Site icon Vistara News

Cauvery Dispute : ಕಾವೇರಿ ಜಲ ವಿವಾದ; ಸುಪ್ರೀಂಕೋರ್ಟ್‌ ವಿಚಾರಣೆ ಸೆ. 21ಕ್ಕೆ ಮುಂದೂಡಿಕೆ

Cauvery Dispute

ನವ ದೆಹಲಿ: ಕಾವೇರಿ ಜಲವಿವಾದಕ್ಕೆ (Cauvery water dispute) ಸಂಬಂಧಿಸಿ ಸುಪ್ರೀಂಕೋರ್ಟ್‌ನಲ್ಲಿ ಬುಧವಾರಕ್ಕೆ (ಸೆಪ್ಟೆಂಬರ್‌ 6) ನಿಗದಿಯಾಗಿದ್ದ ವಿಚಾರಣೆಯನ್ನು ಸೆಪ್ಟೆಂಬರ್‌ 21ಕ್ಕೆ ಮುಂದೂಡಲಾಗಿದೆ.

ಕರ್ನಾಟಕವು ಕಾವೇರಿ ನದಿ ನೀರು ಪ್ರಾಧಿಕಾರ ಸೂಚಿಸಿದಂತೆ ನೀರು ಬಿಡುಗಡೆ ಮಾಡುತ್ತಿಲ್ಲ ಎಂದು ಆಕ್ಷೇಪಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕಳೆದ ಸೆಪ್ಟೆಂಬರ್‌ 1ರಂದು ಮುಖ್ಯನ್ಯಾಯಮೂರ್ತಿ ಡಿ.ಜೆ. ಚಂದ್ರಚೂಡ್‌, ನ್ಯಾಯಮೂರ್ತಿ ಭೂಷಣ್‌ ರಾಮಕೃಷ್ಣ ಗವಾಯಿ (Justice BR Gawai) ಮತ್ತು ನ್ಯಾಯಮೂರ್ತಿ ಪಿ.ಎಸ್‌. ನರಸಿಂಹ (Justice PS Narasimha) ಅವರಿದ್ದ ಕಾವೇರಿ ವಿಶೇಷ ಪೀಠದಲ್ಲಿ ನಡೆಯಬೇಕಾಗಿತ್ತು. ಅಂದು ನ್ಯಾಯಮೂರ್ತಿ ಗವಾಯಿ ಅವರು ಬೇರೆ ಪೀಠದಲ್ಲಿದ್ದರು. ಹೀಗಾಗಿ ವಿಚಾರಣೆಯನ್ನು ಸೆಪ್ಟೆಂಬರ್‌ 6ಕ್ಕೆ ಮುಂದೂಡಲಾಗಿತ್ತು. ಬುಧವಾರ ನಡೆದ ವಿಚಾರಣೆಯ ವೇಳೆ ನ್ಯಾಯಮೂರ್ತಿ ನರಸಿಂಹ ಅವರು ಉಪಸ್ಥಿತರಿಲ್ಲದೆ ಇದ್ದುದರಿಂದ ವಿಚಾರಣೆಯನ್ನು ಮುಂದೂಡಲಾಯಿತು. ಮುಖ್ಯ ನ್ಯಾಯಮೂರ್ತಿಗಳು ಮುಂದಿನ ವಾರ ರಜೆ ಇರುವುದರಿಂದ ಪ್ರಕರಣವನ್ನು ಸೆಪ್ಟೆಂಬರ್‌ 21ರವರೆಗೆ ಮುಂದೂಡಲಾಗಿದೆ.

ಬುಧವಾರದ ವಿಚಾರಣೆಯ ಸಂದರ್ಭದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ನಡುವಿನ ವಿವಾದ ಮಾತ್ರವಲ್ಲ, ಕರ್ನಾಟಕದ ರೈತ ಸಂಘಟನೆಗಳು ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆಯೂ ನಡೆಯಬೇಕಾಗಿತ್ತು. ಅದರ ವಿಚಾರಣೆಯನ್ನು ಕೂಡಾ ಸೆಪ್ಟೆಂಬರ್‌ 21ಕ್ಕೆ ಮುಂದೂಡಲಾಗಿದೆ.

ಕಾವೇರಿ ವಿವಾದ ಇದುವರೆಗೆ ನಡೆದು ಬಂದ ದಾರಿ

ಕಾವೇರಿ ನೀರು ನಿಯಂತ್ರಣ ಸಮಿತಿ (Cauvery Water Regulation Committee-CWRC)ಯು ತಮಿಳುನಾಡಿಗೆ ದಿನಕ್ಕೆ 24000 ಕ್ಯೂಸೆಕ್‌ ನೀರು ಬಿಡುಗಡೆ ಮಾಡುವಂತೆ ಆದೇಶ ನೀಡಿತ್ತು. ಈ ವಿಚಾರ ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರ (Cauvery Water Management Authority- CWMA) ಮುಂದೆ ಬಂದಾಗ ನೀರು ಬಿಡುಗಡೆಯ ಪ್ರಮಾಣವನ್ನು 10000 ಕ್ಯೂಸೆಕ್‌ಗೆ ಇಳಿಸಿತ್ತು. ಈ ನಡುವೆ, ಕರ್ನಾಟಕವು ಪ್ರಾಧಿಕಾರದ ಆದೇಶವನ್ನು ಪಾಲಿಸುತ್ತಿಲ್ಲ ಎಂದು ಆಕ್ಷೇಪಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು.

ಅಕ್ಟೋಬರ್‌ 24ರಂದು ನಡೆದ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್‌ ತ್ರಿಸದಸ್ಯ ಪೀಠವೊಂದನ್ನು ಸ್ಥಾಪನೆ ಮಾಡಿ ಮುಂದಿನ ವಿಚಾರಣೆ ಅದರಲ್ಲಿ ನಡೆಯಲಿದೆ ಎಂದು ಸೂಚಿಸಿತ್ತು. ಅದರ ಜತೆಗೆ ಪ್ರಾಧಿಕಾರವು ವಸ್ತುಸ್ಥಿತಿಯ ಬಗ್ಗೆ ಅಫಿಡವಿಟ್‌ ನೀಡುವಂತೆ ಸೂಚಿಸಿತ್ತು. ಜತೆಗೆ ಮುಂದಿನ ವಿಚಾರಣೆಯನ್ನು ಸೆ. 1ಕ್ಕೆ ನಿಗದಿ ಮಾಡಿತ್ತು.

ಇದರ ನಡುವೆ ಕಾವೇರಿ ನೀರು ನಿಯಂತ್ರಣ ಸಮಿತಿ (Cauvery Water Regulation Committee-CWRC)ಯು ಸೆ. 28ರಂದು ಹೊಸ ಆದೇಶವನ್ನು ಹೊರಡಿಸಿ ಮುಂದಿನ 15 ದಿನಗಳ ಕಾಲ ಪ್ರತಿದಿನ 5000 ಕ್ಯೂಸೆಕ್‌ ನೀರು ಬಿಡುಗಡೆ ಮಾಡುವಂತೆ ಸೂಚಿಸಿತ್ತು. ಕಾವೇರಿ ನದಿ ಪ್ರಾಧಿಕಾರವು ಆಗಸ್ಟ್‌ 31ರಂದು ಅಫಿಡವಿಟ್‌ ಸಲ್ಲಿಸಿ ಕರ್ನಾಟಕವು ನದಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶವನ್ನು ಪಾಲಿಸುತ್ತಿದೆ ಎನ್ನುವುದನ್ನು ಕೋರ್ಟ್‌ಗೆ ಮನದಟ್ಟು ಮಾಡಿತ್ತು. ಆದರೆ, ತಮಿಳುನಾಡು ಹೈಕೋರ್ಟ್‌ ಇದರ ವಿರುದ್ಧ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿತ್ತು.

ಇದೆಲ್ಲದರ ವಿಚಾರಣೆ ಸೆಪ್ಟೆಂಬರ್‌ 1ರಂದು ನಡೆಯಬೇಕಾಗಿತ್ತು. ಆದರೆ, ನ್ಯಾಯಮೂರ್ತಿಗಳಾದ ಬಿ.ಆರ್.‌ ಗವಾಯಿ ಅವರ ಅನುಪಸ್ಥಿತಿಯಿಂದಾಗಿ ವಿಚಾರಣೆ ಸೆ. 6ಕ್ಕೆ ಮುಂದೂಡಲ್ಪಟ್ಟಿತ್ತು. ಸೆ. 6ರಂದು ನಡೆಯಬೇಕಾಗಿದ್ದ ವಿಚಾರಣೆ ಈಗ ಸೆ. 21ಕ್ಕೆ ಮುಂದೂಡಲ್ಪಟ್ಟಿದೆ.

ಇದನ್ನೂ ಓದಿ: Cauvery Dispute : ತ.ನಾಡಿಗೆ 5000 ಕ್ಯೂಸೆಕ್‌ ನೀರು ಬಿಡುಗಡೆ; 100 ಅಡಿಗೆ ಕುಸಿದ KRS ಮಟ್ಟ; ಹೀಗೇ ಆದ್ರೆ ಡ್ಯಾಂ ಫುಲ್‌ ಖಾಲಿ

ನೀರು ಬಿಡುಗಡೆ ಮುಂದುವರಿಕೆ

ಇಷ್ಟೆಲ್ಲದರ ನಡುವೆ ರಾಜ್ಯದಿಂದ ತಮಿಳುನಾಡಿಗೆ ದಿನಕ್ಕೆ 5000 ಕ್ಯೂಸೆಕ್‌ ನೀರು ಬಿಡುಗಡೆಯನ್ನು ಮುಂದುವರಿಸಿದೆ. ನೀರು ನಿಯಂತ್ರಣ ಸಮಿತಿ ಆದೇಶದ ಪ್ರಕಾರ ಸೆ. 11ರವರೆಗೆ ನೀರು ಬಿಡುಗಡೆ ಮಾಡಬೇಕಾಗಿದೆ. ಬುಧವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆದಿದ್ದರೆ ಕರ್ನಾಟಕಕ್ಕೆ ತನ್ನ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ಸಿಗುತ್ತಿತ್ತು. ಮುಂದೇನು ಮಾಡಬೇಕು ಎಂಬ ಮಾರ್ಗದರ್ಶನ ದೊರೆಯುವ ಸಾಧ್ಯತೆ ಇತ್ತು. ಈಗ ಸೆ. 11ರ ಬಳಿಕ ಏನು ಮಾಡಬೇಕು ಎಂಬುದು ಗೊಂದಲಕಾರಿಯಾಗಿದೆ. ಒಂದು ವೇಳೆ ನೀರು ನಿಯಂತ್ರಣ ಮಂಡಳಿ ಮತ್ತೊಂದು ಆದೇಶ ಹೊರಡಿಸಿ ನೀರು ಬಿಡುಗಡೆ ಮುಂದುವರಿಸುವಂತೆ ಸೂಚಿಸಿದರೆ ಆಗ ಸಮಸ್ಯೆಯಾಗಲಿದೆ.

ಈಗಾಗಲೇ ಕೆ.ಆರ್‌ಎಸ್‌ನಲ್ಲಿ ನೀರಿನ ಮಟ್ಟ 100 ಅಡಿಗಿಂತಲೂ ಕಡಿಮೆಯಾಗಿದೆ. ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದರಿಂದ ಕರ್ನಾಟಕದ ಕೃಷಿ ಮಾತ್ರವಲ್ಲ ಕುಡಿಯುವ ನೀರಿಗೂ ಸಮಸ್ಯೆಯಾಗಲಿದೆ ಎಂದು ಆಕ್ಷೇಪಿಸಿ ಪ್ರತಿಭಟನೆಯ ಕಿಚ್ಚು ಜೋರಾಗಿದೆ.

Exit mobile version