ಬೆಂಗಳೂರು: ಐಟಿ ದಿಗ್ಗಜ ವಿಪ್ರೊದಿಂದ ಮುಂದಿನ ಮೂರು ವರ್ಷಗಳಲ್ಲಿ 1 ಶತಕೋಟಿ ಡಾಲರ್ (ಅಂದಾಜು 8,200 ಕೋಟಿ ರೂ.) (Wipro AI investment) ಹೂಡಿಕೆ ಮಾಡಲು ನಿರ್ಧರಿಸಿದೆ. ಕೃತಕ ಬುದ್ಧಿಮತ್ತೆ (artificial intelligence) ಬಿಗ್ ಡೇಟಾ, ಅನಾಲಿಟಿಕ್ಸ್ ವಲಯದಲ್ಲಿ (big data) ವಿಪ್ರೊ ಕಂಪನಿಯು ವ್ಯಾಪಕವಾಗಿ ಹೂಡಿಕೆ ಮಾಡಲಿದೆ ಎಂದು ವಿಪ್ರೊದ ಸಿಇಒ ಥೆರ್ರಿ ಡೆಲಾಪೊರೇಟ್ ಅವರು ಬುಧವಾರ ತಿಳಿಸಿದ್ದಾರೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ತನ್ನ 25,000 ಕ್ಕೂ ಹೆಚ್ಚು ಎಂಜಿನಿಯರ್‌ಗಳನ್ನು ಎಐ, ಬಿಗ್ ಡೇಟಾ ಇತ್ಯಾದಿ ವಿಷಯಗಳಲ್ಲಿ ತರಬೇತಿ ನೀಡಲು ಉದ್ದೇಶಿಸಿದೆ. ಮೈಕ್ರೊಸಾಫ್ಟ್‌ನ ಅಜ್ಯೂರ್ ಓಪನ್ ಎಐ ಸರ್ಟಿಫಿಕೇಟ್ ಗಳಿಸಲು ಉದ್ದೇಶಿಸಿದೆ.
ಜಗತ್ತಿನಾದ್ಯಂತ ಬ್ಯಾಂಕ್‌ಗಳಿಂದ ಬಿಗ್ ಟೆಕ್ ಕಂಪನಿಗಳ ತನಕ ಎಲ್ಲ ಸಂಸ್ಥೆಗಳೂ ಎಐನಲ್ಲಿ ಹೂಡಿಕೆ ಹೆಚ್ಚಿಸಲು ಬಯಸುತ್ತಿವೆ. ಮೈಕ್ರೊಸಾಫ್ಟ್ ಬೆಂಬಲಿತ ಓಪನ್ ಎಐ ಅಭಿವೃದ್ಧಿಪಡಿಸಿರುವ ಚಾಟ್ ಜಿಪಿಟಿ ಜನಪ್ರಿಯವಾಗಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಇದನ್ನೂ ಓದಿ: TCS mass resignation : ಟಿಸಿಎಸ್‌ನಲ್ಲಿ ಮಹಿಳಾ ಟೆಕ್ಕಿಗಳ ಸಾಮೂಹಿಕ ರಾಜೀನಾಮೆ, ಕಾರಣವೇನು?
ವಿಪ್ರೊ ಕಂಪನಿಯು ವಿಪ್ರೊ ಎಐ360 ಅನ್ನು (wipro ai360) ಅನ್ನು ಬಿಡುಗಡೆಗೊಳಿಸಿದೆ. ಮುಂದಿನ 12 ತಿಂಗಳುಗಳಲ್ಲಿ 2.50 ಲಕ್ಷ ಉದ್ಯೋಗಿಗಳನ್ನು ಎಐ ತಂತ್ರಜ್ಞಾನದಲ್ಲಿ ತರಬೇತುಗೊಳಿಸುವುದಾಗಿ ಕಂಪನಿ ತಿಳಿಸಿದೆ. ಭವಿಷ್ಯದ ದಿನಗಳಲ್ಲಿ ಎಐ ತಂತ್ರಜ್ಞಾನವು ಬಹುತೇಕ ಎಲ್ಲ ವಲಯಗಳನ್ನು ಆವರಿಸಲಿದೆ. ದೈನಂದಿನ ಬದುಕಿಗೆ ಉಪಯುಕ್ತವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.