ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಮತ್ತು ಅವರ ಸೋದರ ಡಿ.ಕೆ. ಸುರೇಶ್ ಅವರಿಗೆ ಗ್ರಾಹಕರ ನ್ಯಾಯಾಲಯ (Consumer court) ಬಿಗ್ ಶಾಕ್ ನೀಡಿದೆ. ಗ್ರಾಹಕರೊಬ್ಬರು ₹30 ಲಕ್ಷ ಮುಂಗಡ ಹಣ ಪಾವತಿಸಿ ಕಾಯ್ದಿರಿಸಿದ್ದ ಫ್ಲ್ಯಾಟ್ ಅನ್ನು ನಿಗದಿತ ಸಮಯದಲ್ಲಿ ಪೂರ್ಣ ಹಣ ಪಾವತಿ ಮಾಡದೆ ವಿಳಂಬ ಮಾಡಿದ್ದಾರೆ ಎನ್ನುವ ಕಾರಣ ನೀಡಿ 17 ಲಕ್ಷ ರೂ. ಕಡಿತ ಮಾಡಿ ಬಾಕಿ ಹಣ ಪಾವತಿಸಿದ್ದ ಪ್ರಕರಣದಲ್ಲಿ ಡಿ.ಕೆ ಬ್ರದರ್ಸ್‌ಗೆ (DK Brothers) ಹಿನ್ನಡೆಯಾಗಿದೆ. ಕಡಿತ ಮಾಡಿರುವ ಹಣವನ್ನು ವಾರ್ಷಿಕ ಶೇ. 10ರ ಬಡ್ಡಿಯೊಂದಿಗೆ ಮರುಪಾವತಿಸುವಂತೆ ಬೆಂಗಳೂರಿನ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶ ನೀಡಿದೆ.
ಬೆಂಗಳೂರಿನ ಎನ್‌ಟಿವೈ ಬಡಾವಣೆಯ ನಿವಾಸಿ ಜೆ ರಾಘವೇಂದ್ರ ಅವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷರಾದ ಎಂ ಶೋಭಾ, ಸದಸ್ಯರಾದ ಸುಮಾ ಮತ್ತು ಅನಿಲ್ ಕುಮಾರ್ ಅವರ ನೇತೃತ್ವದ ತ್ರಿಸದಸ್ಯ ಪೀಠವು ಈ ಮಹತ್ವದ ಆದೇಶ ನೀಡಿದೆ.
ಏನಿದು ಡಿ.ಕೆ ಬ್ರದರ್ಸ್ ಹಣ ಕಡಿತ ಪ್ರಕರಣ?
ಡಿ.ಕೆ ಶಿವಕುಮಾರ್, ಅವರ ಸಹೋದರ ಡಿ.ಕೆ ಸುರೇಶ್, ಸೋದರಿ ಡಿ.ಕೆ ಮಂಜುಳಾ ಹಾಗೂ ಸಲಾರ್‌ಪುರಿಯಾ ಪ್ರಾಪರ್ಟಿಸ್ ಪ್ರೈವೇಟ್ ಲಿಮಿಟೆಡ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದ ಡಿವಿನಿಟಿ ಪ್ರಾಜೆಕ್ಟ್‌ನ ಫ್ಲ್ಯಾಟ್ ಒಂದಕ್ಕೆ ಸಂಬಂಧಿಸಿದ ವಿವಾದ ಇದು. ಈ ಫ್ಲ್ಯಾಟ್‌ನ್ನು 86.06 ಲಕ್ಷ ರೂ.ಗಳಿಗೆ ಖರೀದಿ ಮಾಡಲು 2017ರ ಏಪ್ರಿಲ್ 10ರಂದು ರಾಘವೇಂದ್ರ ಒಪ್ಪಂದ ಮಾಡಿಕೊಂಡಿದ್ದರು. ಅಲ್ಲದೇ, ಮುಂಗಡವಾಗಿ 30,81,352 ರೂ. ಪಾವತಿಸಿದ್ದರು. ಆದರೆ, ಕೊರೊನಾ ಕಾರಣದಿಂದ ಬಾಕಿ 55,25,448 ರೂ.ವನ್ನು ನಿಗದಿತ ಸಮಯಕ್ಕೆ ಪಾವತಿಸಲು ಆಗಿರಲಿಲ್ಲ.
ಈ ನಡುವೆ, ಡಿ.ಕೆ. ಬ್ರದರ್ಸ್ ಒಳಗೊಂಡ ಡಿವಿನಿಟಿ ಪ್ರಾಜೆಕ್ಟ್ ರಾಘವೇಂದ್ರ ಅವರಿಗೆ ಯಾವುದೇ ಮಾಹಿತಿಯನ್ನು ನೀಡದೆ ಒಪ್ಪಂದ ರದ್ದು ಮಾಡಿದ್ದಲ್ಲದೆ, ಫ್ಲ್ಯಾಟ್ ಅನ್ನು ಬೇರೆಯವರಿಗೆ ಮಾರಿತ್ತು. ಕೊನೆಗೆ ಪಾವತಿಸಲಾದ 30 ಲಕ್ಷ ರೂ.ನಲ್ಲಿ 17,77,422 ರೂ.ವನ್ನು ಕಡಿತಗೊಳಿಸಿ ಕೇವಲ 13,03,930 ರೂ.ವನ್ನು ಮಾತ್ರ ಚೆಕ್ ಮೂಲಕ ವಾಪಸ್ ಮಾಡಲಾಗಿತ್ತು.
ಇದರಿಂದ ಕುಪಿತರಾದ ರಾಘವೇಂದ್ರ ಅವರು ಗ್ರಾಹಕ ನ್ಯಾಯಾಲಯದ ಮೊರೆ ಹೊಕ್ಕಿದ್ದರು. ಡಿವಿನಿಟಿ ಪ್ರಾಜೆಕ್ಟ್‌ಗೆ ಸಂಬಂಧಪಟ್ಟವರು ಫ್ಲ್ಯಾಟ್ ಅನ್ನು ಮತ್ತೊಬ್ಬರಿಗೆ ಲಾಭಕ್ಕಾಗಿ ಮಾರಿದ್ದಾರೆ. ಆದರೂ, ತಮ್ಮಿಂದ 17,77,422 ರೂ. ಕಡಿತಗೊಳಿಸಿದ್ದಾರೆ ಎಂದಿದ್ದರು.
ಹಣ ಕಡಿತಕ್ಕೆ ಡಿವಿನಿಟಿ ಪ್ರಾಜೆಕ್ಟ್ ಕೊಟ್ಟ ವಿವರಣೆ ಏನು?
2017ರಲ್ಲಿ ಫ್ಲ್ಯಾಟ್ ಮಾರಾಟದ ಒಪ್ಪಂದ ನಡೆದಿತ್ತು. ಬಳಿಕ ಕೇಂದ್ರ ಸರ್ಕಾರ ಜಿಎಸ್‌ಟಿ ಜಾರಿ ಮಾಡಿದ್ದರಿಂದ ಫ್ಲ್ಯಾಟ್‌ನ ವೆಚ್ಚ 1.4 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ರಾಘವೇಂದ್ರ ಅವರು ಒಪ್ಪಂದ ಪ್ರಕಾರ ಬಾಕಿ ಮೊತ್ತವಾದ 55 ಲಕ್ಷ ರೂ.ಗಳನ್ನುನಿಗದಿತ ಸಮಯದಲ್ಲಿ ಪಾವತಿ ಮಾಡುವಲ್ಲಿ ವಿಫಲರಾಗಿ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ.
ಹಲವು ಬಾರಿ ಇ-ಮೇಲ್ ಮತ್ತು ಕರೆ ಮಾಡಿ ಬಾಕಿ ಮೊತ್ತ ಪಾವತಿಸುವಂತೆ ಸೂಚಿಸಿದರೂ ಸೂಕ್ತ ಪ್ರತಿಕ್ರಿಯೆ ನೀಡಿರಲಿಲ್ಲ. ಅಂತಿಮವಾಗಿ 2019ರಲ್ಲಿ ಮತ್ತೊಂದು ಬಾರಿ ಬಾಕಿ ಮೊತ್ತ ಪಾವತಿಸುವಂತೆ ಸೂಚಿಸಲಾಗಿತ್ತು. ಬಳಿಕ ಒಪ್ಪಂದ ರದ್ದು ಮಾಡುತ್ತಿರುವುದಾಗಿ ತಿಳಿಸಿದ್ದರು. ದೂರುದಾರರು ಪಾವತಿ ಮಾಡಿದ್ದ ಮೊತ್ತದಲ್ಲಿ ರದ್ದತಿ ಶುಲ್ಕ (ಕ್ಯಾನ್ಸಲೇಷನ್) ಹಾಗೂ ತೆರಿಗೆಯನ್ನು ಸೇರಿ ₹17,98,077 ಅನ್ನು ಕಡಿತಗೊಳಿಸಿ, ಬಾಕಿ ₹13,03,930 ಅನ್ನು ಚೆಕ್ ಮೂಲಕ ಹಿಂದಿರುಗಿಸಲಾಗಿದೆ. ದೂರುದಾರರು ಸಕಾಲದಲ್ಲಿ ಸ್ಪಂದಿಸದೆ ಇದ್ದ ಕಾರಣಕ್ಕಾಗಿ ಫ್ಲ್ಯಾಟನ್ನು ಬೇರೆಯವರಿಗೆ ಮಾರಾಟ ಮಾಡಲಾಗಿದೆ ಎಂದು ಪ್ರಾಜೆಕ್ಟ್ ವಿವರಣೆ ನೀಡಿದೆ.
ಗ್ರಾಹಕ ನ್ಯಾಯಾಲಯ ಈಗ ಹೇಳಿದ್ದೇನು?
- ರಾಘವೇಂದ್ರ ಅವರಿಗೆ ಮಂಜೂರಾಗಿದ್ದ ಫ್ಲ್ಯಾಟನ್ನು 2021ರಲ್ಲಿ ಬೇರೊಬ್ಬರಿಗೆ 1,04,70,000 ರೂ.ಗೆ ಮಾರಾಟ ಮಾಡಿದ್ದರಿಂದ ಡಿಕೆಶಿ ಕುಟುಂಬಕ್ಕೆ ನಷ್ಟವುಂಟಾಗಿಲ್ಲ. ಹೀಗಾಗಿ 17,77,422 ರೂ. ಕಡಿತಗೊಳಿಸಿರುವುದು ಅಕ್ರಮ.
- ಬಾಕಿ ಮೊತ್ತವನ್ನು ಒಪ್ಪಂದದ ದಿನವಾದ 10.04.2017ರಿಂದ ಅನ್ವಯವಾಗುವಂತೆ ಶೇ.10ರಷ್ಟು ಬಡ್ಡಿಯೊಂದಿಗೆ ರಾಘವೇಂದ್ರ ಅವರಿಗೆ ಹಿಂದಿರುಗಿಸಬೇಕು.
- ರಾಘವೇಂದ್ರ ಅವರು ನ್ಯಾಯಾಂಗ ಹೋರಾಟ ನಡೆಸಿದ್ದರ ಪರಿಹಾರವಾಗಿ ₹10 ಸಾವಿರ ಪಾವತಿ ಮಾಡಬೇಕು.
- ಆದೇಶವನ್ನು ಮುಂದಿನ 60 ದಿನಗಳಲ್ಲಿ ಪಾಲಿಸಬೇಕು. ವಿಫಲವಾದಲ್ಲಿ ₹17,77,422 ಕ್ಕೆ ವಾರ್ಷಿಕ ಶೇ.12ರಷ್ಟು ಬಡ್ಡಿ ಸೇರಿಸಿ ಪಾವತಿಸಬೇಕು.