ಮೈಸೂರು: ಮೈಸೂರಿನ ಚಾಮರಾಜ ಕ್ಷೇತ್ರದ (Mysore news) ಕಾಂಗ್ರೆಸ್ ಶಾಸಕರಾಗಿದ್ದ (Former Congress MLA Vasu) ವಾಸು ನಿಧನರಾಗಿದ್ದಾರೆ (Former MLA Dead). ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 72 ವರ್ಷ ಆಗಿತ್ತು.
ವಾಸು ಅವರು 2013ರಿಂದ 2018ರವರೆಗೆ ಚಾಮರಾಜ ನಗರದ ಶಾಸಕರಾಗಿ ಅಭಿವೃದ್ಧಿ ಕಾರ್ಯಗಳ ಮೂಲಕ ಗಮನ ಸೆಳೆದಿದ್ದರು. ಮೈಸೂರು ಮೇಯರ್ ಆಗಿಯೂ ಸೇವೆ ಸಲ್ಲಿಸಿದ್ದರು.
ಸಾವಿನಲ್ಲೂ ಸಾರ್ಥಕತೆ ಮೆರೆದ ವಾಸು
ಚಾಮರಾಜ ಮಾಜಿ ಶಾಸಕ ವಾಸು ಅವರ ನಿಧನದ ಹಿನ್ನೆಲೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದ ಮೈಸೂರಿನ ರೇಡಿಯೆಂಟ್ ಆಸ್ಪತ್ರೆ ಮುಂಭಾಗ ಶೋಕ ಸಾಗರವೇ ನೆಲೆಸಿದೆ. ನೆಚ್ಚಿನ ನಾಯಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು ಆಸ್ಪತ್ರೆಯತ್ತ ಧಾವಿಸಿದ್ದಾರೆ. ಆಸ್ಪತ್ರೆ ಮುಂಭಾಗ ಪುತ್ರರು, ಸೊಸೆಯಂದಿರು ಕಣ್ಣೀರು ಹಾಕುತ್ತಿದ್ದಾರೆ.
ಈ ನಡುವೆ ವಾಸು 15 ವರ್ಷದ ಹಿಂದೆಯೇ ದೇಹದಾನ ಘೋಷಣೆ ಮಾಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಅವರ ಪಾರ್ಥಿವ ಶರೀರವನ್ನು ಮೈಸೂರಿನ ಜೆಎಸ್ಎಸ್ ಮೆಡಿಕಲ್ ಕಾಲೇಜಿಗೆ ನೀಡಲಾಗುತ್ತದೆ.
ಸಾರ್ವಜನಿಕರ ದರ್ಶನಕ್ಕೆ ಮೈಸೂರಿನ ಜಯಲಕ್ಷ್ಮಿಪುರಂ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರ ಅಂತಿಮ ದರ್ಶನ ಬಳಿಕ ಜೆಎಸ್ಎಸ್ ಮೆಡಿಕಲ್ ಕಾಲೇಜಿಗೆ ದೇಹ ಹಸ್ತಾಂತರ ಮಾಡಲಾಗುತ್ತದೆ.
ಇದನ್ನು ಓದಿ : Death News: ಶಾಸಕ ರಾಜಾ ವೆಂಕಟಪ್ಪ ನಾಯಕ ಸಾವಿನ ಸುದ್ದಿ ಕೇಳಿ ಅಭಿಮಾನಿಗೆ ಹಾರ್ಟ್ ಅಟ್ಯಾಕ್
ಬಂಡಾಯದ ವಿರುದ್ಧ ಹೋರಾಟ, ತಾನೇ ಬಂಡಾಯ
ಕಾಂಗ್ರೆಸ್ ನಾಯಕರಾಗಿರುವ ವಾಸು ಅವರು ಬಹುಕಾಲದಿಂದ ಕಾಂಗ್ರೆಸ್‌ನೊಳಗಿನ ಬಂಡಾಯವನ್ನು ಎದುರಿಸಿದ್ದರು. ಕೊನೆಗೆ 2023ರಲ್ಲೇ ತಾವೇ ಬಂಡುಕೋರನಾಗುವ, ಪಕ್ಷ ಬಿಡುವ ಸೂಚನೆ ನೀಡಿದ್ದರು.
2018ರಲ್ಲಿ ಅವರು ಚುನಾವಣೆಯಲ್ಲಿ ಸೋತಿದ್ದರು. ಇದಕ್ಕೆ ಕಾರಣ ಕಾಂಗ್ರೆಸ್ ಪಕ್ಷದೊಳಗಿನ ಬಂಡಾಯ. ಆಗ ಕಾಂಗ್ರೆಸ್‌ನ ಕೆ. ಹರೀಶ್ ಗೌಡ ಅವರು ಬಂಡುಕೋರರಾಗಿ ಕಣಕ್ಕೆ ಇಳಿದಿದ್ದರು. ಹರೀಶ್ ಗೌಡ ಅವರು 21 ಸಾವಿರ ಮತಗಳನ್ನು ಪಡೆದ ಹಿನ್ನೆಲೆಯಲ್ಲಿ ವಾಸು ಅವರು 14 ಸಾವಿರ ಮತಗಳಿಂದ ಸೋಲು ಕಾಣುವಂತಾಯಿತು.
2023ರಲ್ಲಿ ತಮಗೇ ಟಿಕೆಟ್ ಕೊಡಬೇಕು ಎಂದು ವಾಸು ಅವರು ಹಠ ಹಿಡಿದಿದ್ದರು. ಆದರೆ, ಪಕ್ಷ 2018ರ ಬಂಡುಕೋರ ಅಭ್ಯರ್ಥಿ ಹರೀಶ್ ಗೌಡ ಅವರಿಗೇ ಮಣೆ ಹಾಕಿತು. ಈ ಸಂದರ್ಭದಲ್ಲಿ ವಾಸು ಅವರು ಸ್ವತಃ ಸಿದ್ದರಾಮಯ್ಯ ಅವರ ವಿರುದ್ಧ ಬಂಡಾಯವೆದ್ದಿದ್ದರು.
ವಾಸು ಅವರ ಇಬ್ಬರು ಮಕ್ಕಳಾದ ಕವೀಶ್ ಗೌಡ ಮತ್ತು ಅವೀಶ್ ಗೌಡ ಅವರು ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿದ್ದರು. ಅಂದರೆ ಮೂವರು ಮಕ್ಕಳ ಪೈಕಿ ಇಬ್ಬರು ಬಿಜೆಪಿಯಲ್ಲಿದ್ದಾರೆ. ಬಂಡಾಯವೆದ್ದ ವಾಸು ಅವರಿಗೂ ಪಕ್ಷ ನೋಟಿಸ್ ನೀಡಿತ್ತು. ಆಗ ವಾಸು ಅವರು ಕೂಡಾ ತೀವ್ರವಾಗಿ ಪ್ರತಿಕ್ರಿಯಿಸಿದ್ದರು.
ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು, ಜನಾನುರಾಗಿ ನಾಯಕರು ಹಾಗೂ ನಮ್ಮ ಪಕ್ಷದ ಮುಖಂಡರಾದ ಶ್ರೀ ಕವೀಶ್ ಗೌಡ ಅವರ ತಂದೆಯವರೂ ಆಗಿರುವ ಶ್ರೀ ವಾಸು ಅವರ ನಿಧನಕ್ಕೆ ಸಂತಾಪ ಕೋರುವೆ. ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ.
— Vijayendra Yediyurappa (Modi Ka Parivar) (@BYVijayendra) March 9, 2024
ಓಂ… pic.twitter.com/9jzR9kUFE9
ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ
ಬೆಂಗಳೂರು: ಮಾಜಿ ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ವಾಸು ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. “ವಾಸು ಅವರ ನಿಧನದ ಸುದ್ದಿ ಕೇಳಿ ಬಹಳ ನೋವಾಗಿದೆ. ನನ್ನ ಆತ್ಮೀಯರಾಗಿದ್ದ ವಾಸು ಅವರ ಜತೆ ರಾಜಕೀಯ ಪಯಣದಲ್ಲಿ ಉತ್ತಮ ಒಡನಾಟ ಹೊಂದಿದ್ದೆ.
ಮೈಸೂರು ಮೇಯರ್ ಆಗಿ, ನಂತರ ಶಾಸಕರಾಗಿ ವಾಸು ಅವರು ಮೈಸೂರು, ಚಾಮರಾಜನಗರ ಭಾಗದಲ್ಲಿ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಅಗಲಿಕೆ ಪಕ್ಷಕ್ಕೆ ಬಹಳ ನಷ್ಟ ತಂದಿದೆ. ವಾಸು ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.