Site icon Vistara News

JDS Politics : ಜೆಡಿಎಸ್‌ನಿಂದ ಇಬ್ರಾಹಿಂ ಉಚ್ಚಾಟನೆ: ದೇವೇಗೌಡ, ಎಚ್‌ಡಿಕೆಗೆ ಕೋರ್ಟ್ ಸಮನ್ಸ್‌‌

HD Devegowda CM Ibrahim HD Kumaraswamy

ಬೆಂಗಳೂರು: ಜೆಡಿಎಸ್‌ನಿಂದ ಮಾಜಿ ಅಧ್ಯಕ್ಷ (JDS Ex president) ಸಿ.ಎಂ ಇಬ್ರಾಹಿಂ (CM Ibrahim) ಅವರನ್ನು ಉಚ್ಚಾಟಿಸಿದ ವಿವಾದ ಈಗ ಕೋರ್ಟ್‌ ಮೆಟ್ಟಿಲೇರಿದ್ದು, ಕೋರ್ಟ್‌ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ (HD Devegowda) ಮತ್ತು ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ (HD Kumarasamy) ಅವರಿಗೆ ಸಮನ್ಸ್‌ ಜಾರಿಗೊಳಿಸಿದೆ (JDS Politics).

ಜೆಡಿಎಸ್‌ ಸಂವಿಧಾನಕ್ಕೆ ವಿರುದ್ಧವಾಗಿ ತನ್ನನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಲಾಗಿದೆ ಮತ್ತು ತಮ್ಮ ವಾದ ಆಲಿಸದೇ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ನಡೆಸಲು ಉದ್ದೇಶಿಸಲಾಗಿದೆ ಎಂದು ಆಕ್ಷೇಪಿಸಿ ಸಿ ಎಂ ಇಬ್ರಾಹಿಂ ಸಲ್ಲಿಸಿರುವ ಅರ್ಜಿಯ ಸಂಬಂಧ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌ ಡಿ ದೇವೇಗೌಡ ಮತ್ತು ರಾಜ್ಯ ಘಟಕದ ಹಂಗಾಮಿ ಅಧ್ಯಕ್ಷ ಎಚ್‌ ಡಿ ಕುಮಾರಸ್ವಾಮಿ ಅವರಿಗೆ ಬೆಂಗಳೂರಿನ ಸತ್ರ ನ್ಯಾಯಾಲಯವು ನೋಟಿಸ್‌ ಮತ್ತು ಸಮನ್ಸ್‌ ಜಾರಿ ಮಾಡಿದೆ.

ಮೂಲ ದಾವೆ ಇತ್ಯರ್ಥವಾಗುವವರೆಗೆ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡುವಂತೆ ಕೋರಿ ಸಿ.ಎಂ ಇಬ್ರಾಹಿಂ ಅರ್ಜಿ ಸಲ್ಲಿಸಿದ್ದರು. ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಸಾವಿತ್ರಿ ಶಿವಪುತ್ರ ಕುಜ್ಜಿ ಅರ್ಜಿಯ ವಿಚಾರಣೆ ನಡೆಸಿ ಸಮನ್ಸ್‌ ಜಾರಿಗೊಳಿಸಿದರು.

ನವೆಂಬರ್‌ 16ರಂದು ಜೆಡಿಎಸ್‌ ಹೊರಡಿಸಿರುವ ಆಕ್ಷೇಪಾರ್ಹವಾದ ಅಮಾನತು ಆದೇಶದಲ್ಲಿ ಸಿ ಎಂ ಇಬ್ರಾಹಿಂ ಅವರ ನಡತೆಯಿಂದ ಪಕ್ಷ, ದೇವೇಗೌಡ ಮತ್ತು ಕುಮಾರಸ್ವಾಮಿ ಅಸಮಾಧಾನಗೊಂಡಿದ್ದು, ಸಲ್ಲಿಕೆಯಾಗಿರುವ ದಾಖಲೆಯಲ್ಲಿ ಮೇಲ್ನೋಟಕ್ಕೆ ಇಬ್ರಾಹಿಂ ವಿರುದ್ಧ ಕೆಲವು ಆರೋಪಗಳು ಇರುವಂತಿದೆ. ಸದ್ಯದ ಪರಿಸ್ಥಿತಿ ಮತ್ತು ವಾಸ್ತವಿಕ ಅಂಶಗಳನ್ನು ಪರಿಗಣಿಸಿ, ಪ್ರತಿವಾದಿಗಳನ್ನು ಆಲಿಸದೇ ಏಕಪಕ್ಷೀಯ ನಿರ್ಬಂಧ ಆದೇಶ ಮಾಡಲಾಗದು ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ. ಹೀಗಾಗಿ ಪ್ರತಿವಾದಿಗಳ ಮಾತು ಕೇಳುವುದಕ್ಕಾಗಿ ಸಮನ್ಸ್‌ ಜಾರಿ ಮಾಡಲಾಗಿದೆ.

“ಯಾವಾಗ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಗುತ್ತದೆ ಎಂಬುದನ್ನು ಇಬ್ರಾಹಿಂ ಅವರು ತಮ್ಮ ಅಫಿಡವಿಟ್‌ನಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ. ಹೀಗಾಗಿ, ಇಬ್ರಾಹಿಂ ತಮ್ಮ ಹಕ್ಕಿಗೆ ಅಪಾಯ ಇದೆ ಎಂಬುದನ್ನು ತೋರಿಸದೇ ಇರುವಾಗ ಪ್ರತಿವಾದಿಗಳನ್ನು ಆಲಿಸದೇ ನಿರ್ಬಂಧಕ ಆದೇಶ ಮಾಡಲು ಆಧಾರ ಕಾಣದು” ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಹೀಗಾಗಿ, ಪ್ರತಿವಾದಿಗಳಿಗೆ ತುರ್ತು ನೋಟಿಸ್‌ ಹಾಗೂ ಸಮನ್ಸ್‌ ಜಾರಿ ಮಾಡಿದೆ. ಮುಂದಿನ ವಿಚಾರಣೆ ಜನವರಿ 4ರಂದು ನಡೆಯಲಿದೆ.

ಸಿ.ಎಂ. ಇಬ್ರಾಹಿಂ ಅವರ ವಾದವೇನು? ಬೇಡಿಕೆ ಏನು?

  1. ವಿಧಾನಸಭೆ ಚುನಾವಣೆಗೂ ಮುನ್ನ ಅಂದರೆ 2022ರ ಆಗಸ್ಟ್‌ 3ರಂದು ನನ್ನನ್ನು ಜೆಡಿಎಸ್‌ ಅಧ್ಯಕ್ಷನಾಗಿ ರಾಜ್ಯ ಕಾರ್ಯಕಾರಿಣಿಯಲ್ಲಿ ಘೋಷಿಸಲಾಗಿತ್ತು.
  2. ಎಚ್‌ ಡಿ ದೇವೇಗೌಡ ಮತ್ತು ಎಚ್‌ ಡಿ ಕುಮಾರಸ್ವಾಮಿ ಅವರು 2024 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು, ಸಕಾರಣವಿಲ್ಲದೇ ತಮ್ಮನ್ನು 2023ರ ನವೆಂಬರ್‌ 16ರಂದು ಪಕ್ಷದಿಂದ ಉಚ್ಚಾಟಿಸಿದ್ದಾರೆ.
  3. ಈ ನಡೆಯು ಜೆಡಿಎಸ್‌ ಸಂವಿಧಾನಕ್ಕೆ ವಿರುದ್ಧವಾಗಿದ್ದು, ಪಕ್ಷದ ನಿಯಮಗಳನ್ನು ಪಾಲಿಸಲಾಗಿಲ್ಲ.
  4. ಈ ನೆಲೆಯಲ್ಲಿ ತಮ್ಮ ವಾದ ಆಲಿಸದೇ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸದಂತೆ ನಿರ್ಬಂಧಿಸಬೇಕು ಎಂದು ಇಬ್ರಾಹಿಂ ಅರ್ಜಿಯಲ್ಲಿ ಕೋರಿದ್ದರು.

Exit mobile version