ಬೆಂಗಳೂರು: ದಿ ವೀಕ್ ವಾರಪತ್ರಿಕೆ (The WEEK) ಮತ್ತು ಮಲಯಾಳ ಮನೋರಮಾದ (Malayala Manorama) ರೆಸಿಡೆಂಟ್ ಎಡಿಟರ್ ಆಗಿದ್ದ ಹಿರಿಯ ಪತ್ರಕರ್ತ ಕೆ.ಎಸ್. ಸಚ್ಚಿದಾನಂದ ಮೂರ್ತಿ (KS Sachidananda Murthy) ಇನ್ನಿಲ್ಲ (Death News). ಅವರಿಗೆ 66 ವರ್ಷವಾಗಿತ್ತು. ಮೂಲತಃ ಕೋಲಾರ ಜಿಲ್ಲೆಯವರಾಗಿರುವ ಅವರು ಹಂತ ಹಂತವಾಗಿ ಪತ್ರಿಕೋದ್ಯಮದಲ್ಲಿ ಉನ್ನತ ಸ್ಥಾನಗಳನ್ನು ಪಡೆದು ಜನಪ್ರಿಯರಾಗಿದ್ದರು.
ನಿವೃತ್ತಿ ನಂತರ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಅವರು ಇತ್ತೀಚೆಗೆ ಶ್ವಾಸಕೋಶ ಸಮಸ್ಯೆಯಾಗಿ ಶ್ವಾಸಕೋಶ ವರ್ಗಾವಣೆ ಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಚೇತರಿಸಿಕೊಂಡಿದ್ದರು. ಆದರೆ, ಈಗ ನಿಧನರಾಗಿದ್ದಾರೆ.
ಮಾಧ್ಯಮ ಮತ್ತು ಸ್ನೇಹಿತರ ವಲಯದಲ್ಲಿ ಸಚ್ಚಿ ಎಂದೇ ಹೆಸರಾಗಿದ್ದ ಸಚ್ಚಿದಾನಂದ ಮೂರ್ತಿ ಅವರು 1982ರಲ್ಲಿ ಬೆಂಗಳೂರು ವರದಿಗಾರರಾಗಿ ದಿ ವೀಕ್ ವಾರಪತ್ರಿಕೆ ಸೇರಿದ್ದರು. 2022ರ ಸೆಪ್ಟೆಂಬರ್‌ನಲ್ಲಿ ನಿವೃತ್ತರಾಗುವವರೆಗೆ ಅವರು ಮನೋರಮಾ ಗ್ರೂಪ್‌ನ ಅನಿವಾರ್ಯ ಭಾಗವಾಗಿದ್ದರು.
1989ಲ್ಲಿ ವಾರಪತ್ರಿಕೆಯ ಸ್ಪೆಷಲ್ ಕರೆಸ್ಪಾಂಡೆಂಟ್ ಆಗಿ ಭಡ್ತಿ ಪಡೆದ ಅವರು, ಬಳಿಕ 1990ರ ಏಪ್ರಿಲ್‌ನಲ್ಲಿ ದಿಲ್ಲಿ ಬ್ಯೂರೋ ಚೀಫ್ ಆಗಿ ರಾಜಧಾನಿಗೆ ತೆರಳಿದ್ದರು. 2000ದ ಏಪ್ರಿಲ್‌ನಲ್ಲಿ ಅವರು ರೆಸಿಡೆಂಟ್ ಎಡಿಟರ್ ಆಗಿ ನೇಮಕಗೊಂಡಿದ್ದರು. ಮಲಯಾಳ ಮನೋರಮಾದಲ್ಲಿ ಕಳೆದ 31 ವರ್ಷಗಳಿಂದ ನಿರಂತರವಾಗಿ ಅಂಕಣ ಬರೆಯುತ್ತಿದ್ದರು.
ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಸಚ್ಚಿ ಅವರು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಕೇಂದ್ರೀಯ ಮಾಧ್ಯಮ ಅಕ್ರೆಡಿಷನ್ ಸಮಿತಿಯ ಸದಸ್ಯರೂ ಆಗಿದ್ದರು. 20೦9ರಲ್ಲಿ ಅವರು ಲೋಕಸಭೆಯ ಪತ್ರಿಕಾ ಸಲಹಾ ಸಮಿತಿಯ ಅಧ್ಯಕ್ಷರಾಗಿದ್ದರು. ದುರ್ಲಭ್ ಸಿಂಗ್ ಮಾಧ್ಯಮ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದವರು ಸಚ್ಚಿದಾನಂದ ಮೂರ್ತಿ.
ಸಚ್ಚಿದಾನಂದ ಮೂರ್ತಿ ಅವರು ಕೋಲಾರ ಜಿಲ್ಲೆಯ ಅಷ್ಟಗ್ರಾಮದವರು. ಅವರಿಗೆ ಪತ್ನಿ ಚಂದ್ರಿಕಾ, ಪುತ್ರರಾದ ನಿತಿನ್ ಮತ್ತು ರೋಹನ್ ಇದ್ದಾರೆ.
ಆಗಸ್ಟ್ 30ರಂದು ಶ್ವಾಸಕೋಶ ವರ್ಗಾವಣೆ ನಡೆದಿತ್ತು
ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಕಳೆದ ಆಗಸ್ಟ್ 30ರಂದು ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಶ್ವಾಸಕೋಶದ ವರ್ಗಾವಣೆಯ ಶಸ್ತ್ರಚಿಕಿತ್ಸೆ ನಡೆದಿತ್ತು. ಯಾವುದೇ ಸರ್ಜರಿ ನಡೆದು ಆರು ವಾರಗಳವರೆಗೆ ಅವರು ಆರಾಮವಾಗಿದ್ದಾರೆ ಎಂದರೆ ಹೊಸದಾಗಿ ಜೋಡಣೆಯಾದ ಅಂಗ ಹೊಂದಿಕೊಂಡಿದೆ, ಆಪರೇಷನ್ ಯಶಸ್ವಿಯಾಗಿದೆ ಎಂದು ವೈದ್ಯರು ಘೋಷಿಸುತ್ತಾರೆ. ಇದರಂತೆ ವೈದ್ಯರು ಕೆಲವೇ ದಿನದ ಹಿಂದೆ ಶಸ್ತ್ರಕ್ರಿಯೆ ಯಶಸ್ವಿಯಾಗಿದೆ ಎಂದು ಘೋಷಿಸಿದ್ದರು. ಆದರೆ, ಶುಕ್ರವಾರ ಬೆಳಗ್ಗೆ 11.40ರ ಹೊತ್ತಿಗೆ ಅವರು ನಿಧನರಾಗಿದ್ದಾರೆ. ಅವರ ಇಬ್ಬರು ಮಕ್ಕಳು ಕೂಡಾ ಈಗ ಬೆಂಗಳೂರಿನಲ್ಲೇ ಇದ್ದಾರೆ.
ರಾಜ್ಯ-ರಾಷ್ಟ್ರಗಳ ವಿದ್ಯಮಾನಗಳ ಜ್ಞಾನಕೋಶ: ಸಿದ್ದರಾಮಯ್ಯ ಕಂಬನಿ
ಹಿರಿಯ ಪತ್ರಕರ್ತ, ‘ಮಲಯಾಳ ಮನೋರಮಾ’ ಮತ್ತು ‘ದಿ ವೀಕ್’ ಪತ್ರಿಕೆಗಳ ಮಾಜಿ ಸ್ಥಾನೀಯ ಸಂಪಾದಕರಾಗಿದ್ದ ಕೆ.ಎಸ್.ಸಚ್ಚಿದಾನಂದಮೂರ್ತಿ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ನನಗೆ ಆತ್ಮೀಯರು ಮತ್ತು ಹಿತೈಷಿಗಳಾಗಿದ್ದ ಸಚ್ಚಿದಾನಂದಮೂರ್ತಿಯವರು ದೆಹಲಿಯ ಮಾಧ್ಯಮರಂಗದಲ್ಲಿ ಸಕ್ರಿಯರಾಗಿದ್ದ ಕೆಲವೇ ಕೆಲವು ಹಿರಿಯ ಕನ್ನಡಿಗ ಪತ್ರಕರ್ತರಲ್ಲಿ ಒಬ್ಬರಾಗಿದ್ದರು. ರಾಜ್ಯ-ರಾಷ್ಟ್ರಗಳ ವಿದ್ಯಮಾನಗಳ ಜ್ಞಾನಕೋಶದಂತಿದ್ದ ಸಚ್ಚಿದಾನಂದ ಮೂರ್ತಿಯವರ ಸಾವು ಮಾಧ್ಯಮರಂಗಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬ ಮತ್ತು ಸ್ನೇಹಿತರ ದು:ಖದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂಬನಿ ಮಿಡಿದಿದ್ದಾರೆ.