ಬೆಂಗಳೂರು: ದಲಿತ ಸಮುದಾಯವನ್ನು ಅಪಮಾನಿಸಿದ್ದಾರೆ ಎಂಬ ಆರೋಪದಡಿ (Atrocity act) ತಮ್ಮ ವಿರುದ್ಧ ದಾಖಲಿಸಲಾಗಿರುವ ಎಫ್‌ಆರ್‌ಗಳನ್ನು ರದ್ದುಪಡಿಸಬೇಕು ಎಂದು ಕೋರಿ ಚಿತ್ರನಟ ಹಾಗೂ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ (actor Upendra) ಅವರು ಹೈಕೋರ್ಟ್ (Karnataka High court) ಮೆಟ್ಟಿಲೇರಿದ್ದಾರೆ.
ಅವರ ಭಾರತೀಯ ದಂಡ ಸಂಹಿತೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ 1985ರ (Atrocity act) ಅಡಿಯಲ್ಲಿ ಈಗಾಗಲೇ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಈ ಎಫ್‌ಐಆರ್‌ಗಳ ಹಿನ್ನೆಲೆಯಲ್ಲಿ ಅವರಿಗೆ ಠಾಣೆಗೆ ಬರಲು ನೋಟಿಸ್ ನೀಡಲಾಗಿದೆ. ಆದರೆ, ಅವರು ನೋಟಿಸ್‌ಗಳಿಗೆ ಉತ್ತರ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯುವ ಉದ್ದೇಶದಿಂದ ಪೊಲೀಸರು ತಾಂತ್ರಿಕತೆ ಆಧರಿಸಿ ಹುಡುಕಾಟ ನಡೆಯುತ್ತಿದೆ. ಇದೆಲ್ಲದರ ಹಿನ್ನೆಲೆಯಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಉಪೇಂದ್ರ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಹಲಸೂರು ಗೇಟ್ ಮತ್ತು ಚೆನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಆಧಾರದಲ್ಲಿ ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್‌ನ್ನು ರದ್ದುಪಡಿಸಬೇಕು. ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎನ್ನುವುದು ಹೈಕೋರ್ಟ್ ಮುಂದೆ ಉಪೇಂದ್ರ ಅವರು ಮಾಡಿರುವ ಮನವಿ.
ಈ ಎರಡೂ ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ಪೊಲೀಸರು ಉಪೇಂದ್ರ ಅವರ ಮನೆಗೆ ಹೋಗಿದ್ದರು. ವಿಚಾರಣೆಗೆ ಹಾಜರಾಗುವಂತೆ ನೀಡಿದ ನೋಟಿಸನ್ನು ಉಪೇಂದ್ರ ಅವರ ಬದಲು ಮನೆ ಕೆಲಸದವರು ತೆಗೆದುಕೊಂಡಿದ್ದರು. ಉಪೇಂದ್ರ ಅವರಿಗೇ ನೇರವಾಗಿ ನೋಟಿಸ್ ನೀಡಬೇಕಾಗಿದ್ದ ಹಿನ್ನೆಲೆಯಲ್ಲಿ ವಾಟ್ಸ್ ಆಪ್ ಮೂಲಕವೂ ನೋಟಿಸ್ ಕಳುಹಿಸಲಾಗಿದೆ. ಆದರೆ, ಉಪೇಂದ್ರ ಅವರು ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ವಕೀಲರ ಮೂಲಕ ಸಂಪರ್ಕ ಮಾಡುವ ಪ್ರಯತ್ನವನ್ನೂ ಪೊಲೀಸು ನಡೆಸಿದ್ದಾರೆ. ಜತೆಗೆ ಅವರ ಮೊಬೈಲ್ ಲೊಕೇಶನ್ ಆಧರಿಸಿ ಪತ್ತೆಗೆ ಪ್ರಯತ್ನ ನಡೆಯುತ್ತಿದೆ ಎಂಬ ಮಾಹಿತಿ ಇದೆ.
ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿದ ಉಪೇಂದ್ರ ಅವರು ಎಫ್‌ಐಆರ್ ರದ್ದು ಕೋರಿ ತಮ್ಮ ವಕೀಲ ವಿವೇಕ್ ಹೊಳ್ಳ ಅವರ ಮೂಲಕ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : Actor Upendra : ಜಾತಿ ನಿಂದನೆ ಸುಳಿಯಲ್ಲಿ ಬುದ್ಧಿವಂತ; ಅವರ ಮೇಲಿನ ಸೆಕ್ಷನ್ ಹೇಳೋದೇನು ? ಜೈಲಿಗೆ ಹೋಗ್ತಾರಾ ಉಪ್ಪಿ?
ಎಫ್‌ಐಆರ್ ರದ್ದತಿ ಕೋರಿ ಸಲ್ಲಿಸಿದ ಮನವಿಯಲ್ಲಿ ನೀಡಿದ ಕಾರಣಗಳು
- ಉಪೇಂದ್ರ ಅವರ ವಿರುದ್ಧದ ದೂರು ದುರುದ್ದೇಶವನ್ನು ಹೊಂದಿದೆ ಮತ್ತು ಅನಗತ್ಯ ಪ್ರಚಾರ ಪಡೆಯುವ ಉದ್ದೇಶವನ್ನು ಹೊಂದಿದೆ.
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯಡಿ ಉಲ್ಲೇಖಿತವಾದ ಯಾವುದೇ ಅಂಶಗಳನ್ನು ಉಪೇಂದ್ರ ಅವರು ಉಲ್ಲಂಘಿಸಿಲ್ಲ.
- ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ವ್ಯಕ್ತಿಗಳನ್ನು ಅಪಮಾನ ಮಾಡುವುದಕ್ಕಾಗಿಯೇ ಕನ್ನಡದ ನುಡಿಗಟ್ಟನ್ನು ಬಳಸಿದ್ದಾರೆ ಎನ್ನುವುದು ದೂರು. ಆದರೆ, ಉಪೇಂದ್ರ ಅವರಿಗೆ ಈ ವರ್ಗಗಳ ಮೇಲೆ ತುಂಬು ಗೌರವವಿದೆ. ಅವರು ಸಮಾಜದಲ್ಲಿನ ತಾರತಮ್ಯದ ವಿರುದ್ಧ ಧ್ವನಿ ಎತ್ತುತ್ತಿರುವ ವ್ಯಕ್ತಿಯಾಗಿದ್ದಾರೆ.
- ಈ ಮಾತಿನಿಂದ ಯಾರಿಗೋ ನೋವಾಗಿದೆ ಎಂದು ತಿಳಿದ ಕೂಡಲೇ ಅವರು ಅದನ್ನು ಡಿಲೀಟ್ ಮಾಡಿದ್ದಾರೆ ಮತ್ತು ಕ್ಷಮೆಯನ್ನೂ ಯಾಚಿಸಿದ್ದಾರೆ. ಅದರ ಬಳಿಕವೂ ದೋಷಾರೋಪಣೆ ಮಾಡುತ್ತಿರುವುದು ದುರುದ್ದೇಶ ಮತ್ತು ಪ್ರಚಾರದ ಗೀಳಿನ ಕ್ರಮ.