Site icon Vistara News

Padarayanapura Riots : ಪಾದರಾಯನಪುರ ಗಲಭೆ; ಪ್ರಕರಣ ರದ್ದತಿಗೆ ಹೈಕೋರ್ಟ್‌ ಕೊಟ್ಟ ಕಾರಣಗಳೇನು

Padarayanapura Violence

ಬೆಂಗಳೂರು : 2020ರಲ್ಲಿ ಕೋವಿಡ್-19 ಲಾಕ್ ಡೌನ್ (Covid 19 Lock down) ಸಂದರ್ಭ ಬೆಂಗಳೂರಿನ (Bangalore News) ಪಾದರಾಯನಪುರದಲ್ಲಿ ನಡೆದ ಗಲಭೆ ಪ್ರಕರಣಕ್ಕೆ (Padarayanapura Riots) ಸಂಬಂಧಿಸಿ 375 ಮಂದಿ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳನ್ನು ಕರ್ನಾಟಕ ಹೈಕೋರ್ಟ್ (Karnataka High Court) ರದ್ದುಗೊಳಿಸಿದೆ. ಆವತ್ತು ಕೋವಿಡ್‌ ನಿಯಮಾವಳಿಗಳನ್ನು ಉಲ್ಲಂಘಿಸಿ (Violation of Covid 19 Rules) ಓಡಾಡುತ್ತಿದ್ದ 51 ಮಂದಿಯನ್ನು ಅಧಿಕಾರಿಗಳು ವಶಕ್ಕೆ ಪಡೆಯಲು ಹೋದಾಗ ದೊಡ್ಡ ಹಿಂಸಾಚಾರವೇ ನಡೆದಿತ್ತು.

ಸಾಕ್ಷಿಗಳ ಹೇಳಿಕೆಗಳನ್ನು ಒಂದೇ ರೀತಿಯಲ್ಲಿ ದಾಖಲಿಸಲಾಗಿದೆ. ಪೊಲೀಸರು 120ಕ್ಕೂ ಅಧಿಕ ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರೂ ಸಹ ಗಲಭೆ ನಡೆದಿದೆ ಎನ್ನಲಾದ ಸಮಯದಲ್ಲಿ ಯಾವುದೇ ಆಸ್ತಿ ಪಾಸ್ತಿ ನಷ್ಟವಾಗಿಲ್ಲ, ಪೊಲೀಸರು ಯಾವುದೇ ವಸ್ತು ವಶಪಡಿಸಿಕೊಂಡಿಲ್ಲ. ಹೀಗಾಗಿ ಅಕ್ರಮವಾಗಿ ಗುಂಪುಗೂಡಿ ಬಿಬಿಎಂಪಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಎನ್ನಲಾದ ಆರೋಪದಡಿ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣಗಳನ್ನು ನ್ಯಾಯಾಲಯವು ರದ್ದುಪಡಿಸಿದೆ. ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ನವಾಜ್ ಪಾಷಾ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳನ್ನು  ಮಾನ್ಯ ಮಾಡಿ ಈ ಆದೇಶ ಹೊರಡಿಸಿದೆ.

Padarayanapura Riots : ಪಾದರಾಯನಪುರದಲ್ಲಿ ಅಂದು ಏನಾಗಿತ್ತು?

2020ರ ಏ.19ರಂದು ಸಂಜೆಯ ಸಮಯ ಬಿಬಿಎಂಪಿ ಅಧಿಕಾರಿಗಳು ಕೋವಿಡ್ ಸೋಂಕು ತಗುಲಿದ್ದ 51 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲು ಹೋಗಿದ್ದರು. ಆಗ ಅಲ್ಲಿದ್ದ ಕೆಲವರು ಕೈಯಲ್ಲಿ ಚಾಕು, ದೊಣ್ಣೆ, ರಾಡ್ ಹಿಡಿದುಕೊಂಡು ಆಶಾ ಕಾರ್ಯಕರ್ತರು, ವೈದ್ಯಾಧಿಕಾರಿಗಳು, ಪಾಲಿಕೆ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದರು. ಆರೋಪಿಗಳು ಚೇರು, ಟೇಬಲ್‌ಗಳನ್ನು ಒಡೆದು ಟೆಂಟ್ ಕಿತ್ತು ಹಾಕಿ ಅಕ್ಕ ಪಕ್ಕದ ರಸ್ತೆಗಳಲ್ಲಿ ಸಾರ್ವಜನಿಕ ಆಸ್ತಿಗಳಿಗೆ ಹಾನಿಯುಂಟು ಮಾಡಿದ್ದರು.

ಈ ಸಂಬಂಧ ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣಾ ನ್ಯಾಯಾಲಯವು ವಿಚಾರಣೆ ನಡೆಸುತ್ತಿತ್ತು. ಈ ನಡುವೆ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿ ಪ್ರಕರಣ ರದ್ದುಪಡಿಸಲು ಕೋರಿದ್ದರು.

ಪ್ರಾಸಿಕ್ಯೂಷನ್‌ ಮತ್ತು ಪೊಲೀಸರು ದಾಖಲಿಸಿಕೊಂಡಿದ್ದ ದೂರೇನು?

ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “2020ರ ಏಪ್ರಿಲ್‌ 19ರಂದು ಸಂಜೆ ಸಮಯದಲ್ಲಿ ಬಿಬಿಎಂಪಿ ಅಧಿಕಾರಿಗಳು ಕೋವಿಡ್ ಸೋಂಕು ತಗುಲಿದ್ದ 58 ಮಂದಿಯನ್ನು ವಶಕ್ಕೆ ತೆಗೆದಕೊಳ್ಳಲು ಪಾದರಾಯನಪುರದಲ್ಲಿ ಹೋಗಿದ್ದಾಗ ಅಲ್ಲಿ ಅಕ್ರಮವಾಗಿ ಗುಂಪು ಗೂಡಿದ್ದವರು ಕೈಯಲ್ಲಿ ಚಾಕು, ದೊಣ್ಣೆ ಮತ್ತು ರಾಡ್‌ಗಳನ್ನು ಹಿಡಿದುಕೊಂಡು ಆಶಾ ಕಾರ್ಯಕರ್ತರು, ವೈದ್ಯಾಕಾರಿಗಳು ಹಾಗೂ ಬಿಬಿಎಂಪಿ ಅಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದರು” ಎಂದು ವಾದಿಸಿದ್ದರು. ಅಲ್ಲದೇ, “ಆರೋಪಿಗಳು ಖುರ್ಚಿ, ಟೇಬಲ್‌ಗಳನ್ನು ಒಡೆದು ಟೆಂಟ್ ಕಿತ್ತು ಹಾಕಿ ಅಕ್ಕ ಪಕ್ಕದ ರಸ್ತೆಗಳಲ್ಲಿ ಸಾರ್ವಜನಿಕ ಆಸ್ತಿಗಳಿಗೆ ಹಾನಿಯುಂಟು ಮಾಡಿದ್ದರು. ಹೀಗಾಗಿ, ಪ್ರಕರಣ ದಾಖಲಿಸಲಾಗಿತ್ತು” ಎಂದು ತಿಳಿಸಿದ್ದರು.

ಅರ್ಜಿದಾರರ ವಾದ ಏನಾಗಿತ್ತು?

ಅರ್ಜಿದಾರರು, ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ. ತಮ್ಮ ಮನೆ ಬೇರೆ ಕಡೆಯಿವೆ. ನಿಜವಾದ ಆರೋಪಿಗಳನ್ನು ಗುರುತಿಸದೆ ಪೊಲೀಸರು ಸಿಕ್ಕ ಸಿಕ್ಕವರ ಮೇಲೆ ಕೇಸ್ ಹಾಕಿದ್ದಾರೆ. ಪಾಲಿಕೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದಾಗ ಅವರಲ್ಲಿ ಸೋಂಕಿ ತರ ಪಟ್ಟಿಯೇ ಇರಲಿಲ್ಲ. ಗಲಭೆ ನಡೆದಿದೆ ಎಂದು ಹೇಳಿದ್ದರೂ ಯಾರಿಗೂ ಗಾಯವಾಗಿಲ್ಲ. ಹಾಗಾಗಿ, ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿದ್ದರು.

ಇದನ್ನೂ ಓದಿ : Ban on dogs : ಅಪಾಯಕಾರಿ ನಾಯಿ ತಳಿಗಳಿಗೆ ಕೇಂದ್ರ ನಿಷೇಧ ; ಕರ್ನಾಟಕದಲ್ಲಿ ತಡೆ

ಹೈಕೋರ್ಟ್‌ ಗಮನಿಸಿದ ತಾಂತ್ರಿಕ ಸಮಸ್ಯೆಗಳೇನು?

  1. ಐಪಿಸಿ ಸೆಕ್ಷನ್‌ 172ರಿಂದ 188ರವರೆಗೆ ಮತ್ತು ವಿಪತ್ತು ನಿರ್ವಹಣಾ ಕಾಯಿದೆ ವಿವಿಧ ಸೆಕ್ಷನ್‌ ಉಲ್ಲಂಘಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಸಕ್ಷಮ ಪ್ರಾಧಿಕಾರ ದೂರು ದಾಖಲಿಸಿಲ್ಲ.
  2. ಬಿಬಿಎಂಪಿ ಅಧಿಕಾರಿಗಳು ಪಾದರಾಯನಪುರಕ್ಕೆ ಸೀಲ್ ಡೌನ್ ಮಾಡಲು ಹೋದಾಗ 51 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು ಎಂದು ಹೇಳುತ್ತಾರೆ. ಆದರೆ, ಯಾರಿಗೆ ಸೋಂಕು ತಗುಲಿತ್ತು ಎಂಬ ಬಗ್ಗೆ ಯಾವುದೇ ವಿವರಗಳನ್ನು ಆರೋಪ ಪಟ್ಟಿಯಲ್ಲಿ ದಾಖಲಿಸಿಲ್ಲ.
  3. ಬಿಬಿಎಂಪಿ ಅಧಿಕಾರಿಗಳು ಆ ಪ್ರದೇಶವನ್ನು ಸೀಲ್ ಡೌನ್ ಮಾಡಲು ಮುಂದಾದಾಗ ಅಲ್ಲಿನ ಜನರು ಹಾಲು, ತರಕಾರಿ ಮತ್ತಿತರ ಅಗತ್ಯ ವಸ್ತುಗಳನ್ನು ತರಲು ತೊಂದರೆ ಆಗಬಹುದು ಎಂದು ಪ್ರತಿರೋಧ ಮಾಡಿರಬಹುದು, ಆಗ ಒಂದು ರೀತಿಯ ಬಿಗುವಿನ ವಾತಾವರಣ ನಿರ್ಮಾಣವಾಗಿರಬಹುದು.
  4. ಮ್ಯಾಜಿಸ್ಟ್ರೇಟ್ ಐಪಿಸಿ ಸೆಕ್ಷನ್ 188ರ ಅಡಿ ಸಂಜ್ಞೆ ತೆಗೆದುಕೊಳ್ಳಲು ನಿರ್ಬಂಧವಿದೆ. ಆದರೂ ಸಂಜ್ಞೆ ತೆಗೆದುಕೊಂಡು ಮುಂದುವರಿದಿರುವುದು ಸರಿಯಲ್ಲ.
Exit mobile version