ಜುಲೈ 26, 1999, ಭಾರತದ ಸಶಸ್ತ್ರ ಪಡೆಗಳು ಪಾಕಿಸ್ತಾನದ ವಿರುದ್ಧ ವಿಜಯ ಸಾಧಿಸಿದ ಅಪ್ರತಿಮ ಐತಿಹಾಸಿಕ ದಿನ.
ಅದು ಕಾರ್ಗಿಲ್ ಯುದ್ಧದ ವಿಜಯ ದಿನ!
ಶ್ರೀನಗರದಿಂದ 205 ಕಿಲೋ ಮೀಟರ್ ದೂರದಲ್ಲಿರುವ “ಕಾರ್ಗಿಲ್” ಜಿಲ್ಲೆ.
ಭಾರತ-ಪಾಕಿಸ್ತಾನ ಉಭಯ ರಾಷ್ಟ್ರಗಳ ಗಡಿ ನಿಯಂತ್ರಣ ರೇಖೆಯ ಉತ್ತರದ ಕಡೆಗೆ ರಾಷ್ಟ್ರೀಯ ಹೆದ್ದಾರಿ-1ರ ಕಡೆಗೆ ಪಾಪಿ ಪಾಕಿಸ್ತಾನ್ ಸೈನಿಕರು ನುಸುಳಿದ್ದರು.
ಇದನ್ನು ಕಂಡು ಅಲ್ಲಿನ ದನಗಾಹಿಗಳು ನಮ್ಮ ಸೈನಿಕರ ಗಮನಕ್ಕೆ ತಂದ ನಂತರ ಆರಂಭವಾದ ಸಶಸ್ತ್ರ ಯುದ್ಧವೇ “ಕಾರ್ಗಿಲ್ ಯುದ್ಧ”!
ಮೇ 3, 1999ರಿಂದ ಆರಂಭವಾಗಿ ಜುಲೈ ತಿಂಗಳ 26ರರವರೆಗೆ ನಡೆದ ಕಾರ್ಗಿಲ್ ಯುದ್ಧದಲ್ಲಿ ನಮ್ಮ ಸೈನಿಕರು ಭಾರತಾಂಬೆಯ ಮಡಿಲಲ್ಲಿ ವೀರಸ್ವರ್ಗ ಪಡೆದ ಕಾರ್ಗಿಲ್ ಯುದ್ಧದ ವಿಜಯ ದಿನವನ್ನು ಇಡೀ ದೇಶ ವಿಝ್ರಂಭಿಸಿತು.
ಇಪ್ಪತ್ತು ವರ್ಷಗಳ ಹಿಂದೆ ಕಾರ್ಗಿಲ್ ಕದನದಲ್ಲಿ ನಮ್ಮ ಯೋಧರು ಹಗಲಿರುಳೆನ್ನದೆ ಧೈರ್ಯ, ಸಾಹಸ ಮತ್ತು ಬಲಿದಾನಗಳ ಕುರುಹಾಗಿ ಇಂದಿಗೂ ಅತ್ಯಂತ ರೋಚಕ ಯುದ್ಧದ ನೆನಪುಗಳು ಹಸಿರಾಗಿವೆ.
ಹಿಮಾಚಲ ಪ್ರದೇಶದ ಪಾಲಂಪುರ್‍ನಲ್ಲಿ ಸರಕಾರಿ ಶಾಲಾ ಶಿಕ್ಷಕರಾಗಿದ್ದ ಗಿರಿಧಾರಿ ಲಾಲ್ ಬಾತ್ರಾ ಮತ್ತು ಕಮಲ್ ಕಾಂತಾ ಬಾತ್ರಾ ಅವರಿಗೆ ಸೆಪ್ಟೆಂಬರ್ 9, 1974ರಂದು ಇಬ್ಬರು ಅವಳಿ ಮಕ್ಕಳು ಜನಿಸಿದರು. ಅವರ ಹೆಸರುಗಳು ವಿಕ್ರಂ ಮತ್ತು ವಿಶಾಲ್ ಪ್ರೀತಿಯಿಂದ ಪೋಷಕರು ಅವರನ್ನು ಲವ ಮತ್ತು ಕುಶ ಎಂದು ಕರೆಯುತ್ತಿದ್ದರು.
ಇಬ್ಬರಿಗೂ ಭಾರತೀಯ ಸೇನೆ ಸೇರಬೇಕೆಂಬ ಹಂಬಲವಿತ್ತು. ವಿಶಾಲ್ ಬಾತ್ರಾ ಸತತ ಮೂರು ಬಾರಿ ಪ್ರಯತಿಸಿದರೂ ಸಫಲರಾಗಲಿಲ್ಲ.
ವಿಕ್ರಂ ಬಾತ್ರಾ ತನ್ನ ಮೊದಲನೇ ಪ್ರಯತ್ನದಲ್ಲೇ ಸಫಲರಾಗಿ ಸರ್ವಿಸ್ ಸೆಲೆಕ್ಷನ್ ಬೋರ್ಡ್‍ನಿಂದ ಆಯ್ಕೆಯಾದರು.
ಬಾಲ್ಯದಿಂದಲೂ ಅಪ್ರತಿಮ ಸಾಹಸಿಯಾಗಿದ್ದ ವಿಕ್ರಂ ಪಾಲಂಪುರದ ಡಿಏವಿ ಪಬ್ಲಿಕ್ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿ ನಂತರ ಅಲ್ಲಿನ ಸೆಂಟ್ರಲ್ ಶಾಲೆಯಲ್ಲಿ ಓದಿದರು. ಮುಂದೆ ಚಂದಿಗಢದ ಡಿಏವಿ ಕಾಲೇಜಲ್ಲಿ ಬಿಎಸ್‍ಸಿ ಓದುವಾಗಲೇ ಅತ್ಯುತ್ತಮ ಎನ್‍ಸಿಸಿ ಕ್ಯಾಡೇಟ್ ಎನಿಸಿಕೊಂಡರು. ಮೊದಲಿಗೆ 1006ರಲ್ಲಿ ಭಾರತೀಯ ಸೇನೆಯ ದೆಹರಾದೂನ್‍ನಲ್ಲಿ ಸೇರ್ಪಡೆಯಾಗಿ ನಂತರ ಮಾಣಿಕ್ ಶಾ ಬೆಟಾಲಿಯನ್‍ನ ಜೆಸ್ಸೋರ ಕಂಪನಿಯಲ್ಲಿ ಸೇರಿದರು.
13-ಜಮ್ಮು-ಕಾಶ್ಮೀರ್ ರೈಫಲ್ಸ್‍ಗೆ ಲೆಫ್ಟಿನೆಂಟ್ ಆಗಿ ಕಳುಹಿಸಲ್ಪಟ್ಟರು.
ನಂತರ ಜಬಲ್‍ಪುರ, ಮಧ್ಯಪ್ರದೇಶದಲ್ಲಿ ಡಿಸೆಂಬರ್ 1997ರಿಂದ ಜನವರಿ 1998ವರೆಗೆ ತರಬೇತಿ.
ಜಮ್ಮು ಕಾಶ್ಮೀರದ ಬಾರಮುಲ್ಲಾದಲ್ಲಿ ತೀವ್ರ ಆತಂಕವಾದಿಗಳ ಚಟುವಟಿಕೆಗಳು ನಡೆಯುತ್ತಿದ್ದ ಸಮಯ, ಸೋಪೋರ್ ಮತ್ತು ಕಾಶ್ಮೀರದದಲ್ಲಿ ಆಫೀಸರ್ ತರಬೇತಿ ಪಡೆದರು. ಪ್ರಶಿಕ್ಷಣ ಮುಗಿದ ನಂತರ ಮತ್ತೆ ಸೋಪೋರ್‍ಗೆ ಹಿಂತಿರುಗಿ ತೀವ್ರವಾದಿಗಳೊಂದಿಗೆ ಹೋರಾಡಿದರು. ಜನವರಿ 1999ರಲ್ಲಿ ಕರ್ನಾಟಕದ ಬೆಳಗಾವಿಯಲ್ಲಿ ಕಮಾಂಡೋ ತರಬೇತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ತಮ್ಮ ಊರಾದ ಪಾಲಂಪುರಕ್ಕೆ ರಜೆಗಾಗಿ ತೆರಳಿದ್ದ ಸಮಯದಲ್ಲಿ ತಮ್ಮ ಸ್ನೇಹಿತನ ಬಳಿ ಅವರು ಹೇಳಿದ್ದು: “ಯುದ್ಧದ ಸಂದರ್ಭ ಎದುರಾದಲ್ಲಿ ನಾನು ನನ್ನ ದೇಶದ ಧ್ವಜವನ್ನು ಹಾರಿಸುತ್ತೇನೆ ಅಥವಾ ಧ್ವಜವನ್ನೇ ಹೊದೆದ ನನ್ನ ದೇಹ ಹಿಂತಿರುಗುತ್ತದೆ” ಎಂದು.
ಅವರ ನುಡಿ ನಿಜವಾಗುವ ಸಮಯ ಬಹು ಬೇಗ ಅವರ ಬದುಕಲ್ಲಿ ಎದುರಾಯಿತು. ಸೋಪೋರ್‍ನ 13-ಜೆ-ಕೆ ರೈಫಲ್ಸ್‍ನಲ್ಲಿದ್ದಾಗ ಉತ್ತರ ಪ್ರದೇಶದ ಶಾಹಜಾನ್‍ಪುರಕ್ಕೆ ತೆರಳಲು ಸೂಚನೆ ಬಂದಿತು. ನಂತರ ಕಾರ್ಗಿಲ್ ಯುದ್ಧಾರಂಭದ ಸೂಚನೆಯ ಮೇರೆಗೆ ಅಲ್ಲಿಂದ ಜಮ್ಮು-ಕಾಶ್ಮೀರದ ಡ್ರಾಸ್‍ಗೆ ಹೊರಡಲು ಆದೇಶ ಬಂದಿತು.
ತನ್ನ ತಂದೆ-ತಾಯಿಗೆ ತಾನು ಕ್ಷೇಮವಾಗಿರುತ್ತೇನೆ ಮತ್ತು ಪ್ರತಿ ಹತ್ತು ದಿನಗಳಿಗೊಮ್ಮೆ ಕರೆ ಮಾಡುವುದಾಗಿ ತಿಳಿಸಿ ಹೊರಟರು.
1999, ಜೂನ್ 6..
ರಾಜಪುತಾನಾ ರೈಫಲ್ಸ್ ಯೋಧರು ಡ್ರಾಸ್‍ನಿಂದ ಹೊರಟು ಟೋಲೋಲಿಂಗ್ ಪರ್ವತವನ್ನು ಜೂನ್ 13ಕ್ಕೆ ತಲುಪಿದರು. ಅವರ ತಂಡದ 18 ಗ್ರೆನೇಡಿಯರ್ಸ್ ಅಲ್ಲಿದ್ದ ಪಾಕ್ ಸೈನಿಕರ ಮೇಲೆ ದಾಳಿ ಮಾಡಿದರು. ನಾಲ್ಕು ದಿನಗಳಲ್ಲಿ ಪಾಯಿಂಟ್ 5100, 4700, ಶಿಖರವನ್ನು ಸುತ್ತುವರಿದಿದ್ದ ಮೂರು ಪ್ರಮುಖ ಕಾಂಪ್ಲೆಕ್ಸ್‍ಗಳನ್ನು ವಶಪಡಿಸಿಕೊಂಡರು. ಜೂನ್ 17ಕ್ಕೆ ಲೆಫ್ಟಿನೆಂಟ್ ಕರ್ನಲ್ ಯೋಗೇಶ್ ಕುಮಾರ್ ಜೋಶಿ ನೇತೃತ್ವದಲ್ಲಿ 13-ಜೆ-ಕೆ ರೈಫಲ್ಸ್ ಪಡೆ ಟೋಲೋಲಿಂಗ್ ಪರ್ವವನ್ನೇರಿದರು. ಪಾಯಿಂಟ್ 5140 ಬಳಿ ಬೃಹತ್ ಬಂಡೆಯನ್ನು ವಶಪಡಿಸಿಕೊಂಡ ನಂತರ ಶತೃಗಳೊಡನೆ ತೀವ್ರ ಹೋರಾಟ ನಡೆಯಿತು. ಅಲ್ಲಿ ಶತೃ ಪಡೆಯ ಏಳು ಸಂಗಾರ್‍ಗಳನ್ನು ಕರ್ನಲ್ ಜೋಶಿ, ಸಂಜೀವ್ ಜಮ್ವಾಲ್ ಮತ್ತು ವಿಕ್ರಂ ಬಾತ್ರಾರೊಡನೆ ಎದುರಿಸಿದರು.
ವಿಕ್ರಂ ಬಾತ್ರಾ ಎದುರಾಗುತ್ತಿದ್ದ ಶತೃಗಳನ್ನು ನೋಡಿ “ಯೇ ದಿಲ್ ಮಾಂಗೇ ಮೋರ್” ಇನ್ನಷ್ಟು ಶತೃಗಳು ಬರಲಿ ಸದೆಬಡಿಯುವೆ ಎಂದು ಘರ್ಜಿಸಿ ತಮ್ಮವರನ್ನು ಹುರಿದುಂಬಿಸುತ್ತಾ ಹೋರಾಡುತ್ತಿದ್ದರು. ಭಾರತೀಯ ಯೋಧರಿಗೆ ಯಾವುದೇ ಸಾವು-ನೋವುಗಳಾಗದೇ ಪಾಯಿಂಟ್ 5140 ವಶಪಡಿಸಿಕೊಂಡರು. ಬ್ರಿಗೇಡ್ ಹೆಡ್‍ಕ್ವಾರ್ಟ್ಸ್‍ಗೆ ಸುದ್ದಿ ತಲುಪಿತು. ಅಂದಿನ ಸೇನಾ ಮುಖ್ಯಸ್ಥ ವೇದ್ ಪ್ರಕಾಶ್ ಮಲಿಕ್ ಸ್ವತ: ಬಾತ್ರಾರವರಿಗೆ ಕರೆ ಮಾಡಿ ಶುಭಾಶಯ ಕೋರಿದರು. ಅವರಿಗೆ ಕೂಡಲೇ ಕ್ಯಾಪ್ಟನ್ ಹುದ್ದೆಗೆ ಭಡ್ತಿ ನೀಡಲಾಯಿತು.
ಪಾಯಿಂಟ್ 4875 ವಶ:
26 ಜೂನ್, 13-ಜೆ-ಕೆ ರೈಫಲ್ಸ್ ಪಡೆ ಡ್ರಾಸ್‍ನಿಂದ ಘುಮರಿಗೆ ವಿಶ್ರಮಿಸಲು ತೆರಳಿತು. ಅಲ್ಲಿಂದ ಜೂನ್ 39ರಂದು ಪಯಣಿಸಿ ಮುಷೋಕ್ ಕಣಿವೆ ತಲುಪಿದರು. 79 ಪರ್ವತ ಬ್ರಿಗೇಡ್‍ನ ಕಮಾಂಡ್‍ನಲ್ಲಿ ಚಟುವಟಿಕೆಗಳು ಮತ್ತಿ ಆರಂಭವಾಯಿತು. ಶತೃಗಳು ಮುಷೋಕ್ ಕಣಿವೆಯನ್ನು ಸುತ್ತುವರೆದಿದ್ದು ಅಲ್ಲಿನ ಬಹು ಮುಖ್ಯ ಶಿಖರ ತುದಿ ಪಾಯಿಂಟ್ 4875 ವಶಪಡಿಸಿಕೊಂಡಿದ್ದರು. “ಪಾಯಿಂಟ್ 4875” ಡ್ರಾಸ್‍ನಿಂದ ಮಾತಯಾನ್‍ವರೆಗೆ ನ್ಯಾಶನಲ್ ಹೈವೇ 1 ಸರಹದ್ದಿಗೆ ಬಹು ಸಮೀಪ. ಮುಂದೆ ಶತೃಗಳು ಮುಂದುವರೆದರೆ ಇನ್ನಷ್ಟು ಅಪಾಯ.
ಆದ್ದರಿಂದ ಭಾರತೀಯ ಸೇನೆ ಅದನ್ನು ಮರಳಿ ಪಡೆಯುವುದು ಅವಶ್ಯಕವಾಗಿತ್ತು. ಜುಲೈ 1 ಮೇಜರ್ ವಿಜಯ ಭಾಸ್ಕರ್, ಕರ್ನಲ್ ಜೋಶಿ ತಂಡ ಶತೃಗಳ ಮೇಲೆ ದಾಳಿ ನಡೆಸಲು ಯೋಚಿಸಿ ಹೆಡ್‍ಕ್ವಾರ್ಟಸ್ ಬಳಿ ತೆರಳಿದರು.
ಅದೇ ಸಮಯದಲ್ಲಿ “13-ಜೆ-ಕೆ ರೈಫಲ್ಸ್” ಪಡೆ ಸಪೋರ್ಟ್ ಬೇಸ್ ಬಳಿ ಬಂದಾಗಿತ್ತು. ಅದು ಪಾಯಿಂಟ್ 4875ನಿಂದ 1500 ಮೀಟರ್ ಅಂತರದಲ್ಲಿತ್ತು. “13-ಜೆ-ಕೆ ರೈಫಲ್ಸ್” ಜುಲೈ 2 ಮತ್ತು 3ರಂದು “28-ರಾಷ್ಟ್ರೀಯ ರೈಫಲ್ಸ್” ಜೊತೆಗೂಡಿ ಆಯುಧಗಳೊಡನೆ ಸಜ್ಜಾದರು. ಜುಲೈ 3ರಂದು ಸಂಜೆ 6 ಗಂಟೆಯ ಸುಮಾರು ಶತೃಗಳು ದಾಳಿ ಆರಂಭಿಸಿದರು.
ಮರುದಿನವೂ ದಾಳಿ ತೀವ್ರವಾಯಿತು. ಭಾರತದ ಎರಡೂ ಪಡೆಗಳು ಅಂದು ರಾತ್ರಿಯೆಲ್ಲಾ ಪಾಕ್ ಸೈನಿಕರ ಮೇಲೆ ಬೋಫರ್ಸ್ ಹೊವಿಟ್ಸರ್ಸ್ ಮತ್ತು ಫೀಲ್ಡ್ ಗನ್‍ಗಳೊಡನೆ ಆಕ್ರಮಣ ಮಾಡಿದರು.
ಜುಲೈ 5ರಂದು ಪಾಯಿಂಟ್ 4875 ಆರೋಹಣ ಆರಂಭಸಿದರು. ಒಂದೆಡೆ ಕರ್ನಲ್ ಜೋಶಿಯವರ ಆದೇಶದಂತೆ ಸೈನಿಕರು ಮುನ್ನುಗ್ಗುತ್ತಿದ್ದರು. ಮತ್ತೊಂದೆಡೆ ವಿಕ್ರಂ ಬಾತ್ರಾ ಮುಷೋಕ್‍ನುಲ್ಲಾ ಬಳಿ ತೀವ್ರ ಜ್ವರ ಮತ್ತು ಆಯಾಸದಿಂದಾಗಿ ತಮ್ಮ ಟಂಟ್‍ನ ಬಳಿ ಸ್ಲೀಪಿಂಗ್ ಬ್ಯಾಗ್‍ನಲ್ಲಿ ವಿಶ್ರಮಿಸುತ್ತಿದ್ದರು. ಮುಂಜಾವು ಬೆಳಕು ಹರಿಯತೊಡಗಿತು. ಪಾಕಿಸ್ತಾನಿ ಸೈನಿಕರಿಗೆ ಸುಲಭವಾಗಿ ಭಾರತೀಯ ಪಡೆ ಕಾಣುವಂತಹ ಅಪಾಯಕರ ಸ್ಥಿತಿ.
ಶತೃಗಳು ಎಡಬಿಡದೆ ಫೈರಿಂಗ್ ನಡೆಸಿ ಭಾರತೀಯ ಪಡೆಯನ್ನು ತಡೆ ಹಿಡಿದರು. ಜುಲೈ 6ರಂದು ಭಾರತದ ಸೈನಿಕರು ಪಾಯಿಂಟ್ 4875 ಪಡೆಯುವ ಪ್ರಯತ್ನವನ್ನು ಅಲ್ಪವಾಗಿ ತಡೆಹಿಡಿದರೂ ದಾಳಿ ಮುಂದುವರೆದಿತ್ತು.13-ಜೆ-ಕೆ ರೈಫಲ್ಸ್ ಯೋಧರು ಮುಖ್ಯವಾದ ಏರಿಯಾ ಫ್ಲಾಟ್ ಟಾಪ್ ವಶಪಡಿಸಿಕೊಂಡರು.
ಕ್ಷಣಗಳಲ್ಲೇ ಪಾಕಿಸ್ತಾನಿ ಸೇನೆ ಕೌಂಟರ್ ಅಟ್ಯಾಕ್ ನಡೆಸಿತು. ಎರಡೂ ಬದಿಯಿಂದ ಮರುದಿನದವರೆಗೂ ಆಕ್ರಮಣ ನಡೆಯಿತು. ಮರುದಿನ ಮುಂಜಾನೆ ಪಾಕ್ ಸೈನಿಕರು ಗ್ರೆನೇಡ್ ದಾಳಿ ಮಾಡಿದರು. ಅಲ್ಲಿಂದ ಹಾರಿ ಬಂದ ಷೆಲ್ ಶಿಖರದ ತುದಿಯಲ್ಲಿದ್ದ ಕರ್ನಾಟಕ ಮೂಲದ ಯೋಧ ಕ್ಯಾಪ್ಟನ್ ನವೀನ್ ನಾಗಪ್ಪ ಅವರ ಕಾಲ ಬಳಿ ಬಿತ್ತು. ಅದನ್ನು ಪುನ: ದೂರಕ್ಕೆ ಎಸೆಯುವ ಪ್ರಯತ್ನ ವಿಫಲವಾಗಿ ನವೀನ್ ಅವರ ಹತ್ತಿರದಲ್ಲೇ ಸಿಡಿದು ಅವರನ್ನು ತೀವ್ರವಾಗಿ ಗಾಯಗೊಳಿಸಿತು. ಕೂಡಲೇ ಶತೃಗಳು ಮುಂದುವರೆಯತೊಡಗಿದರು. ವಿಕ್ರಂ ಬಾತ್ರಾ ತಾವಿದ್ದ ಸಪೋರ್ಟ್ ಬೇಸ್‍ನಿಂದ ಗಮನಿಸುತ್ತಿದ್ದರು. ತಮ್ಮ ಅನಾರೋಗ್ಯ ಸ್ಥಿತಿಯಲ್ಲಿ ಮುಂದುವರೆಯುವುದು ಬೇಡ ಎಂದು ಕರ್ನಲ್ ಜೋಶಿ ಹೇಳಿದರು. ಆದರೆ ವಿಕ್ರಂ ಬಾತ್ರಾ ಹಠದಿಂದ ಶತೃಗಳನ್ನು ಸದೆಬಡೆಯಲು ಮುಂದಾದರು.
ಅದೇ ದಿನ ಪಾಕ್ ಸೈನಿಕರು ಎರಡನೆಯ ಬಾರಿ ಪ್ರತಿದಾಳಿ ನಡೆಸತೊಡಗಿದರು. ಚಿಂತಾಜನಕ ಸ್ಥಿತಿಯಲ್ಲಿ ಗಾಯಗೊಂಡಿದ್ದ ನವೀನ್ ನಾಗಪ್ಪ ಅವರನ್ನು ಕೂಡಲೇ ತುರ್ತು ಚಿಕಿತ್ಸೆಗಾಗಿ ಕಳುಹಿಸಿದರು. ಬಾತ್ರಾರವರ ಅಚಲಿತ ನಿರ್ಧಾರ ಕಂಡು ಉಳಿದ ಸೈನಿಕರೂ ಅವರೊಡನೆ ಹೊರಟರು. 25 “ಡಿ ಕಾಯ್” ಯೋಧರೊಡನೆ ಬಾತ್ರಾ ದುರ್ಗಾ ಮಾತಾ ಗುಡಿಯಲ್ಲಿ ಪ್ರಾರ್ಥಿಸಿ ಶಿಖರವೇರತೊಡಗಿದರು. ಪಾಕಿಸ್ತಾನದವರು ತಮ್ಮವರಿಗೆ “ಷೇರ್‍ಶಾಹ” ಅಂದರೆ ವಿಕ್ರಂ ಬಾತ್ರಾ ಬರುತ್ತಿರುವುದಾಗಿ ವಯರ್‍ಲೆಸ್ ಮೆಸೇಜ್ ನೀಡಿದರು. ಜುಲೈ 6-7 ಎರಡೂ ಪಡೆಗಳ ನಡುವೆ ಫೈರಿಂಗ್ ನಡೆಯುತ್ತಿತ್ತು. ಭಾರತೀಯ ಸೇನೆಯ ಕೆಲವು ಬಂಕರ್‍ಗಳು ನಾಶವಾಗಿದ್ದವು.
ವಿಕ್ರಂ ಬಾತ್ರಾ ತಾವಿದ್ದ ಪಾಯಿಂಟ್ 5410ರಿಂದ ಗಾಯಗೊಂಡಿದ್ದ ತಮ್ಮ ಕೆಲವು ಸೈನಿಕರ ಬಳಿ ತೆರಳಿದರು.
ಕತ್ತಲಾಗತೊಡಗಿತ್ತು. ಮಂಜು ಮುಸುಕಿದ್ದ ಕಾರಣ ಪರ್ವತವೇರುವುದು ಕಷ್ಟವಾಗತೊಡಗಿತ್ತು. ಜೊತೆಗೆ ಹಿಮ ಸುರಿಯಲಾರಂಭಿಸಿತು. ಮೇಲೆ ಹತ್ತುತ್ತಿದ್ದಾಗ, ತಮ್ಮ ಸೈನಿಕರತ್ತ ಪಾಕಿಸ್ತಾನೀ ಮೆಷೀನ್ ಗನ್ ಗುರಿಯನ್ನು ಕಂಡು ಕೂಡಲೇ ಬಂಡೆಯ ಹಿಂದೆ ಅವಿತುಕೊಂಡು ಗುರಿಯಿಟ್ಟು ಒಂದು ಗ್ರೆನೇಡ್ ಸಿಡಿಸಿ ಮೆಷೀನ್ ಗನ್ ಸಿಡಿಸಿದರು. ತಮ್ಮನ್ನು ಹಿಂಬಾಲಿಸಲು ತಮ್ಮವರಿಗೆ ಮೆಲುದನಿಯಲ್ಲಿ ಹೇಳಿದರು. ಹದಿನಾರು ಸಾವಿರ ಅಡಿಗಳ ಎತ್ತರದಲ್ಲಿ ಉಸಿರಾಡಲೂ ಕಷ್ಟವಾಗಿದ್ದ ಸ್ಥಿತಿಯಲ್ಲಿ ಕಾಳಗ ನಡೆಯುತ್ತಿತ್ತು.
ಇನ್ನು ಎಡ-ಬಲದಿಂದ ಎದುರಿಸಿ ಪ್ರಯೋಜನವಿಲ್ಲ ಎಂದು ಅರಿತು ವಿಕ್ರಂ ಬಾತ್ರಾ ನೇರವಾಗಿ ಎದುರಿಸಲು ನಿರ್ಧರಿಸಿದರು. ಶತೃಗಳನ್ನೆದುರಿಸಲು ತಮ್ಮ ಜೀವವನ್ನಾದರೂ ಒತ್ತೆಯಿಟ್ಟು ಮುಂದುವರೆಯಲು ಪಣ ತೊಟ್ಟರು. ತಮ್ಮ ರೆಜಿಮೆಂಟ್ ಯೋಧರನ್ನು ಹುರಿದುಂಬಿಸುತ್ತಾ “ದುರ್ಗಾ ಮಾತಾ ಕೀ ಜೈ” ಎಂದು ಘೀಳಿಡುತ್ತಾ ಮುಂದುವರೆದರು. ಶತೃಗಳು ಎದುರು ನೋಡದ ರೀತಿಯಲ್ಲಿ ದಾಳಿ ನಡೆಸಿ ಐದು ಪಾಕಿಸ್ತಾನೀ ಸೈನಿಕರನ್ನು ತಮ್ಮ ಏಕೆ-47ನಿಂದ ಸಂಗಾರ್ ಫೈರಿಂಗ್ ನಡೆಸಿ ಕೊಂದರು.
ನಡೆದ ಆಕ್ರಮಣದಿಂದ ಅವರಿಗೆ ತೀವ್ರ ಗಾಯಗಳಾದರೂ ಲೆಕ್ಖಿಸದೆ ಮುನ್ನುಗ್ಗಿದರು. ಎದುರಲ್ಲಿ ಬಂದ ಪಾಕ್ ಸೈನಿಕನ ಮೇಲೆ ಆಕ್ರಮಣ ಮಾಡಿ ಹಿಡಿದು ಮೂಗಿನ ಮೇಲೆ ಪ್ರಹಾರ ಮಾಡಿದರು. ಹಿಂದಿನಿಂದ ಬಂದ ಮತ್ತೊಬ್ಬ ಪಾಕ್ ಸೈನಿಕ ಅವರನ್ನು ಬಲವಾಗಿ ಹಿಡಿದ. ಅವನನ್ನೂ ಎದುರಿಸಿ ತಮ್ಮೊಂದಿಗಿದ್ದ ತಮ್ಮ ಪಡೆಯ ಯೋಧನೊಬ್ಬನೊಡನೆ ಇನ್ನೂ ಏಳು ಶತೃಗಳನ್ನು ಸದೆಬಡಿದರು. ಇನ್ನಷ್ಟು ಶತೃಗಳು ಬರತೊಡಗಿದರು. ತಮ್ಮ ಯೋಧ ಸುಬೇದಾರ್ ರಘುನಾಥ್ ಸಿಂಗ್ ಅವರ ಗುಂಡಿಗೆ ಬಲಿಯಾದನು. ತಮ್ಮ ಮೇಲೆ ಸತತವಾಗಿ ನಡೆಯುತ್ತಿದ್ದ ಫೈರಿಂಗ್ ನಡುವೆ ಅವರನ್ನು ಸುರಕ್ಷಿತ ಸ್ಥಳದಲ್ಲಿರಿಸಿ ಅವರ ಜೀವ ಉಳಿಸಿ ಮತ್ತೆ ದಾಳಿ ಮಾಡಲು ಅನುವಾದರು.
ಇದ್ದಕ್ಕಿದ್ದಂತೆಯೇ ಶತೃಗಳ ಸ್ನಿಪರ್‍ನಿಂದ ಕ್ಲೋಸ್ ರೇಂಜ್‍ನಿಂದ ಗುಂಡು ನೇರವಾಗಿ ಹಾರಿ ಬಂದು ಅವರ ಎದೆಯನ್ನು ಹೊಕ್ಕಿತು. ಮತ್ತೊಂದು ಅವರ ಶಿರಕ್ಕೆ ತಗುಲಿತು. ಕೂಡಲೇ ತಾವು ಸುರಕ್ಷಿತಗೊಳಿಸಿದ ಸೈನಿಕನ ಸ್ವಲ್ಪ ಅಂತರದಲ್ಲಿ ವಿಕ್ರಂ ಬಾತ್ರಾ ಕುಸಿದರು. ತಾಯಿ ಭಾರತಾಂಬೆಯ ಮಡಿಲಲ್ಲಿ ವೀರ ಯೋಧನೊಬ್ಬ ಅಸ್ತಂಗತನಾದ. ನವೀನ್ ನಾಗಪ್ಪ ಅವರನ್ನು ಶ್ರೀನಗರದಿಂದ ದೆಹಲಿಗೆ ಏರ್ ಲಿಫ್ಟ್ ಮಾಡಿ ಸಾಗಿಸುತ್ತಿದ್ದಾಗ ಪಾಯಿಂಟ್ 4875ನ ಮೇಲೆ ಹಾರುತ್ತಿದ್ದ ಭಾರತದ ಧ್ವಜವನ್ನು ನೋಡಿ ಅಗಲಿದ ತಮ್ಮ ಹಿರಿಯ ಯೋಧ ಕ್ಯಾಪ್ಟನ್ ವಿಕ್ರಂ ಬಾತ್ರಾರವರನ್ನು ನೆನೆದು ತಮ್ಮ ನೋವಿನ ನಡುವೆ ದು:ಖಿಸಿದರು.
ಅವರು ವಿಕ್ರಂ ಬಾತ್ರಾರ ಸಾಹಸ ಗಾಥೆಯನ್ನು ಇಂದಿಗೂ ನೆನೆದು ಕಣ್ಣೀರಿಡುತ್ತಾರೆ. ಬೀಸುವ ಗಾಳಿಗೆ ಪ್ರತಿಸ್ಪಂದಿಸುತ್ತಾ ಹಾರುವ ನಮ್ಮ ದೇಶದ ಧ್ವಜ ಕೊನೆಯ ಉಸಿರಿರುವ ತನಕ ತನ್ನನ್ನು ಕಾಪಾಡಿದ ಸೈನಿಕನ ಸಾರ್ಥಕತೆಯನ್ನು ಹೆಮ್ಮೆಯಿಂದ ಸಾರುವುದು. ತಮ್ಮ ಬದುಕಲ್ಲಿ ಅಪರಿಮಿತ ಸಾಹಸ, ಛಲ ಮತ್ತು ದೇಶಭಕ್ತಿಯಿಂದ ಹೋರಾಡಿ ದೇಶಕ್ಕಾಗಿ ಬಲಿದಾನಿಯಾದವರು ಕ್ಯಾಪ್ಟನ್ ವಿಕ್ರಂ ಬಾತ್ರಾ. ವಿಕ್ರಂ ಬಾತ್ರಾರವರ ತಂಡ ವಶಪಡಿಸಿಕೊಂಡ ಪಾಯಿಂಟ್ 4875 ಕಾರ್ಗಿಲ್‍ನಲ್ಲಿ “ಬಾತ್ರಾ ಟಾಪ್” ಎಂದೇ ಪ್ರಸಿದ್ಧವಾಗಿದೆ. ಷೇರ್‍ಶಾಹ ಕ್ಯಾಪ್ಟನ್ ವಿಕ್ರಂ ಬಾತ್ರಾರವರಿಗೆ ಮರಣೋತ್ತರವಾಗಿ ಭಾರತದ ಅತ್ಯುಚ್ಚ ಸೇನಾ ಪುರಸ್ಕಾರ ಪರಮ ವೀರ ಚಕ್ರವನ್ನು ನೀಡಿ ಭಾರತೀಯ ಸೇನೆ ಅವರನ್ನು ಗೌರವಿಸಿತು.