ಮಾಡಲು ಉದ್ದೇಶಿಸಿದೆ, ಸಾರ್ವಜನಿಕ ಉದ್ದಿಮೆಗಳು, ದೀರ್ಘಕಾಲೀನ ಹೂಡಿಕೆ, ಹೊಸ ರಸ್ತೆ, ಸೇತುವೆ, ವಿಮಾನ ನಿಲ್ದಾಣ ಇತ್ಯಾದಿಗಳಿಗೆ ವಿನಿಯೋಗಿಸಲು ಉದ್ದೇಶಿಸಿರುವ ಹಣದ ವಿವರ ಲಭಿಸುತ್ತದೆ.

ಯೋಜನೆ ಮತ್ತು ಯೋಜನೆಯೇತರ ವೆಚ್ಚ

ಬಜೆಟ್‌ನಲ್ಲಿ ಸರ್ಕಾರದ ವೆಚ್ಚಗಳನ್ನು ಎರಡಾಗಿ ವಿಭಜಿಸಲಾಗುತ್ತದೆ. ಅವುಗಳೆಂದರೆ- ಯೋಜನೆ ಮತ್ತು ಯೋಜನೆಯೇತರ ವೆಚ್ಚ. ಯೋಜನೆ ವೆಚ್ಚ ಎಂದರೆ (Plan expenditure) ಸರ್ಕಾರದ ನಿರ್ದಿಷ್ಟ ಯೋಜನೆಗಳಿಗೆ ಮಾಡುವ ಖರ್ಚು. ಯೋಜನೆಯೇತರ (non-expenditure) ವೆಚ್ಚ ಎಂದರೆ ಸರ್ಕಾರಿ ಉದ್ಯೋಗಿಗಳ ವೇತನ, ಪಿಂಚಣಿ ಮತ್ತು ಆಡಳಿತಾತ್ಮಕ ವೆಚ್ಚಗಳು.

ವಿತ್ತೀಯ ಕೊರತೆ(Fiscal deficit): ಸರ್ಕಾರದ ಆದಾಯ ಮತ್ತು ವೆಚ್ಚದ ನಡುವಣ ವ್ಯತ್ಯಾಸವನ್ನು ವಿತ್ತೀಯ ಕೊರತೆ ಎನ್ನುತ್ತಾರೆ. ಅದನ್ನು ಬಜೆಟ್‌ ಉಲ್ಲೇಖಿಸುತ್ತದೆ. ಆರ್ಥಿಕತೆಯ ಸ್ಥಿರತೆಗೆ ವಿತ್ತೀಯ ಕೊರತೆಯನ್ನು ನಿಯಂತ್ರಿಸಸಲು ಸರ್ಕಾರ ಆದ್ಯತೆ ನೀಡುತ್ತದೆ.

ತೆರಿಗೆ ಪ್ರಸ್ತಾಪ: ತೆರಿಗೆ ಕಾನೂನು ಮತ್ತು ತೆರಿಗೆ ದರದಲ್ಲಿ ಬದಲಾವಣೆಗೂ ಬಜೆಟ್‌ನಲ್ಲಿ ಅವಕಾಶಗಳಿವೆ.

ಬಜೆಟ್‌ ಮಹತ್ವವೇನು?

ಬಜೆಟ್‌ ಅನ್ನು ಉದ್ಯಮ, ವಾಣಿಜ್ಯ ವಲಯ, ಹೂಡಿಕೆದಾರರು, ಅಕಾಡೆಮಿಕ್‌ ವಲಯ, ಸಾರ್ವಜನಿಕರು, ತೆರಿಗೆದಾರರು ಆಸಕ್ತಿಯಿಂದ ಗಮನಿಸುತ್ತಾರೆ. ಇದು ಸರ್ಕಾರದ ಆರ್ಥಿಕ ನೀತಿ ಮತ್ತು ಆದ್ಯತೆಯನ್ನು ಬಿಂಬಿಸುತ್ತದೆ. ಆರ್ಥಿಕತೆ ಮತ್ತು ಜನಜೀವನದ ಮೇಲೆ ಪ್ರಭಾವ ಬೀರುತ್ತದೆ.

Exit mobile version