ಬೆಂಗಳೂರು: ಗೊತ್ತಾದ ಆದಾಯ ಮೂಲಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ (Misappropriate asset Case) ಮಾಡಿದ ಆರೋಪದಲ್ಲಿ ಸಿಬಿಐ ತನಿಖೆ (CBI Enquiry) ಎದುರಿಸಬೇಕಾಗಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರು ಸಾಕಷ್ಟು ಆಸ್ತಿ ಮಾಹಿತಿಗಳನ್ನು ಮುಚ್ಚಿಟ್ಟಿದ್ದರೇ ಎಂಬ ಸಂಶಯ ಎದುರಾಗಿದೆ.
2013-18ರ ನಡುವೆ ಅವರು ಸಂಪಾದಿಸಿದ ಆಸ್ತಿಯಲ್ಲಿ 75 ಕೋಟಿ ರೂ. ಅಕ್ರಮ ಸಂಪಾದನೆ ಎನ್ನುವುದು ಅವರ ಮೇಲೆ 2020ರಲ್ಲಿ ದಾಖಲಾದ ಎಫ್‌ಐಆರ್‌ನ ಮೂಲ ಅಂಶ. ಆದರೆ, ಬಳಿಕ ಅಕ್ರಮ ಆಸ್ತಿಯ ತನಿಖೆಗೆ ಇಳಿದ ಅಧಿಕಾರಿಗಳಿಗೆ ಇನ್ನೂ ಹಲವು ಮಾಹಿತಿಗಳು ಸಿಕ್ಕಿವೆ. ಸಿಬಿಐ ಕಳೆದ ಎರಡುವರೆ ವರ್ಷಗಳಿಂದ ಡಿ.ಕೆ.ಶಿವಕುಮಾರ್ ಅವರ ಆಸ್ತಿಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿದೆ.
ಡಿಕೆ ಶಿವಕುಮಾರ್ ಮತ್ತು ಕುಟುಂಬದ ವಿರುದ್ಧ ನಡೆಸಿದ ತನಿಖೆಯಲ್ಲಿ ಏನೇನು ಮಾಹಿತಿ ಸಿಕ್ಕಿದೆ, ಯಾವೆಲ್ಲ ಆಸ್ತಿಗಳನ್ನು ಮರೆಮಾಚಲಾಗಿದೆ. ಹೆಂಡತಿ ಹೆಸರಲ್ಲಿ ಎಷ್ಟು ಮಕ್ಕಳ ಹೆಸರಲ್ಲಿ ಮಾಡಿದ ಆಸ್ತಿ ಎಷ್ಟು? ಎಂಬ ವಿಚಾರಗಳನ್ನು ಹೈಕೋರ್ಟ್ ವಿಚಾರಣೆಯ ವೇಳೆ ಸಿಬಿಐ ವಕೀಲರು ತಿಳಿಸಿದ್ದರು. ಇದರ ಆಧಾರದಲ್ಲೇ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿ ಸಿಬಿಐ ತನಿಖೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಇದನ್ನು ಡಿ.ಕೆ.ಶಿವಕುಮಾರ್ ಅವರ ಅರ್ಜಿಯನ್ನು ರದ್ದುಗೊಳಿಸಿದ ತೀರ್ಪಿನಲ್ಲಿ ಉಲ್ಲೇಖ ಮಾಡಲಾಗಿದೆ.
ಡಿ.ಕೆ. ಶಿವಕುಮಾರ್ ಮೇಲಿರುವ ಆರೋಪ, ಹೆಚ್ಚುವರಿ ಆಸ್ತಿಗಳ ಮಾಹಿತಿ ಇಲ್ಲಿದೆ
1.2013ರಿಂದ 2018ರ ನಡುವೆ ಡಿ.ಕೆ. ಶಿವಕುಮಾರ್ ಅವರು ಗೊತ್ತಾದ ಆದಾಯ ಮೂಲಕ್ಕಿಂತ 75 ಕೋಟಿ ರೂ. ಹೆಚ್ಚುವರಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ.
2. ಕಳೆದ ಎರಡೂವರೆ ವರ್ಷಗಳಿಂದ ಡಿ.ಕೆ.ಶಿವಕುಮಾರ್ ಅವರ ಆಸ್ತಿಯ ಬಗ್ಗೆ ತನಿಖೆ ನಡೆಸಿದ ಸಿಬಿಐ 84 ಸಾಕ್ಷ್ಯಗಳನ್ನು ವಿಚಾರಣೆ ಮಾಡಿದೆ. ಈ ಸಂದರ್ಭದಲ್ಲಿ 70 ಸ್ಥಿರಾಸ್ತಿ, 30 ಚರಾಸ್ತಿಗಳನ್ನು ಪತ್ತೆ ಮಾಡಲಾಗಿದೆ.
3. ಹಿಂದೆ ಉಲ್ಲೇಖ ಮಾಡಿದ್ದಕ್ಕೆ ಹೆಚ್ಚುವರಿಯಾಗಿ 45 ಆಸ್ತಿಗಳು ಪತ್ತೆಯಾಗಿವೆ. ಜೊತೆಗೆ 125 ಆಸ್ತಿಗಳ ವಿಚಾರದಲ್ಲಿ ಕೆಲವೊಂದು ವಿವರ ಕಲೆಹಾಕಬೇಕಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಡಿಕೆಶಿ ವಿರುದ್ಧ ಸಿಬಿಐ ಮಾಡಿದ ಗಂಭೀರ ಆರೋಪಗಳು
- ಡಿಕೆ ಶಿವಕುಮಾರ್ ಅವರು ಸಾಕಷ್ಟು ಆಸ್ತಿಯನ್ನು ಮರೆಮಾಚಿದ್ದಾರೆ. ಇವುಗಳ ವಿವರ ಅವರ ಚುನಾವಣಾ ಪ್ರಮಾಣ ಪತ್ರದಲ್ಲೂ ಇಲ್ಲ, ಆದಾಯ ತೆರಿಗೆ ಪಾವತಿಯಲ್ಲೂ ಇಲ್ಲ.
- ಡಿಕೆಶಿ ಅವರ ಗ್ಲೋಬಲ್ ಮಾಲ್‌ಗೆ ಸಂಬಂಧಿಸಿದ 7.80 ಕೋಟಿ ರೂ ಆಸ್ತಿಯನ್ನು ಬಹಿರಂಗಪಡಿಸಿಲ್ಲ.
- ಕನಕಪುರ ಟೌನ್ ನಲ್ಲಿರುವ ಕೆಲವೊಂದು ಆಸ್ತಿಯ ಮಾಹಿತಿಗಳನ್ನು ನೀಡಲಾಗಿಲ್ಲ. ಮುಚ್ಚಿಡಲಾಗಿದೆ.
- ಬಿನ್ನಿ ಸ್ಟೋನ್ ಗಾರ್ಡನ್, ಸದಾಶಿವ ನಗರದ ಮನೆ ನಿರ್ಮಾಣಕ್ಕೆ ಉಪಯೋಗಿಸಿದ ಹಣದ ಮಾಹಿತಿ ಕೊಟ್ಟಿಲ್ಲ
- ಮಾಲ್‌ಗಳಲ್ಲಿ ಡಿ.ಕೆ. ಶಿವಕುಮಾರ್ ಅವರು ಶೇ. 21ರಷ್ಟು ಪಾಲುದಾರಿಕೆ ಹೊಂದಿರುವ ಮಾಹಿತಿ ಇದೆ ಎಂದು ಸಿಬಿಐ ಹೇಳಿದೆ.
ಡಿ.ಕೆ.ಶಿವಕುಮಾರ್ ಮಾತ್ರವಲ್ಲ, ಕುಟುಂಬದವರ ಆಸ್ತಿಯೂ ಹೆಚ್ಚಳ
ಸಿಬಿಐ ತನಿಖೆಯಲ್ಲಿ ಬಹಿರಂಗಗೊಂಡಿರುವುದು ಕೇವಲ ಡಿ.ಕೆ ಶಿವಕುಮಾರ್ ಅವರ ಆಸ್ತಿ ಮಾತ್ರವಲ್ಲ, ಅವರು ತಮ್ಮ ಪತ್ನಿ ಉಷಾ ಮತ್ತು ಮಕ್ಕಳ ಹೆಸರಲ್ಲಿ ಮಾಡಿರುವ ಆಸ್ತಿ ಹಾಗೂ ಅದು ಹೆಚ್ಚಳವಾಗಿರುವ ಮಾಹಿತಿಯೂ ಬಯಲಾಗಿದೆ.
ಡಿಕೆ ಶಿವಕುಮಾರ್ ಅವರ ಕುಟುಂಬದವರ ಆಸ್ತಿ ಹೆಚ್ಚಳವನ್ನೂ ಅಕ್ರಮ ಆಸ್ತಿ ಎಂದು ಪರಿಗಣಿಸಲಾಗಿದೆ. ಡಿಕೆಶಿ ಅವರ ಪತ್ನಿ ಉಷಾ ಅವರ ಹೆಸರಲ್ಲಿ ಮೊದಲು 17.33 ಕೋಟಿ ಆಸ್ತಿ ಇತ್ತು, ಅದು 43.12 ಕೋಟಿಗೆ ಏರಿದೆ. ಮಕ್ಕಳ ಹೆಸರಿನಲ್ಲಿ ಈ ಮೊದಲು 61.75 ಕೋಟಿ ಇದ್ದದ್ದು 75 ಕೋಟಿ ರೂ. ಆಗಿದೆ. 75 ಕೋಟಿಯ ಜೊತೆಗೆ 3 ಕೋಟಿ ಮೌಲ್ಯದ ಚರಾಸ್ತಿಯೂ ಪತ್ತೆಯಾಗಿದೆ.
ಇದನ್ನೂ ಓದಿ: DK Shivakumar : ಡಿಕೆಶಿಗೆ ಬಿಗ್ ಶಾಕ್; ಅಕ್ರಮ ಅಸ್ತಿ ಪ್ರಕರಣದ ಸಿಬಿಐ ತನಿಖೆಗೆ ಹೈಕೋರ್ಟ್ ಅಸ್ತು
ಸಿಬಿಐ ತನಿಖೆಯಲ್ಲಿ ಕೇವಲ ಆಸ್ತಿ, ಅದರ ಮೌಲ್ಯ ಮಾತ್ರ ಬಹಿರಂಗ ಆಗಿರುವುದಲ್ಲ. ಡಿಕೆಶಿ ಮತ್ತು ಕುಟುಂಬಸ್ಥರು ದೊಡ್ಡ ಪ್ರಮಾಣದಲ್ಲಿ ಹಣದ ವಹಿವಾಟು ನಡೆಸಿರುವುದು ಕೂಡಾ ಬಹಿರಂಗಗೊಂಡಿದೆ. ಡಿಕೆಶಿ ಮತ್ತು ಕುಟುಂಬಸ್ಥರು ಬರೋಬರಿ 98 ಬ್ಯಾಂಕ್ ಅಕೌಂಟ್ ಗಳನ್ನು ಹೊಂದಿದ್ದಾರೆ. ಇದರಲ್ಲಿ ನಡೆದಿರುವ ವ್ಯವಹಾರಗಳ ಮಾಹಿತಿಯನ್ನು ಸಿಬಿಐ ಪಡೆದುಕೊಂಡಿದೆ. ಅದರ ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಅದು ಹೈಕೋರ್ಟ್‌ಗೆ ತಿಳಿಸಿದೆ.