ಬೆಂಗಳೂರು: ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ (Death sentence) ಗುರಿಯಾಗಿ ಸುಪ್ರೀಂ ಕೋರ್ಟ್ ಆದೇಶದ ಬಳಿಕ ಜೀವಾವಧಿ ಶಿಕ್ಷಾ ಬಂಧಿಯಾಗಿರುವ ಉಮೇಶ್ ರೆಡ್ಡಿ (Umesh Reddy) ಅಲಿಯಾಸ್ ಬಿಎ ಉಮೇಶ್ ತಾಯಿ ಸೆಂಟಿಮೆಂಟ್ (Mother Sentiment) ಬಳಸಿ ಪೆರೋಲ್ ಪಡೆಯಲು ಪ್ರಯತ್ನಿಸಿದ್ದಾನೆ (Plan to get Parole release). ಆದರೆ, ತಾಯಿಯ ಜೊತೆ ಕಳೆಯಲು, ಅವರ ಯೋಗ ಕ್ಷೇಮ ವಿಚಾರಿಸಲು 30 ದಿನ ಪೆರೋಲ್ ಬೇಕು ಎಂಬ ಆತನ ಬೇಡಿಕೆಯನ್ನು ಕರ್ನಾಟಕ ಹೈಕೋರ್ಟ್ (Karnataka High Court) ತಳ್ಳಿ ಹಾಕಿದೆ.
ಎಲ್ಲರಿಗೂ ತಿಳಿದಿರುವಂತೆ ಉಮೇಶ್ ರೆಡ್ಡಿ ಒಬ್ಬ ರೇಪಿಸ್ಟ್. ಅತ್ಯಂತ ವಿಕೃತ ಕಾಮಿ. ಆತನ ಮೇಲೆ ಹತ್ತಾರು ಪ್ರಕರಣಗಳಿವೆ. ಮಹಿಳೆಯರನ್ನು ಅತ್ಯಂತ ಹೀನಾಯವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡುತ್ತಿದ್ದ ಆತ, ಮಹಿಳೆಯರ ಒಳ ಉಡುಪುಗಳನ್ನು ಕದಿಯುವಷ್ಟು ವಿಕೃತನಾಗಿದ್ದ.
ಹಲವು ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ ಉಮೇಶ್ ರೆಡ್ಡಿಯನ್ನು 1998ರ ಮಾರ್ಚ್ 2ರಂದು ಐಪಿಸಿ ಸೆಕ್ಷನ್‌ಗಳಾದ 302, 376 ಮತ್ತು 392 ಅಡಿ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಮರಡಿ ಸುಬ್ಬಯ್ಯ ಅವರ ಪತ್ನಿ ಜಯಶ್ರೀ ಅವರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪ ಉಮೇಶ್ ರೆಡ್ಡಿಯ ಮೇಲಿತ್ತು. 26-10-2006ರಂದು ರೆಡ್ಡಿಯನ್ನು ಅಪರಾಧಿ ಎಂದು ಘೋಷಿಸಿ, ಆತನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. 2009ರ ಫೆ. 18ರಂದು ಹೈಕೋರ್ಟ್‌ನ ತ್ರಿಸದಸ್ಯ ಪೀಠವು ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಕಾಯಂಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ 2011ರ ಫೆ. 1ರಂದು ವಜಾ ಮಾಡಿತ್ತು. ಅಂದೇ ಆತ ರಾಜ್ಯಪಾಲರಿಗೆ ಬಳಿಕ ರಾಷ್ಟ್ರಪತಿಗಳಿಗೆ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದ. ಅದು ತಿರಸ್ಕೃತಗೊಂಡಿತ್ತು.
2022ರ ನವೆಂಬರ್ 4ರಂದು ದೇಶಾದ್ಯಂತ ಇದ್ದ ಗಲ್ಲು ಶಿಕ್ಷೆ ಅಪರಾಧಿಗಳ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಎಲ್ಲರ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿತ್ತು. 30 ವರ್ಷ ಶಿಕ್ಷೆ ಪೂರ್ಣಗೊಳಿಸಿದ ಬಳಿಕ ಅರ್ಜಿದಾರರು ಕ್ಷಮಾಪಣೆ ಕೋರಿದ್ದರೆ ಅದನ್ನು ಪರಿಗಣಿಸಬಹುದು ಎಂದು ಹೇಳಿತ್ತು. ಅದರ ಪ್ರಕಾರ ಉಮೇಶ್ ರೆಡ್ಡಿ 26 ವರ್ಷ ಶಿಕ್ಷೆ ಪೂರೈಸಿದ್ದಾನೆ.
ಇದನ್ನೂ ಓದಿ: Umesh Reddy | ವಿಕೃತ ಕಾಮಿ ಉಮೇಶ್ ರೆಡ್ಡಿ ಗಲ್ಲು ಶಿಕ್ಷೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್
Umesh Reddy : ಈಗ ಉಮೇಶ್ ರೆಡ್ಡಿಯ ಬೇಡಿಕೆ ಏನು?
ಉಮೇಶ್ ರೆಡ್ಡಿಗೆ ಈಗ 48 ವರ್ಷ. ಅವನ ತಾಯಿ ಅನಾರೋಗ್ಯದಲ್ಲಿದ್ದಾರೆ. ತಾಯಿ ಅಂತಿಮ ದಿನಗಳನ್ನು ಎಣಿಸುತ್ತಿದ್ದು ಅವರ ಜೊತೆ ಕಳೆಯಲು 30 ದಿನಗಳ ಪೆರೋಲ್ ರಜೆ ನೀಡಬೇಕು ಎಂದು ಉಮೇಶ್ ರೆಡ್ಡಿ ಕೋರಿದ್ದ. ಆದರೆ, ಅರ್ಜಿದಾರ 30 ವರ್ಷ ಶಿಕ್ಷೆ ಪೂರ್ಣಗೊಳಿಸಿಲ್ಲ ಎಂಬ ಸುಪ್ರೀಂ ಕೋರ್ಟ್ ಆದೇಶ ಉಲ್ಲೇಖಿಸಿ ಉಮೇಶ್ ರೆಡ್ಡಿಯ ಮನವಿಯನ್ನು ಜೈಲಧಿಕಾರಿಗಳು ತಿರಸ್ಕರಿಸಿದ್ದರು. ಅದನ್ನು ಪ್ರಶ್ನಿಸಿ ಆತ ಹೈಕೋರ್ಟ್ ಮೆಟ್ಟಿಲೇರಿದ್ದ. ಆತನ ಮನವಿಯನ್ನು ಈಗ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.
ಪೆರೋಲ್ ಮನವಿಗೆ ಪೊಲೀಸ್ ಅಧಿಕಾರಿಗಳು ಏನು ಹೇಳಿದ್ದರು?
ಉಮೇಶ್ ರೆಡ್ಡಿಯನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಿದರೆ ಹಿಂದಿನ ದ್ವೇಷವು ಆತನ ಬದುಕಿಗೆ ಎರವಾಗಲಿದೆ. ದ್ವೇಷ ಮರುಕಳಿಸಲಿದೆ.ಎಂದು ಚಿತ್ರದುರ್ಗದ ಐಮಂಗಲ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಅವರು ಪರಪ್ಪನ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದರು. ಇದನ್ನು ನ್ಯಾಯಾಲಯ ಪರಿಗಣಿಸಿದೆ.
ಪೆರೋಲ್ ನಿರಾಕರಿಸಲು ಕೋರ್ಟ್ ಕೊಟ್ಟ ಕಾರಣಗಳೇನು?
- ಉಮೇಶ್ ರೆಡ್ಡಿ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ನೋಡಿಕೊಳ್ಳಬೇಕಿದೆ ಎಂದು ವಾದಿಸಲಾಗಿದೆ. ಆದರೆ, ವರದಿಯಲ್ಲಿ ಬೇರೆಯದೇ ಅಂಶವಿದೆ. ಉಮೇಶ್ ರೆಡ್ಡಿಗೆ ಇಬ್ಬರು ಸಹೋದರರಿದ್ದು, ಅವರು ತಾಯಿಯನ್ನು ನೋಡಿಕೊಳ್ಳುವುದರ ಜೊತೆಗೆ ಶಿಥಿಲಗೊಂಡಿರುವ ಮನೆಯನ್ನು ಸರಿಪಡಿಸಲಿದ್ದಾರೆ. ಅರ್ಜಿದಾರರು ಪೆರೋಲ್ ಕೋರಲು ನೀಡಿರುವ ಮೇಲಿನ ಎರಡೂ ಕಾರಣಗಳು ಸಮರ್ಥನೀಯವಲ್ಲ.
- ಪ್ರತಿಯೊಂದು ಪ್ರಕರಣದಲ್ಲಿಯೂ ಮನವಿ ಮಾಡಿದಾಕ್ಷಣ ಪೆರೋಲ್ ನೀಡಲಾಗದು. ಪೆರೋಲ್ ನೀಡುವಾಗ ನಾಣ್ಯದ ಎರಡೂ ಮುಖಗಳನ್ನು ಪರಿಶೀಲಿಸಬೇಕಿದೆ. ಶಿಕ್ಷೆಯ ಸುಧಾರಣಾ ಸಿದ್ಧಾಂತದಲ್ಲಿ ಇರುವ ಪೆರೋಲ್ ಮಂಜೂರು ಮಾಡುವ ಅವಶ್ಯಕತೆಯನ್ನು ಗಮನಿಸುವುದರ ಜೊತೆಗೆ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯವನ್ನು ಪರಿಗಣಿಸಬೇಕಾಗಿದೆ.
- ವಿಶೇಷವಾಗಿ ಅಪರಾಧಿಗಳು ಜೀವಾವಧಿ ಶಿಕ್ಷೆಗೆ ಗುರಿಯಾಗಿರುವಾಗ ನಾಣ್ಯದ ಮತ್ತೊಂದು ಮುಖವನ್ನು ನಗಣ್ಯವಾಗಿ ಕಾಣಲಾಗದು. ಉಮೇಶ್ ರೆಡ್ಡಿಯನ್ನು ಇತರೆ ಅಪರಾಧಿಗಳಂತೆ ನೋಡಿ, ಪೆರೋಲ್ ಮೇಲೆ ಬಿಡುಗಡೆ ಮಾಡಲಾಗದು.
- 30 ವರ್ಷ ಶಿಕ್ಷೆ ಅನುಭವಿಸಿದರೆ ಪೆರೋಲ್ ನೀಡಬಹುದು ಎಂಬ ನಿಯಮವು ಅಸ್ಫಾಖ್ ಪ್ರಕರಣದಲ್ಲಿನಂತೆ ಎಲ್ಲದಕ್ಕೂ ಅನ್ವಯಿಸದು. ಹೀಗಾಗಿ, ಪೆರೋಲ್ ಕೋರಿರುವ ಉಮೇಶ್ ರೆಡ್ಡಿ ಪುರಸ್ಕರಿಸಲಾಗದು.
ಉಮೇಶ್ ರೆಡ್ಡಿ ಪರ ವಕೀಲರ ವಾದವೇನಿತ್ತು?
- ಅರ್ಜಿದಾರರ ಉಮೇಶ್ ರೆಡ್ಡಿಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹಸ್ಮತ್ ಪಾಷಾ ಪೆರೋಲ್ ನೀಡಬಹುದು ಎಂದು ವಾದಿಸಿ ಹಲವು ಕಾರಣ ನೀಡಿದ್ದರು.
- ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿದ್ದು, ಅಪರಾಧಿಯು ಇತರೆ ಅಪರಾಧಿಗಳಂತೆ ಆಗಿದ್ದಾನೆ.
- ಸುಪ್ರೀಂ ಕೋರ್ಟ್ ತೀರ್ಪನ್ನು ತಪ್ಪಾಗಿ ಅರ್ಥೈಸಿ, ವ್ಯಾಖ್ಯಾನಿಸಲಾಗಿದೆ. 30 ವರ್ಷ ಪೂರ್ಣಗೊಳಿಸುವವರೆಗೆ ಅಪರಾಧಿಯು ಕ್ಷಮಾದಾನ ಕೋರಲಾಗದು ಎಂದು ಹೇಳಲಾಗಿದೆ. ಇದು ಉಮೇಶ್ ರೆಡ್ಡಿ ಪೆರೋಲ್ ಕೋರಿರುವುದಕ್ಕೆ ಅನ್ವಯಿಸುವುದಿಲ್ಲ.
- ಆತನ ತಾಯಿ ಅನಾರೋಗ್ಯದಿಂದ ಬಳಲುತ್ತಿರುವುದಕ್ಕಾಗಿ 30 ದಿನ ಪೆರೋಲ್ ಮೇಲೆ ಬಿಡುಗಡೆ ಮಾಡಬೇಕು.
ಹೆಚ್ಚುವರಿ ಅಡ್ವೊಕೇಟ್ ಜನರಲ್ ಹೇಳಿದ್ದೇನು?
ಸರ್ಕಾರದ ಪರವಾಗಿ ವಾದಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಸಿ ಎಸ್ ಪ್ರದೀಪ್ ಅವರು ಪೆರೋಲ್ ಯಾಕೆ ಕೊಡಬಾರದು ಎಂದು ಹಲವು ಅಂಶಗಳನ್ನು ಮುಂದಿಟ್ಟಿದ್ದರು.
- ಪ್ರತಿಯೊಬ್ಬ ಅಪರಾಧಿಯನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗದು.
- ಅಪರಾಧಿಯೊಬ್ಬನನ್ನು ಪೆರೋಲ್ ಮೇಲೆ ಬಿಡುಗಡೆ ಮಾಡುವಾಗ ಹಲವು ವಿಚಾರಗಳನ್ನು ಪರಿಗಣಿಸಬೇಕಾಗುತ್ತದೆ.
- ಅರ್ಜಿದಾರ ಕ್ಷಮಾಪಣೆಗೆ ಅರ್ಹವಾಗಿಲ್ಲದಾಗಿರುವಾಗ ಅವರನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗದು.
- ರೆಡ್ಡಿ ಬಿಡುಗಡೆ ಮಾಡುವುದರಿಂದ ಆತನ ಪ್ರಾಣಕ್ಕೆ ಅಪಾಯವಿದ್ದು, ಪೆರೋಲ್ ಪಡೆಯಲು ಆತ ಅರ್ಹನಲ್ಲ.
- ರೆಡ್ಡಿಯು ಭಯಾನಕ ಕ್ರಿಮಿನಲ್ ಆಗಿದ್ದಾನೆ. ಪೊಲೀಸ್ ಕಾನ್‌ಸ್ಟೆಬಲ್ ಆಗಿದ್ದ ರೆಡ್ಡಿ ಸರಣಿ ಅತ್ಯಾಚಾರ ಮತ್ತು ಕೊಲೆಗಳನ್ನು ಮಾಡಿದ್ದಾನೆ. ಆತ ಸೀರಿಯಲ್ ಕಿಲ್ಲರ್ ಎಂದೇ ಕುಖ್ಯಾತಿ ಪಡೆದಿದ್ದಾನೆ. ಹೀಗಾಗಿ, ಆತನಿಗೆ ಪೆರೋಲ್ ನೀಡಬಾರದು.