Site icon Vistara News

World Bank: ಅಮೆರಿಕದ ತಲಾ ಆದಾಯದ ಕಾಲು ಭಾಗ ತಲುಪಲು ಭಾರತಕ್ಕೆ 75 ವರ್ಷ ಬೇಕು: ವಿಶ್ವ ಬ್ಯಾಂಕ್‌

World Bank

ನವದೆಹಲಿ: ವಿವಿಧ ದೇಶಗಳ ಆರ್ಥಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿದ ವಿಶ್ವ ಬ್ಯಾಂಕ್ (World Bank) ಕೆಲವೊಂದು ಗಂಭೀರ ವಿಚಾರಗಳನ್ನು ಹಂಚಿಕೊಂಡಿದೆ. ಮುಂದಿನ ಕೆಲವು ದಶಕಗಳಲ್ಲಿ ಭಾರತ ಸೇರಿದಂತೆ 100ಕ್ಕೂ ಹೆಚ್ಚು ದೇಶಗಳು ತಲಾ ಆದಾಯ (Per Capita Income)ವನ್ನು ಹೆಚ್ಚಿಸಿಕೊಳ್ಳಲು ಅನೇಕ ಸವಾಲು, ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಅಮೆರಿಕದ ತಲಾ ಆದಾಯದ ಕಾಲು ಭಾಗವನ್ನು ತಲುಪಲು ಭಾರತಕ್ಕೆ ಸುಮಾರು 75 ವರ್ಷಗಳು ಬೇಕಾಗಬಹುದು. ಭಾರತದ ಪ್ರತಿಸ್ಪರ್ಧಿ ಚೀನಾ ಈ ಸಾಧನೆಯನ್ನು 10 ವರ್ಷಗಳಲ್ಲಿ ಸಾಧಿಸಲಿದೆ. ಇಂಡೋನೇಷ್ಯಾಕ್ಕೆ ಸುಮಾರು 70 ವರ್ಷ ಬೇಕಾಗಬಹುದು ಎಂದು ತಿಳಿಸಿದೆ.

ವಿಶ್ವ ಅಭಿವೃದ್ಧಿ ವರದಿ 2024: ದಿ ಮಿಡಲ್ ಇನ್‌ಕಮ್‌ ಟ್ರ್ಯಾಪ್‌ (World Development Report 2024: The Middle Income Trap)ನಲ್ಲಿ ಈ ವಿವರಗಳನ್ನು ಹಂಚಿಕೊಳ್ಳಲಾಗಿದೆ.

2023ರ ಅಂತ್ಯದ ವೇಳೆಗೆ 108 ದೇಶಗಳನ್ನು ಮಧ್ಯಮ ಆದಾಯದ ದೇಶಗಳು ಎಂದು ವರ್ಗೀಕರಿಸಲಾಗಿದೆ. ಈ ದೇಶಗಳ ಜಿಡಿಪಿ ಆಧರಿಸಿ ತಲಾ ಆದಾಯ 1,136 ಡಾಲರ್‌ರಿಂದ 13,845 ಡಾಲರ್ (95,189.98 ರೂ. – 1,160,127.93 ರೂ.) ವ್ಯಾಪ್ತಿಯಲ್ಲಿದೆ. ಈ ದೇಶಗಳಲ್ಲಿ ಸುಮಾರು 600 ಕೋಟಿ ಜನರಿದ್ದಾರೆ. ಅಂದರೆ ಜಾಗತಿಕ ಜನಸಂಖ್ಯೆಯ ಶೇ. 75ರಷ್ಟು. ಇಲ್ಲಿ ವಾಸಿಸುವ ಪ್ರತಿ ಮೂವರಲ್ಲಿ ಇಬ್ಬರು ತೀವ್ರ ಬಡತನದಲ್ಲಿದ್ದಾರೆ ಎಂದು ವರದಿ ವಿವರಿಸಿದೆ.

ವಯಸ್ಸಾಗುತ್ತಿರುವವರ ಜನಸಂಖ್ಯೆಯಲ್ಲಿ ಹೆಚ್ಚಳ ಮತ್ತು ಬೆಳೆಯುತ್ತಿರುವ ಸಾಲ ಆರ್ಥಿಕ ಪ್ರಗತಿಗೆ ಕಠಿಣ ಸವಾಲಾಗಿ ಪರಿಣಮಿಸಿದೆ. ಇನ್ನೂ ಅನೇಕ ಮಧ್ಯಮ ಆದಾಯದ ದೇಶಗಳು ಪ್ಲೇಬುಕ್ ಅನ್ನು ಬಳಸುತ್ತವೆ. ಇದು ಕಾರನ್ನು ಫಸ್ಟ್‌ ಗೇರ್‌ನಲ್ಲಿ ವೇಗವಾಗಿ ಓಡಿಸುವುದಕ್ಕೆ ಸಮ ಎಂದು ವಿಶ್ವ ಬ್ಯಾಂಕ್‌ ವರದಿ ತಿಳಿಸಿದೆ. ʼʼಅಭಿವೃದ್ಧಿಶೀಲ ದೇಶಗಳು ಇನ್ನೂ ಹಳೆಯ ಪ್ಲೇಬುಕ್‌ಗೆ ಅಂಟಿಕೊಂಡರೆ ಅಭಿವೃದ್ಧಿಯ ಓಟದಲ್ಲಿ ಹಿಂದುಳಿಯಬೇಕಾಗುತ್ತದೆʼʼ ಎಂದು ವಿಶ್ವ ಬ್ಯಾಂಕ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರದ ಹಿರಿಯ ಉಪಾಧ್ಯಕ್ಷ ಇಂದರ್ಮಿತ್ ಗಿಲ್ ಹೇಳಿದ್ದಾರೆ.

ತಮ್ಮ ಅಭಿವೃದ್ಧಿಯ ಹಂತವನ್ನು ಅವಲಂಬಿಸಿ ಎಲ್ಲ ದೇಶಗಳು ಅತ್ಯಾಧುನಿಕ ನೀತಿಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. 1990ರಿಂದ 34 ಮಧ್ಯಮ-ಆದಾಯದ ದೇಶಗಳು ಮಾತ್ರ ಹೆಚ್ಚಿನ ಆದಾಯದ ಗಳಿಸುವ ಆರ್ಥಿಕತೆಯಾಗಿ ಬದಲಾಗಿವೆ. ಆ ಪೈಕಿ ಮೂರನೇ ಒಂದು ಭಾಗದಷ್ಟು ಯುರೋಪಿಯನ್ ಒಕ್ಕೂಟ ಏಕೀಕರಣದ ಫಲಾನುಭವಿಗಳು ಅಥವಾ ತೈಲ ರಫ್ತು ದೇಶಗಳು ಎನ್ನುವುದು ವಿಶೇಷ ಎಂದು ವಿಶ್ವ ಬ್ಯಾಂಕ್ ತಿಳಿಸಿದೆ.

ಇದನ್ನೂ ಓದಿ: Per capita income : 2030ಕ್ಕೆ ಭಾರತದ ತಲಾ ಆದಾಯ 3.28 ಲಕ್ಷ ರೂ.ಗೆ ಏರಿಕೆ

ತಲಾ ಆದಾಯ ಎಂದರೇನು?

ತಲಾ ಆದಾಯವು ದೇಶದಲ್ಲಿ ವಾಸಿಸುವ ಜನರ ಸರಾಸರಿ ಆದಾಯವಾಗಿದೆ. ಇದನ್ನು ಲೆಕ್ಕಾಚಾರ ಮಾಡಲು ಆ ದೇಶದ ಜಿಡಿಪಿಯನ್ನು ಅದರ ಒಟ್ಟು ಜನಸಂಖ್ಯೆಯಿಂದ ಭಾಗಿಸಲಾಗುತ್ತದೆ. ಇದು ಯಾವುದೇ ದೇಶ ಅಥವಾ ರಾಜ್ಯದ ಜನರ ಆದಾಯದ ಸ್ಥಿತಿ ಏನೆಂಬುದನ್ನು ತೋರಿಸುತ್ತದೆ. ಜನರು ಏನನ್ನು ಖರೀದಿಸಲು ಹಣವನ್ನು ಖರ್ಚು ಮಾಡುತ್ತಿದ್ದಾರೆ ಎಂಬುದನ್ನು ಇದು ಹೇಳುತ್ತದೆ.

Exit mobile version