ಬೆಂಗಳೂರು: ನೀವು ಗಮನಿಸುತ್ತಿರಬಹುದು. ಕಳೆದ ಕೆಲ ದಿನಗಳಿಂದ ಎಸ್‌ಬಿಐ, ಕೆನರಾ, ಬ್ಯಾಂಕ್ ಆಫ್ ಬರೋಡಾ, ಕೋಟಕ್ ಮಹೀಂದ್ರಾ ಬ್ಯಾಂಕ್ ಸೇರಿದಂತೆ ಪ್ರಮುಖ ಬ್ಯಾಂಕ್‌ಗಳು ಹಬ್ಬಗಳ ಸೀಸನ್ ಶುರುವಾಗುವುದಕ್ಕೆ ಮುನ್ನ ತಮ್ಮ ನಿಶ್ಚಿತ ಠೇವಣಿಗಳ (Fixed deposits) ಮೇಲಿನ ಬಡ್ಡಿ ದರದಲ್ಲಿ ಏರಿಕೆ ಮಾಡಿವೆ. ಏಕೆ ಹೀಗಾಗಿದೆ? ( ವಿಸ್ತಾರ Explainer ) ಇದುವರೆಗೆ ಠೇವಣಿಗಳ ಬಡ್ಡಿ ದರ ಏರಿಸುವ ಗೋಜಿಗೆ ಹೋಗದಿದ್ದ ಬ್ಯಾಂಕ್‌ಗಳು ಇದ್ದಕ್ಕಿದ್ದಂತೆ ಎಫ್‌ಡಿ ಬಡ್ಡಿ ದರ ಏರಿಕೆಗೆ ಮುಂದಾಗಿದ್ದೇಕೆ?
ಸಾಲಕ್ಕೆ ಬೇಡಿಕೆ, ಆದರೆ ಆರ್‌ಬಿಐ ಫಂಡ್ ಇಳಿಕೆ ನಿರೀಕ್ಷೆ
ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಮೊದಲನೆಯದಾಗಿ ಸಾಲ ವಿತರಣೆ ಈಗ ಚುರುಕಾಗಿದ್ದು, ಬೇಡಿಕೆ ವೃದ್ಧಿಸಿದೆ. ಎರಡನೆಯದಾಗಿ ಇತ್ತೀಚೆಗೆ ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡಿದ ನಿರ್ದೇಶನದಲ್ಲಿ, ಇನ್ನು ಮುಂದೆ ನಿಮಗೆ ಸಾಲ ವಿತರಣೆಗೆ ಬೇಕಾಗುವ ಫಂಡ್‌ಗಳನ್ನು ನೀವೇ ಹೊಂದಿಸಿಕೊಳ್ಳಬೇಕು. ಇದಕ್ಕಾಗಿ ನನ್ನ ಎದುರು ಬರುವುದು ಬೇಡ ಎಂದು ನಿರ್ದೇಶಿಸಿದೆ. ಹೀಗಾಗಿ ಇದುವರೆಗೆ ಆರ್‌ಬಿಐನ ರೆಪೊ ದರ ಇಳಿಕೆಯ ಲಾಭ ಪಡೆದು ಕಡಿಮೆ ವೆಚ್ಚಕ್ಕೆ ನಿಧಿಯನ್ನು ಸಂಗ್ರಹಿಸಿ ಸಾಲಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದ ಬ್ಯಾಂಕ್‌ಗಳು ಇನ್ನು ಮುಂದೆ ಆರ್‌ಬಿಐ ಬದಲಿಗೆ ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ. ಹಬ್ಬದ ಸೀಸನ್‌ನಲ್ಲಿ ಸಾಲ ವಿತರಣೆಗೂ ಬೇಡಿಕೆ ಇರುತ್ತದೆ. ಆದ್ದರಿಂದ ನಿಶ್ಚಿತ ಠೇವಣಿಗಳ ಬಡ್ಡಿ ದರವನ್ನು ಏರಿಸಿ, ಠೇವಣಿಗಳನ್ನು ಹೆಚ್ಚು ಸಂಗ್ರಹಿಸಲು ಬ್ಯಾಂಕ್‌ಗಳು ಮುಂದಾಗಿವೆ. ಹೀಗಾಗಿ ಇತ್ತೀಚೆಗೆ ಎಸ್‌ಬಿಐ ಸೇರಿದಂತೆ ಪ್ರಮುಖ ಬ್ಯಾಂಕ್‌ಗಳು ಎಫ್‌ಡಿ ಬಡ್ಡಿ ದರವನ್ನು ಏರಿಕೆ ಮಾಡಿವೆ.
ಎಸ್‌ಬಿಐನಲ್ಲಿ ೬.೧% ಎಫ್‌ಡಿ ಬಡ್ಡಿ ದರ: ದೇಶದ ಅತಿ ದೊಡ್ಡ ಬ್ಯಾಂಕ್ ಎಸ್‌ಬಿಐ, “ಊತ್ಸವ್ ಡೆಪಾಸಿಟ್ʼ ಎಂಬ ಎಫ್‌ಡಿ ಯೋಜನೆಗೆ ಚಾಲನೆ ನೀಡಿದ್ದು, ೭೫ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಗಸ್ಟ್ ೧೫ರಿಂದ ೬.೧ ಬಡ್ಡಿ ದರವನ್ನು ನೀಡಲಿದೆ. ೭೫ ದಿನಗಳ ಕಾಲ ಈ ಕೊಡುಗೆ ಲಭಿಸಲಿದೆ.
ಕೆನರಾಬ್ಯಾಂಕ್ ಎಫ್‌ಡಿ ಬಡ್ಡಿ ದರ ಏರಿಕೆ: ಕೆನರಾ ಬ್ಯಾಂಕ್ ೨ ಕೋಟಿ ರೂ.ಗಿಂತ ಕಡಿಮೆ ಮೊತ್ತದ ಠೇವಣಿಗಳಿಗೆ ಬಡ್ಡಿ ದರವನ್ನು ಆಗಸ್ಟ್ ೮ರಿಂದ ಅನ್ವಯಿಸುವಂತೆ ಏರಿಕೆ ಮಾಡಿದೆ. ೭ದಿನಗಳಿಂದ ೧೦ ವರ್ಷದ ಅವಧಿಯ ಠೇವಣಿಗಳಿಗೆ ಬಡ್ಡಿ ದರದಲ್ಲಿ ೨.೯೦%ರಿಂದ ೫.೭೫% ತನಕ ಏರಿಕೆಯಾಗಿದೆ. ಹಿರಿಯ ನಾಗರಿಕರಿಗೆ ೨.೯೦%ಯಿಂದ ೬.೨೫% ತನಕ ಪರಿಷ್ಕರಿಸಲಾಗಿದೆ.
ಬ್ಯಾಂಕ್ ಆಫ್ ಬರೋಡಾದಿಂದ ಸ್ಪೆಶಲ್ ಎಫ್‌ಡಿ: ಬ್ಯಾಂಕ್ ಆಫ್ ಬರೋಡಾ ೭೫ನೇ ಸ್ವಾತಂತ್ರ್ಯ ಮಹೋತ್ಸವದ ಪ್ರಯುಕ್ತ ಬರೋಡಾ ತಿರಂಗಾ ಡಿಪಾಸಿಟ್ ಸ್ಕೀಮ್ ಯೋಜನೆಯನ್ನು ಹಮ್ಮಿಕೊಂಡಿದೆ. ಈ ಯೋಜನೆಯಡಿಯಲ್ಲಿ ೪೪೪ ದಿನಗಳು ಮತ್ತು ೫೫೫ ದಿನಗಳ ಎಫ್.ಡಿ ಯೋಜನೆಗಳನ್ನು ಪರಿಚಯಿಸಲಾಗಿದೆ. ಇದರಲ್ಲಿ ೬% ತನಕ ಬಡ್ಡಿ ಆದಾಯವನ್ನು ಹೂಡಿಕೆದಾರರು ಪಡೆಯಬಹುದು. ಹಿರಿಯ ನಾಗರಿಕರು ಹೆಚ್ಚುವರಿ ೦.೫೦% ಬಡ್ಡಿ ಆದಾಯ ಗಳಿಸಬಹುದು.
ಆರ್‌ಬಿಐ ದುಡ್ಡನ್ನೇ ನೆಚ್ಚಿಕೊಳ್ಳದಿರಿ, ಬ್ಯಾಂಕ್‌ಗಳಿಗೆ ಗವರ್ನರ್ ಸಲಹೆ
ಇತ್ತೀಚೆಗೆ ಆರ್‌ಬಿಐನ ರೆಪೊ ದರವನ್ನು ಏರಿಸಿದ ಬಳಿಕ ಗವರ್ನರ್ ಶಕ್ತಿಕಾಂತ ದಾಸ್ ಅವರು, ” ಬ್ಯಾಂಕ್‌ಗಳು ಸಾಲ ವಿತರಣೆಯ ಸಲುವಾಗಿ ಆರ್‌ಬಿಐ ಫಂಡ್ ಅನ್ನೇ ನೆಚ್ಚಿಕೊಳ್ಳಬಾರದು. ಇತರ ಮೂಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಬ್ಯಾಂಕ್‌ಗಳು ಕೊನೆಯ ಪ್ರಯತ್ನವಾಗಿ ಮಾತ್ರ ಆರ್‌ಬಿಐನಿಂದ ಫಂಡ್ ಸಂಗ್ರಹಿಸಬೇಕುʼʼ ಎಂದು ಸೂಚಿಸಿದ್ದರು. ಹೀಗಾಗಿ ಗತ್ಯಂತರವಿಲ್ಲದೆ ಬ್ಯಾಂಕ್‌ಗಳು ಠೇವಣಿಗಳ ಮೇಲಿನ (ಎಫ್.ಡಿ) ಬಡ್ಡಿ ದರವನ್ನು ಏರಿಸಲು ಮುಂದಾಗಿದೆ.
ಸಾಲ ವಿತರಣೆ ೩ ವರ್ಷಗಳಲ್ಲೇ ಹೆಚ್ಚಳ: ಆರ್‌ಬಿಐ ಪ್ರಕಾರ ಜುಲೈ ೧೫ಕ್ಕೆ ಅಂತ್ಯವಾದ ಪಾಕ್ಷಿಕ ಅವಧಿಯಲ್ಲಿ ಸಾಲ ವಿತರಣೆಯಲ್ಲಿ ೧೩.೧% ಹೆಚ್ಚಳವಾಗಿದೆ. ಕಳೆದ ಮೂರು ವರ್ಷಗಳಲ್ಲಿಯೇ ಇದು ಗರಿಷ್ಠ ಪ್ರಮಾಣವಾಗಿದೆ. ಈ ಅವಧಿಯಲ್ಲಿ ಬ್ಯಾಂಕ್‌ಗಳು ೧.೦೨ ಲಕ್ಷ ಕೋಟಿ ರೂ. ಹೆಚ್ಚುವರಿ ಸಾಲ ವಿತರಿಸಿದ್ದು, ಒಟ್ಟು ಸಾಲದ ಗಾತ್ರ ೧೨೧ ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.
ಬ್ಯಾಂಕ್‌ಗಳಲ್ಲಿ ಸಾಲದ ವಿತರಣೆಯು ಠೇವಣಿ ಸಂಗ್ರಹಕ್ಕಿಂತ ಹೆಚ್ಚಳವಾಗಿದ್ದಾದ ಮತ್ತು ಬ್ಯಾಂಕ್‌ನಲ್ಲಿ ನಗದು ಕೊರತೆ ಉಂಟಾದಾಗ ಠೇವಣಿಗಳ ಮೇಲಿನ ಬಡ್ಡಿ ದರ ಏರಿಕೆಯಾಗುತ್ತದೆ ಎನ್ನುತ್ತಾರೆ ತಜ್ಞರು.
ಬ್ಯಾಂಕ್‌ಗಳಲ್ಲಿ ಎಫ್‌ಡಿ ಬಡ್ಡಿ ಹೆಚ್ಚಳಕ್ಕೆ ಕಾರಣಗಳು:
- ಆರ್‌ಬಿಐನಿಂದ ರೆಪೊ ದರ ಏರಿಕೆ
- ಆರ್‌ಬಿಐ ಫಂಡ್ ನೆಚ್ಚಿಕೊಳ್ಳದಂತೆ ಗವರ್ನರ್ ಅವರ ಸೂಚನೆ
- ಬ್ಯಾಂಕ್‌ಗಳಲ್ಲಿ ಸಾಲ ವಿತರಣೆಗೆ ಬೇಡಿಕೆ ಹೆಚ್ಚಳವಾಗಿರುವುದು
- ಸಾಲ ವಿತರಣೆಗೆ ಫಂಡ್ ಸಂಗ್ರಹಿಸಬೇಕಾದ ಒತ್ತಡ
ಎಫ್.ಡಿ ಬಡ್ಡಿ ದರ ೭%ಕ್ಕೆ ಏರಿಕೆಯಾಗಲಿದೆಯೇ? ಬ್ಯಾಂಕ್‌ಗಳಲ್ಲಿ ಉಳಿತಾಯಗಾರರಿಗೆ ನಿಶ್ಚಿತ ಠೇವಣಿ ಆಕರ್ಷಕ ಮತ್ತು ಖಾತರಿಯ ಆದಾಯ ಕೊಡುವ ಹೂಡಿಕೆಯ ಸಾಧನ. ಕಳೆದ ಎರಡು ವರ್ಷ ಕೋವಿಡ್ ಬಿಕ್ಕಟ್ಟಿನ ಅವಧಿಯಲ್ಲಿ ಎಫ್‌ಡಿಗಳ ಬಡ್ಡಿ ದರಗಳು ಇಳಿಕೆಯಾಗಿತ್ತು. ಹಾಗೆ ಇಳಿಕೆಯಾಗಿದ್ದ ಬಡ್ಡಿ ದರಗಳು ಈಗತಾನೆ ಚೇತರಿಸುತ್ತಿವೆ. ಆರ್‌ಬಿಐ ರೆಪೊ ದರ ಏರಿಸಿದಾಗಲೆಲ್ಲ ಬ್ಯಾಂಕ್‌ಗಳು ಎಫ್ ಡಿ ದರ ಏರಿಸುವುದು ಸಾಮಾನ್ಯ. ಕೆಲವು ತಜ್ಞರ ಪ್ರಕಾರ ಎಫ್‌ಡಿ ಬಡ್ಡಿ ದರ ೭% ತನಕ ಏರಿಕೆಯಾಗುವ ಸಾಧ್ಯತೆ ಇದೆ.