Site icon Vistara News

Kalladka Prabhakar Bhat : ಆರೆಸ್ಸೆಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಬಂಧನ ಇಲ್ಲ ಎಂದ ಸರ್ಕಾರ

Kalladka Prabhakar Bhat

ಬೆಂಗಳೂರು/ಶ್ರೀರಂಗಪಟ್ಟಣ: ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಬ್ಬ ಗಂಡ ಇರುತ್ತಿದ್ದರು. ಅವರಿಗೆ ಪರ್ಮನೆಂಟ್‌ ಗಂಡ (Permanent Husband) ಕೊಟ್ಟದ್ದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಎಂಬ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿರುವ ಆರೆಸ್ಸೆಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ (RSS Leader Kalladka Prabhakar Bhat) ಅವರನ್ನು ಬಂಧಿಸುವುದಿಲ್ಲ ಎಂದು ಸರ್ಕಾರ ಪರ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರು ಹೈಕೋರ್ಟ್‌ಗೆ ತಿಳಿಸಿದ್ದಾರೆ. ಅವರಿಗೆ ಶ್ರೀರಂಗಪಟ್ಟಣ ನ್ಯಾಯಾಲಯವು (Srirangapatna Court) ಆರೋಗ್ಯದ ಕಾರಣಕ್ಕಾಗಿ ಮಧ್ಯಂತರ ಜಾಮೀನು (Intermediate Bail) ನೀಡಿದೆ.

ಹನುಮ ಜಯಂತ್ಯುತ್ಸವ ಅಂಗವಾಗಿ ಡಿಸೆಂಬರ್‌ 24ರಂದು ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆಯು ಆಯೋಜಿಸಿದ್ದ ಸಂಕೀರ್ತನಾ ಯಾತ್ರೆಯಲ್ಲಿ ಪ್ರಭಾಕರ್‌ ಭಟ್‌ ಮುಸ್ಲಿಮರ ವಿರುದ್ಧ ಧಾರ್ಮಿಕ ದ್ವೇಷಕಾರಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಜೀರ್‌ ನೀಡಿದ್ದ ದೂರಿನ ಅನ್ವಯ ಶ್ರೀರಂಗಪಟ್ಟಣ ಟೌನ್‌ ಠಾಣೆಯ ಪೊಲೀಸರು ಪ್ರಭಾಕರ್‌ ಭಟ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 294 (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಮಾತುಗಳನ್ನು ಆಡುವುದು), 509 (ಮಹಿಳೆಯ ಖಾಸಗಿತನಕ್ಕೆ ಸಂಬಂಧಿಸಿದ ಮಾತುಗಳನ್ನಾಡುವುದು), 153ಎ (ಧರ್ಮದ ಆಧಾರದಲ್ಲಿ ಸಮುದಾಯಗಳ ನಡುವೆ ದ್ವೇಷ ಹರಡುವುದು) ಮತ್ತು 298 (ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು) ಅಡಿ ಪ್ರಕರಣ ದಾಖಲಿಸಿದ್ದರು. ಇದರಲ್ಲಿ ಪ್ರಭಾಕರ ಭಟ್‌ ಅವರು ಬಂಧನಕ್ಕೆ ಒಳಗಾಗುವ ಸಾಧ್ಯತೆಗಳ ಚರ್ಚೆ ನಡೆದಿತ್ತು.

ಮಧ್ಯಂತರ ಜಾಮೀನು ನೀಡಿದ ಶ್ರೀರಂಗಪಟ್ಟಣ ಕೋರ್ಟ್‌

ಪೊಲೀಸರು ಬಂಧಿಸುವ ಸಾಧ್ಯತೆಗಳನ್ನು ಪರಿಗಣಿಸಿ ಕಲ್ಲಡ್ಕ ಪ್ರಭಾಕರ ಭಟ್‌ ಅವರ ಪರವಾಗಿ ಶ್ರೀರಂಗಪಟ್ಟಣ ಕೋರ್ಟ್‌ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ಗಂಭೀರ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ಕಾರಣಕ್ಕಾಗಿ ಶ್ರೀರಂಗಪಟ್ಟಣ ನ್ಯಾಯಾಲಯವು ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಅದೇ ಹೊತ್ತಿಗೆ ತನಿಖಾಧಿಕಾರಿಗಳು ಪ್ರಭಾಕರ್‌ ಭಟ್‌ ಅವರನ್ನು ತನಿಖೆಗೆ ಒಳಪಡಿಸಲು ಸ್ವತಂತ್ರರಾಗಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ಶ್ರೀರಂಗಪಟ್ಟಣ ಕೋರ್ಟ್‌ ಹೇಳಿದ್ದೇನು?

ಪ್ರಭಾಕರ್‌ ಭಟ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗೋಪಾಲ ಕೃಷ್ಣ ರೈ ಟಿ ಅವರು ನಡೆಸಿದರು. ಅವರು ಮಧ್ಯಂತರ ಜಾಮೀನು ನೀಡಲು ನೀಡಿದ ಕಾರಣಗಳು ಇಲ್ಲಿವೆ.

1.ಅರ್ಜಿದಾರರು ಬಂಧನ ಭೀತಿ ಎದುರಿಸುತ್ತಿದ್ದು, ಮಧ್ಯಂತರ ಕ್ರಮದ ಭಾಗವಾಗಿ ನ್ಯಾಯದಾನ ಅಗತ್ಯತೆಯ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ನೀಡುವುದು ಅಗತ್ಯವಾಗಿದೆ.

2. ಒಂದೊಮ್ಮೆ ಭಟ್‌ ಅವರನ್ನು ಬಂಧಿಸಿದರೆ ಪ್ರತಿವಾದಿ ಪೊಲೀಸರು ಅರ್ಜಿದಾರರಿಂದ 2 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತದ ಭದ್ರತೆ ಪಡೆದು ಬಿಡುಗಡೆ ಮಾಡಬೇಕು.

3ಸಿಆರ್‌ಪಿಸಿಯ ಸೂಕ್ತ ನಿಬಂಧನೆಗಳ ಅಡಿ ತನಿಖಾಧಿಕಾರಿಯು ಆರೋಪಿಯನ್ನು ತನಿಖೆಗೆ ಒಳಪಡಿಸುವ ಸ್ವಾತಂತ್ರ್ಯ ಹೊಂದಿದ್ದಾರೆ. ಸಾಮಾನ್ಯ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಬೇಕು.

4. ಮಂಗಳೂರಿನ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿನ ಡಿಸ್ಚಾರ್ಜ್‌ ಸಾರಾಂಶದಲ್ಲಿ ಅರ್ಜಿದಾರರು ಕಾರ್ಡಿಯೊ ಥೋರಾಸಿಸ್‌ ಮತ್ತು ವಾಸ್ಕ್ಯುಲರ್‌ ಸರ್ಜರಿಗೆ ಒಳಗಾಗಿದ್ದಾರೆ ಎಂಬುದು ತಿಳಿದುಬರುತ್ತದೆ.

5. ನಜ್ಮಾ ನಜೀರ್‌ ಅವರು ನೀಡಿದ ದೂರಿನ ಆಧಾರದಲ್ಲಿ ಪ್ರಭಾಕರ್‌ ಭಟ್‌ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿ ಭಟ್‌ ವಿರುದ್ಧ ದಾಖಲಾಗಿರುವ ಪ್ರಕರಣವು ಜಾಮೀನುರಹಿತವಾಗಿದೆ.

6. ಅರ್ಜಿದಾರರನ್ನು ಶ್ರೀರಂಗಪಟ್ಟಣ ಪೊಲೀಸರು ಬಂಧಿಸಲು ಯತ್ನಿಸುತ್ತಿದ್ದಾರೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಈ ಆತಂಕ ನಂಬದಿರಲು ಸಾಧ್ಯವಿಲ್ಲ.

7. ನಿರೀಕ್ಷಣಾ ಜಾಮೀನು ಅರ್ಜಿಗೆ ಸರ್ಕಾರಿ ಅಭಿಯೋಜಕರು ಮೌಖಿಕವಾಗಿ ಆಕ್ಷೇಪಿಸಿದ್ದಾರೆ. ಅರ್ಜಿದಾರರು ವಯೋಸಹಜ ಕಾಯಿಲೆಯಿಂದ ಬಳಲುತಿದ್ದು, ಅವರು ತನಿಖಾಧಿಕಾರಿಯ ಮುಂದೆ ಹಾಜರಾಗಲು ಸಿದ್ಧರಾಗಿದ್ದಾರೆ.

ತನಿಖೆಗೆ ಸಹಕರಿಸಲು ಪ್ರಭಾಕರ್‌ ಭಟ್‌ಗೆ ಹೈಕೋರ್ಟ್‌ ಸೂಚನೆ

ಈ ನಡುವೆ, ಶ್ರೀರಂಗಪಟ್ಟಣ ಟೌನ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು. ಆರೋಪಕ್ಕೆ ಗುರಿಯಾಗಿರುವ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ತನಿಖೆಗೆ ಸಹಕಾರಿಸಬೇಕು. ಆದರೆ, ಸರ್ಕಾರ ಅವರನ್ನು ಬಂಧಿಸಬಾರದು ಎಂದು ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಗುರುವಾರ ಸೂಚಿಸಿದೆ. ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ರಾಜೇಶ್‌ ರೈ ಕೆ ಅವರ ನೇತೃತ್ವದ ರಜಾಕಾಲೀನ ಪೀಠವು ನಡೆಸಿತು.

ಹೈಕೋರ್ಟ್‌ನಲ್ಲಿ ನಡೆದ ವಾದ-ವಿವಾದ ಏನೇನು?

ಪ್ರಭಾಕರ ಭಟ್‌ ಪರ ಹಿರಿಯ ವಕೀಲ ಅರುಣ್‌ ಶ್ಯಾಂ: ಪ್ರಭಾಕರ ಭಟ್‌ ಅವರ ವಿರುದ್ಧ ರಾಜಕೀಯ ಪ್ರೇರಿತವಾಗಿ ದೂರು ದಾಖಲಿಸಲಾಗಿದ್ದು, ಅರ್ಜಿದಾರರು ವಯೋವೃದ್ದರು. ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರನ್ನು ಬಂಧಿಸುವ ಸಾಧ್ಯತೆ ಇದೆ. ಹೀಗಾಗಿ, ಎಫ್‌ಐಆರ್‌ಗೆ ತಡೆ ನೀಡಬೇಕು.

ನಜ್ಮಾ ನಜೀರ್‌ ಪರ ವಕೀಲ ಎಸ್‌ ಬಾಲಕೃಷ್ಣನ್‌: ಆರೋಪಿ/ಅರ್ಜಿದಾರರ ಹೇಳಿಕೆ ಪರಿಶೀಲಿಸಬೇಕು. ಮುಸ್ಲಿಮ್ ಮಹಿಳೆಯರಿಗೆ ಒಬ್ಬ ಗಂಡ ಅಲ್ಲ. ದಿನಕ್ಕೊಬ್ಬ ಗಂಡಂದಿರು ಎಂದಿದ್ದಾರೆ. ಇದು ಸಮಾಜದಲ್ಲಿ ಅಶಾಂತಿ ಹುಟ್ಟಿಸುತ್ತಿದೆ. ಎಲ್ಲಾ ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಆರೋಪಿ ಈ ಹಿಂದೆಯೂ ಇಂತಹ ಕೃತ್ಯ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ಹೀಗಾಗಿ, ಕಾನೂನು ಅದರ ಕೆಲಸ ಮಾಡಲಿ.

ಅರುಣ್‌ ಶ್ಯಾಮ್‌: ಮುಂದಿನ ದಿನಾಂಕದವರೆಗೆ ಬಂಧಿಸದಂತೆ ನಿರ್ದೇಶಿಸಬೇಕು. ಪ್ರಭಾಕರ ಭಟ್ ವಿರುದ್ದ ಸರ್ಕಾರ ರೌಡಿ ಪಟ್ಟಿ ಓಪನ್ ಮಾಡುವ ಸಾಧ್ಯತೆ ಇದೆ.

ಬಾಲಕೃಷ್ಣನ್‌ : ಆರೋಪಿ ಪ್ರಭಾಕರ ಭಟ್ ವಿರುದ್ದ ರೌಡಿಶೀಟ್ ಮಾತ್ರವಲ್ಲ. ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯಿದೆ (ಯುಎಪಿಎ) ಸೇರಿದಂತೆ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಸಮಾಜದಲ್ಲಿ ಭಯ ಉತ್ಪಾದಿಸುವ ಭಯೋತ್ಪಾದಕರು ಇವರು. ಸುಪ್ರೀಂ ಕೋರ್ಟ್ ಈ ರೀತಿ ದ್ವೇಷಭಾಷಣ ಮಾಡುವವರ ವಿರುದ್ದ ಹಲವು ತೀರ್ಪು ನೀಡಿದೆ. ಈಗ ಆರೋಪಿ ಬಗ್ಗೆ ತನಿಖೆ ಆಗಬೇಕಿದೆ. ಪೊಲೀಸರು ಹಾಕಿರುವ ಎಲ್ಲಾ ಸೆಕ್ಷನ್ ಗಳು ಸರಿಯಾಗಿವೆ. ಈ ಪ್ರಕರಣದ ಸಂಪೂರ್ಣ ತನಿಖೆ ನಡೆಯಬೇಕು. ಇದರ ಹಿಂದೆ ಕೋಮುಗಲಭೆಯ ಹುನ್ನಾರ ಇದೆ. ಹೀಗಾಗಿ, ಇದು ಸರಳ ಪ್ರಕರಣ ಅಲ್ಲ.

ಇದನ್ನೂ ಓದಿ : ಕಲ್ಲಡ್ಕ ಪ್ರಭಾಕರ ಭಟ್‌: ಒಂದೇ ಭಾಷಣ; ಹತ್ತಾರು ಸೆಕ್ಷನ್‌ನಡಿ ಎಫ್‌ಐಆರ್ ದಾಖಲು!

ಸರ್ಕಾರದ ಪರ ವಿಶೇಷ ಅಭಿಯೋಜಕರು ಹೇಳಿದ್ದೇನು?

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ಎನ್ ಜಗದೀಶ್‌ ಅವರು “ಅರ್ಜಿದಾರರಿಗೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಮಧ್ಯಂತರ ಜಾಮೀನಾಗಿದೆ. ಹೀಗಾಗಿ, ನಾವು ಅವರನ್ನು ಬಂಧಿಸುತ್ತಿಲ್ಲ. ಆದರೆ, ಅವರು ತನಿಖೆಗೆ ಸಹಕರಿಸಬೇಕು. ಜನರನ್ನು ರಕ್ಷಿಸುವ ಹೊಣೆಗಾರಿಕೆ ಸರ್ಕಾರಕ್ಕಿದೆ. ದ್ವೇಷ ಭಾಷಣ ಮಾಡುವವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ದೂರಿನ ಸಾರಾಂಶ ಅಥವಾ ಯಾರು ದೂರು ನೀಡಿದ್ದಾರೆ ಎಂಬುದು ಮುಖ್ಯವಲ್ಲ. ಅರ್ಜಿದಾರರು ಮಾಡಿರುವ ಇಡೀ ಭಾಷಣವನ್ನು ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ಸೂಕ್ತ ವರದಿಯನ್ನು ಸಂಬಂಧಿತ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು” ಎಂದರು. ಪ್ರಕರಣ ಮುಂದಿನ ವಿಚಾರಣೆ 2024ರ ಜನವರಿ 9ರಂದು ನಡೆಯಲಿದೆ.

Exit mobile version