ಹೊಸದಿಲ್ಲಿ: ಕೋಲ್ಕತ್ತಾ ಹೈಕೋರ್ಟ್‌ನಲ್ಲಿ (Calcutta High Court) ಉದ್ಭವಿಸಿರುವ ಜಡ್ಜ್ ವರ್ಸಸ್ ಜಡ್ಜ್ (Judge vs Judge) ಪ್ರಕರಣವೊಂದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ (Supreme court) ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿದ್ದು, ಇಂದು ವಿಶೇಷ ವಿಚಾರಣೆಗೆ ನ್ಯಾಯಪೀಠ ಸಭೆ ಸೇರಲಿದೆ.
ಕಲ್ಕತ್ತಾ ಹೈಕೋರ್ಟ್‌ನ ಏಕಸದಸ್ಯ ಪೀಠ ಮತ್ತು ವಿಭಾಗೀಯ ಪೀಠದ ತೀರ್ಪುಗಳ ನಡುವಿನ ವಿವಾದಕ್ಕೆ ಸಂಬಂಧಿಸಿದ ವಿಷಯವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (Chief Justice DY Chandrachud) ಮತ್ತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿಆರ್ ಗವಾಯಿ, ಸೂರ್ಯಕಾಂತ್ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ಐದು ನ್ಯಾಯಾಧೀಶರ ಸಂವಿಧಾನ ಪೀಠ ವಿಚಾರಣೆ ನಡೆಸಲಿದೆ.
ಏನಿದು ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ವರ್ಸಸ್ ನ್ಯಾಯಮೂರ್ತಿ ಸೌಮೆನ್ ಸೇನ್ ಪ್ರಕರಣ?
1) ಆರಂಭದಲ್ಲಿ, ಪಶ್ಚಿಮ ಬಂಗಾಳದ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ಎಂಬಿಬಿಎಸ್ ಅಭ್ಯರ್ಥಿಗಳ ದಾಖಲಾತಿಯಲ್ಲಿನ ಅಕ್ರಮಗಳ ಕುರಿತು ಕೇಂದ್ರೀಯ ತನಿಖಾ ದಳಕ್ಕೆ ತನಿಖೆಗೆ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರ ಏಕ ಪೀಠ ಆದೇಶಿಸಿತ್ತು.
2) ನಂತರ, ಪಶ್ಚಿಮ ಬಂಗಾಳ ಸರ್ಕಾರವು ಈ ಬಗ್ಗೆ ಕಲ್ಕತ್ತಾ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಮನವಿ ಸಲ್ಲಿಸಿತು. ನ್ಯಾಯಮೂರ್ತಿಗಳಾದ ಸೌಮೆನ್ ಸೇನ್ ಮತ್ತು ಉದಯ್ ಕುಮಾರ್ ಅವರ ವಿಭಾಗೀಯ ಪೀಠವು ಪ್ರಕರಣದ ಸಿಬಿಐ ತನಿಖೆಗೆ ಏಕ ಪೀಠ ನೀಡಿದ ಆದೇಶಕ್ಕೆ ತಡೆ ನೀಡಿತು.
3) ಗುರುವಾರ, ವಿಭಾಗೀಯ ಪೀಠವು ನೀಡಿದ ಆದೇಶವು ಸಂಪೂರ್ಣ ಕಾನೂನುಬಾಹಿರ ಮತ್ತು ನಿರ್ಲಕ್ಷಿಸಬೇಕಾದ್ದು ಎಂದು ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿತು. ಹಿಂದಿನ ಆದೇಶ ಅಥವಾ ಮೇಲ್ಮನವಿಯ ಮೆಮೊ ಇಲ್ಲದಿರುವಾಗ ವಿಭಾಗೀಯ ಪೀಠ ತಡೆಯಾಜ್ಞೆ ಹೇಗೆ ಹೊರಡಿಸಲು ಸಾಧ್ಯ ಎಂದು ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಅಡ್ವೊಕೇಟ್ ಜನರಲ್ ಅವರನ್ನು ಪ್ರಶ್ನಿಸಿದರು.
4) ನ್ಯಾಯಮೂರ್ತಿ ಗಂಗೋಪಾಧ್ಯಾಯ ಇನ್ನೂ ಮುಂದುವರಿದು, ವಿಭಾಗೀಯ ಪೀಠದ ನೇತೃತ್ವ ವಹಿಸಿದ ನ್ಯಾಯಮೂರ್ತಿ ಸೇನ್ ಅವರು ರಾಜ್ಯದ ರಾಜಕೀಯ ಪಕ್ಷವೊಂದರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಆದ್ದರಿಂದ ನ್ಯಾಯಮೂರ್ತಿ ಸೇನ್ ನೇತೃತ್ವದ ಪೀಠವು ನೀಡಿದ ಆದೇಶಗಳನ್ನು ಸುಪ್ರೀಂ ಕೋರ್ಟ್ ಮರುಪರಿಶೀಲಿಸಬೇಕಾದೀತು ಎಂದು ಟಿಪ್ಪಣಿ ಮಾಡಿದರು.
5) “ಜಸ್ಟೀಸ್ ಸೇನ್ ಅವರು ಈ ರಾಜ್ಯದಲ್ಲಿ ಒಂದು ರಾಜಕೀಯ ಪಕ್ಷಕ್ಕಾಗಿ ಸ್ಪಷ್ಟವಾಗಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ, ಗೌರವಾನ್ವಿತ ಸುಪ್ರೀಂ ಕೋರ್ಟ್ ಈ ಆದೇಶಗಳನ್ನು ಮರುಪರಿಶೀಲಿಸುವ ಅವಶ್ಯಕತೆಯಿದೆ. ಅವರ ಕ್ರಮಗಳು ಸ್ಪಷ್ಟವಾಗಿ ದುಷ್ಕೃತ್ಯಕ್ಕೆ ಸಮಾನವಾಗಿವೆ” ಎಂದು ನ್ಯಾಯಮೂರ್ತಿ ಗಂಗೋಪಾಧ್ಯಾಯ ಹೇಳಿದರು.
6) 2021ರಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂ ವರ್ಗಾವಣೆಗೆ ಶಿಫಾರಸು ಮಾಡಿದ್ದರೂ ಜಸ್ಟಿಸ್ ಸೇನ್ ಕಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶರಾಗಿ ಏಕೆ ಉಳಿದರು ಎಂದು ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಪ್ರಶ್ನಿಸಿದರು.
7) ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ತಮ್ಮ ಆದೇಶದಲ್ಲಿ ನ್ಯಾಯಾಧೀಶರ ನಡುವಿನ ಖಾಸಗಿ ಸಂಭಾಷಣೆಯನ್ನೂ ಬಹಿರಂಗಪಡಿಸಿದ್ದಾರೆ. ಇತ್ತೀಚಿನ ನ್ಯಾಯಾಲಯದ ರಜೆಯ ಹಿಂದಿನ ದಿನದಂದು ನ್ಯಾಯಮೂರ್ತಿ ಅಮೃತಾ ಸಿನ್ಹಾ ಅವರನ್ನು ನ್ಯಾಯಮೂರ್ತಿ ಸೇನ್ ತಮ್ಮ ಕೋಣೆಗೆ ಕರೆಸಿಕೊಂಡಿದ್ದರು ಹಾಗೂ ಅಭಿಷೇಕ್ ಬ್ಯಾನರ್ಜಿ ಅವರಿಗೆ ರಾಜಕೀಯ ಭವಿಷ್ಯವಿದೆ ಮತ್ತು ಅವರು ವಿಚಲಿತರಾಗಬಾರದು ಎಂದು ಹೇಳಿದ್ದರು ಎಂದರು.
8) ನ್ಯಾಯಮೂರ್ತಿ ಅಮೃತಾ ಸಿನ್ಹಾ ಅವರು ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಈ ವಿಷಯವನ್ನು ವರದಿ ಮಾಡಿದ್ದಾರೆ. ಅವರು ಈ ವಿಷಯವನ್ನು ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ವರದಿ ಮಾಡಿದ್ದಾರೆ ಎಂದು ನ್ಯಾಯಮೂರ್ತಿ ಗಂಗೋಪಾಧ್ಯಾಯ ಪ್ರತಿಪಾದಿಸಿದರು.
9) ನ್ಯಾಯಮೂರ್ತಿ ಅಭಿಜೀತ್ ಗಂಗೋಪಾಧ್ಯಾಯ ಅವರನ್ನು ಈ ಹಿಂದೆ ಸುಪ್ರೀಂ ಕೋರ್ಟ್, ತಾವು ವಿಚಾರಣೆ ನಡೆಸುತ್ತಿದ್ದ ಪ್ರಕರಣಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಕ್ಕಾಗಿ ತರಾಟೆಗೆ ತೆಗೆದುಕೊಂಡಿತ್ತು. ಗಂಗೋಪಾಧ್ಯಾಯ ಆಗಾಗ್ಗೆ ರಾಜಕೀಯ ಎನಿಸುವ ಹೇಳಿಕೆಗಳನ್ನು ನೀಡಿದ್ದಾರೆ. ಈ ಹೇಳಿಕೆಗಳಲ್ಲಿ ಹೆಚ್ಚಿನವು ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧದ ಹೇಳಿಕೆಗಳು.
ಇದನ್ನೂ ಓದಿ: Republic Day 2024: ಗಣರಾಜ್ಯೋತ್ಸವದಂದು `ಧ್ವಜ ಅರಳಿಸುವಿಕೆ’; ಸ್ವಾತಂತ್ರ್ಯ ದಿನದಂದು ʻಧ್ವಜಾರೋಹಣʼ… ವ್ಯತ್ಯಾಸವೇನು?