Site icon Vistara News

Anchor Aparna: 6 ತಿಂಗಳು ಎಂದರೂ 2 ವರ್ಷ ಲವಲವಿಕೆಯಿಂದ ಬದುಕಿದ ಜೀವ! ಅಪರ್ಣಾ ಕೊನೆ ದಿನಗಳು ಹೀಗಿದ್ದವು

anchor aparna vastare

ಬೆಂಗಳೂರು: ಅಚ್ಚ ಕನ್ನಡದ ಸ್ವಚ್ಛ ಕಂಠದ ನಿರೂಪಕಿ ಅಪರ್ಣಾ ಅವರು ಸುಮಾರು ಎರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್‌ನಿಂದ ನರಳುತ್ತಿದ್ದರು. ಎರಡು ವರ್ಷ ಹಿಂದೆ ವೈದ್ಯರು ಆಕೆಗೆ ಕ್ಯಾನ್ಸರ್‌ ದೃಢಪಡಿಸಿದಾಗ, ಇನ್ನು ಆರು ತಿಂಗಳು ಬದುಕಬಹುದು ಎಂದಿದ್ದರು ಎಂದು ಅಪರ್ಣಾ ಅವರ ಪತಿ ನಾಗರಾಜ ವಸ್ತಾರೆ ತಿಳಿಸಿದ್ದಾರೆ.

“ವೈಯಕ್ತಿಕವಾಗಿ ನಾನು ಅಪರ್ಣಾ ತುಂಬಾ ಖಾಸಗಿಯಾಗಿ ಬದುಕಿದವರು. ಅಷ್ಟೇ ಖಾಸಗಿಯಾಗಿ ನಾನು ಅವಳನ್ನು ಬಿಳ್ಕೊಡಲಿಕ್ಕೆ ಇಷ್ಟ ಪಡುತೀನಿ. ಹಾಗಂತ ನನಗೆ ಸೇರುಕ್ಕೆ ಮುಂಚೆನೇ ಹೆಚ್ಚಾಗಿ ಅಪರ್ಣಾ ಕರ್ನಾಟಕಕ್ಕೆ ಸೇರಿದವಳು. ಅಪರ್ಣಾಗೆ ಒಂದು ಆಶಯ ಇತ್ತು. ಸಾವಿನ ಬಳಿಕ ಮಾಧ್ಯಮಗಳ ಮುಂದೆ‌ ಎಲ್ಲವನ್ನು ಹೇಳುವಂತೆ ತಿಳಿಸಿದ್ರು. ಎರಡು ವರ್ಷದ ಹಿಂದೆ ಜುಲೈನಲ್ಲಿ ಶಾಸ್ವಕೋಶ ಕ್ಯಾನ್ಸರ್ ಅಂತಾ ಗೊತ್ತಾಯ್ತು. ಮೊದಲು ನೋಡಿದ ವೈದ್ಯರು ಆರು ತಿಂಗಳು ಬದಕಬಹುದು ಅಂತ ಹೇಳಿದ್ದರು” ಎಂದು ವಸ್ತಾರೆ ತಿಳಿಸಿದ್ದಾರೆ.

“ಅವಳು ಛಲಗಾತಿ, ನಾನು ಬದುಕ್ತೀನಿ ಅಂತಾ ಇದ್ಲು. ಅಲ್ಲಿಂದ ಜನವರಿವರೆಗೂ ಕ್ಯಾನ್ಸರ್ ವಿರುದ್ಧ ಹೋರಾಟ ಮಾಡಿದ್ಲು. ಫೆಬ್ರವರಿಯಿಂದ‌ ಸೋತಿದ್ಲು. ಒಂದೂವರೆ ವರ್ಷದಿಂದ ಛಲದಿಂದ ಬದುಕಿದ್ಲು. ಅವಳು ಧೀರೆ, ಇಷ್ಟು ದಿನ ಬದುಕಿದ್ದಾಳೆ. ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಇಬ್ಬರು ಜಂಟಿಯಾಗಿ ಸೋತಿದೀವಿ. ಬರುವ ಅಕ್ಟೋಬರ್‌ಗೆ ಅವಳಿಗೆ 58 ವರ್ಷ ತುಂಬ್ತಿತ್ತು. ಅವಳ ನಿಜವಾದ ವಯಸ್ಸು ಯಾವತ್ತೂ ತೊರಿಸಲಿಲ್ಲ” ಎಂದು ವಸ್ತಾರೆ ವಿವರಿಸಿದ್ದಾರೆ.

“ಇಂದು ಒಂಬತ್ತೂವರೆ ಗಂಟೆ ಸುಮಾರು ದೇಹ ತನ್ನನ್ನ ತಾನು ಹಿಂಪಡೆದಿದೆ. ದಯವಿಟ್ಟು ನೀವೆಲ್ಲಾ ತಮ್ಮ ತಮ್ಮ ಗೂಡುಗಳಿಗೆ ಹೋಗ್ಬಹುದು. ನಾಳೆ ಬೆಳಗ್ಗೆ 7:30 ಗಂಟೆಗೆ ಕರೆದುಕೊಂಡು ಬರುತ್ತೇನೆ. ಇವತ್ತು ಒಂದು ದಿನಾ ನಾನು ನನ್ನ ಕುಟುಂಬದ ಜೊತೆಗೆ ಇರ್ತೀನಿ” ಎಂದು ಅವರು ನುಡಿದಿದ್ದಾರೆ.

ಈ ಕ್ಯಾನ್ಸರ್‌ ನಡುವೆಯೂ ಅವರು ಹಲವು ʼಮಜಾ ವಿದ್‌ ಸೃಜಾʼ ಸೇರಿದಂತೆ ಹಲವು ಟಿವಿ ಶೋಗಳಲ್ಲಿ ಹಾಗೂ ʼಎಡೆಯೂರು ಶ್ರೀ ಸಿದ್ದಲಿಂಗೇಶ್ವರʼ ಮುಂತಾದ ಸೀರಿಯಲ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಲವಲವಿಕೆಯಿಂದ ನಟಿಸಿ ಎಲ್ಲರನ್ನೂ ನಗಿಸಿದ್ದರು. ʼನಾವು ಅಪರ್ಣಾ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದೆವುʼ ಎಂದು ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಹೇಳಿದ್ದಾರೆ. ಬೃಹತ್‌ ಸಾರ್ವಜನಿಕ ಕಾರ್ಯಕ್ರಮಗಳ ನಿರೂಪಣೆಗೆ ಅಪರ್ಣಾ ಅವರೇ ಮೊದಲ ಆಯ್ಕೆಯಾಗಿದ್ದರು.

ಮೂರು ದಿನದ ಹಿಂದೆ ಕ್ಯಾನ್ಸರ್‌ ಉಲ್ಬಣಿಸಿ ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅಪರ್ಣಾ ನಿನ್ನೆ ಸಂಜೆ 9:45 ಕ್ಕೆ ನಿಧನರಾಗಿದ್ದರು. ಇಂದು ಬನಶಂಕರಿ ಬೆಳಗ್ಗೆ 11:30ರವರೆಗೆ ಬನಶಂಕರಿಯ ಸುಚಿತ್ರಾ ಫಿಲಂ ಸೊಸೈಟಿ ಬಳಿ ಇರುವ ನಿವಾಸದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆ ಬಳಿಕ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ವಸ್ತಾರೆ ತಿಳಿಸಿದ್ದಾರೆ.

ಅಂತಿಮ ದರ್ಶನಕ್ಕೆ ಬರುವವರು ಖಾಲಿ ಕೈಯಲ್ಲಿ ಬರಬೇಕು. ಪ್ಲಾಸ್ಟಿಕ್‌ ಹಾಗೂ ಬೊಕೆಗಳನ್ನು ದಯವಿಟ್ಟು ತರಬೇಡಿ. ಅವುಗಳು ಕೆಲವು ಗಂಟೆಗಳ ಬಳಿಕ ಕಸವಾಗುವುದರಿಂದ, ಆ ಮೂಲಕ ಪರಿಸರ ಮಾಲಿನ್ಯ ಮಾಡಲು ನಮಗಿಷ್ಟವಿಲ್ಲ ಎಂದೂ ವಸ್ತಾರೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Anchor Aparna: ನಟನೆ, ನಿರೂಪಣೆ, ಕನ್ನಡ, ಹಾಸ್ಯ; ಅಪರ್ಣಾ ಸಾಗಿದ ಜೀವನದ ಹಾದಿ ಇಲ್ಲಿದೆ

Exit mobile version