ಬೆಂಗಳೂರು: ಕೇಂದ್ರ ವಿದ್ಯುತ್ ಸಚಿವ ಆರ್.ಕೆ ಸಿಂಗ್ ಅವರು ಸೋಮವಾರ ಲೋಕಸಭೆಯಲ್ಲಿ ಮಂಡಿಸಿರುವ ವಿದ್ಯುತ್ ತಿದ್ದುಪಡಿ ವಿಧೇಯಕ ೨೦೨೨ (Electricity (Amendment) Bill 2022) ವಿವಾದಕ್ಕೀಡಾಗಿದೆ. ೨೦೦೩ರ ವಿದ್ಯುತ್ ಕಾಯಿದೆಗೆ ತಿದ್ದುಪಡಿ ತರುವ ವಿಧೇಯಕವನ್ನು ಸಚಿವರು ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೂ ಕಳುಹಿಸಿದ್ದಾರೆ. ಮತ್ತೊಂದು ಕಡೆ ಪಂಜಾಬ್‌ನಲ್ಲಿ ಈ ವಿಧೇಯಕವನ್ನು ರೈತರು ವಿರೋಧಿಸುತ್ತಿದ್ದಾರೆ. ಪ್ರತಿಪಕ್ಷಗಳು ವಿರೋಧಿಸುತ್ತಿವೆ. ಏಕೆ ಹೀಗಾಗಿದೆ? ವಿಧೇಯಕದಲ್ಲಿ ಏನಿದೆ? ಇಲ್ಲಿದೆ ವಿವರ.
ಕೇಂದ್ರ ವಿದ್ಯುತ್ ಸಚಿವರು ಏನೆನ್ನುತ್ತಾರೆ?
ವಿದ್ಯುತ್ ವಲಯದ ನಿಯಂತ್ರಕ ವ್ಯವಸ್ಥೆಯನ್ನು ಬಲಪಡಿಸಲು, ಆಡಳಿತಾತ್ಮಕ ಸುಧಾರಣೆ ತರಲು, ವಿತರಣೆಯ ಲೈಸೆನ್ಸ್ ಹಂಚಿಕೆ ಪ್ರಕ್ರಿಯೆಯ ಸುಧಾರಣೆಗೆ ಈ ವಿಧೇಯಕ ಅಗತ್ಯ. ಇದು ಗ್ರಾಹಕಸ್ನೇಹಿ ಸುಧಾರಣೆಯಾಗಿದೆ ಎನ್ನುತ್ತಾರೆ ಕೇಂದ್ರ ವಿದ್ಯುತ್ ಸಚಿವ ಆರ್.ಕೆ. ಸಿಂಗ್.
ವಿದ್ಯುತ್ ತಿದ್ದಿಪಡಿ ವಿಧೇಯಕದ ಉದ್ದೇಶವೇನು? ವಿದ್ಯುತ್ ವಿತರಣೆ ವಲಯದಲ್ಲಿ ಹಲವು ಡಿಸ್ಕಾಮ್‌ಗಳಿಗೆ ಲೈಸೆನ್ಸ್ ನೀಡುವ ಉದ್ದೇಶವನ್ನು ವಿಧೇಯಕ ಹೊಂದಿದೆ. ಇದರಿಂದ ಡಿಸ್ಕಾಮ್‌ಗಳಲ್ಲಿ ಏಕಸ್ವಾಮ್ಯ ಕೊನೆಯಾಗಲಿದೆ. ಖಾಸಗಿ ವಲಯದ ವಿದ್ಯುತ್ ವಿತರಕ ಕಂಪನಿಗಳು ಪ್ರವೇಶಿಸಲಿವೆ. ಎರಡನೆಯದಾಗಿ ಕನಿಷ್ಠ ಮತ್ತು ಗರಿಷ್ಠ ದರ ನಿಗದಿಯಾಗಲಿದೆ. ಎಲ್ಲ ಲೈಸೆನ್ಸ್‌ಗಳಿಗೆ ಸಾರ್ವತ್ರಿಕ ಸೇವಾ ಬಾಧ್ಯತೆ (Universal service obligation) ಅನ್ವಯಿಸಲಿದೆ. ಡಿಸ್ಕಾಮ್‌ಗಳು ನವೀಕರಿಸಬಹುದಾದ ಇಂಧನ ಮೂಲಗಳಿಂದಲೂ ಕಡ್ಡಾಯವಾಗಿ ವಿದ್ಯುತ್ ಖರೀದಿಸಬೇಕಾಗುತ್ತದೆ.
ವಿದ್ಯುತ್ ಸೋರಿಕೆ ತಡೆ: ಭಾರತದಲ್ಲಿ ವಿದ್ಯುತ್ ಸೋರಿಕೆ ದೊಡ್ಡ ಸಮಸ್ಯೆಯಾಗಿದೆ. ಇವುಗಳಿಂದ ಸಾರ್ವಜನಿಕ ವಲಯದ ವಿದ್ಯುತ್ ವಿತರಕ ಕಂಪನಿಗಳಿಗೆ ನಷ್ಟವಾಗುತ್ತದೆ. ಆದರೆ ಖಾಸಗಿ ಡಿಸ್ಕಾಮ್‌ಗಳು ಇವುಗಳನ್ನು ಕಟ್ಟುನಿಟ್ಟಾಗಿ ತಡೆಯಲಿವೆ ಎನ್ನುತ್ತಾರೆ ತಜ್ಞರು.
ವಿಧೇಯಕಕ್ಕೆ ವಿರೋಧ: ಹಲವು ರೈತಪರ ಸಂಘಟನೆಗಳು ವಿದ್ಯುತ್ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿವೆ. ಪ್ರತಿಪಕ್ಷ ಆಡಳಿತದ ರಾಜ್ಯಗಳು ವಿರೋಧಿಸಿವೆ. ಆಲ್ ಇಂಡಿಯಾ ಪವರ್ ಎಂಜಿನಿಯರ್ಸ್ ಫೆಡರೇಷನ್ ಆಕ್ಷೇಪಿಸಿದೆ. ವಿಧೇಯಕವು ಖಾಸಗಿ ಡಿಸ್ಕಾಮ್ ಪರವಾಗಿದ್ದು, ಸರ್ಕಾರಿ ಡಿಸ್ಕಾಮ್‌ಗಳಿಗೆ ಧಕ್ಕೆ ತರಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ವಿರೋಧಿಸಿದೆ. ವಿಧೇಯಕ ಮಂಡನೆಗೆ ಮುನ್ನ ರೈತರನ್ನು ಸಮಪರ್ಕಿಸಿಲ್ಲ ಎಂದು ಕಿಸಾನ್ ಮೋರ್ಚಾ ಆರೋಪಿಸಿದೆ. ಈ ವಿಧೇಯಕವು ರಾಜ್ಯಗಳ ಅಧಿಕಾರವನ್ನು ದುರ್ಬಲಗೊಳಿಸಲಿದೆ ಎಂದು ಪ್ರತಿಪಕ್ಷಗಳು ದೂರಿವೆ.
ಖಾಸಗಿ ಡಿಸ್ಕಾಮ್‌ಗಳು ಲಾಭ ಇರುವಲ್ಲಿ ಮಾತ್ರ ಹೂಡಿಕೆ ಮಾಡಲಿವೆ. ನಗರ ಪ್ರದೇಶಗಳಲ್ಲಿ ಮಾತ್ರ ಹೆಚ್ಚಿನ ವಿತರಣೆಗೆ ಮುಂದಾಗಬಹುದು. ಆಗ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಅಭಾವ ಎಂದಿನಂತೆಯೇ ಮುಂದುವರಿಯಲಿದೆ ಎಂದು ಕಿಸಾಮ್ ಮೋರ್ಚಾ ಆರೋಪಿಸಿದೆ.
” ವಿಧೇಯಕವನ್ನು ಈಗ ಸಚಿವರು ಸಂಸತ್ತಿನ ಸ್ಥಾಯಿ ಸಮಿತಿಯ ಪರಿಶೀಲನೆಗೆ ಕಳುಹಿಸಿದ್ದಾರೆ. ಹೀಗಾಗಿ ಅದು ಜಾರಿಯಾಗುವುದೇ ಅನುಮಾನವಾಗಿದೆ. ಉಚಿತ ವಿದ್ಯುತ್ ವಿತರಣೆ ರಾಜಕೀಯವಾಗಿ ಅತಿ ಸೂಕ್ಷ್ಮ ವಿಷಯವಾದ್ದರಿಂದ, ಅದು ಸ್ಥಗಿತವಾಗುವ ಸಾಧ್ಯತ ಇಲ್ಲ. ಆದರೆ ಈಗಾಗಲೇ ಡಿಸ್ಕಾಮ್‌ಗಳಿಗೆ ಸರ್ಕಾರ ಸಬ್ಸಿಡಿ ಬಾಬ್ತು ಕೊಡಬೇಕಾಗಿರುವ ಹಣ ಗಣನೀಯ ಪ್ರಮಾಣದಲ್ಲಿ ಇದೆ. ಆದ್ದರಿಂದ ಇದ ಪರಿಸ್ಥಿತಿ ಮುಂದುವರಿದರೆ ಹೊಸ ಡಿಸ್ಕಾಮ್‌ಗಳು ವಿದ್ಯುತ್ ವಿತರಣೆ ವಲಯವನ್ನು ಪ್ರವೇಶಿಸುವುದು ಅನುಮಾನʼʼ ಎನ್ನುತ್ತಾರೆ ವಿದ್ಯುತ್ ವಲಯದ ತಜ್ಞರಾದ ಪ್ರಭಾಕರ್ ಎಂ.ಜಿ.
ವಿದ್ಯುತ್ ಬಳಕೆದಾರರಿಗೆ ಆಯ್ಕೆ
ವಿದ್ಯುತ್ ಬಳಕೆದಾರರಿಗೆ ಬೇರೆ ಬೇರೆ ಡಿಸ್ಕಾಮ್‌ಗಳ ಆಯ್ಕೆ ಸಿಗಲಿದೆ. ಹಾಲಿ ಮೂಲಸೌಕಯ ವ್ಯವಸ್ಥೆಯಲ್ಲಿಯೇ ವಿಭಿನ್ನ ಡಿಸ್ಕಾಮ್‌ಗಳು ವಿದ್ಯುತ್ ವಿತರಣೆ ಮಾಡಲಿವೆ. ಆದರೆ ನಗರ ಪ್ರದೇಶಗಳಲ್ಲಿ ಹೆಚ್ಚು ಲೈಸೆನ್ಸ್ ವಿತರಣೆಯಾಗುವ ಹಾಗೂ ನಷ್ಟದಲ್ಲಿರುವ ಇತರ ವಲಯಗಳಲ್ಲಿ ಲೈಸೆನ್ಸ್‌ಗೆ ಬೇಡಿಕೆಯೇ ಇಲ್ಲದೆ ವಿದ್ಯುತ್ ಬಿಕ್ಕಟ್ಟು ಮುಂದುವರಿಯಬಹುದು. ಸಾರ್ವತ್ರಿಕ ಸೇವಾ ಬಾಧ್ಯತೆ ಕೇವಲ ಹಾಲಿ ಡಿಸ್ಕಾಮ್‌ಗಳಿಗೆ ಮಾತ್ರ ಅನ್ವಯವಾಗುವುದರಿಂದ ಖಾಸಗೀಕರಣಕ್ಕೆ ಉತ್ತೇಜನ ಸಿಗಲಿದೆ ಎಂಬ ಆರೋಪ ಇದೆ. ಆದರೆ ಎಲ್ಲ ಲೈಸೆನ್ಸ್‌ಗಳಿಗೂ ಆ ಬದ್ಧತೆ ಇರಲಿದೆ ಎಂದು ಸರ್ಕಾರ ಭರವಸೆ ನೀಡಿದೆ.
ಉಚಿತ ವಿದ್ಯುತ್ ಟ್ರೆಂಡ್ ಬಂದ್ ಆಗಲಿದೆಯೇ? ಈ ಪ್ರಶ್ನೆಗೆ ತಜ್ಞರಲ್ಲಿ ಭಿನ್ನಭಿಪ್ರಾಯ ಇದೆ. ಕೆಲವರ ಪ್ರಕಾರ, ವಿಧೇಯಕ ಜಾರಿಯಾದರೆ ರಾಜಕೀಯ ಪಕ್ಷಗಳಿಗೆ ಉಚಿತ ವಿದ್ಯುತ್ ವಿತರಣೆ ಘೋಷಣೆಯನ್ನು ಅನುಷ್ಠಾನಗೊಳಿಸುವುದು ಸುಲಭವಲ್ಲ. ಏಕೆಂದರೆ ಖಾಸಗಿ ಡಿಸ್ಕಾಮ್‌ಗಳು ಮೊದಲು ಹಣ ವಾವತಿಸಿ, ವಿದ್ಯುತ್ ಖರೀದಿಗೆ ಒತ್ತಡ ಹೇರಬಹುದು. ಹೀಗಾಗಿ ರಾಜ್ಯ ಸರ್ಕಾರಗಳಿಗೆ ದೊಡ್ಡ ಮೊತ್ತವನ್ನು ಮೊದಲೇ ಹೊಂದಿಸಿ ಕೊಟ್ಟು ಖರೀದಿಸಬೇಕಾಗುತ್ತದೆ. ಹೀಗಾಗಿ ಉಚಿತ ವಿದ್ಯುತ್ ವಿತರಣೆ ಟ್ರೆಂಡ್ ನಿಲ್ಲಲಿದೆ ಎನ್ನುತ್ತಾರೆ ಕೆಲ ತಜ್ಞರು. ಆದರೆ ರಾಜಕೀಯವಾಗಿ ಇದು ಲಾಭದಾಯಕವಾದ್ದರಿಂದ ಪುಕ್ಕಟೆ ವಿದ್ಯುತ್ ವಿತರಣೆ, ಘೋಷಣೆ ಮುಂದುವರಿಯಬಹುದು. ಒಂದು ವೇಳೆ ನಿಲ್ಲಿಸಿದರೆ ಅಂಥ ಸರ್ಕಾರಕ್ಕೆ ರಾಜಕೀಯವಾಗಿ ಹಿನ್ನಡೆ ಆಗಬಹುದು ಎನ್ನುತ್ತಾರೆ ಕೆಲ ತಜ್ಞರು.
ಕರ್ನಾಟಕದಲ್ಲಿ ವಿದ್ಯುತ್ ಸಬ್ಸಿಡಿ ಬಾಕಿ ೨೦,೦೦೦ ಕೋಟಿ ರೂ!
ಕರ್ನಾಟಕದಲ್ಲಿ ವಿದ್ಯುತ್ ವಿತರಣೆ ಕಂಪನಿಗಳಿಗೆ ಸರ್ಕಾರ ನೀಡಬೇಕಾಗಿರುವ ವಿದ್ಯುತ್ ಸಬ್ಸಿಡಿಯ ಬಾಕಿ ಬರೋಬ್ಬರಿ ೨೦,೦೦೦ ಕೋಟಿ ರೂ. ದಾಟಿದೆ. ನಾನಾ ಸ್ಥಳೀಯ ಸಂಸ್ಥೆಗಳಿ ೫,೯೭೫ ಕೋಟಿ ರೂ.ಗಳನ್ನು ವಿದ್ಯುತ್ ಸಬ್ಸಿಡಿಗೆ ನೀಡಬೇಕಾಗಿದೆ. ಹೀಗಾಗಿ ಉಚಿತ ವಿದ್ಯುತ್ ವಿತರಣೆ ಸರ್ಕಾರಗಳಿಗೆ ಭಾರಿ ಹೊರೆಯಾಗುತ್ತಿದೆ. ಹಾಗೂ ಸವಾಲಾಗಿ ಪರಿಣಮಿಸಿದೆ.