Site icon Vistara News

Halashri Swameeji : ಹಾಲಶ್ರೀ ಸ್ವಾಮೀಜಿಗೆ 10 ದಿನಗಳ ಸಿಸಿಬಿ ಕಸ್ಟಡಿ; ದೊಡ್ಡ ದೊಡ್ಡವರ ಹೆಸರು ಹೊರಗೆ ಬರುತ್ತಾ?

Halashri swameeji at court

ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapura) ಟೀಮ್‌ ನಡೆಸಿದ 5 ಕೋಟಿ ರೂ. ವಂಚನೆ (Five crore rupees fraud) ಪ್ರಕರಣದಲ್ಲಿ ಮೂರನೇ ಆರೋಪಿಯಾಗಿದ್ದು ಸೆ. 18ರಂದು ಒಡಿಶಾದ ಕಟಕ್‌ನಲ್ಲಿ ಬಂಧಿತರಾದ ಹಿರೇಹಡಗಲಿಯ ಹಾಲ ಸ್ವಾಮಿ ಮಠ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿ (Halashri Swameeji) ಅವರನ್ನು ಬುಧವಾರ ಬೆಳಗ್ಗೆ ಬೆಂಗಳೂರಿನ 19ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಧೀಶರು ಅವರ ಪ್ರಾಥಮಿಕ ವಿಚಾರಣೆಯನ್ನು ನಡೆಸಿ 10 ದಿನ ಕಾಲ ಸಿಸಿಬಿ ಕಸ್ಟಡಿಗೆ (CCB Custody for 10 days) ಒಪ್ಪಿಸಿದ್ದಾರೆ. ಇದೇ ವೇಳೆ ಅವರ ಜಾಮೀನಿಗಾಗಿಯೂ ಪ್ರಯತ್ನ ನಡೆದಿದ್ದು, ಅದರ ವಿಚಾರಣೆಯನ್ನು ಸೆ. 29ಕ್ಕೆ ಮುಂದೂಡಲಾಗಿದೆ.

ಮಂಗಳವಾರ ಸಂಜೆ ಬೆಂಗಳೂರಿಗೆ ಕರೆತರಲಾಗಿದ್ದ ಸ್ವಾಮೀಜಿಯನ್ನು ಆಡುಗೋಡಿಯ ಟೆಕ್ನಿಕಲ್‌ ಸೆಲ್‌ನಲ್ಲಿ ಇರಿಸಲಾಗಿತ್ತು. ಅಲ್ಲಿ ಸಂಜೆ ಮತ್ತು ಬೆಳಗ್ಗೆ ಸ್ವಾಮೀಜಿಯ ವಿಚಾರಣೆ ನಡೆಸಲಾಗಿದೆ. ತನಿಖಾಧಿಕಾರಿ ರೀನಾ ಸುವರ್ಣ ಅವರು, ಪ್ರಕರಣದ ಹಿಂದೆ ಯಾರ್ಯಾರಿದ್ದಾರೆ? ಚೈತ್ರ ಕುಂದಾಪುರ ಇಂದಿರಾ ಕ್ಯಾಂಟೀನ್ ಬಿಲ್ ಪ್ರಸ್ತಾಪ ಮಾಡಿದ್ದೇಕೆ? ಹಾಲಶ್ರೀ ಬಂಧನವಾದ್ರೆ ಮತ್ತಷ್ಟು ಸ್ಪೋಟಕ ಸತ್ಯ ಹೊರ ಬರುತ್ತೆ ಅಂತ ಹೇಳಿದ್ದಾದ್ರೂ ಯಾಕೆ? ಜೊತೆಗೆ 50 ಲಕ್ಷ ಹಣ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಮರಳಿಸಿದ್ದೀರಿ. ಉಳಿದ ಹಣ ಏನ್ ಮಾಡಿದ್ದೀರಿ ಎಂಬಿತ್ಯಾದಿ ಪ್ರಾಥಮಿಕ ಪ್ರಶ್ನೆಗಳನ್ನು ಕೇಳಿದ್ದಾರೆ.

ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ಬುಧವಾರ ಕೋರ್ಟ್‌ ಕಲಾಪ ಆರಂಭವಾಗುತ್ತಿದ್ದಂತೆಯೇ ನ್ಯಾಯಾಧೀಶರು ಹಾಲಶ್ರೀ ಸ್ವಾಮೀಜಿಯನ್ನು ಕರೆಸಿದರು. ಕಟಕಟೆಯಲ್ಲಿ ನಿಲ್ಲಿಸಿ ನಿಮ್ಮನ್ನು ಯಾವಾಗ ಎಲ್ಲಿ ಅರೆಸ್ಟ್‌ ಮಾಡಿದರು ಎಂಬಿತ್ಯಾದಿ ಮಾಹಿತಿ ಕೇಳಿದರು. ಅವರು ಹೇಳಿದ ಮಾಹಿತಿ ಮತ್ತು ಸಿಸಿಬಿ ಪೊಲೀಸರ ಮಾಹಿತಿಯನ್ನು ತಾಳೆ ಹಾಕಿದರು.

HalaShri and Cuttack Railway station

ಈ ನಡುವೆ, ಹಾಲಶ್ರೀ ಸ್ವಾಮೀಜಿ ಪರ ವಕೀಲರಿಂದ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಅವರು ಮಧ್ಯಂತರ ಜಾಮೀನು ನೀಡುವಂತೆ ಮನವಿ ಮಾಡಿದರು. ಆಗ ಸರ್ಕಾರದ ಪರ ಪಬ್ಲಿಕ್‌ ಪ್ರಾಸಿಕ್ಯೂಟರ್ ವಕೀಲರ ಆಕ್ಷೇಪ ವ್ಯಕ್ತಪಡಿಸಿದರು. ತನಿಖೆ ನಡೆಯುವ ಮಧ್ಯೆ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.

ಇದನ್ನು ಪರಿಗಣಿಸಿದ ಕೋರ್ಟ್‌ ಹಾಲಶ್ರೀ ಸ್ವಾಮೀಜಿಯನ್ನು ಹತ್ತು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ಒಪ್ಪಿಸಿತು. ಇನ್ನು ಸೆ.29ರವರೆಗೆ ಅವರು ಅವರು ಕಸ್ಟಡಿಯಲ್ಲಿ ಇರಬೇಕಾಗುತ್ತದೆ.

ಮುಂದೇನು?

ಕೋರ್ಟ್‌ನಿಂದ ಹಾಲಶ್ರೀ ಸ್ವಾಮೀಜಿಯನ್ನು ಸ್ಥಳ ಮಹಜರಿಗೆ ಕರೆದೊಯ್ಯುವ ಸಾಧ್ಯತೆ ಇದೆ. ಬೆಂಗಳೂರಿನ ಚಂದ್ರಾ ಲೇಔಟ್ನಲ್ಲಿರೋ ವಿಭೂತಿಪುರ ವೀರ ಸಿಂಹಾಸನ ಮಠಕ್ಕೆ ಸೇರಿದ ಮನೆಯಲ್ಲಿ‌ ಸ್ಥಳ‌ ಮಹಜರು ನಡೆಯಬೇಕಾಗಿದೆ. ಇಲ್ಲಿ ಸ್ವಾಮೀಜಿ ಗೋವಿಂದ ಪೂಜಾರಿ ಕೈಯಿಂದ ಹಣ ಪಡೆದಿದ್ದರು.

ಅದಾದ ಬಳಿಕ ಮೈಸೂರಿನಲ್ಲಿ ಹೊಸ ಸಿಮ್ ಖರೀದಿ‌ ಮಾಡಿದ್ದು, ಕಾರು ಬಚ್ಚಿಟ್ಟಿದ್ದು ಸೇರಿದಂತೆ ಹಲವು ಚಟುವಟಿಕೆ ನಡೆಸಿದ್ದ ಮಹಜರು ನಡೆಯಲಿದೆ. ಅದರ ನಡುವೆ ವಿಚಾರಣೆ ಕೂಡಾ ನಡೆಯಬೇಕಾಗಿದ್ದು, ಚೈತ್ರಾ ಕುಂದಾಪುರ ಹೇಳಿದಂತೆ ದೊಡ್ಡ ದೊಡ್ಡವರ ಹೆಸರು ಹೊರಬೀಳುತ್ತದಾ ಎಂಬ ಕುತೂಹಲವಿದೆ.

Exit mobile version