Site icon Vistara News

ವಿಸ್ತಾರ Explainer | ಡಾಲರ್‌ ಎದುರು ರೂಪಾಯಿ 80ಕ್ಕೆ ಕುಸಿದಿದ್ದೇಕೆ? ಇದರ ಪರಿಣಾಮವೇನು?

rupee fall

ನಿರೀಕ್ಷೆಯಂತೆ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ೮೦ ರೂ.ಗೆ ಮಂಗಳವಾರ ಕುಸಿದಿದೆ. ಕಳೆದ ೨೦೧೪ರಿಂದೀಚೆಗೆ ೨೫% ಕುಸಿದಿರುವ ರೂಪಾಯಿಯ ಪತನದ ಕಾರಣ ಮತ್ತು ಪರಿಣಾಮಗಳು ಹಲವಾರು. ಹಾಗಾದರೆ ಅವುಗಳೇನು? ನೋಡೋಣ ಬನ್ನಿ.

ಮೊದಲ ಬಾರಿಗೆ ೮೦ ರೂ.ಗೆ ಕುಸಿತ

ಡಾಲರ್‌ ಎದುರು ರೂಪಾಯಿ ಮೌಲ್ಯ ಮಂಗಳವಾರ (೨೦೨೨ ಜುಲೈ ೧೯) ಮೊಟ್ಟ ಮೊದಲ ಬಾರಿಗೆ ದಾಖಲೆಯ ೮೦ ರೂ.ಗೆ ಕುಸಿದಿದೆ. ಮತ್ತೊಂದು ಕಡೆ ದೇಶದ ವ್ಯಾಪಾರ ಕೊರತೆ ಕೂಡ ಜೂನ್‌ನಲ್ಲಿ ದಾಖಲೆಯ ೨೫.೬ ಶತಕೋಟಿ ಡಾಲರ್‌ಗೆ (ಅಂದಾಜು ೨.೦೪ ಲಕ್ಷ ಕೋಟಿ ರೂ.) ಏರಿಕೆಯಾಗಿದೆ. (ದೇಶದ ಆಮದು ವೆಚ್ಚವು ರಫ್ತಿನ ಮೌಲ್ಯಕ್ಕಿಂತ ಹೆಚ್ಚಾದಾಗ ಉಂಟಾಗುವ ವ್ಯತ್ಯಾಸವೇ ವ್ಯಾಪಾರ ಕೊರತೆ) ಆಮದು ರಫ್ತಿಗಿಂತ ಹೆಚ್ಚಾದಂತೆಲ್ಲ ವ್ಯಾಪಾರ ಕೊರತೆಯೂ ಹೆಚ್ಚುತ್ತದೆ. ಆಗ ಡಾಲರ್‌ಗೆ ಬೇಡಿಕೆ ಹೆಚ್ಚುತ್ತದೆ. ರೂಪಾಯಿ ಮುಗ್ಗರಿಸುತ್ತದೆ. ಈಗ ಭಾರತಕ್ಕೆ ಕಚ್ಚಾ ತೈಲ ಮತ್ತು ಕಲ್ಲಿದ್ದಲು ಆಮದು ಹೆಚ್ಚಿರುವುದರಿಂದ ವ್ಯಾಪಾರ ಕೊರತೆಯೂ ಅಧಿಕವಾಗುತ್ತಿದೆ. ಆದ್ದರಿಂದ ಕರೆನ್ಸಿ ಮೌಲ್ಯ ಕುಸಿತದ ಪರಿಣಾಮಗಳನ್ನು ಅರಿತುಕೊಳ್ಳುವುದು ಅವಶ್ಯಕ.

ವಿದೇಶಿ ಹೂಡಿಕೆದಾರರು ಭಾರತೀಯ ಷೇರು, ಬಾಂಡ್‌ ಇತ್ಯಾದಿಯನ್ನು ಒಳಗೊಂಡಿರುವ ಈಕ್ವಿಟಿ ಮಾರುಕಟ್ಟೆಯಿಂದ ತಮ್ಮ ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ಉದಾಹರಣೆಗೆ ಜೂನ್‌ನಲ್ಲಿ ೫೨,೮೦೦ ಕೋಟಿ ರೂ. ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದರು. ಇದು ೨೦೨೦ರ ಮಾರ್ಚ್‌ನಿಂದೀಚೆಗೆ ಗರಿಷ್ಠ. ಇದರೊಂದಿಗೆ ೨೦೨೨ರಲ್ಲಿ ಇದುವರೆಗೆ ೨.೪೦ ಲಕ್ಷ ಕೋಟಿ ರೂ. ಹೂಡಿಕೆಯ ಹೊರ ಹರಿವು ಸಂಭವಿಸಿದೆ. ಆರ್ಥಿಕ ತಜ್ಞರ ಪ್ರಕಾರ ಭಾರತದ ಚಾಲ್ತಿ ಖಾತೆ ಕೊರತೆ (current account) ಜಿಡಿಪಿಯ ೩.೨% ಇದೆ. ( ಚಾಲ್ತಿ ಖಾತೆ ಕೊರತೆ ಎಂದರೆ ರಫ್ತಿಗಿಂತ ಹೆಚ್ಚಿನ ಆಮದು ಸ್ಥಿತಿ). ಆಮದನ್ನು ಹೆಚ್ಚಾಗಿ ಅವಲಂಬಿಸಿರುವ ಯಾವುದೇ ದೇಶಕ್ಕೆ ಇದು ಸವಾಲೇ ಸರಿ.

೨೦೧೪ರಿಂದ ಡಾಲರ್‌ ಎದುರು ರೂಪಾಯಿ ಸರಾಸರಿ ಮೌಲ್ಯ

2014ರಲ್ಲಿ60.99 ರೂ.
201564.13
201667.17
201765.09
201868.41
201970.40
202074.10
202173.93

ರೂಪಾಯಿ ಕುಸಿತಕ್ಕೆ ಕಾರಣಗಳು

ರೂಪಾಯಿ ಕುಸಿತದ ಅತಿ ದೊಡ್ಡ ಪರಿಣಾಮ ಬೆಲೆ ಏರಿಕೆ

ಡಾಲರ್‌ ಎದುರು ರೂಪಾಯಿಯ ಕುಸಿತದಿಂದ ಉಂಟಾಗುವ ಅತಿ ದೊಡ್ಡ ಅನಾನುಕೂಲ ಏನು ಎಂದರೆ ಆಮದು ವೆಚ್ಚ ದುಬಾರಿಯಾಗುತ್ತದೆ. ಮುಖ್ಯವಾಗಿ ಕಚ್ಚಾ ತೈಲ, ಬಂಗಾರ, ಎಲೆಕ್ಟ್ರಾನಿಕ್ಸ್‌ ಉಪಕರಣಗಳು, ಇತರ ಉತ್ಪನ್ನಗಳ ಆಮದು ದುಬಾರಿಯಾಗುತ್ತದೆ. ಬೆಲೆ ಏರಿಕೆ ಅಥವಾ ಹಣದುಬ್ಬರ ಉಂಟಾಗುತ್ತದೆ. ಈಗಾಗಲೇ ಆರ್‌ಬಿಐನ ಸುರಕ್ಷತಾ ಮಟ್ಟವನ್ನು ಹಣದುಬ್ಬರ ಮೀರಿದೆ.

ಡೀಸೆಲ್-ಪೆಟ್ರೋಲ್-ಗ್ಯಾಸ್‌ ಮತ್ತಷ್ಟು ತುಟ್ಟಿ

ರೂಪಾಯಿ ಕುಸಿತದ ಪರಿಣಾಮ ಆಮದು ವೆಚ್ಚ ಹೆಚ್ಚುವುದರಿಂದ ಡೀಸೆಲ್‌, ಪೆಟ್ರೋಲ್‌, ಎಲ್ಪಿಜಿ ದರದಲ್ಲಿ ಮತ್ತಷ್ಟು ಹೆಚ್ಚಳವಾದರೆ ಅಚ್ಚರಿ ಇಲ್ಲ. ಇದು ಜನರ ದೈನಂದಿನ ವೆಚ್ಚಗಳನ್ನು ಏರಿಸುತ್ತದೆ. ಸಾರಿಗೆ ವೆಚ್ಚ ಏರುತ್ತದೆ.

ರಫ್ತುದಾರರಿಗೆ ಅನುಕೂಲ: ರೂಪಾಯಿ ಮೌಲ್ಯ ಕುಸಿತದ ಪರಿಣಾಮ ಸಾಫ್ಟ್‌ವೇರ್‌ ಕಂಪನಿಗಳಿಗೆ ಆದಾಯ ಹೆಚ್ಚುತ್ತದೆ. ಅವುಗಳು ಡಾಲರ್‌ನಲ್ಲಿ ಗಳಿಸುವ ಆದಾಯವನ್ನು ರೂಪಾಯಿಗೆ ಪರಿವರ್ತಿಸಿದಾಗ ಮೊತ್ತ ಹೆಚ್ಚುತ್ತದೆ.

ಸೌರಶಕ್ತಿ ಮತ್ತು ಪವನ ಶಕ್ತಿಯನ್ನು ಆಧರಿಸಿದ ಉದ್ಯಮಗಳು ತಮ್ಮ ಯಂತ್ರೋಪಕರಣಗಳಿಗೆ ಆಮದನ್ನೇ ಹೆಚ್ಚು ಅವಲಂಬಿಸಿವೆ. ಹೀಗಾಗಿ ಅವುಗಳಿಗೆ ವೆಚ್ಚ ಏರಿಕೆಯಾಗಲಿದೆ.

ವಿದೇಶಗಳಲ್ಲಿ ಶಿಕ್ಷಣ, ಪ್ರವಾಸ ತುಟ್ಟಿ: ರೂಪಾಯಿ ಮೌಲ್ಯ ಕುಸಿತದಿಂದಾಗಿ ವಿದೇಶಗಳಲ್ಲಿ ಶಿಕ್ಷಣ ಮತ್ತು ವಿದೇಶ ಪ್ರವಾಸದ ವೆಚ್ಚ ಹೆಚ್ಚುತ್ತದೆ.

ಇತರ ಕರೆನ್ಸಿಗಳು ರೂಪಾಯಿಗಿಂತಲೂ ದುರ್ಬಲ

ಡಾಲರ್‌ ಎದುರು ರೂಪಾಯಿ ೮೦ ರೂ.ಗೆ ಕುಸಿದಿದ್ದರೂ, ಈ ವರ್ಷ ಬ್ರಿಟನ್‌ನ ಪೌಂಡ್‌, ಜಪಾನಿನ ಯೆನ್‌, ಯುರೋಪಿನ ಯೂರೊ ಇತ್ಯಾದಿ ಕರೆನ್ಸಿಗಳು ರೂಪಾಯಿಗಿಂತಲೂ ಹೆಚ್ಚು ಕುಸಿದಿವೆ ಎನ್ನುತ್ತಾರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.‌

ಒಟ್ಟಿನಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತದಿಂದ ಭಾರತಕ್ಕೆ ಹಲವು ಕಠಿಣ ಸವಾಲುಗಳು ಉಂಟಾಗಿರುವುದು ಹಾಗೂ ಮುಖ್ಯವಾಗಿ ಬೆಲೆ ಏರಿಕೆಯ ಆತಂಕವನ್ನು ಮತ್ತಷ್ಟು ಹೆಚ್ಚಿಸಿರುವುದು ವಾಸ್ತವ.

ಡಾಲರ್‌ಗೆ ಪರ್ಯಾಯವಾಗಿ ರುಪಾಯಿಯಲ್ಲೇ ಅಮದು-ರಫ್ತು ವ್ಯವಹಾರ ಸಾಧ್ಯವೇ?

ಆರ್‌ಬಿಐ ಇತ್ತೀಚೆಗೆ ಡಾಲರ್‌ ಬದಲಿಗೆ ರೂಪಾಯಿಯಲ್ಲಿಯೇ ಆಮದು-ರಫ್ತು ಕುರಿತ ಹಣಕಾಸು ಪಾವತಿಗಳನ್ನು (ಪೇಮೆಂಟ್‌, ಇನ್‌ವಾಯ್ಸಿಂಗ್‌, ಸೆಟ್ಲ್‌ಮೆಂಟ್)‌ ಮಾಡಲು ಅವಕಾಶ ಕಲ್ಪಿಸಿದೆ. ಮತ್ತೊಂದು ಕಡೆ ರಷ್ಯಾ ಕೂಡ ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧದ ಪರಿಣಾಮ ಭಾರತಕ್ಕೆ ಕಚ್ಚಾ ತೈಲವನ್ನು ರಫ್ತು ಮಾಡುವಾಗ ರೂಪಾಯಿಯಲ್ಲಿಯೇ ಪೇಮೆಂಟ್‌ ಸ್ವೀಕರಿಸಲು ಸಮ್ಮತಿಸಿದೆ. ಕೆಲ ವರ್ಷಗಳ ಹಿಂದೆ ಇರಾನ್‌ ಕೂಡ ರೂಪಾಯಿ ಪೇಮೆಂಟ್‌ಗೆ ಒಪ್ಪಿಕೊಂಡು ಕಚ್ಚಾ ತೈಲವನ್ನು ರಫ್ತು ಮಾಡಿತ್ತು. ಆದರೆ ರಷ್ಯಾ ಮತ್ತು ಇರಾನ್‌ ಎರಡೂ ದೇಶಗಳು ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧದ ಒತ್ತಡದಿಂದ ರೂಪಾಯಿಯಲ್ಲಿ ಪೇಮೆಂಟ್‌ ಸ್ವೀಕರಿಸಲು ಒಪ್ಪಿವೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ದೇಶಗಳು ಭಾರತದ ರೂಪಾಯಿಯನ್ನು ವ್ಯವಹಾರಗಳಲ್ಲಿ ಸರಾಗವಾಗಿ ಬಳಸಿಕೊಳ್ಳಲು ಆರಂಭಿಸಬೇಕು. ಆಗ ರೂಪಾಯಿ ಜಾಗತಿಕ ಕರೆನ್ಸಿಯಾಗಿ ಹೊರಹೊಮ್ಮಬಹುದು. ಹಾಗೂ ಡಾಲರ್‌ ಎದುರು ರೂಪಾಯಿ ಮೌಲ್ಯ ಗಣನೀಯವಾಗಿ ವೃದ್ಧಿಸಬಹುದು ಎನ್ನುತ್ತಾರೆ ತಜ್ಞರು.

Exit mobile version