Site icon Vistara News

Gurulinga Kapase: ಸಾಹಿತಿ ಗುರುಲಿಂಗ ಕಾಪಸೆ ಇನ್ನಿಲ್ಲ

gurulinga kapase

ಧಾರವಾಡ: ಹಿರಿಯ ಸಾಹಿತಿ ಗುರುಲಿಂಗ ಕಾಪಸೆ (Gurulinga Kapase – 96 ವರ್ಷ) ಇಂದು ಬೆಳಗಿನ ಜಾವ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನಾಡಿನ ಹೆಸರಾಂತ ಸಾಹಿತಿಯಾಗಿದ್ದ ಕಾಪಸೆ ಅವರು ಕನ್ನಡ ಸಾಹಿತ್ಯ ಅಕಾಡೆಮಿಯ (Kannaad Sahitya Akademy) ಅಧ್ಯಕ್ಷರಾಗಿದ್ದರು.

ಧಾರವಾಡ ಸಪ್ತಾಪುರ ದುರ್ಗಾ ಕಾಲೋನಿಯ ನಿವಾಸಿಯಾಗಿದ್ದ ಕಾಪಸೆ, ಮೂಲ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲೋಣಿ ಬಿಕೆ ಗ್ರಾಮದವರು. 1928ರ ಎಪ್ರಿಲ್ 2ರಂದು ಜನಿಸಿದ್ದ ಅವರು ಕವಿ ಮಧುರ ಚೆನ್ನರ ಜೀವನ ಹಾಗೂ ಕೃತಿಗಳ ಕುರಿತು ಅಪಾರ ಅಧ್ಯಯನ ಮಾಡಿದ್ದರು. ಮಧುರ ಚೆನ್ನರ ಕುರಿತಾಗಿಯೇ ಮಹಾಪ್ರಬಂಧ ರಚಿಸಿದ್ದರು.

ಮಧುರ ಚೆನ್ನ, ಅಕ್ಕಮಹಾದೇವಿ, ಅರವಿಂದರು, ಬಸವೇಶ್ವರ, ಹಲಸಂಗಿ ಗೆಳೆಯರು ಇವರ ಪ್ರಮುಖ ಕೃತಿಗಳು. ಮರಾಠಿಯಿಂದ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮಕ್ಕಳ ಸಾಹಿತ್ಯದಲ್ಲಿ ಹಲವು ಕೃತಿಗಳ ರಚನೆ ಮಾಡಿದ್ದಾರೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಡಾ. ಕಾಪಸೆ ಅವರು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ ವಿ. ಸ. ಖಾಂಡೇಕರ್ ಅವರ ʼಒಂದು ಪುಟದ ಕಥೆ’ಗೆ ಕಳೆದ ವರ್ಷ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ ಬಂದಿತ್ತು.

ಬೇಂದ್ರೆ, ಮಧುರ ಚೆನ್ನ ಸೇರಿದಂತೆ ಪ್ರಖ್ಯಾತ ಸಾಹಿತಿಗಳ ಒಡನಾಡಿಯಾಗಿದ್ದ ಕಾಪಸೆ, 1945ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿಯೇ ತಮ್ಮೂರಿನಲ್ಲಿ ಶಿಕ್ಷಕರಾಗಿ ಸೇವೆ ಆರಂಭಿಸಿದ್ದರು. ಕಾಲಾಂತರದಲ್ಲಿ ಧಾರವಾಡಕ್ಕೆ ಬಂದು ನೆಲೆಸಿದ್ದ ಕಾಪಸೆ ಇಲ್ಲಿಂದ ತಮ್ಮ ಸಾಹಿತ್ಯ ಕಾಯಕ ಮುಂದುವರಿಸಿದ್ದರು.

ಇಂದು ಮಧ್ಯಾಹ್ನ 2ರವರೆಗೆ ಮೃತರ ಅಂತಿಮ ದರ್ಶನಕ್ಕೆ ದುರ್ಗಾ ಕಾಲೋನಿಯ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದೆ. ಮೃತರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

ಇದನ್ನೂ ಓದಿ: Former MLA Dead : ಚಾಮರಾಜ ಕ್ಷೇತ್ರದ ಮಾಜಿ ಕಾಂಗ್ರೆಸ್‌ ಶಾಸಕ ವಾಸು ಇನ್ನಿಲ್ಲ

Exit mobile version