ಬೆಂಗಳೂರು: ಕೊಟ್ಟಿರುವ ಹಣ ಮರಳಿ ಕೇಳುವುದು (Recovery of Loan), ಒತ್ತಡ ಹಾಕುವುದು ಅಥವಾ ಬೇಗ ಮರಳಿಸಿ ಎಂದು ಬಲವಂತಪಡಿಸುವುದು ಆತ್ಮಹತ್ಯೆಗೆ ಪ್ರಚೋದನೆ (Incitement to Suicide) ನೀಡಿದಂತೆ ಆಗುವುದಿಲ್ಲ ಎಂಬ ಮಹತ್ವದ ತೀರ್ಪೊಂದನ್ನು ಕರ್ನಾಟಕ ಹೈಕೋರ್ಟ್ (Karnataka High court) ನೀಡಿದೆ. ಮಹಿಳೆಯೊಬ್ಬರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಈ ಆಧಾರದಲ್ಲಿ ಕೋರ್ಟ್ ರದ್ದುಪಡಿಸಿದೆ.
ಏನಿದು ಆತ್ಮಹತ್ಯೆ, ಪ್ರಚೋದನೆ ಪ್ರಕರಣ?
ಬನ್ನೇರುಘಟ್ಟ ನಿವಾಸಿಯಾಗಿರುವ ರಾಜು ಎಂಬವರು ಕೆಲವು ವರ್ಷಗಳ ಹಿಂದೆ ಮಂಗಳ ಗೌರಿ ಎಂಬವರಿಂದ ಸಾಲವಾಗಿ ಹಣ ಪಡೆದುಕೊಂಡಿದ್ದರು. ಕೆಲವು ಸಮಯದ ನಂತರ ಮಂಗಳ ಗೌರಿ ಅವರು ರಾಜು ಅವರಿಗೆ ನೀಡಿದ ಹಣವನ್ನು ವಾಪಸ್ ಕೇಳಲು ಆರಂಭ ಮಾಡಿದ್ದರು. ರಾಜು ಮದುವೆಯಾಗಿ ಒಂದು ಪುಟ್ಟ ಮಗುವಿತ್ತು. 2019ರ ಏಪ್ರಿಲ್ 25ರಂದು ರಾಜು ಅವರು ಪತ್ನಿ ಮತು ಮಗುವನ್ನು ಮೈಸೂರಿನ ಬಂಧುಗಳ ಮನೆಗೆ ಕಳುಹಿಸಿ ತಾನೊಬ್ಬನೇ ಮನೆಯಲ್ಲಿದ್ದಾಗ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಅಕ್ಕಪಕ್ಕದವರು ಯಾರೋ ನೋಡಿ ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಘಟನೆ ನಡೆದು ಹದಿನೈದು ದಿನಗಳ ಬಳಿಕ ಅಂದರೆ ಮೇ 10ರಂದು ಮೃತಪಟ್ಟಿದ್ದರು.
ಈ ನಡುವೆ ರಾಜು ಯಾಕಾಗಿ ಆತ್ಮಹತ್ಯೆ ಮಾಡಿಕೊಂಡರು ಎಂಬ ವಿಚಾರ ಬಂದಾಗ ಮಂಗಳ ಗೌರಿ ಅವರು ನೀಡಿದ ಸಾಲ ಮತ್ತು ಅವರು ಅದನ್ನು ಮರಳಿ ಕೇಳುತ್ತಿದ್ದ ವಿಚಾರ ಬೆಳಕಿಗೆ ಬಂತು. ಪೊಲೀಸರಿಗೂ ಸಕಾರಣವೇ ಸಿಕ್ಕಿತ್ತು. ಮಂಗಳಗೌರಿ ಅವರು ಹಣ ವಾಪಸ್ ಪಡೆಯಲು ಒತ್ತಡ ಹಾಕಿದ್ದೇ ಆತ್ಮಹತ್ಯೆಗೆ ಕಾರಣ ಎಂದು ಷರಾ ಬರೆದು ಆರೋಪಪಟ್ಟಿ ಸಲ್ಲಿಸಿದ್ದರು. ಮಂಗಳ ಗೌರಿಯ ಬಂಧನವೂ ಆಗಿ ಕೊನೆಗೆ ವಿಚಾರಣಾ ನ್ಯಾಯಾಲಯ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು 50000 ರೂ. ದಂಡವನ್ನು ವಿಧಿಸಿತ್ತು.
ಇದಾದ ಬಳಿಕ ಮಂಗಳ ಗೌರಿ ಅವರು ತಮ್ಮ ಶಿಕ್ಷೆಯನ್ನು ರದ್ದು ಮಾಡಬೇಕು ಎಂದು ಕೋರಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಅದರ ವಿಚಾರಣೆಯ ಸಂದರ್ಭದಲ್ಲಿ ಕೊಟ್ಟ ಸಾಲ ವಾಪಸ್ ಕೇಳುವುದು ಆತ್ಮಹತ್ಯೆಗೆ ಪ್ರಚೋದನೆ ಆಗುವುದಿಲ್ಲ ಎಂದು ಕೋರ್ಟ್ ಹೇಳಿದೆ.
ನನ್ನದಲ್ಲದ ತಪ್ಪಿಗೆ ಕೋರ್ಟ್ ನನಗೆ ಶಿಕ್ಷೆ ಕೊಟ್ಟಿದೆ. ನಾನು ಕೊಟ್ಟ ಸಾಲ ವಾಪಸ್ ಕೇಳುವುದೇ ತಪ್ಪಾ? ಎಂದು ಪ್ರಶ್ನಿಸಿದ್ದ ಮಂಗಳಗೌರಿ ನನಗೆ ವಿಧಿಸಿದ ಶಿಕ್ಷೆ ರದ್ದುಪಡಿಸಿ ಎಂದು ಕೋರಿ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ್ ಅವರ ನ್ಯಾಯಪೀಠ ಆಕೆಯನ್ನು ಶಿಕ್ಷೆಯಿಂದ ಬಿಡುಗಡೆಗೊಳಿಸಿದೆ.
ಇದನ್ನೂ ಓದಿ: High court : ಪುತ್ರಿಯನ್ನು ಗಂಡನ ಸುಪರ್ದಿಗೆ ಒಪ್ಪಿಸದ ವೈದ್ಯೆ; ಆಕೆಗೆ ಕೋರ್ಟ್ ಕೊಟ್ಟ ಸ್ಪೆಷಲ್ ಶಿಕ್ಷೆ ಏನು?
ಈ ಪ್ರಕರಣದಲ್ಲಿ ಕೋರ್ಟ್ ಕಂಡುಕೊಂಡ ಅಂಶಗಳು
- .ಮೃತಪಟ್ಟ ರಾಜುವಿಗೆ ಆತ್ಮಹತ್ಯೆ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದಲೇ ಮಂಗಳಗೌರಿ ಅವರು ಪ್ರಚೋದನೆ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ.
- .ಸಾಲ ಮರುಪಾವತಿ ಮಾಡಿ ಎಂದು ಕೇಳುವುದು ಯಾವ ಆಯಾಮದಿಂದ ನೋಡಿದರೂ ಪ್ರಚೋದನೆಯಾಗುವುದಿಲ್ಲ.
- ರಾಜು ಅವರು ಮಂಗಳಗೌರಿ ಅವರಿಂದ ಸಾಲ ಪಡೆದಿರುವುದು ನಿಜ. ಮರುಪಾವತಿ ಮಾಡುವಂತೆ ಕೇಳುವುದು ತಪ್ಪಲ್ಲ. ಆದರೆ, ಸಾಯಲಿ ಎಂದು ಒತ್ತಡ ಹಾಕಿದ್ದಾರೆ ಎಂಬುದಕ್ಕೆ ಪುರಾವೆ ಇಲ್ಲ.
- ರಾಜು ಅವರು ಹಣ ಕೇಳಿದ್ದಕ್ಕೆ ಹಣ ಮರುಪಾವತಿ ಮಾಡಬೇಕೇ ಹೊರತು ಪ್ರಾಣ ತೆಗೆದುಕೊಳ್ಳುವುದಲ್ಲ.
- ಉದ್ದೇಶಪೂರ್ವಕವಾಗಿ ಪ್ರಚೋದನೆ ನೀಡಿದ್ದಕ್ಕೆ ಯಾವುದೇ ಅಂಶಗಳು ಕಂಡುಬರುತ್ತಿಲ್ಲ.
- ವಿಚಾರಣಾ ನ್ಯಾಯಾಲಯವು ಪ್ರಾಸಿಕ್ಯೂಷನ್‌ನಿಂದ ಸರಿಯಾದ ಸಾಕ್ಷ್ಯ ಪಡೆಯದೆ ತೀರ್ಪು ನೀಡಿದೆ.