ಇಡೀ ಜಗತ್ತನ್ನು 2023ರಲ್ಲಿ ಆರ್ಥಿಕ ಹಿಂಜರಿತ ತಟ್ಟಲಿದೆ ಎಂಬ ವಿಶ್ವಬ್ಯಾಂಕ್ ವರದಿಯ ಬೆನ್ನಲ್ಲೇ ಕಾರ್ಪೊರೇಟ್ ವಲಯದಲ್ಲಿ ನಡುಕ ಉಂಟಾಗಿದೆ. ಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಉದ್ಯೋಗಿಗಳಲ್ಲಿ ತಲ್ಲಣಕ್ಕೆ ಕಾರಣವಾಗಿದೆ. ಹಲವಾರು ಐಟಿ ಕಂಪನಿಗಳಲ್ಲಿ, ಸ್ಟಾರ್ಟಪ್‌ಗಳಲ್ಲಿ ಇತ್ತೀಚೆಗೆ ಉದ್ಯೋಗ ಕಡಿತದ ಪ್ರವೃತ್ತಿ ಕಂಡು ಬರುತ್ತಿದೆ. ವ್ಯಾಪಾರ ವಹಿವಾಟು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕಂಪನಿಗಳು ವೆಚ್ಚ ಕಡಿತದ ಭಾಗವಾಗಿ ಉದ್ಯೋಗ ಕಡಿತಕ್ಕೆ ಮುಂದಾಗುತ್ತಿವೆ. ಹೀಗಾಗಿ ಒಂದು ವೇಳೆ ಮುಂದಿನ ವರ್ಷ ( ವಿಸ್ತಾರ Explainer) ಆರ್ಥಿಕ ಹಿಂಜರಿತ ಸಂಭವಿಸಿದರೆ ಏನಾಗಬಹುದು ಎಂಬ ಆತಂಕ ಇದೀಗ ಸೃಷ್ಟಿಯಾಗಿದೆ.
ಆತಂಕ ಹುಟ್ಟಿಸಿದೆ ವಿಶ್ವಬ್ಯಾಂಕ್ ವರದಿ!
ಜಗತ್ತಿನ ನಾನಾ ದೇಶಗಳಲ್ಲಿ ಹಣದುಬ್ಬರವನ್ನು ಹತ್ತಿಕ್ಕಲು ಸೆಂಟ್ರಲ್ ಬ್ಯಾಂಕ್‌ಗಳು ಬಡ್ಡಿ ದರವನ್ನು ಏರಿಸುತ್ತಿವೆ. ಇದರ ಪರಿಣಾಮವಾಗಿ 2023ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತ (Recession in 2023) ಸಂಭವಿಸಬಹುದು ಎಂದು ವಿಶ್ವಬ್ಯಾಂಕ್ ವರದಿ ಎಚ್ಚರಿಸಿದೆ.
ಜಾಗತಿಕ ಆರ್ಥಿಕ ಬೆಳವಣಿಗೆ ತೀವ್ರವಾಗಿ ಕುಸಿಯುತ್ತಿದೆ. ಹಲವಾರು ದೇಶಗಳು ಹಿಂಜರಿತಕ್ಕೆ ಒಳಗಾಗಲಿವೆ. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಇದರಿಂದ ಭಾರಿ ಸಮಸ್ಯೆಯಾಗಲಿದೆ ಎಂದು ವಿಶ್ವಬ್ಯಾಂಕ್ ಎಚ್ಚರಿಸಿದೆ. ವಿಶ್ವಾದ್ಯಂತ ಬಡ್ಡಿ ದರಗಳು ಏರಿಕೆಯಾಗುತ್ತಿವೆ. ಕಳೆದ ಐದು ದಶಕಗಳಲ್ಲಿ ಎಂದೂ ಇಂಥ ಪ್ರವೃತ್ತಿ ಕಂಡು ಬಂದಿಲ್ಲ. ಮುಂದಿನ ವರ್ಷ ಕೂಡ ಇದು ಮುಂದುವರಿಯಬಹುದು. ಆದರೆ ಹಣದುಬ್ಬರವನ್ನು ಕೋವಿಡ್ ಪೂರ್ವ ಮಟ್ಟಕ್ಕೆ ಇಳಿಸಲು ಈ ಕ್ರಮಗಳು ಬಹುಶಃ ಸಾಕಾಗಲಾರವು ಎಂದು ತಿಳಿಸಿದೆ. ಸೆಂಟ್ರಲ್ ಬ್ಯಾಂಕ್‌ಗಳು ಜಾಗತಿಕ ಹಣಕಾಸು ನೀತಿ ದರವನ್ನು ಸರಾಸರಿ 4%ಕ್ಕೆ ಏರಿಸುವ ನಿರೀಕ್ಷೆ ಇದೆ. ಅಂದರೆ 2021ರ 2% ಸರಾಸರಿಗೆ ಹೋಲಿಸಿದರೆ ಇಮ್ಮಡಿಯಾಗಲಿದೆ ಎಂದು ಹೂಡಿಕೆದಾರರು ಅಭಿಪ್ರಾಯಪಟ್ಟಿದ್ದಾರೆ. ರಷ್ಯಾ-ಉಕ್ರೇನ್ ಸಂಘರ್ಷ ಕೂಡ ಜಾಗತಿಕ ಆರ್ಥಿಕತೆಯ ಬೆಳವಣಿಗೆ ಮೇಲೆ ಪ್ರತಿಕೂಲ ಪ್ರಭಾವ ಬೀರಿದೆ. ಕಚ್ಚಾ ತೈಲ ದರ ಹೆಚ್ಚಳ, ಆಹಾರ ಹಣದುಬ್ಬರ ಸವಾಲಾಗಿ ಪರಿಣಮಿಸಿದೆ.
ಪೂರೈಕೆಯಲ್ಲಿ ಉಂಟಾಗಿರುವ ಕೊರತೆ ನೀಗದಿದ್ದರೆ ಹಾಗೂ ಕಾರ್ಮಿಕ ಮಾರುಕಟ್ಟೆಯ ಮೇಲಿನ ಒತ್ತಡ ಪರಿಹರಿಸದಿದ್ದರೆ, ಕೇವಲ ಬಡ್ಡಿ ದರ ಏರಿಕೆಯಿಂದ ಜಾಗತಿಕ ಹಣದುಬ್ಬರ ಮುಂದಿನ ವರ್ಷ ಸುಮಾರು ಸರಾಸರಿ 5%ರ ಮಟ್ಟದಲ್ಲಿ ಇರಬಹುದು. ಅಂದರೆ ಇದು ಕೋವಿಡ್ ಪೂರ್ವ ಮಟ್ಟಕ್ಕೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು. ಹೀಗಾಗಿ ಸೆಂಟ್ರಲ್ ಬ್ಯಾಂಕ್‌ಗಳು ತಮ್ಮ ಟಾರ್ಗೆಟ್ ಪ್ರಕಾರ ಹಣದುಬ್ಬರ ಹತ್ತಿಕ್ಕಲು ಬಡ್ಡಿ ದರದಲ್ಲಿ ಹೆಚ್ಚುವರಿ 2% ಏರಿಕೆ ಮಾಡುವ ಸಾಧ್ಯತೆ ಇದೆ. ಆದರೆ ಇದರ ಪರಿಣಾಮ ಜಾಗತಿಕ ಆರ್ಥಿಕ ಹಿಂಜರಿತ ಸಂಭವಿಸಬಹುದು. ಅಮೆರಿಕ, ಚೀನಾ ಮತ್ತು ಯುರೋಪ್‌ನಲ್ಲಿ ಈಗಾಗಲೇ ಆರ್ಥಿಕತೆ ಮಂದಗತಿಯಲ್ಲಿದೆ ಎಂದು ತಿಳಿಸಿದೆ.
ಆರ್ಥಿಕ ಹಿಂಜರಿತ ಎಂದರೇನು?
ಆರ್ಥಿಕ ಹಿಂಜರಿತ ಎಂದರೆ ತಿಂಗಳಾನುಗಟ್ಟಲೆ ಕಾಲ ಆರ್ಥಿಕ ಚಟುವಟಿಕೆಗಳು ವ್ಯಾಪಕವಾಗಿ ಕುಸಿದಿರುವುದು. ಸತತವಾಗಿ ಎರಡು ತ್ರೈಮಾಸಿಕ ಅವಧಿಯಲ್ಲಿ, ಅಂದರೆ 6 ತಿಂಗಳು ಆರ್ಥಿಕ ಬೆಳವಣಿಗೆಯ (ಜಿಡಿಪಿ) ಪ್ರಮಾಣ ಕುಸಿದರೆ, ಅದನ್ನು ಆರ್ಥಿಕ ಹಿಂಜರಿತ ಎಂದು ಆರ್ಥಿಕ ಪರಿಭಾಷೆಯಲ್ಲಿ ವ್ಯಾಖ್ಯಾನಿಸಲಾಗುತ್ತದೆ. ಆರ್ಥಿಕ ಹಿಂಜರಿತ ಕೆಲವು ತಿಂಗಳುಗಳಲ್ಲಿ ಅಂತ್ಯವಾಗಬಹುದು. ಆದರೆ ಚೇತರಿಕೆಗೆ ಸಾಕಷ್ಟು ಕಾಲಾವಕಾಶ ಅಗತ್ಯವಾಗುತ್ತದೆ.
ಆರ್ಥಿಕ ಹಿಂಜರಿತದ ಸಂದರ್ಭ ಏನಾಗುತ್ತದೆ?
ಆರ್ಥಿಕ ಹಿಂಜರಿತ ಉಂಟಾದಾಗ ತಿಂಗಳುಗಟ್ಟಲೆ ಕಾಲ ಆರ್ಥಿಕ ಚಟುವಟಿಕೆಗಳು, ಉತ್ಪಾದನೆ- ಮಾರಾಟ, ಕೊಡು-ಕೊಳ್ಳುವಿಕೆ ಕಡಿಮೆಯಾಗುತ್ತದೆ. ಇದರ ಪರಿಣಾಮ ನಿರುದ್ಯೋಗ ಉಂಟಾಗುತ್ತದೆ.
ಹಣದುಬ್ಬರ ಅಥವಾ ಬೆಲೆ ಏರಿಕೆ ಹೆಚ್ಚುತ್ತದೆ. ಈಗಾಗಲೇ ಜಗತ್ತಿನ ನಾನಾ ರಾಷ್ಟ್ರಗಳಲ್ಲಿ ಹಣದುಬ್ಬರ ಹೆಚ್ಚುತ್ತಿದ್ದು, ಸೆಂಟ್ರಲ್ ಬ್ಯಾಂಕ್‌ಗಳು ಬಡ್ಡಿ ದರ ಏರಿಸಿದರೂ, ನಿರೀಕ್ಷಿತ ಮಟ್ಟದಲ್ಲಿ ಹಣದುಬ್ಬರ ಇಳಿಕೆಯಾಗುತ್ತಿಲ್ಲ. ಇದು ಆರ್ಥಿಕ ಹಿಂಜರಿತದ ಕಳವಳಕ್ಕೆ ಕಾರಣವಾಗಿದೆ. ದಿನ ನಿತ್ಯ ಬಳಕೆಯ ದಿನಸಿ ಪದಾರ್ಥಗಳಿಂದ ಆರಂಭಿಸಿ ಬಹುತೇಕ ವಸ್ತು ಮತ್ತು ಸೇವೆಗಳು ತುಟ್ಟಿಯಾಗಿರುವುದನ್ನು ಗಮನಿಸಬಹುದು.
ಉದ್ಯಮ ವಲಯದಲ್ಲಿ ಕಚ್ಚಾ ವಸ್ತುಗಳ ದರ ಹೆಚ್ಚಳದಿಂದ ಕಾರ್ಖಾನೆಗಳಿಗೆ ಉತ್ಪಾದನಾ ವೆಚ್ಚ ಹೆಚ್ಚುತ್ತದೆ. ಆಗ ಉತ್ಪಾದನಾ ಚಟುವಟಿಕೆಗಳೇ ಕಡಿಮೆಯಾಗುತ್ತದೆ. ರಫ್ತು ಇಳಿಕೆಯಾಗುತ್ತದೆ. ಒಟ್ಟಾರೆ ಆರ್ಥಿಕ ಚಟುವಟಿಕೆಯ ಮಂದಗತಿಗೆ ಇದು ಕಾರಣವಾಗುತ್ತದೆ. ಜನ ಖರ್ಚು ವೆಚ್ಚಗಳನ್ನು ಕಡಿತಗೊಳಿಸುತ್ತಾರೆ. ಹಲವಾರು ಅಂಗಡಿಗಳು, ಶಾಪಿಂಗ್ ಮಳಿಗೆಗಳು ಮುಚ್ಚಬಹುದು. ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಸ್ಥಗಿತವಾಗಬಹುದು.
ಆರ್ಥಿಕ ಹಿಂಜರಿತ ಎದುರಿಸುವುದು ಹೇಗೆ?
ಜನತೆ ತಮ್ಮ ಖರ್ಚು ವೆಚ್ಚಗಳನ್ನು ಆದ್ಯತೆಯ ಅನುಸಾರ ವಿಂಗಡಿಸಬೇಕಾಗುತ್ತದೆ. ಮಾಸಿಕ ಬಜೆಟ್ ರೂಪಿಸುವುಸು ಸೂಕ್ತ. ವೆಚ್ಚ ನಿಯಂತ್ರಣದ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ದೊಡ್ಡ ವೆಚ್ಚವನ್ನು ಬಯಸುವ ಕಾರ್ಯಕ್ರಮಗಳನ್ನು ಮುಂದೂಡಬಹುದು. ಕ್ರೆಡಿಟ್ ಕಾರ್ಡ್ ಸಾಲವನ್ನು ಶೀಘ್ರ ಚುಕ್ತಗೊಳಿಸುವುದು ಉತ್ತಮ. ಹೂಡಿಕೆಯನ್ನು ಸೂಕ್ತ ಸಾಧನಗಳಲ್ಲಿ ಹೂಡಿಕೆ ಮಾಡುವ ಮೂಲಕ ಆದಾಯವ್ನನು ಹೆಚ್ಚಿಸಬೇಕು. ಕರಿಯರ್ ಹಾಗೂ ಹೆಚ್ಚು ಆದಾಯ ಗಳಿಸಲು ಸಾಧ್ಯವಿರುವ ಉದ್ಯೋಗಗಳನ್ನು ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಬೇಕು.
ಭಾರತಕ್ಕೆ ಹಿಂಜರಿತದ ಆತಂಕ ಇಲ್ಲ, ನಿರ್ಮಲಾ ಸೀತಾರಾಮನ್
ಭಾರತಕ್ಕೆ ಆರ್ಥಿಕ ಹಿಂಜರಿತದ ಆತಣಕ ಬೇಡ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಸರ್ಕಾರ ಈಗಾಗಲೇ ಹಣದುಬ್ಬರ ನಿಯಂತ್ರಿಸಲು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದು, ಇದರ ಪರಿಣಾಮ ಬೆಲೆ ಏರಿಕೆ ಕಡಿಮೆಯಾಗಲಿದೆ. ಆರ್ಥಿಕ ಚಟುವಟಿಕೆಗಳು ಚೇತರಿಸಲಿವೆ ಎಂದು ಹಣಕಾಸು ಸಚೊವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಬ್ಲೂಮ್ ಬರ್ಗ್ ಸಮೀಕ್ಷೆ ಏನೆನ್ನುತ್ತಿದೆ? ಬ್ಲೂಮ್ ಬರ್ಗ್ ಸಮೀಕ್ಷೆಯ ಪ್ರಕಾರ ಕೂಡ ಭಾರತದಲ್ಲಿ ಆರ್ಥಿಕ ಹಿಂಜರಿತದ ಸಾಧ್ಯತೆ ಇಲ್ಲ. ಭಾರತವು ಕೋವಿಡ್-19 ಬಿಕ್ಕಟ್ಟಿನಂಥ ಭಾರಿ ಸವಾಲನ್ನೂ ಎದುರಿಸಿದೆ. ಜತೆಗೆ ಸರ್ಕಾರ ಮತ್ತು ಆರ್‌ಬಿಐ ಹಲವು ಆರ್ಥಿಕ ಸುಧಾರಣೆಯ ಕ್ರಮಗಳನ್ನು ಕೈಗೊಂಡಿದ್ದು, ಇತರ ಹಲವು ದೇಶಗಳಿಗೆ ಹೋಲಿಸಿದರೆ ಭಾರತದ ಸ್ಥಿತಿಗತಿ ಉತ್ತಮವಾಗಿದೆ ಎಂದು ಬ್ಲೂಮ್ ಬರ್ಗ್ ವರದಿ ತಿಳಿಸಿದೆ.
ಭಾರತ ಈ ಹಿಂದೆಯೂ ಜಾಗತಿಕ ಆರ್ಥಿಕ ಹಿಂಜರಿತಗಳನ್ನು ಯಶಸ್ವಿಯಾಗಿ ಎದುರಿಸಿದೆ. ಭಾರತದಲ್ಲಿನ ವಿಶಾಲವಾದ ಆಂತರಿಕ ಮಾರುಕಟ್ಟೆ, ದೇಶೀಯ ಉಳಿತಾಯ ವಿಶ್ವ ಆರ್ಥಿಕ ಹಿಂಜರಿತದ ಪರಿಣಾಮಗಳನ್ನು ನಿಭಾಯಿಸುವಲ್ಲಿ ಸಹಕಾರಿಯಾಗಿದೆ. ಆದರೆ ಜಾಗತಿಕ ಆರ್ಥಿಕ ಮಂದಗತಿಯ ಪರಿಣಾಮಗಳು ಕಾರ್ಪೊರೇಟ್, ಸೇವಾ ವಲಯ, ಐಟಿ, ಐಟಿ ಸಂಬಂಧಿತ ಕ್ಷೇತ್ರಗಳು, ಉತ್ಪಾದನೆ ಮತ್ತು ಮಾರುಕಟ್ಟೆ ಮೇಲೆ ಪ್ರಭಾವ ಬೀರುತ್ತವೆ. ಯಾವುದೇ ಪ್ರಭಾವ ಬೀರದು ಎನ್ನುವ ಪರಿಸ್ಥಿತಿ ಇಲ್ಲ. ಏಕೆಂದರೆ ಭಾರತ ಕೂಡ ಜಾಗತಿಕ ಎಕಾನಮಿಯಲ್ಲಿ ತನ್ನ ಪಾತ್ರವನ್ನು ಹೊಂದಿದೆ. ಆದರೆ ತೀರಾ ಆತಂಕಪಡಬೇಕಾದ ಅವಶ್ಯಕತೆ ಇಲ್ಲ ಎನ್ನುತ್ತಾರೆ ಹಣಕಾಸು ತಜ್ಞರು.