ನವದೆಹಲಿ: ವಿಶ್ವದ ಅತ್ಯಂತ ಸಿರಿವಂತ ವ್ಯಕ್ತಿ (World’s Richest Person) ಎನ್ನುವ ಪಟ್ಟವನ್ನು ಟೆಕ್ ದೈತ್ಯ ಎಲಾನ್ ಮಸ್ಕ್ (Elon Musk) ಕಳೆದುಕೊಂಡಿದ್ದಾರೆ. ಸುಮಾರು ಒಂಬತ್ತು ತಿಂಗಳ ಬಳಿಕ ಎಲಾನ್ ಮಸ್ಕ್ ಅವರು ನಂಬರ್ 1 ಶ್ರೀಮಂತ ಎನ್ನುವ ಸ್ಥಾನದಿಂದ ಕೆಳಗಿಳಿದಿದ್ದಾರೆ. 200 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ (Jeff Bezos) ಅವರು ಎಲೋನ್ ಮಸ್ಕ್ ಅವರನ್ನು ಹಿಂದಿಕ್ಕಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಸೋಮವಾರ (ಮಾರ್ಚ್ 4) ಟೆಸ್ಲಾ ಷೇರುಗಳ (Tesla shares) ಕುಸಿತವೇ ಎಲಾನ್ ಮಸ್ಕ್ ಅವರ ಹಿನ್ನಡೆಗೆ ಕಾರಣ ಎನ್ನಲಾಗಿದೆ.
ಸಂಪತ್ತಿನ ಮೌಲ್ಯ
ಪ್ರಸ್ತುತ ಜೆಫ್ ಬೆಜೋಸ್ 200 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತು ಹೊಂದಿದ್ದರೆ, ಎಲಾನ್ ಮಸ್ಕ್ ಬಳಿ ಇರುವುದು 198 ಬಿಲಿಯನ್ ಡಾಲರ್‌ನ ಸಂಪತ್ತು. ಸೋಮವಾರ ಟೆಸ್ಲಾ ಷೇರುಗಳು ಶೇಕಡಾ 7.2ರಷ್ಟು ಕುಸಿದ ನಂತರ ಎಲಾನ್ ಮಸ್ಕ್ ಒಂದೇ ದಿನದಲ್ಲಿ 17.6 ಬಿಲಿಯನ್ ಡಾಲರ್ ಸಂಪತ್ತನ್ನು ಕಳೆದುಕೊಂಡಿದ್ದಾರೆ. 60 ವರ್ಷದ ಬೆಜೋಸ್ ಅವರ ಅಮೆಜಾನ್ ಷೇರುಗಳು ಈ ವರ್ಷ ಇಲ್ಲಿಯವರೆಗೆ ಶೇ. 18ರಷ್ಟು ಮತ್ತು ಒಂದು ವರ್ಷದಲ್ಲಿ ಸುಮಾರು ಶೇ. 90ರಷ್ಟು ಏರಿಕೆ ದಾಖಲಿಸಿದೆ. ಮತ್ತೊಂದೆಡೆ ಟೆಸ್ಲಾ ಷೇರುಗಳು ಈ ವರ್ಷ ಇಲ್ಲಿಯವರೆಗೆ ಶೇ. 24ರಷ್ಟು ಕುಸಿದಿವೆ.
2021ರ ಬಳಿಕ ಜೆಫ್ ಬೆಜೋಸ್ ಅಗ್ರ ಸ್ಥಾನಕ್ಕೇರುತ್ತಿರುವುದು ಇದು ಮೊದಲ ಬಾರಿ ಎನ್ನುವುದು ವಿಶೇಷ. ಕೆಲವು ವರ್ಷಗಳಿಂದ ಅದರಲ್ಲೂ ಕೋರೋನಾ ಸಾಂಕ್ರಾಮಿಕ ರೋಗದ ಬಳಿಕ ಆನ್‌ಲೈನ್ ಶಾಪಿಂಗ್ ತಾಣ ಅಮೆಜಾನ್ ತನ್ನ ವ್ಯವಹಾರವನ್ನು ವೃದ್ಧಿಸುತ್ತಾ ಸಾಗುತ್ತಿರುವುದು ಕೂಡ ಜೆಫ್ ಬೆಜೋಸ್ ಅವರಿಗೆ ಅನುಕೂಲಕರವಾಗಿ ಪರಿಣಮಿಸಿದೆ. ಬೆಜೋಸ್ 2017ರಲ್ಲಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ವಿಶ್ವದ ಶ್ರೀಮಂತ ವ್ಯಕ್ತಿಯಾಗಿ ಮೊದಲ ಬಾರಿ ಹೊರಹೊಮ್ಮಿದ್ದರು. ವಿಶೇಷ ಎಂದರೆ ಭಾರತದ ಪ್ರಸಿದ್ಧ ಉದ್ಯಮಿ ಮುಕೇಶ್ ಅಂಬಾನಿ 115 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಜಗತ್ತಿನ 11ನೇ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ.
ವಿಶ್ವದ ಶ್ರೀಮಂತ ವ್ಯಕ್ತಿಗಳು
- ಜೆಫ್ ಬೆಜೋಸ್ – 200 ಬಿಲಿಯನ್ ಡಾಲರ್ – ಅಮೆರಿಕ
- ಎಲಾನ್ ಮಸ್ಕ್ – 198 ಬಿಲಿಯನ್ ಡಾಲರ್ – ಅಮೆರಿಕ
- ಬರ್ನಾರ್ಡ್ ಅರ್ನಾಲ್ಟ್ – 197 ಬಿಲಿಯನ್ ಡಾಲರ್ – ಫ್ರಾನ್ಸ್
- ಮಾರ್ಕ್ ಜುಕರ್ಬರ್ಗ್ – 179 ಬಿಲಿಯನ್ ಡಾಲರ್ – ಅಮೆರಿಕ
- ಬಿಲ್ ಗೇಟ್ಸ್ – 150 ಬಿಲಿಯನ್ ಡಾಲರ್ – ಅಮೆರಿಕ
- ಸ್ಟೀವ್ ಬಾಲ್ಮರ್ – 143 ಬಿಲಿಯನ್ ಡಾಲರ್ – ಅಮೆರಿಕ
- ವಾರೆನ್ ಬಫೆಟ್ – 133 ಬಿಲಿಯನ್ ಡಾಲರ್ – ಅಮೆರಿಕ
- ಲ್ಯಾರಿ ಎಲಿಸನ್ – 129 ಬಿಲಿಯನ್ ಡಾಲರ್ – ಅಮೆರಿಕ
- ಲ್ಯಾರಿ ಪೇಜ್ – 122 ಬಿಲಿಯನ್ ಡಾಲರ್ – ಅಮೆರಿಕ
- ಸೆರ್ಗೆ ಬ್ರಿನ್ – 116 ಬಿಲಿಯನ್ ಡಾಲರ್ – ಅಮೆರಿಕ
- ಮುಕೇಶ್ ಅಂಬಾನಿ – 115 ಬಿಲಿಯನ್ ಡಾಲರ್ -ಭಾರತ
ಇದನ್ನೂ ಓದಿ: ವಿಶ್ವ ಪ್ರವಾಸೋದ್ಯಮ ದಿನ: ಭಾರತದ ಟಾಪ್ 10 ಪ್ರವಾಸೀ ತಾಣಗಳು!