ಮಂಗಳೂರು: ತಮ್ಮ ಸ್ತ್ರೀಪಾತ್ರಗಳಿಂದ ವಿಖ್ಯಾತರಾಗಿದ್ದ ಹಿರಿಯ ಯಕ್ಷಗಾನ ಕಲಾವಿದ (senior yakshagana artist) ಕುಂಬ್ಳೆ ಶ್ರೀಧರ ರಾವ್ (76) (Kumble Sridhara Rao) ಶುಕ್ರವಾರ ನಿಧನರಾದರು. ಸುಮಾರು 6 ದಶಕಗಳಿಗೂ ಹೆಚ್ಚು ಕಾಲ ಯಕ್ಷ ರಂಗದಲ್ಲಿ ಸೇವೆ ಸಲ್ಲಿಸಿದ ಅವರು ಸುಂದರ ಪಾತ್ರನಿರ್ವಹಣೆಯಿಂದ ಯಕ್ಷರಸಿಕರ ಮನದಲ್ಲಿ ನೆಲೆ ನಿಂತಿದ್ದಾರೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮೇಳದಲ್ಲೇ ನಿರಂತರ 50 ವರ್ಷಗಳಿಗೂ ಹೆಚ್ಚು ಕಾಲ ಅವರು ಸೇವೆ ಸಲ್ಲಿಸಿದ್ದರು. ಕೆಲವು ವರ್ಷಗಳ ಹಿಂದೆ ಮೇಳದಿಂದ ನಿವೃತ್ತರಾಗಿದ್ದರು. ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯ ಕುಂಬ್ಳೆಯವರಾದ ಶ್ರೀಧರ ರಾವ್ ಉಪ್ಪಿನಂಗಡಿಯ ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಸಮೀಪದ ಬೇರಿಕೆಯಲ್ಲಿ ವಾಸವಿದ್ದರು.
ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ಮಹಾಲಿಂಗ ಮತ್ತು ಕಾವೇರಿ ದಂಪತಿಯ ಪುತ್ರನಾಗಿ 1948ರಲ್ಲಿ ಜನಿಸಿದ ಶ್ರೀಧರ ರಾವ್, ಕೂಡ್ಲು, ಮೂಲ್ಕಿ, ಇರಾ, ಕರ್ನಾಟಕ, ಧರ್ಮಸ್ಥಳ ಮೇಳಗಳಲ್ಲಿ ಒಟ್ಟು 60 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ.
ಇರಾ ಸೋಮನಾಥೇಶ್ವರ ಮೇಳದ ಮೂಲಕ ಯಕ್ಷಗಾನ ವೃತ್ತಿಜೀವನ ಆರಂಭಿಸಿದ್ದ ಶ್ರೀಧರ ರಾವ್ ಯಕ್ಷಗಾನ ಕ್ಷೇತ್ರದ ದಿಗ್ಗಜ ಕಲಾವಿದರಾದ ಶೇಣಿ ಗೋಪಾಲಕೃಷ್ಣ ಭಟ್ಟರ ರಾವಣ, ವಾಲಿ ಪಾತ್ರಗಳಿಗೆ ಮಂಡೋದರಿಯಾಗಿ, ತಾರೆಯಾಗಿ ಸಾಥ್ ನೀಡಿದ್ದರು. ವೃತ್ತಿಜೀವನದ ಆರಂಭದಲ್ಲಿ ಸ್ತ್ರೀ ವೇಷಗಳಿಂದಲೇ ಪ್ರಸಿದ್ಧರಾದರು. ಶ್ರೀಧರ ರಾವ್ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಅಮ್ಮುದೇವಿ, ನಳ ದಮಯಂತಿಯ ದಮಯಂತಿ, ಭೀಷ್ಮ ವಿಜಯದ ಅಂಬೆ ಇತ್ಯಾದಿ ಪಾತ್ರಗಳಲ್ಲಿ ಜನಮನ ಗೆದ್ದಿದ್ದರು.
ರಂಭಾ ರೂಪ ರೇಖಾ ಪ್ರಸಂಗದ ರಂಭೆಯಾಗಿ ಶ್ರೀಧರ ರಾವ್ ಅವರ ಅಭಿನಯವನ್ನು ಈಗಲೂ ಯಕ್ಷಗಾನ ಪ್ರೇಮಿಗಳು ಕೊಂಡಾಡುತ್ತಾರೆ. ಪುರುಷ ವೇಷಗಳಲ್ಲಿ ಈಶ್ವರ, ಲಕ್ಷ್ಮಣ, ಸುದರ್ಶನ ವಿಜಯದ ವಿಷ್ಣು ಇತ್ಯಾದಿ ಪಾತ್ರಗಳೂ ಅವರಿಗೆ ಖ್ಯಾತಿ ತಂದುಕೊಟ್ಟಿವೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸಂದರ್ಭದಲ್ಲಿ ಸನ್ಮಾನ, ಬೆಂಗಳೂರಿನ ಆತ್ಮಾಲಯ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್ ಟ್ರಸ್ಟ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.
ಇದನ್ನೂ ಓದಿ: Lacchi Poojarthi: ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ತಾಯಿ ನಿಧನ