Site icon Vistara News

DK Shivakumar : ಡಿಕೆಶಿಗೆ ಬಿಗ್‌ ಶಾಕ್‌; ಅಕ್ರಮ ಅಸ್ತಿ ಪ್ರಕರಣದ ಸಿಬಿಐ ತನಿಖೆಗೆ ಹೈಕೋರ್ಟ್‌ ಅಸ್ತು

DK Shivakumar CBI High court

ಬೆಂಗಳೂರು: ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸಿಬಿಐ ತನಿಖೆಗೆ ಹೈಕೋರ್ಟ್‌ ಹಸಿರುನಿಶಾನೆ (Karnataka High court) ತೋರಿಸಿದೆ. ಇದರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಅತಿ ದೊಡ್ಡ ಸಂಕಷ್ಟ ಎದುರಾದಂತಾಗಿದೆ.

2013ರಿಂದ 2018ರ ನಡುವಿನ ಅವಧಿಯಲ್ಲಿ ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆ ಎಂಬ ಮಾಹಿತಿ ನೆಲೆಯಲ್ಲಿ 2020ರಲ್ಲಿ ಸಿಬಿಐ ತನಿಖೆಗೆ (CBI Enquiry) ಮುಂದಾಗಿತ್ತು. ಆದರೆ, ಡಿ.ಕೆ. ಶಿವಕುಮಾರ್‌ ಅವರು ಹೈಕೋರ್ಟ್‌ಗೆ ಮೊರೆ ಹೋದ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಮಧ್ಯಂತರ ತಡೆಯಾಜ್ಞೆಗಳು ಜಾರಿಯಲ್ಲಿದ್ದವು. ಇದೀಗ ಹೈಕೋರ್ಟ್‌ ತಡೆಯಾಜ್ಞೆಗಳೆಲ್ಲವನ್ನೂ ತೆರವುಗೊಳಿಸಿ ಅಂತಿಮ ತೀರ್ಪು ಪ್ರಕಟಿಸಿದ್ದು, ಸಿಬಿಐ ತನಿಖೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ. ಮಾತ್ರವಲ್ಲ, ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ಸೂಚಿಸಿದೆ.

ಸಿಬಿಐ ಸಲ್ಲಿಸಿದ ಎಫ್‌ಐಆರ್‌ ರದ್ದು ಮಾಡಬೇಕು ಎಂದು ಕೋರಿ ಡಿ.ಕೆ.ಶಿವಕುಮಾರ್‌ ಅವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ನ್ಯಾ. ಕೆ.ನಟರಾಜನ್ ಅವರ ನೇತೃತ್ವದ ಪೀಠ ರದ್ದುಪಡಿಸಿದೆ. ಮತ್ತು ಮೂರು ತಿಂಗಳ ಒಳಗೆ ತನಿಖೆ ಪೂರ್ಣಗೊಳಿಸಲು ಆದೇಶ ನೀಡಿರುವುದು ಡಿ.ಕೆ. ಶಿವಕುಮಾರ್‌ ಅವರಿಗೆ ದೊಡ್ಡ ಹಿನ್ನಡೆ ಆಗಲಿದೆ.

ಡಿ.ಕೆ. ಶಿವಕುಮಾರ್‌ ಅವರು ತಮ್ಮ ಗೊತ್ತಾದ ಆದಾಯ ಮೂಲಕ್ಕಿಂತ 75 ಕೋಟಿ ರೂ. ರೂ. ಅಕ್ರಮ ಆಸ್ತಿ ಗಳಿಸಿದ್ದಾರೆ ಎನ್ನುವುದು ಮೂಲ ಆರೋಪವಾಗಿತ್ತು. ಮುಂದೆ ಅದು 200 ಕೋಟಿ ರೂ.ಗಳಿಗೆ ಏರಿತ್ತು. ಸಿಬಿಐ ಎಫ್‌ಐಆರ್‌ ದಾಖಲಿಸಿ ತನಿಖೆಗೆ ಮುಂದಾದ ಹೊತ್ತಿನಲ್ಲಿ ಡಿ.ಕೆ. ಶಿವಕುಮಾರ್‌ ಅವರು ಹೈಕೋರ್ಟ್‌ ಮೊರೆ ಹೊಕ್ಕಿದ್ದರು.

ಹೈಕೋರ್ಟ್‌ನಲ್ಲಿ ಹಲವು ಬಾರಿ ವಿಚಾರಣೆ ನಡೆದಿತ್ತು. ಸಿಬಿಐ ತನಿಖೆಗೆ ಹೈಕೋರ್ಟ್‌ ಹಲವು ಹಂತಗಳಲ್ಲಿ ಮಧ್ಯಂತರ ತಡೆಯಾಜ್ಞೆಯನ್ನು ನೀಡಿತ್ತು. ತನಿಖೆ ಮುಂದುವರಿಸಲು ಅಸಹಾಯಕವಾದ ಸ್ಥಿತಿಯಲ್ಲಿದ್ದ ಸಿಬಿಐ ಇತ್ತೀಚೆಗೆ ಸುಪ್ರೀಂಕೋರ್ಟ್‌ ಮೊರೆ ಹೊಕ್ಕಿತ್ತು. ಹೈಕೋರ್ಟ್‌ ನೀಡಿದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿ ತನಿಖೆಗೆ ಅವಕಾಶ ನೀಡಬೇಕು ಎಂದು ಕೋರಿತ್ತು. ಇದರ ವಿಚಾರಣೆ ಎರಡು ದಿನಗಳ ಹಿಂದಷ್ಟೇ ನಡೆದಿದ್ದು, ಸುಪ್ರೀಂಕೋರ್ಟ್‌ ಡಿ.ಕೆ. ಶಿವಕುಮಾರ್‌ ಅವರಿಗೆ ನೋಟಿಸ್‌ ನೀಡಿ ವಿಚಾರಣೆಯನ್ನು ಮುಂದೂಡಿತ್ತು.

ಅದರ ನಡುವೆಯೇ ಡಿ.ಕೆ. ಶಿವಕುಮಾರ್‌ ಅವರು ಸಲ್ಲಿಸಿದ ಅರ್ಜಿಗಳ ಮುಂದುವರಿದ ವಿಚಾರಣೆ ಗುರುವಾರ ಹೈಕೋರ್ಟ್‌ನಲ್ಲಿ ನಡೆಯಿತು. ಈ ವೇಳೆ ತಡೆಯಾಜ್ಞೆಯನ್ನು ಹಿಂಪಡೆದು, ಅರ್ಜಿಯನ್ನು ರದ್ದುಪಡಿಸಿದ ಕೋರ್ಟ್‌ ತನಿಖೆಗೆ ಅಸ್ತು ಎಂದಿದೆ. ಸಿಬಿಐ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿಯೂ ಈ ಬೆಳವಣಿಗೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ.

ಡಿ.ಕೆ. ಶಿವಕುಮಾರ್‌ ಮುಂದೇನು ಮಾಡಬಹುದು?

ರಾಜ್ಯ ಹೈಕೋರ್ಟ್‌ ಸಿಬಿಐ ತನಿಖೆಗೆ ಅವಕಾಶ ಕೊಟ್ಟಿದ್ದನ್ನು ಪ್ರಶ್ನಿಸಿ ಡಿ.ಕೆ. ಶಿವಕುಮಾರ್‌ ಅವರು ಸುಪ್ರೀಂಕೋರ್ಟ್‌ಗೆ ಮೊರೆ ಹೋಗಬಹುದಾದ ಅವಕಾಶ ಇದೆ. ಆದರೆ, ಈಗಾಗಲೇ ಸಿಬಿಐಯೇ ಮೊದಲು ಸುಪ್ರೀಂಕೋರ್ಟ್‌ಗೆ ಹೋಗಿದ್ದರಿಂದ ಅಲ್ಲಿ ಯಾವ ರೀತಿಯ ಪರಿಣಾಮ ಬೀರಲಿದೆ ಎಂದು ಈಗಲೇ ಹೇಳುವುದು ಕಷ್ಟ.

ಏನಿದು ಅಕ್ರಮ ಆಸ್ತಿ ಪ್ರಕರಣ?

ಡಿ.ಕೆ ಶಿವಕುಮಾರ್ ಅವರು 2013ರಿಂದ 2018ರ ಅವಧಿಯಲ್ಲಿ ತಮ್ಮ ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ್ದಾರೆ ಎಂದು ಸಿಬಿಐ 2020ರ ಅಕ್ಟೋಬರ್ 3ರಂದು ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಅಡಿಯಲ್ಲಿ 13(2), 13(1)ಇ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು. ಸಿಬಿಐ ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.

ಈ ಪ್ರಕರಣವನ್ನು ರದ್ದು ಮಾಡಬೇಕು ಎಂದು ಕೋರಿ ಡಿಕೆ ಶಿವಕುಮಾರ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ತನಿಖೆಗೆ ಮಧ್ಯಂತರ ತಡೆ ತಡೆಯಾಜ್ಞೆ ನೀಡಿತ್ತು. ಅಷ್ಟೇ ಅಲ್ಲ ಆಗಾಗ ತಡೆಯಾಜ್ಞೆಯನ್ನು ವಿಸ್ತರಿಸುತ್ತಾ ಸಾಗಿತ್ತು. ಸಿಬಿಐ ಈ ಹಿಂದೆಯೇ ಒಮ್ಮೆ ಸುಪ್ರೀಂಕೋರ್ಟ್‌ ಮೊರೆ ಹೊಕ್ಕಿದ್ದರೂ ಆ ಹಂತದಲ್ಲಿ ಮಧ್ಯ ಪ್ರವೇಶ ಮಾಡಲು ಅದು ನಿರಾಕರಿಸಿತ್ತು. ಬಳಿಕ ಮತ್ತೆ ಸಿಬಿಐ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ ಸಿಬಿಐ ಹೈಕೋರ್ಟ್‌ನ ಮಧ್ಯಂತರ ತಡೆಗಳನ್ನು ನಿವಾರಿಸಬೇಕು ಎಂದು ಕೇಳಿತ್ತು. ಆಗ ಸುಪ್ರೀಂಕೋರ್ಟ್‌ ಡಿ.ಕೆ. ಶಿವಕುಮಾರ್‌ ಅವರಿಗೆ ನೋಟಿಸ್‌ ನೀಡಿತ್ತು. ಈಗ ರಾಜ್ಯ ಹೈಕೋರ್ಟ್‌ ಸಿಬಿಐ ತನಿಖೆಗೆ ಅಸ್ತು ಎಂದು ಹೇಳಿರುವುದರಿಂದ ಈಗ ಸುಪ್ರೀಂ ಕೋರ್ಟ್‌ ಮೆಟ್ಟಿಲು ಹತ್ತುವ ಸರದಿ ಡಿ.ಕೆ. ಶಿವಕುಮಾರ್‌ ಅವರದ್ದಾಗಿದೆ.

Exit mobile version