ನವ ದೆಹಲಿ: ಸಾರ್ವಜನಿಕ ವಲಯದ ಟೆಲಿಕಾಂ ಸಂಸ್ಥೆಯಾದ ಬಿಎಸ್ಸೆನ್ನೆಲ್‌ನ ಉದ್ಯೋಗಿಗಳಿಗೆ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಅವರು ನೀಡಿದ ಕಠಿಣ ಸಂದೇಶದಲ್ಲಿ, ” ನಿರೀಕ್ಷೆಗೆ ತಕ್ಕಂತೆ ಸರಿಯಾಗಿ ಕೆಲಸ ಮಾಡಿ, ಇಲ್ಲದಿದ್ದರೆ ಬಲವಂತದ ನಿವೃತ್ತಿಗೆ ಸಿದ್ಧರಾಗಿʼʼ ಎಂದು ಎಚ್ಚರಿಸಿದ್ದಾರೆ.
ಬಿಎಸ್ಸೆನ್ನೆಲ್ ಸಿಬ್ಬಂದಿ ತನ್ನ “ಸರ್ಕಾರಿʼ ಧೋರಣೆಯನ್ನು ಕೈಬಿಟ್ಟು, ಚೆನ್ನಾಗಿ ದುಡಿದು ಸಂಸ್ಥೆಯ ಅಭಿವೃದ್ಧಿಗೆ ಕಾರಣರಾಗಬೇಕು. ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದಿದ್ದರೆ ಅಂಥವರನ್ನು ಗುರುತಿಸಿ ಬಲವಂತದ ನಿವೃತ್ತಿ ಕೊಟ್ಟು ಮನೆಗೆ ಕಳಿಸಲಾಗುವುದು. ಇದರಲ್ಲಿ ಯಾವುದೇ ಸಂದೇಹವೇ ಬೇಡ ಎಂದು ಸಚಿವರು ಹೇಳಿದ್ದಾರೆ.
ಬಿಎಸ್ಸೆನ್ನೆಲ್‌ನಲ್ಲಿ ೬೨,೦೦೦ ಉದ್ಯೋಗಿಗಳಿದ್ದು, ಸಮರ್ಪಕವಾಗಿ ಕೆಲಸ ಮಾಡದ ಉದ್ಯೋಗಿಗಳಿಗೆ ಇದೀಗ ಬಲವಂತದ ನಿವೃತ್ತಿ ಸನ್ನಿಹಿತವಾಗಿದೆ. ಇತ್ತೀಚೆಗೆ ಬಿಎಸ್ಸೆನ್ನೆಲ್‌ಗೆ ಕಾಯಕಲ್ಪ ನೀಡಲು ೧.೬೪ ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಲಾಗಿತ್ತು. ಬಿಎಸ್ಸೆನ್ನೆಲ್ ಖಾಸಗಿ ವಲಯದ ರಿಲಯನ್ಸ್ ಜಿಯೊ, ಏರ್‌ಟೆಲ್‌ನಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದೆ. ಇದನ್ನು ಎದುರಿಸಲೇಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಸ್ಸೆನ್ನೆಲ್ ಟೆಲಿಕಾಂ ಕಚೇರಿಗಳಲ್ಲಿ ಮತ್ತು ದೂರಸಂಪರ್ಕ ವಿನಿಮಯ ಕೇಂದ್ರಗಳಲ್ಲಿ ಆಡಳಿ ವ್ಯವಸ್ಥೆಯ ಲೋಪದೋಷಗಳು, ಸಿಬ್ಬಂದಿಯ ಅದಕ್ಷತೆಯಿಂದ ಸ್ವಚ್ಛ ವಾತಾವರಣವನ್ನು ಕೂಡ ಕಲ್ಪಿಸಲು ಸಾಧ್ಯವಾಗಿಲ್ಲ. ಕಚೇರಿಗಳ ಕೊಳಕು ಮತ್ತು ಕಳಪೆ ಪರಿಸ್ಥಿತಿಯನ್ನು ಸಹಿಸಲಾಗದು ಎಂದು ಸಚಿವರು ಹೇಳಿದ್ದಾರೆ.
ಸಮಸ್ಯೆಗಳೇನೇ ಇರಲಿ, ಬಿಎಸ್ಸೆನ್ನೆಲ್ ಎಲ್ಲ ೬೨ ಸಾವಿರ ಉದ್ಯೋಗಿಗಳು ಬದ್ಧತೆಯಿಂದ ಕೆಲಸ ಮಾಡಬೇಕು. ಪ್ರತಿ ತಿಂಗಳು ಎಲ್ಲರ ಕಾರ್ಯವೈಖರಿಯನ್ನು ಮಾಪನ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಭಾರತದ ಟೆಲಿಕಾಂ ಕಂಪನಿಗಳ ಪೈಕಿ ಅತ್ಯಂತ ಹೆಚ್ಚು ಉದ್ಯೋಗಿಗಳನ್ನು ಬಿಎಸ್ಸೆನ್ನೆಲ್ ಹೊಂದಿದೆ. ಬಿಎಸ್ಸೆನ್ನೆಲ್ ಅನ್ನು ೨೦೦೦ನೇ ಅಕ್ಟೋಬರ್ ೧ಕ್ಕೆ ಆರಂಭಿಸಲಾಗಿತ್ತು.