Site icon Vistara News

CM Siddaramaiah : 10 ಸಾವಿರ ರೂ. ದಂಡ ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಸಿದ್ದರಾಮಯ್ಯ

Relief for Congress leaders, including CM Siddaramaiah in criminal case

‌ಬೆಂಗಳೂರು: ಪ್ರತಿಭಟನೆ ವೇಳೆ ಆಸ್ತಿಪಾಸ್ತಿ ಹಾನಿಯಾಗಿದೆ (Loss of public property) ಎಂಬ ಕಾರಣಕ್ಕಾಗಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ತಮ್ಮ ವಿರುದ್ಧ 10 ಸಾವಿರ ರೂ. ದಂಡ ವಿಧಿಸಿದ್ದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಸುಪ್ರೀಂಕೋರ್ಟ್‌ (Supreme Court) ಮೆಟ್ಟಿಲೇರಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ (Contractor santhosh Suicide) ಪ್ರಕರಣದಲ್ಲಿ ಆರೋಪ ಎದುರಿಸಿದ್ದ ಆಗಿನ ಸಚಿವ ಕೆ.ಎಸ್.‌ ಈಶ್ವರಪ್ಪ (KS Eshwarappa) ಅವರ ವಿರುದ್ಧ 2022ರ ಏಪ್ರಿಲ್ 14ರಂದು ಕಾಂಗ್ರೆಸ್‌ ಪ್ರತಿಭಟನೆ ನಡೆಸಿತ್ತು. ಅದರ ನೇತೃತ್ವವನ್ನು ಆಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ವಹಿಸಿದ್ದರು.

ಮೃತ ಸಂತೋಷ್‌ ಬರೆದಿಟ್ಟಿದ್ದ ಡೆತ್‌ನೋಟ್‌ನಲ್ಲಿ ಆಗಿನ ಸಚಿವ ಕೆ.ಎಸ್.‌ ಈಶ್ವರಪ್ಪ ಅವರ ಹೆಸರನ್ನು ಉಲ್ಲೇಖ ಮಾಡಲಾಗಿತ್ತು. ಹೀಗಾಗಿ ನೈತಿಕ ಹೊಣೆ ಹೊತ್ತು ಕೆ.ಎಸ್.‌ ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರಿನ ರೇಸ್ ವ್ಯೂ ಹೋಟೆಲ್ ಬಳಿ ಪ್ರತಿಭಟನೆಯನ್ನು ಕಾಂಗ್ರೆಸ್‌ ನಾಯಕರು ಮಾಡಿದ್ದರು. ಈ ವೇಳೆ ಸಾರ್ವಜನಿಕ ಮುಕ್ತ ಸಂಚಾರಕ್ಕೆ ಅಡ್ಡಿ ಪಡಿಸಿದ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇಲೆ ನಗರದ ಹೈ ಗ್ರೌಂಡ್ಸ್‌ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.

ಇದನ್ನೂ ಓದಿ : CM Siddaramaiah: ಸಿಎಂ ಸಿದ್ದರಾಮಯ್ಯಗೆ ಹತ್ತು ಸಾವಿರ ದಂಡ ವಿಧಿಸಿದ ಕೋರ್ಟ್!

42ನೇ ಎಸಿಎಂಎಂ ನ್ಯಾಯಾಲಯ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ಜಾರಿ ಮಾಡಿದ್ದ ಎನ್‌ಬಿಡಬ್ಲ್ಯೂ (ಜಾಮೀನು ರಹಿತ ಬಂಧನ ವಾರೆಂಟ್ )ಹಾಗೂ ವಿಶೇಷ ನ್ಯಾಯಾಲಯದಲ್ಲಿ ವಿಚಾರಣಾ ಪ್ರಕ್ರಿಯೆಯನ್ನು ರದ್ದುಪಡಿಸಲು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ರಾಮಲಿಂಗಾ ರೆಡ್ಡಿ, ಎಂ.ಬಿ.‌ ಪಾಟೀಲ್ ಮತ್ತು ಎಎಐಸಿಸಿ ಮುಖಂಡ ರಣದೀಪ್ ಸಿಂಗ್ ಸುರ್ಜೇವಾಲಾ ಅರ್ಜಿ ಸಲ್ಲಿಸಿದ್ದರು. ಆದರೆ, ವಿಚಾರಣೆ ನಡೆಸಿದ ಕೋರ್ಟ್‌ ಅರ್ಜಿಯನ್ನು ವಜಾಗೊಳಿಸಿತ್ತು.

ಮಾರ್ಚ್‌ ಆರರಂದು ಸಿದ್ದರಾಮಯ್ಯ, ಮಾರ್ಚ್ 7 ರಂದು ರಾಮಲಿಂಗಾರೆಡ್ಡಿ, ಮಾರ್ಚ್ 11 ರಂದು ರಣದೀಪ್ ಸುರ್ಜೇವಾಲಾ, ಮಾರ್ಚ್ 15ರಂದು ಎಂ.ಬಿ.ಪಾಟೀಲ್ ಅವರಿಗೆ ಹಾಜರಾಗಲು ಕೋರ್ಟ್‌ ಸೂಚನೆ ನೀಡಿತ್ತು. ಇದರ ಜತೆಗೆ ಅನಗತ್ಯವಾಗಿ ಪಿಎಸ್‌ಐ ಕು. ಜಹಿದಾ ಅವರನ್ನು ಪ್ರತಿವಾದಿಯಾಗಿಸಿದ ಕಾರಣಕ್ಕೆ ದಂಡವನ್ನು ವಿಧಿಸಿತ್ತು.

CM Siddaramaiah : ಸಿದ್ದರಾಮಯ್ಯ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದೇಕೆ?

ತಮಗೆ ದಂಡ ವಿಧಿಸಿರುವುದು, ಕೋರ್ಟ್‌ಗೆ ಹಾಜರಾಗುವಂತೆ ಸೂಚನೆ ನೀಡಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರತಿಭಟನೆ ಕಾನೂನು ಬದ್ಧವಾಗಿದೆ ಎಂಬ ವಾದದೊಂದಿಗೆ ಅವರು ಸುಪ್ರೀಂಕೋರ್ಟ್‌ನಿಂದ ನ್ಯಾಯದಾನದ ನಿರೀಕ್ಷೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಅಂದಿನ ಬಿಜೆಪಿ ಸರ್ಕಾರ ಅನಗತ್ಯವಾಗಿ ತಮ್ಮ ಮೇಲೆ ಕೇಸು ದಾಖಲಿಸಿದೆ, ಪ್ರತಿಭಟನೆ ನಡೆಸಿದ್ದು ಕಾನೂನುಬದ್ಧವಾಗಿದೆ. ತಮ್ಮ ಪ್ರತಿಭಟನೆಯಿಂದ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟಾಗಿಲ್ಲ ಎಂದು ಸಿದ್ದರಾಮಯ್ಯ ಅವರು ಸುಪ್ರೀಂಕೋರ್ಟ್‌ ಮುಂದೆ ಪ್ರತಿಪಾದನೆ ಮಾಡಲಿದ್ದಾರೆ. ಸುಪ್ರೀಂಕೋರ್ಟ್‌ ಈ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಾಗಿದೆ.

Exit mobile version