ನವದೆಹಲಿ: 2024ರಲ್ಲಿ ಭಾರತದ ಆರ್ಥಿಕತೆ(Indian economy)ಯು ಶೇ. 7.5ರಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ವಿಶ್ವ ಬ್ಯಾಂಕ್ (World Bank) ಹೇಳಿದೆ. ಒಟ್ಟಾರೆಯಾಗಿ ದಕ್ಷಿಣ ಏಷ್ಯಾದ ಬೆಳವಣಿಗೆಯು 2024ರಲ್ಲಿ ಶೇ. 6.0ಕ್ಕೆ ತಲುಪಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಮುಖ್ಯವಾಗಿ ಭಾರತದ ದೃಢವಾದ ಬೆಳವಣಿಗೆ ಮತ್ತು ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ಚೇತರಿಕೆಯನ್ನು ಎತ್ತಿ ತೋರಿಸುತ್ತದೆ ಎಂದು ವಿಶ್ವ ಬ್ಯಾಂಕ್ ಮಂಗಳವಾರ ತಿಳಿಸಿದೆ.
ವರದಿಯ ಪ್ರಕಾರ ಮುಂದಿನ ಎರಡು ವರ್ಷಗಳವರೆಗೆ ದಕ್ಷಿಣ ಏಷ್ಯಾವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಲಿದೆ. 2025ರಲ್ಲಿ ಇಲ್ಲಿನ ಬೆಳವಣಿಗೆಯು ಶೇ. 6.1 ಎಂದು ಅಂದಾಜಿಸಲಾಗಿದೆ. “ಈ ಪ್ರದೇಶದ ಆರ್ಥಿಕತೆಯ ಬಹುಭಾಗವನ್ನು ಹೊಂದಿರುವ ಭಾರತದಲ್ಲಿ, ಉತ್ಪಾದನಾ ಬೆಳವಣಿಗೆಯು ಮಧ್ಯಮ ಅವಧಿಯಲ್ಲಿ ಶೇ. 6.6ಕ್ಕೆ ಮರಳುವ ಮೊದಲು ಹಣಕಾಸು ವರ್ಷ 2023-24ರಲ್ಲಿ ಶೇ. 7.5ಕ್ಕೆ ತಲುಪುವ ನಿರೀಕ್ಷೆಯಿದೆ” ಎಂದು ಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿದೆ. ಬಾಂಗ್ಲಾದೇಶದಲ್ಲಿ 2024-25ರ ಹಣಕಾಸು ವರ್ಷದಲ್ಲಿ ಉತ್ಪಾದನೆಯು ಶೇ. 5.7ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ವ್ಯಾಪಾರ ವೃದ್ಧಿಸುತ್ತಿದ್ದಂತೆ ಪಾಕಿಸ್ತಾನದ ಆರ್ಥಿಕತೆಯು 2024-25 ಹಣಕಾಸು ವರ್ಷದಲ್ಲಿ ಶೇ. 2.3ರಷ್ಟು ಬೆಳೆಯುವ ಸಾಧ್ಯತೆ ಇದೆ. ಶ್ರೀಲಂಕಾದಲ್ಲಿ ಉತ್ಪಾದನೆಯ ಬೆಳವಣಿಗೆಯು 2025ರಲ್ಲಿ ಶೇ. 2.5ಕ್ಕೆ ಹೆಚ್ಚಾಗಲಿದೆ. ಇದೇ ವೇಳೆ ಪ್ರವಾಸೋದ್ಯಮದಲ್ಲಿ ಸಾಧಾರಣ ಚೇತರಿಕೆ ಕಂಡು ಬರಲಿದೆ.
“ದಕ್ಷಿಣ ಏಷ್ಯಾದ ಬೆಳವಣಿಗೆಯ ನಿರೀಕ್ಷೆಗಳು ಧನಾತ್ಮಕವಾಗಿದೆ. ಆದರೆ ದುರ್ಬಲ ಹಣಕಾಸಿನ ಸ್ಥಿತಿಗಳು ಮತ್ತು ಹೆಚ್ಚುತ್ತಿರುವ ಹವಾಮಾನ ವೈಪರೀತ್ಯಗಳು ತೊಡಕಾಗಿ ಪರಿಣಮಿಸುವ ಸಾಧ್ಯತೆ ಇದೆʼʼ ಎಂದು ವಿಶ್ವ ಬ್ಯಾಂಕ್ ದಕ್ಷಿಣ ಏಷ್ಯಾದ ಉಪಾಧ್ಯಕ್ಷ ಮಾರ್ಟಿನ್ ರೈಸರ್ ಹೇಳಿದ್ದಾರೆ. “ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು, ದೇಶಗಳು ಖಾಸಗಿ ಹೂಡಿಕೆಯನ್ನು ವೃದ್ಧಿಸಬೇಕು ಮತ್ತು ಉದ್ಯೋಗ ಬೆಳವಣಿಗೆಯನ್ನು ಬಲಪಡಿಸಲು ನೀತಿಗಳನ್ನು ಅಳವಡಿಸಿಕೊಳ್ಳಬೇಕು” ಎಂದು ಅವರು ಸಲಹೆ ನೀಡಿದ್ದಾರೆ.
“ದಕ್ಷಿಣ ಏಷ್ಯಾ ಇದೀಗ ತನ್ನ ಜನಸಂಖ್ಯಾ ಬಲವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ವಿಫಲವಾಗಿದೆ” ಎಂದು ವಿಶ್ವಬ್ಯಾಂಕ್‌ನ ದಕ್ಷಿಣ ಏಷ್ಯಾದ ಮುಖ್ಯ ಅರ್ಥಶಾಸ್ತ್ರಜ್ಞ ಫ್ರಾಂಜಿಸ್ಕಾ ಒನ್ಸೋರ್ಜ್ ಅಭಿಪ್ರಾಯಪಟ್ಟಿದ್ದಾರೆ. ʼʼಈ ಪ್ರದೇಶವು ಜನಸಂಖ್ಯೆಯ ದೊಡ್ಡ ಪಾಲನ್ನು ನೇಮಿಸಿಕೊಂಡರೆ ಉತ್ಪಾದನೆಯು ಶೇ. 16%ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆʼʼ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಆರ್ಥಿಕ ಪರಿಸ್ಥಿತಿಗಳು ಅನುಕೂಲಕರವಾಗಿದೆ. ವಾಣಿಜ್ಯ ವಲಯಕ್ಕೆ ದೇಶೀಯ ಸಾಲ ವಿತರಣೆಯು 2023ರ ಡಿಸೆಂಬರ್‌ನಲ್ಲಿ ಶೇ. 14ರಷ್ಟು ಹೆಚ್ಚಾಗಿದೆ. ಆರ್ಥಿಕ ಸದೃಢತೆಯ ಸೂಚಕಗಳು ಸುಧಾರಿಸುತ್ತಲೇ ಇರುವುದು ಆಶಾದಾಯಕ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ. ಅನುತ್ಪಾದಕ-ಸಾಲದ ಅನುಪಾತವು ಕಳೆದ ವರ್ಷ ಶೇ. 3.2 ಕ್ಕೆ ಇಳಿದಿದೆ.
ಇದನ್ನೂ ಓದಿ: Infosys: ಆದಾಯ ತೆರಿಗೆ ಇಲಾಖೆಯಿಂದ ಇನ್ಫೋಸಿಸ್‌ಗೆ 6,329 ಕೋಟಿ ರೂ. ರೀಫಂಡ್!
ʼʼಭಾರತದಲ್ಲಿ 2023-24ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ದೃಢವಾದ ಬೆಳವಣಿಗೆಯ ಹಿನ್ನೆಲೆಯಲ್ಲಿ ಉತ್ಪಾದನೆಯ ಬೆಳವಣಿಗೆಯು ಶೇಕಡಾ 7.5ಕ್ಕೆ ತಲುಪುವ ನಿರೀಕ್ಷೆಯಿದೆ. ಆದರೆ 2024-25ರ ಹಣಕಾಸು ವರ್ಷದಲ್ಲಿ ಬೆಳವಣಿಗೆಯು ಶೇಕಡಾ 6.6ಕ್ಕೆ ಇಳಿಯುವ ಸಾಧ್ಯತೆ ಇದೆ. ನಂತರದ ವರ್ಷಗಳಲ್ಲಿ ಏರಿಕೆಯಾಗಬಹುದುʼʼ ಎಂದು ವಿಶ್ವ ಬ್ಯಾಂಕ್ ಹೇಳಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ