Site icon Vistara News

MK Bhaskar Rao: ವಿಸ್ತಾರ ನ್ಯೂಸ್‌ ಅಂಕಣಕಾರ, ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರ್‌ ರಾವ್‌ ಇನ್ನಿಲ್ಲ; ಕೆಯುಡಬ್ಲ್ಯೂಜೆ ಸಂತಾಪ

mk Bhaskar rao

ಬೆಂಗಳೂರು: ವಿಸ್ತಾರ ನ್ಯೂಸ್‌ (Vistara News) ಅಂಕಣಕಾರರಾಗಿದ್ದ (columnist) ಹಿರಿಯ ಪತ್ರಕರ್ತ (senior journalist) ಎಂ.ಕೆ. ಭಾಸ್ಕರ ರಾವ್‌ (MK Bhaskar Rao) ಅವರು ಬುಧವಾರ ಬೆಳಗ್ಗೆ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.

ಎರಡು ವರ್ಷದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರ ಆರೋಗ್ಯ 15 ದಿನಗಳಿಂದ ತೀವ್ರವಾಗಿ ಹದಗೆಟ್ಟಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತರಿಗೆ ಪತ್ನಿ ಜಯಾ, ಪುತ್ರ ಅಭಿಜಿತ್‌ ಇದ್ದಾರೆ. ಬೆಂಗಳೂರಿನ ಬನ್ನೇರಘಟ್ಟ ರಸ್ತೆಯಲ್ಲಿರುವ ಸೌತ್‌ ಸಿಟಿ ಅಪಾರ್ಟ್‌ ಮೆಂಟ್‌ಗೆ ಪಾರ್ಥಿವ ಶರೀರವನ್ನು ತರಲಾಗಿದ್ದು, ಅಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬುಧವಾರ ಸಂಜೆ ಚಾಮರಾಜಪೇಟೆ ಬಳಿಯ ಟಿಆರ್‌ ಮಿಲ್‌ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಹರಿತವಾದ ರಾಜಕೀಯ ವಿಶ್ಲೇಷಣೆಗೆ ಹೆಸರಾಗಿದ್ದ ಅವರು ಪ್ರಜಾವಾಣಿ ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಹಲವು ವರ್ಷ ಕೆಲಸ ಮಾಡಿದ್ದರು. ಅನಾರೋಗ್ಯಪೀಡಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾಗಲೂ ಅವರು ವಿಸ್ತಾರ ನ್ಯೂಸ್‌ಗೆ ಅಂಕಣ ಬರೆಯುವುದನ್ನು ನಿಲ್ಲಿಸಿರಲಿಲ್ಲ. ವಿಸ್ತಾರ ನ್ಯೂಸ್‌ನ ಪ್ಯಾನೆಲ್‌ ಚರ್ಚೆಗಳಲ್ಲಿಯೂ ಹಲವು ಸಲ ಭಾಗವಹಿಸಿದ್ದರು.

ಮೂಲತಃ ಶಿರಸಿ ತಾಲ್ಲೂಕಿನವರಾದ ಎಂ.ಕೆ. ಭಾಸ್ಕರ ರಾವ್‌ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಶಿಕ್ಷಣ ಮುಗಿಸಿ ಪತ್ರಿಕೋದ್ಯಮ ಸೇರಿದರು. ಪತ್ರಿಕೆಗಳಲ್ಲಿ ಮೂರು ದಶಕಕ್ಕೂ ಅಧಿಕ ಕಾಲ ಕೆಲಸ ಮಾಡಿದರು. ಮೊದಲು ರಾಯಚೂರು ಜಿಲ್ಲಾ ವರದಿಗಾರರಾಗಿ, ನಂತರ ಬೆಂಗಳೂರಿನಲ್ಲಿ ಸಿನೆಮಾ ಪತ್ರಕರ್ತರಾಗಿ, ರಾಜಕೀಯ ವಿಶ್ಲೇಷಕರಾಗಿ ಕಾರ್ಯನಿರ್ವಹಿಸಿದ್ದರು.

ಸೂಕ್ಷ್ಮ ಒಳನೋಟಗಳ ಬರವಣಿಗೆಯ ಜೊತೆಗೆ ವಿಶ್ಲೇಷಣಾತ್ಮಕ ಮಾತಿನಿಂದಲೂ ಗುರುತಿಸಿಕೊಂಡಿದ್ದರು. ಚುನಾವಣೆ ವೇಳೆ ಹಲವಾರು ಚಾನೆಲ್‌ಗಳಲ್ಲಿ ವಿಶ್ಲೇಷಣೆ ಮಾಡುತ್ತಿದ್ದರು. ಪ್ರಚಲಿತ ವಿದ್ಯಮಾನಗಳ ಕುರಿತು ನಿಖರವಾಗಿ ಮಾತನಾಡುವ ಜ್ಞಾನ ಅವರಲ್ಲಿತ್ತು. ನಿವೃತ್ತಿ ನಂತರ ಅವರು ಬೆಂಗಳೂರಿನಲ್ಲಿ ನೆಲೆಸಿದ್ದ ಅವರು ಪ್ರವಾಸ ಹಾಗೂ ಬರವಣಿಗೆಯಲ್ಲಿ ನಿರತರಾಗಿದ್ದರು. ಉದಯವಾಣಿ ಮೊದಲಾದ ಪತ್ರಿಕೆಗಳಿಗೆ ಅಂಕಣ ಬರೆಯುತ್ತಿದ್ದರು.

ಕೆಯುಡಬ್ಲ್ಯೂಜೆ ಕಂಬನಿ

ಸಂಯುಕ್ತ ಕರ್ನಾಟಕ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರ ರಾವ್ ಅವರು ಇಂದು ನಿಧನರಾದರು. ಕ್ರಿಯಾಶೀಲ ಪತ್ರಕರ್ತರಾಗಿದ್ದ ಭಾಸ್ಕರ ರಾವ್ ಅವರು ಅಂಕಣಕಾರರಾಗಿ ಮತ್ತು ಟಿವಿ ಡಿಬೇಟ್ ಗಳಲ್ಲಿ ರಾಜಕೀಯ ವಿಶ್ಲೇಷಣೆಗಾರರಾಗಿ ಗಮನಸೆಳೆದಿದ್ದರು. ಅವರ ನಿಧನದಿಂದ ಸುದ್ದಿ ಮನೆಯ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಶೋಕಿಸಿದೆ.

ಕಲಬುರಗಿಯಲ್ಲಿ ನಡೆದ 36 ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಭಾಸ್ಕರ ರಾವ್ ಅವರಿಗೆ ಕೆಯುಡಬ್ಲ್ಯೂಜೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಮೂರು ತಿಂಗಳ ಹಿಂದೆ ಅವರ ಮನೆಗೆ ತೆರಳಿ ಮನೆಯಂಗಳದಲ್ಲಿ ನಮನ ಕಾರ್ಯಕ್ರಮದಲ್ಲಿ ಭಾಸ್ಕರ ರಾವ್‌ ದಂಪತಿಗಳನ್ನು ಕೆಯುಡಬ್ಲ್ಯೂಜೆ ಸನ್ಮಾನಿಸಿತ್ತು ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸ್ಮರಿಸಿದ್ದಾರೆ. ಭಾಸ್ಕರ ರಾವ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ತಗಡೂರು ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ: ಭಾಸ್ಕರ್‌ ರಾವ್‌ ಬರೆಯುತ್ತಿದ್ದ ಮೊಗಸಾಲೆ ಅಂಕಣ: ಅಂದು ಡಿಸಿಎಂ ಬೇಡ; ಇಂದು ಮೂವರು ಡಿಸಿಎಂ ಬೇಕೆಂಬ ಕೂಗು!

Exit mobile version