Site icon Vistara News

Adani Group shares : ಅದಾನಿ ಎಫ್‌ಪಿಒ ದಿಢೀರ್‌ ಹಿಂತೆಗೆತ‌ ಏಕೆ? ಷೇರುಗಳ ಕತೆ ಏನು? ಹೂಡಿಕೆದಾರರು ಏನು ಮಾಡಬಹುದು?

Why the sudden withdrawal of Adani FPO? What is the story of stocks? What can investors do?

ಕೇಶವ ಪ್ರಸಾದ್‌ ಬಿ. ಬೆಂಗಳೂರು

ಅದಾನಿ ಷೇರುಗಳ ಮಹಾ ಪತನಕ್ಕೆ ಫೆ.1ರಂದು ಹೊಸ ತಿರುವು ಸಿಕ್ಕಿದೆ. (Adani Group shares) ಹಠಾತ್ ಬೆಳವಣಿಗೆಯೊಂದರಲ್ಲಿ ತನ್ನ 20,000 ಕೋಟಿ ರೂ.ಗಳ ಫಾಲೋ-ಆನ್‌ ಪಬ್ಲಿಕ್‌ ಆಫರ್‌ (FPO) ಅನ್ನು ಅದಾನಿ ಎಂಟರ್‌ಪ್ರೈಸಸ್ (Adani Enterprises) ಹಿಂತೆಗೆದುಕೊಂಡಿದೆ. ಹಾಗೂ ಹೂಡಿಕೆದಾರರಿಗೆ ಹಣವನ್ನು ಹಿಂತಿರುಗಿಸುವುದಾಗಿ ತಿಳಿಸಿದೆ. ದೇಶದ ಷೇರು ಮಾರುಕಟ್ಟೆಯ ಇತಿಹಾಸದಲ್ಲಿಯೇ ಅತಿ ದೊಡ್ಡದು ಎಂದು ಗಮನ ಸೆಳೆದಿದ್ದ ಎಫ್‌ಪಿಒಗೆ ಏಕೆ ಹೀಗಾಯಿತು? ಗೌತಮ್‌ ಅದಾನಿಯವರು (Adani Group) ಯಾಕೆ ಈ ನಿರ್ಧಾರವನ್ನು ತೆಗೆದುಕೊಂಡರು? ಹಾಗಾದರೆ ಅದಾನಿ ಕಂಪನಿಗಳ ಷೇರುಗಳ ಮುಂದಿನ ಕತೆ ಏನು, ರಿಟೇಲ್ ಹೂಡಿಕೆದಾರರು ಏನು ಮಾಡಬಹುದು ಎನ್ನುತ್ತೀರಾ?

‌ಎಫ್‌ಪಿಒ ಹೊಸ್ತಿಲಿನಲ್ಲಿಯೇ ಸಿಡಿದ ಹಿಂಡೆನ್‌ಬರ್ಗ್‌ ವರದಿ

ಅಮೆರಿಕದ ಶಾರ್ಟ್‌ ಸೆಲ್ಲರ್‌ ಹಿಂಡೆನ್‌ಬರ್ಗ್‌ ಸಂಸ್ಥೆಯು ಅದಾನಿ ಗ್ರೂಪ್‌ ವಿರುದ್ಧ 2022ರ ಜನವರಿ 24ರಂದು ಸ್ಫೋಟಕ ವರದಿಯನ್ನು ಬಿಡುಗಡೆಗೊಳಿಸಿತ್ತು.‌ ಒಟ್ಟು 88 ಪ್ರಶ್ನೆಗಳನ್ನು ಮುಂದಿಟ್ಟಿತ್ತು. ಕಳೆದ ದಶಕದಿಂದಲೂ ಮಾರುಕಟ್ಟೆಯಲ್ಲಿ ಅವ್ಯವಹಾರದ ಮೂಲಕ ಅದಾನಿ ಗ್ರೂಪ್‌ ತನ್ನ ಕಂಪನಿಗಳ ಷೇರು ದರಗಳನ್ನು ಕೃತಕವಾಗಿ ಏರಿಸಿದೆ. ಮಾರಿಷಸ್‌ನಲ್ಲಿ ನಕಲಿ ಕಂಪನಿಗಳನ್ನು ಸೃಷ್ಟಿಸಿ, ಷೇರು ಮಾರುಕಟ್ಟೆಯಲ್ಲಿ ಗಳಿಸಿದ ಹಣವನ್ನು ವರ್ಗಾಯಿಸಿ ಲೂಟಿ ಹೊಡೆದಿದೆ ಎಂದು ಗಂಭೀರವಾಗಿ ಆರೋಪಿಸಿತ್ತು. ಈ 32,000 ಪದಗಳ ವರದಿ ಪ್ರಕಟವಾದ ಬಳಿಕ ಮಾರುಕಟ್ಟೆಯಲ್ಲಿ ಅದಾನಿ ಸಮೂಹದ ಎಲ್ಲ ಕಂಪನಿಗಳ ಷೇರುಗಳೂ ನಿರಂತರವಾಗಿ ಕುಸಿಯುತ್ತಿವೆ. ಭಾರತೀಯ ಷೇರು ಪೇಟೆಯಲ್ಲಿ ಕೇವಲ ಮೂರು ದಿನಗಳ ಸೂಚ್ಯಂಕ ಕುಸಿತಕ್ಕೆ ಹೂಡಿಕೆದಾರರ 11.8 ಲಕ್ಷ ಕೋಟಿ ರೂ. ನಷ್ಟವಾಗಿದೆ. ಅದಾನಿ ಎಂಟರ್‌ಪ್ರೈಸಸ್‌ನ ಎಫ್‌ಪಿಒಗೆ ಕೇವಲ ಮೂರು ದಿನ ಬಾಕಿ ಇದ್ದಾಗ, ಹಿಂಡೆನ್‌ಬರ್ಗ್‌ನ ವರದಿ ಬಿಡುಗಡೆಯಾಗಿತ್ತು. ಗೌತಮ್‌ ಅದಾನಿಯವರ ಸಂಪತ್ತು ಫೋರ್ಬ್ಸ್‌ ಪ್ರಕಾರ ಅರ್ಧಕ್ಕರ್ಧ ಇಳಿದಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 150 ಶತಕೋಟಿ ಡಾಲರ್‌ನಷ್ಟಿದ್ದ (12 ಲಕ್ಷ ಕೋಟಿ ರೂ.) ಅದಾನಿಯವರ ಸಂಪತ್ತು 74 ಶತಕೋಟಿ ಡಾಲರ್‌ಗೆ (5.99 ಲಕ್ಷ ಕೋಟಿ ರೂ.) ತಗ್ಗಿದೆ. ಫೋರ್ಬ್ಸ್‌ ಸಿರಿವಂತರ ಪಟ್ಟಿಯಲ್ಲಿ 15ಕ್ಕೆ ಇಳಿದಿದ್ದಾರೆ.

ಜನವರಿ 27ರಂದು ಶುರುವಾದ ಎಫ್‌ಪಿಒದಲ್ಲಿ ಅದಾನಿ ಎಂಟರ್‌ಪ್ರೈಸಸ್‌ನ ಪ್ರತಿ ಷೇರಿನ ದರ 3,112 ರೂ.ಗಳಿಂದ 3,276 ರೂ. ತನಕ ನಿಗದಿಯಾಗಿತ್ತು. ಆದರೆ ಮಾರುಕಟ್ಟೆಯಲ್ಲಿ ಅದೇ ಕಂಪನಿಯ ಷೇರುಗಳು 2,128 ರೂ.ಗೆ ಕುಸಿದಿತ್ತು. ಮೊದಲೆರಡು ದಿನ ಎಫ್‌ಪಿಒಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಹಜವಾಗಿ ರಿಟೇಲ್‌ ಹೂಡಿಕೆದಾರರು ಈ ಎಫ್‌ಪಿಒದ ಕಡೆಗೆ ತಲೆ ಹಾಕಿಯೂ ಮಲಗಲಿಲ್ಲ. ಎಲ್ಲರೂ, ಅದಾನಿ ಗ್ರೂಪ್‌ ಎಫ್‌ಪಿಒದಲ್ಲಿ ಷೇರುಗಳ ದರವನ್ನು ಕಡಿತಗೊಳಿಸಬಹುದು ಹಾಗೂ ಅವಧಿಯನ್ನು ಮುಂದೂಡಬಹುದು ಎಂದೇ ಭಾವಿಸಿದ್ದರು. ಆದರೆ ಅದಾನಿಯವರು ಹಾಗೇನೂ ಮಾಡಲಿಲ್ಲ. ಒಂದು ಕಡೆ ಹಿಂಡೆನ್‌ ಬರ್ಗ್‌ ಆರೋಪಗಳನ್ನು ಕಂಪನಿ ನಿರಾಕರಿಸಿ, ಅದರ 88 ಪ್ರಶ್ನೆಗಳಿಗೆ ಪ್ರತಿಯಾಗಿ 413 ಪುಟಗಳ ಮರುತ್ತರವನ್ನು ಕೊಟ್ಟಿತು. ಮತ್ತೊಂದು ಕಡೆ ನಿಗದಿತ ವೇಳಾಪಟ್ಟಿ ಹಾಗೂ ದರದಲ್ಲಿ ಎಫ್‌ಪಿಒ ಮುಂದುವರಿತು. ಮೂರನೇ ದಿನವಾದ ಜನವರಿ 31ರಂದು ದೊಡ್ಡ ಚಮತ್ಕಾರ ಸಂಭವಿಸಿತ್ತು. ಸಾಂಸ್ಥಿಕ ಹೂಡಿಕೆದಾರರು ಎಲ್ಲ 20,000 ಕೋಟಿ ರೂ. ಷೇರುಗಳಿಗೆ ಬಿಡ್‌ ಸಲ್ಲಿಸಿ ಖರೀದಿಸಿದ್ದರು. ತಾಂತ್ರಿಕ ದೃಷ್ಟಿಯಿಂದ ಅದಾನಿ ಎಂಟರ್‌ಪ್ರೈಸಸ್‌ನ ಎಫ್‌ಪಿಒ ಯಶಸ್ವಿಯಾಗಿತ್ತು. ಆದರೆ ತಕ್ಷಣದ ವಾಸ್ತವ ಪರಿಸ್ಥಿತಿ ಭಿನ್ನವಾಗಿತ್ತು. ಷೇರುಗಳ ದರ ಕುಸಿತ ಮುಂದುವರಿದಿತ್ತು! ಗೌತಮ್‌ ಅದಾನಿ ಎಚ್ಚೆತ್ತುಕೊಂಡಿದ್ದರು. ಹೂಡಿಕೆಯ ಹಿತವೇ ನನಗೆ ಎಲ್ಲಕ್ಕಿಂತ ಮುಖ್ಯ, ಅವರಿಗೆ ನಷ್ಟವಾಗದಂತೆ ನೋಡಿಕೊಳ್ಳುವ ನೈತಿಕ ಹೊಣೆಗಾರಿಕೆಯೊಂದಿಗೆ ಅದಾನಿ ಎಂಟರ್‌ಪ್ರೈಸಸ್‌ನ ಎಫ್‌ಪಿಒ ಅನ್ನು ಹಿಂತೆಗೆದುಕೊಂಡಿದ್ದೇವೆ ಎಂದು ಘೋಷಿಸಿ ಫೆಬ್ರವರಿ 1ರಂದು ಘೋಷಿಸಿದರು.

ಒಂದು ವೇಳೆ ಎಫ್‌ಪಿಒ ಹಿಂತೆಗೆದುಕೊಳ್ಳದಿದ್ದರೆ ಏನಾಗುತ್ತಿತ್ತು?

ಕಾನೂನು ದೃಷ್ಟಿಯಿಂದ ಯಾವುದೇ ತಪ್ಪಾಗುತ್ತಿರಲಿಲ್ಲ. ಆದರೆ 20,000 ಕೋಟಿ ರೂ. ಕೊಟ್ಟು ಖರೀದಿಸಿದವರಿಗೆ ನಷ್ಟವಾಗಿತ್ತು. ಮಾತ್ರವಲ್ಲದೆ ಮುಂಬರುವ ದಿನಗಳಲ್ಲಿ ಮತ್ತಷ್ಟು ನಷ್ಟವಾಗಿ ಹೂಡಿಕೆದಾರರ ಆಕ್ರೋಶವನ್ನು, ತಳಮಳವನ್ನು ಎದುರಿಸುವ ಸಾಧ್ಯತೆ ನಿಶ್ಚಿತವಾಗಿ ಸೃಷ್ಟಿಯಾಗುತ್ತಿತ್ತು. ಏಕೆಂದರೆ ಮಾರುಕಟ್ಟೆಯಲ್ಲಿ ಅದಾನಿ ಎಂಟರ್‌ಪ್ರೈಸಸ್‌ನ ಕಂಪನಿಗಳ ಷೇರುಗಳ ಪತನ ನಿಲ್ಲುವ ಲಕ್ಷಣ ಕಾಣಿಸುತ್ತಿರಲಿಲ್ಲ. ಇದರ ಪರಿಣಾಮ ಎಫ್‌ಪಿಒ ಅನ್ನು ಹಿಂತೆಗೆದುಕೊಳ್ಳದಿರುತ್ತಿದ್ದರೆ ಅದಾನಿಯವರಿಗೆ ಭಾರಿ ಮುಖಭಂಗವಾಗುತ್ತಿತ್ತು. ಆದರೆ ಇದೇ ಸಂದರ್ಭ ಈ ಎಲ್ಲ ಅನಾಹುತಗಳಿಗೆ ಟ್ರಿಗರ್‌ ಒತ್ತಿದ್ದ ಹಿಂಡೆನ್‌ ಬರ್ಗ್‌ ಎದುರು ಎಫ್‌ಪಿಒ ಅನ್ನು ಅರ್ಧಕ್ಕೆ ನಿಲ್ಲಿಸದೆ, ಎಲ್ಲ ಷೇರುಗಳೂ ಮಾರಾಟವಾದ ಬಳಿಕ ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಘೋಷಿಸಿದ್ದಾರೆ! ಈ ಮೂಲಕ ಹಿಂಡೆನ್‌ ಬರ್ಗ್‌ ಎಫೆಕ್ಟ್‌ ಅನ್ನು ಉಪಶಮನಗೊಳಿಸಲು ಯತ್ನಿಸಿದ್ದಾರೆ.

ಅದಾನಿ ಎಫ್‌ಪಿಒದಲ್ಲಿ ಅಂಬಾನಿ, ಮಿತ್ತಲ್‌, ಜಿಂದಾಲ್‌ ಹೂಡಿದ್ದೇಕೆ?

ಅಂದಹಾಗೆ ಅದಾನಿ ಎಂಟರ್‌ಪ್ರೈಸಸ್‌ನ ಎಫ್‌ಪಿಒದಲ್ಲಿ ಸಾಮಾನ್ಯ ರಿಟೇಲ್‌ ಹೂಡಿಕೆದಾರರು ದೂರ ಉಳಿದರೂ, ಷೇರುಗಳು ಸೆಕೆಂಡರಿ ಮಾರುಕಟ್ಟೆಯ ದರಕ್ಕಿಂತ ಮೇಲಿದ್ದರೂ, ಮಾರಾಟವಾಗದೆ ಇರಲಿಲ್ಲ! ಬಿಸಿನೆಸ್‌ ಸ್ಟ್ಯಾಂಡರ್ಡ್‌ ವರದಿಯ ಪ್ರಕಾರ ರಿಲಯನ್ಸ್‌ನ ಅಂಬಾನಿ, ಏರ್‌ಟೆಲ್‌ನ ಸುನಿಲ್‌ ಭಾರ್ತಿ ಮಿತ್ತಲ್‌, ಸಜ್ಜನ್‌ ಜಿಂದಾಲ್‌ ಮೊದಲಾದ ದಿಗ್ಗಜರು ಅದಾನಿ ಎಫ್‌ಪಿಒದಲ್ಲಿ ಹೂಡಿಕೆ ಮಾಡಿದ್ದಾರೆ. ಹೀಗಾಗಿಯೇ ಎಫ್‌ಪಿಒ ತಾಂತ್ರಿಕ ದೃಷ್ಟಿಯಲ್ಲಿ ಯಶಸ್ವಿಯಾಗಿತ್ತು. ಒಂದು ವೇಳೆ ಯಾರೂ ಖರೀದಿಸದಿರುತ್ತಿದ್ದರೆ, ಅದರ ಪರಿಣಾಮ ಅದಾನಿ ಕಂಪನಿಗಳ ಷೇರುಗಳು ನೆಲಕಚ್ಚುವುದು ಮಾತ್ರವಲ್ಲದೆ, ಷೇರು ಪೇಟೆಯಲ್ಲಿನ ಇತರ ಕಂಪನಿಗಳ ಷೇರುಗಳೂ ನಷ್ಟಕ್ಕೀಡಾಗುವ ಅಪಾಯ ಇರುತ್ತಿತ್ತು. ಅಂಬಾನಿ, ಮಿತ್ತಲ್‌ ಮೊದಲಾದ ದಿಗ್ಗಜರು ಇದೇ ಕಾರಣಕ್ಕೆ ಎಫ್‌ಪಿಒ ಹೀನಾಯವಾಗಿ ಮುಗ್ಗರಿಸದಂತೆ ನೋಡಿಕೊಂಡರು ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು.

ಗೌತಮ್‌ ಅದಾನಿ ಹೇಳಿದ್ದೇನು?

ಹೂಡಿಕೆದಾರರಿಗೆ ನಷ್ಟವಾಗಬಾರದು ಎಂಬ ಏಕೈಕ ಉದ್ದೇಶದಿಂದ ಎಫ್‌ಪಿಒ ಅನ್ನು ಹಿಂತೆಗೆದುಕೊಳ್ಳಲಾಗಿದೆ. ಅದಾನಿ ಸಮೂಹದ ಮೂಲಭೂತ ಅಂಶಗಳು ಸದೃಢವಾಗಿವೆ. ಬ್ಯಾಲೆನ್ಸ್‌ಶೀಟ್‌ ಆರೋಗ್ಯಕರವಾಗಿದೆ. ಸಾಲವನ್ನೂ ಮರು ಪಾವತಿಸುತ್ತಿದ್ದೇವೆ. ಹಲವಾರು ಅಂತಾರಾಷ್ಟ್ರೀಯ ಆಡಿಟ್‌ ಕಂಪನಿಗಳು ಸಮೂಹದ ಕಂಪನಿಗಳ ಆಡಿಟ್‌ಗಳನ್ನು ನಡೆಸುತ್ತಿವೆ. ನಮ್ಮ ಯೋಜನೆಗಳು ನಿಗದಿಯಂತೆ ಮುಂದುವರಿಯಲಿದೆ. ದೀರ್ಘಕಾಲೀನ ಪ್ರಗತಿಗೆ ಫೋಕಸ್‌ ನೀಡುತ್ತಿದ್ದೇವೆ. ಮಾರುಕಟ್ಟೆ ಪರಿಸ್ಥಿತಿ ಸುಧಾರಿಸಿದ ಬಳಿಕ ಬಂಡವಾಳ ಮಾರುಕಟ್ಟೆಯ ಕಾರ್ಯತಂತ್ರವನ್ನು ಮರು ಪರಿಶೀಲಿಸಲಿದ್ದೇವೆ ಎಂದು ಗೌತಮ್‌ ಅದಾನಿ ಯೂ ಟ್ಯೂಬ್‌ ವಿಡಿಯೊದಲ್ಲಿ ಭರವಸೆ ನೀಡಿದ್ದಾರೆ.

ಏನಿದು ಎಫ್‌ಪಿಒ? ಇದು ಐಪಿಒಗಿಂತ ಹೇಗೆ ಭಿನ್ನ?

ಫಾಲೋ-ಆನ್‌ ಪಬ್ಲಿಕ್‌ ಆಫರ್‌ (FPO) ಎಂದರೆ ಏನು? ಈಗಾಗಲೇ ಷೇರು ವಿನಿಮಯ ಕೇಂದ್ರದಲ್ಲಿ ನೋಂದಣಿಯಾಗಿರುವ ಕಂಪನಿಯೊಂದು ಹೊಸತಾಗಿ ಷೇರು ಬಿಡುಗಡೆ ಮಾಡುವುದನ್ನು ಫಾಲೋ-ಆನ್‌ ಪಬ್ಲಿಕ್‌ ಆಫರ್‌ ಅಥವಾ ಸಂಕ್ಷಿಪ್ತವಾಗಿ ಎಫ್‌ಪಿಒ ಎನ್ನುತ್ತಾರೆ. ಕಂಪನಿಯೊಂದು ಮೊದಲ ಬಾರಿಗೆ ಷೇರು ವಿನಿಮಯ ಕೇಂದ್ರದಲ್ಲಿ ನೋಂದಣಿಯಾಗಿ ಷೇರುಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡುವುದನ್ನು ಇನೀಶಿಯಲ್‌ ಪಬ್ಲಿಕ್‌ ಆಫರಿಂಗ್‌ (Initial public offering) ಅಥವಾ ಐಪಿಒ(IPO) ಎನ್ನುತ್ತಾರೆ. ಕಂಪನಿಗಳು ತಮ್ಮ ಸಾಲವನ್ನು ತೀರಿಸಲು ಅಥವಾ ವಿಸ್ತರಣೆಗೆ ಹೆಚ್ಚಿನ ಬಂಡವಾಳವನ್ನು ಸಂಗ್ರಹಿಸಲು ಎಫ್‌ಪಿಒಗೆ ಮುಂದಾಗುತ್ತವೆ.

ಅದಾನಿ ಗ್ರೂಪ್‌ 20,000 ಕೋಟಿ ರೂ.ಗಳ ಎಫ್‌ಪಿಒ ನಡೆಸಿದ್ದೇಕೆ?

ಅದಾನಿ ಸಮೂಹವು ಹೂಡಿಕೆದಾರರಿಗೆ ನೀಡಿರುವ ವಿವರಣೆಯ ಪ್ರಕಾರ, 20,000 ಕೋಟಿ ರೂ.ಗಳ ಎಫ್‌ಪಿಒದಲ್ಲಿ ಸಂಗ್ರಹವಾಗಲಿರುವ ಫಂಡ್‌ನಲ್ಲಿ 4,165 ಕೋಟಿ ರೂ.ಗಳನ್ನು ಸಾಲದ ಮರು ಪಾವತಿಗೆ ಬಳಸಿಕೊಳ್ಳಲು ಉದ್ದೇಶಿಸಿತ್ತು. ಉಳಿದ ಹಣದಲ್ಲಿ 10,869 ಕೋಟಿ ರೂ.ಗಳನ್ನು ಗ್ರೀನ್‌ ಹೈಡ್ರೋಜನ್‌ ಇಕೊ ಸಿಸ್ಟಮ್‌, ಏರ್‌ಪೋರ್ಟ್‌ಗಳ ಅಭಿವೃದ್ಧಿಗೆ ಬಳಸಲು ನಿರ್ಧರಿಸಿತ್ತು.

ಅದಾನಿ ಷೇರುಗಳ ಭವಿಷ್ಯವೇನು? ಹೂಡಿಕೆದಾರರು ಏನು ಮಾಡಬಹುದು?

ಅದಾನಿ ಸಮೂಹದ ಕಂಪನಿಗಳ ಷೇರು ದರಗಳು 2022ರ ಜನವರಿ 1ರಂದು 30% ತನಕ ಕುಸಿದಿತ್ತು. 40% ತನಕ ಕುಸಿದರೂ ಅಚ್ಚರಿ ಇಲ್ಲ ಎಂಬ ಸ್ಥಿತಿ ಇದೆ. ಉದಾಹರಣೆಗೆ ಅದಾನಿ ಎಂಟರ್‌ಪ್ರೈಸಸ್‌ ಷೇರು ದರ 2022 ಫೆಬ್ರವರಿ 1ರ ಬುಧವಾರ 28.75% ಕುಸಿದು 2,128 ರೂ.ಗೆ ತಗ್ಗಿತ್ತು. ಫೆಬ್ರವರಿ 2ಕ್ಕೆ ೧,೬೪೨ರೂ.ಗೆ ಕುಸಿದಿತ್ತು. ಇಂಥ ಸನ್ನಿವೇಶದಲ್ಲಿ ಷೇರು ಹೂಡಿಕೆದಾರರು ಏನು ಮಾಡಬಹುದು ಎಂಬ ಪ್ರಶ್ನೆ ಸಹಜವಾಗಿ ಉಂಟಾಗಿದೆ. ನೈಲಾ ಬಿಸಿನೆಸ್‌ ವೆಂಚರ್ಸ್‌ನ ಪಾರ್ಟ್‌ನರ್‌ ನಟರಾಜ್‌ ಕಂಚಿ ಪ್ರಕಾರ, ಅದಾನಿ ಸಮೂಹದ ಕಂಪನಿಗಳ ಷೇರು ದರದ ಈ ಮಟ್ಟಿನ ಕುಸಿತದ ಪರಿಣಾಮ ಖರೀದಿಗೂ ಅವಕಾಶ ಸೃಷ್ಟಿಯಾಗಿದೆ. ಆತಂಕಪಟ್ಟು ಮಾರಾಟ ಮಾಡುವ ಅಗತ್ಯವಿಲ್ಲ. ಬದಲಿಗೆ ದರ ಇಳಿಕೆಯ ಹಿನ್ನೆಲೆಯಲ್ಲಿ ಹಂತಗಳಲ್ಲಿ ಹೂಡಿಕೆ ಮಾಡಬಹುದು. ಮೂಲಸೌಕರ್ಯ ಕ್ಷೇತ್ರದಲ್ಲಿ ಅದಾನಿ ಗ್ರೂಪ್‌ ಕಂಪನಿಗಳು ಇರುವುದರಿಂದ ದೀರ್ಘಕಾಲೀನ ದೃಷ್ಟಿಯಿಂದ ಷೇರು ದರ ಚೇತರಿಸಬಹುದು ಎನ್ನುತ್ತಾರೆ ಅವರು.

ಈ ನಿರ್ಧಾರದ ಮೂಲಕ ಅದಾನಿ ಗ್ರೂಪ್‌, ಹೂಡಿಕೆದಾರರ ಜತೆಗೆ ತಾನಿದ್ದೇನೆ ಎಂಬ ಸಂದೇಶವನ್ನು ರವಾನಿಸಿದೆ. ಇದು ಒಳ್ಳೆಯ ನಡೆ. ಇಲ್ಲದಿದ್ದರೆ ಷೇರು ಹೂಡಿಕೆದಾರರ ವಿಶ್ವಾಸ ನಷ್ಟವಾಗುವ ಅಪಾಯವೂ ಇರುತ್ತಿತ್ತು ಎನ್ನುತ್ತಾರೆ ಚಾಯ್ಸ್‌ ಈಕ್ವಿಟಿ ಬ್ರೋಕಿಂಗ್‌ನ ಉಪಾಧ್ಯಕ್ಷ ನಾಗೇಂದ್ರ ಜಿ.ಎನ್.‌

ಅದಾನಿ ಗ್ರೂಪ್‌ ಮಹತ್ವ ಏನು?

ಅದಾನಿ ಗ್ರೂಪ್‌ನ ಕಂಪನಿಗಳ ಷೇರುಗಳು ನಿರಂತರವಾಗಿ ಕುಸಿಯುವುದು ಭಾರತೀಯ ಷೇರು ಮಾರುಕಟ್ಟೆ, ಕಾರ್ಪೊರೇಟ್‌ ವಲಯ ಮತ್ತು ಆರ್ಥಿಕ ವಲಯಕ್ಕೆ ಒಳ್ಳೆಯ ಸುದ್ದಿಯೇನೂ ಅಲ್ಲ ಎನ್ನುತ್ತಾರೆ ವಿಶ್ಲೇಷಕರು. ಇದಕ್ಕೆ ಕಾರಣ ಅದು ದೇಶದ ಮೂಲಸೌಕರ್ಯ ವಲಯಗಳಲ್ಲಿ ನಡೆಸುತ್ತಿರುವ ಉದ್ದಿಮೆ ವ್ಯವಹಾರಗಳು. ಬಂದರು, ಕಲ್ಲಿದ್ದಲು, ವಿದ್ಯುತ್‌, ಗ್ರೀನ್‌ ಎನರ್ಜಿ, ವಿಮಾನ ನಿಲ್ದಾಣ, ಸಿಮೆಂಟ್‌, ಲೋಹ, ಮಾಧ್ಯಮ ವಲಯದಲ್ಲಿ ಅದಾನಿ ಸಮೂಹದ ಕಂಪನಿಗಳಿವೆ. ಹೀಗಾಗಿ ಕಾರ್ಪೊರೇಟ್‌ ವಲಯದ ಪ್ರಮುಖ ಸಮೂಹಗಳಲ್ಲಿ ಅದಾನಿ ಗ್ರೂಪ್‌ ಒಂದಾಗಿದೆ. ಷೇರು ಮಾರುಕಟ್ಟೆಯಲ್ಲಿ ನಿಫ್ಟಿ 50 ಇಂಡೆಕ್ಸ್‌ನಲ್ಲಿ ಅದಾನಿ ಪೋರ್ಟ್ಸ್‌ ಮತ್ತಯು ಅದಾನಿ ಎಂಟರ್‌ಪ್ರೈಸಸ್‌ ಸೇರ್ಪಡೆಯಾಗಿದೆ. ಹೀಗಾಗಿ ಅದಾನಿ ಗ್ರೂಪ್‌ನ ವಿದ್ಯಮಾನಗಳು ಷೇರು ಮಾರುಕಟ್ಟೆಯ ಚಲನವಲನಗಳ ಮೇಲೆ ಕೂಡ ಪ್ರಭಾವ ಬೀರುತ್ತದೆ. ಆದ್ದರಿಂದ ಕಡೆಗಣಿಸುವಂತಿಲ್ಲ.

Exit mobile version