ನ್ಯೂಯಾರ್ಕ್: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಎಲಾನ್ ಮಸ್ಕ್ ಈಗ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ಬ್ಲೂಮ್ ಬರ್ಗ್ ಪಟ್ಟಿಯ ಪ್ರಕಾರ ಫ್ರೆಂಚ್ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ (73) (Bernard Arnault) ಅವರು ಎಲಾನ್ ಮಸ್ಕ್ ಅವರನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೆ ಏರಿದ್ದಾರೆ.
ಐಷಾರಾಮಿ ಫ್ಯಾಷನ್ ವಸ್ತುಗಳ ಉತ್ಪಾದಕ ಎಲ್‌ವಿಎಂಎಚ್ ಸಮೂಹದ ಸ್ಥಾಪಕ ಹಾಗೂ ಅಧ್ಯಕ್ಷರಾಗಿರುವ ಬರ್ನಾರ್ಡ್ ಅರ್ನಾಲ್ಡ್ ಮೊದಲ ಸ್ಥಾನ ಗಳಿಸಿದ್ದಾರೆ.
ಫ್ರಾನ್ಸ್‌ನ ಫ್ಯಾಷನ್ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್
ಬರ್ನಾರ್ಡ್ ಅರ್ನಾಲ್ಟ್ ಅವರು 171 ಶತಕೋಟಿ ಡಾಲರ್ ( 13.85 ಲಕ್ಷ ಕೋಟಿ ರೂ.) ಸಂಪತ್ತಿಗೆ ಮಾಲೀಕರಾಗಿದ್ದಾರೆ. ಟೆಸ್ಲಾ ಸ್ಥಾಪಕ ಹಾಗೂ ಇತ್ತೀಚೆಗೆ ಟ್ವಿಟರ್ ಅನ್ನು ಖರೀದಿಸಿರುವ ಎಲಾನ್ ಮಸ್ಕ್ ಅವರ ಸಂಪತ್ತಿನಲ್ಲಿ, ಈ ವರ್ಷ ಜನವರಿಯಿಂದ 107 ಶತಕೋಟಿ ಡಾಲರ್ (8.66 ಲಕ್ಷ ಕೋಟಿ ರೂ.) ನಷ್ಟವಾಗಿದ್ದು, 164 ಶತಕೋಟಿ ಡಾಲರ್‌ಗೆ (13.28 ಲಕ್ಷ ಕೋಟಿ ರೂ.) ಇಳಿಕೆಯಾಗಿದೆ.
ಟ್ವಿಟರ್ ಖರೀದಿಸಿದ ಬಳಿಕ ಟೆಸ್ಲಾ ಷೇರು ದರ ಕುಸಿತ
ಎಲಾನ್ ಮಸ್ಕ್ ಅವರು ಟ್ವಿಟರ್ ಖರೀದಿಸಿದ ಬಳಿಕ ಟೆಸ್ಲಾ ಕಂಪನಿಯ ಷೇರುಗಳ ದರ ಕುಸಿತದಿಂದ ಸಂಪತ್ತಿನಲ್ಲಿ ನಷ್ಟ ಸಂಭವಿಸಿದೆ. ಟೆಸ್ಲಾ ಷೇರು ದರದಲ್ಲಿ 40% ಕ್ಕೂ ಹೆಚ್ಚು ಕುಸಿದಿತ್ತು.
ಗೌತಮ್ ಅದಾನಿ ವಿಶ್ವದ 3 ನೇ ಅತಿ ಶ್ರೀಮಂತ
ಅದಾನಿ ಸಮೂಹದ ಸ್ಥಾಪಕ ಗೌತಮ್ ಅದಾನಿ ಅವರು ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ ಎನ್ನಿಸಿದ್ದು, ಅವರ ಸಂಪತ್ತು 125 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. (10.1 ಲಕ್ಷ ಕೋಟಿ ರೂ.)
ಬ್ಲೂಮ್ ಬರ್ಗ್ ಟಾಪ್ 10 ಬಿಲಿಯನೇರ್‌ಗಳ ಪಟ್ಟಿಯಲ್ಲಿ ಭಾರತದ ಗೌತಮ್ ಅದಾನಿ ಹಾಗೂ ಮುಕೇಶ್ ಅಂಬಾನಿ ಸ್ಥಾನ ಗಳಿಸಿದ್ದಾರೆ. ಮುಕೇಶ್ ಅಂಬಾನಿ 9ನೇ ಸ್ಥಾನ ಪಡೆದಿದ್ದಾರೆ.