ಬೆಂಗಳೂರು: ದಿನದಿಂದ ದಿನಕ್ಕೆ ಚಿತ್ರ ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತಿರುವ ಬೈಂದೂರು ಬಿಜೆಪಿ ಟಿಕೆಟ್ (Byndur BJP ticket Fraud Case) ವಂಚನೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕುಂದಾಪುರ (Chaitra kundapura) ಗ್ಯಾಂಗ್ ಐದು ಕೋಟಿ ರೂಪಾಯಿ ವಂಚಿಸಿದ ಈ ಪ್ರಕರಣದ ಮೂರನೇ ಆರೋಪಿ ಹಾಲಶ್ರೀ ಸ್ವಾಮೀಜಿ (Halasri swameeji) ಸಿಸಿಬಿ ಬಂಧನದಿಂದ ತಪ್ಪಿಸಿಕೊಳ್ಳಲು ಇದೀಗ ಕೋರ್ಟ್ ಮೊರೆ (Anticipatory Bail) ಹೋಗಿದ್ದಾರೆ.
ವಿಜಯ ನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಹಾಲು ಮಠ ಸಂಸ್ಥಾನದ ಹಾಲಿ ಸ್ವಾಮೀಜಿಗಳಾಗಿರುವ ಅಭಿನವ ಹಾಲಶ್ರೀ ಸ್ವಾಮೀಜಿ ಅವರು ನಿರೀಕ್ಷಣಾ ಜಾಮೀನು ಕೋರಿ 57ನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹಾಲ ಶ್ರೀಗಳು ಈ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದ ಬೆನ್ನಲ್ಲೇ ನಾಪತ್ತೆಯಾಗಿದ್ದು, ಅಜ್ಞಾತ ಸ್ಥಳದಲ್ಲಿ ಅಡಗಿ ಕುಳಿತಿದ್ದಾರೆ ಎನ್ನಲಾಗಿದೆ. ಅವರನ್ನು ಹುಡುಕುವ ಪ್ರಯತ್ನವನ್ನು ಸಿಸಿಬಿ ನಡೆಸಿದೆ ಎನ್ನಲಾಗಿದ್ದು, ಆದರೆ ಸಿಕ್ಕಿಲ್ಲ ಎನ್ನಲಾಗುತ್ತಿದೆ. ಗುರುವಾರ ಸಿಸಿಬಿ ಪೊಲೀಸರು ಹಿರೇಹಡಗಲಿಯಲ್ಲಿರುವ ಮಠಕ್ಕೆ ಹೋಗಿ ನೋಟಿಸ್ ಅಂಟಿಸಿ ಬಂದಿದ್ದಾರೆ.
ಒಂದು ವೇಳೆ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿದರೆ ಅರೆಸ್ಟ್ ಗ್ಯಾರಂಟಿ ಎಂದು ಖಚಿತವಾಗಿರುವ ಹಿನ್ನೆಲೆಯಲ್ಲಿ ಹಾಲಶ್ರೀ ಸ್ವಾಮೀಜಿಗಳು ಬಂಧನದಿಂದ ತಪ್ಪಿಸಿಕೊಳ್ಳುವ ಕೊನೆಯ ಪ್ರಯತ್ನ ನಡೆಸಿದ್ದಾರೆ. ಅಜ್ಞಾತ ಸ್ಥಳದಲ್ಲಿರುವ ಸ್ವಾಮೀಜಿ ಅಲ್ಲಿಂದಲೇ ತಮ್ಮ ಆಪ್ತರಾದ ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಸೆಪ್ಟೆಂಬರ್ 16ರಂದು ಅರ್ಜಿ ವಿಚಾರಣೆ
ನಗರದ 57ನೇ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಈ ಅರ್ಜಿಯ ವಿಚಾರಣೆ ಸೆಪ್ಟೆಂಬರ್ 16ರಂದು ನಡೆಯಲಿದ್ದು, ಈ ವೇಳೆ ಕೋರ್ಟ್ ಜಾಮೀನು ನೀಡುತ್ತದಾ ಎಂದು ಕಾದು ನೋಡಬೇಕು. ಇದೊಂದು ಹೈಪ್ರೊಫೈಲ್ ಪ್ರಕರಣ ಮತ್ತು ಇದರಲ್ಲಿ ಈಗಾಗಲೇ ಹಲವರನ್ನು ಬಂಧಿಸಿರುವುದರಿಂದ ನಿರೀಕ್ಷಣಾ ಜಾಮೀನು ಕೊಡುವುದು ಕಷ್ಟ ಎಂಬ ಮಾತು ಕೇಳಿಬರುತ್ತಿದೆ.
ಒಂದು ವೇಳೆ ಜಾಮೀನು ಸಿಗದೆ ಹೋದರೆ ಸಿಸಿಬಿ ಅವರನ್ನು ಬಂಧಿಸುವ ಸಾಧ್ಯತೆಗಳಿವೆ. ಈ ನಡುವೆ ಕೋರ್ಟ್ ಕೆಲವು ದಿನಗಳ ಮಟ್ಟಿಗೆ ಬಂಧನಕ್ಕೆ ತಡೆಯಾಜ್ಞೆ ನೀಡಿ, ಸಿಸಿಬಿಯಿಂದ ಅಫಿಡವಿಟ್ ಕೇಳುವ ಸಾಧ್ಯತೆಯೂ ಇದೆ.
ಒಂದೊಮ್ಮೆ ಜಾಮೀನು ಕೊಡದೆ ಹೋದರೆ ಸ್ವಾಮೀಜಿಗಳು ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆಯೂ ಇದೆ. ಆದರೆ, ಅದರ ನಡುವೆ ಸಿಸಿಬಿ ಬಂಧಿಸಿದರೆ ಅದು ಸಾಧ್ಯವಾಗುವುದಿಲ್ಲ. ಹಾಗೆ ಮಾಡುವುದಿದ್ದರೆ ಅವರು ಅಜ್ಞಾತ ಸ್ಥಳದಿಂದಲೇ ಇದನ್ನೆಲ್ಲ ಮಾಡಬೇಕಾಗುತ್ತದೆ. ಅದಕ್ಕೆ ಮೊದಲು ಸಿಸಿಬಿ ಪೊಲೀಸರು ಅಜ್ಞಾತ ಸ್ಥಳವನ್ನು ಪತ್ತೆ ಹಚ್ಚಿ ಬಂಧಿಸುವ ಸಾಧ್ಯತೆಯೂ ಕಂಡುಬಂದಿದೆ.
ಸ್ವಾಮೀಜಿ ಸಿಕ್ಕಾಕಿಕೊಳ್ಳಿ ಸತ್ಯ ಹೊರಗೆ ಬರುತ್ತೆ ಅಂದಿದ್ದ ಚೈತ್ರಾ ಕುಂದಾಪುರ
ಈ ಪ್ರಕರಣದಲ್ಲಿ ಈಗ ಹಾಲಶ್ರೀ ಅವರ ಪಾತ್ರ ಬಹುಮುಖ್ಯವಾಗಿದೆ. ಅವರು ಗೋವಿಂದ ಪೂಜಾರಿ ಅವರಿಂದ ನೇರವಾಗಿ 1.5 ಕೋಟಿ ರೂ.ಯನ್ನು ಸ್ವೀಕರಿಸಿದ ಬಗ್ಗೆ ಸ್ಪಷ್ಟವಾದ ದಾಖಲೆಗಳು ಇವೆ ಎಂದು ಹೇಳಲಾಗುತ್ತಿದೆ. ನಿಜವೆಂದರೆ ಇಡೀ ಪ್ರಕರಣದಲ್ಲಿ ಟಿಕೆಟ್‌ಗಾಗಿ ಗಂಭೀರ ಪ್ರಯತ್ನ ನಡೆದಿರುವುದು ಹಾಲಶ್ರೀಗಳಿಂದಲೇ. ಅವರಿಗಿರುವ ರಾಜಕೀಯ ಕನೆಕ್ಷನ್ ಬಳಸಿಕೊಂಡು ಟಿಕೆಟ್ ಕೊಡಿಸಬಹುದು ಎಂಬ ನೆಲೆಯಲ್ಲೇ ಚೈತ್ರಾ ಕುಂದಾಪುರ ಟೀಮ್ ಪ್ಲ್ಯಾನ್ ಮಾಡಿತ್ತು.
ಇದೇ ಕಾರಣಕ್ಕಾಗಿ ಚೈತ್ರಾ ಕುಂದಾಪುರ ಬುಧವಾರ ಸಿಸಿಬಿ ಕಚೇರಿಯಲ್ಲಿ ʻಸ್ವಾಮೀಜಿ ಸಿಕ್ಕಾಕಿಕೊಳ್ಳಲಿ, ಎಲ್ಲಾ ಸತ್ಯ ಹೊರಗೆಬರುತ್ತದೆʼ ಎಂದು ಹೇಳಿದ್ದು ಎನ್ನಲಾಗಿದೆ.
ಚೈತ್ರಾ ಕುಂದಾಪುರ ಮತ್ತು ಟೀಮ್ ಸ್ವಾಮೀಜಿಯವರಿಗೆ ಗೋವಿಂದ ಪೂಜಾರಿ ಅವರನ್ನು ಪರಿಚಯ ಮಾಡಿಸಿ ಟಿಕೆಟ್ ಕೊಡಿಸಿ ಎಂದು ಬೇಡಿಕೆ ಇಟ್ಟಾಗ ಸ್ವಾಮೀಜಿ 1.5 ಕೋಟಿ ರೂ. ಬೇಡಿಕೆ ಇಟ್ಟಿದ್ದರು. 2022ರ ಸೆಪ್ಟೆಂಬರ್ ಮೊದಲವಾರದಲ್ಲಿ ಈ ಘಟನೆ ನಡೆದಿತ್ತು. ಬಳಿಕ 2023ರ ಜನವರಿ 16ರಂದು ಗೋವಿಂದ ಪೂಜಾರಿ ಜಯನಗರದಲ್ಲಿ ಸ್ವಾಮೀಜಿಯ ಆಶ್ರಮದಲ್ಲಿ ಹಣ ನೀಡಿದ್ದರು.
ಇದೆಲ್ಲ ಪ್ರಕರಣ ಮುಗಿದು ಟಿಕೆಟ್ ಸಿಗದೆ ಇದ್ದಾಗ ಮೋಸದ ಬಲೆಗೆ ಬಿದ್ದಿದ್ದೇನೆ ಎನ್ನುವ ಅರಿವಾಗುವ ಪೂಜಾರಿ ಅವರು ಸ್ವಾಮೀಜಿಯವರನ್ನೂ ಕೇಳುತ್ತಾರೆ. ಆಗ ಸ್ವಾಮೀಜಿಯವರು ನಾನು, ನಾನು ತೆಗೆದುಕೊಂಡು 1.5 ಕೋಟಿ ರೂ.ಗೆ ಮಾತ್ರ ಜವಾಬ್ದಾರ. ಅದನ್ನು ಕೊಡುತ್ತೇನೆ. ದಯವಿಟ್ಟು ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಬೇಡಿ ಎಂದು ಕೇಳಿಕೊಳ್ಳುತ್ತಾರೆ. ಆದರೆ ಗೋವಿಂದ ಪೂಜಾರಿ ಅವರು ಸ್ವಾಮೀಜಿಯನ್ನೂ ಸೇರಿಸಿಯೇ ದೂರು ದಾಖಲಿಸಿದ್ದಾರೆ.
ಹಾಲಶ್ರೀಗಳು ಗೋವಿಂದ ಪೂಜಾರಿ ಅವರಿಂದ ಪಡೆದ ಮೊತ್ತದಲ್ಲಿ ಸ್ವಲ್ಪ ಮೊತ್ತವನ್ನು ಟಿಕೆಟ್ ಕೊಡಿಸುವುದಕ್ಕಾಗಿ ತಮ್ಮ ಆಪ್ತ ರಾಜಕಾರಣಿಗಳಿಗೆ ನೀಡಿದ್ದಾರೆ. ಅವರನ್ನು ಬಂಧಿಸಿದರೆ ಈ ವಿಚಾರವನ್ನು ಅವರು ಬಾಯಿಬಿಡುತ್ತಾರೆ ಎನ್ನುವುದು ಚೈತ್ರಾ ಕುಂದಾಪುರ ಟೀಮ್‌ನ ನಿರೀಕ್ಷೆ.
ಇದನ್ನೂ ಓದಿ: Chaitra Kundapura : ಬಿಜೆಪಿ ಟಿಕೆಟ್ ವಂಚನೆ ಜಾಲದ ಹಿಂದೆ ದೊಡ್ಡ ದೊಡ್ಡವರಿದ್ದಾರಾ?; ಚೈತ್ರಾ ಕುಂದಾಪುರ ಸ್ಫೋಟಕ ಹೇಳಿಕೆ
ಆದರೆ, ಹಾಲ ಶ್ರೀಗಳ ಬಂಧನವನ್ನು ನಿಧಾನಗೊಳಿಸಿ ಕೆಲವೊಂದು ವಿಚಾರಗಳನ್ನು ಮರೆಮಾಚುವ ಪ್ರಯತ್ನ ನಡೆಯುತ್ತಿದೆ ಎಂಬ ಸುದ್ದಿಗಳೂ ಹರಡುತ್ತಿವೆ. ಹೀಗಾಗಿ ಟಿಕೆಟ್ ವಿಷಯದಲ್ಲಿ ರಾಜಕಾರಣಿಗಳ ಜತೆ ಡೈರೆಕ್ಟ್ ಲಿಂಕ್ ಆಗಿರುವ ಹಾಲಶ್ರೀಗಳನ್ನು ರಕ್ಷಿಸುವ ಪ್ರಯತ್ನಗಳೂ ನಡೆಯುತ್ತಿರುವ ಆಪಾದನೆ ಕೇಳಿಬಂದಿದೆ.
ಇಷ್ಟಾದ ಮೇಲೂ ಇಂದಲ್ಲ ನಾಳೆ ಬಂಧನಕ್ಕೆ ಒಳಗಾಗಲಿರುವ ಹಾಲಶ್ರೀಗಳು ನಿಜಕ್ಕೂ ಚೈತ್ರಾ ಕುಂದಾಪುರ ನಿರೀಕ್ಷೆಯಂತೆ ದೊಡ್ಡ ದೊಡ್ಡವರ ಹೆಸರು ಹೇಳುತ್ತಾರಾ ಎಂಬ ಕುತೂಹಲ ಎಲ್ಲರಲ್ಲೂ ಇದೆ.