ದೇವನಹಳ್ಳಿ: ಬೆಂಗಳೂರಿನ ಕಮರ್ಷಿಯಲ್ ಮಳಿಗೆಗಳು, ಅಂಗಡಿಗಳು ನಾಮಫಲಕದಲ್ಲಿ ಕನ್ನಡವವನ್ನು (Kannada Name plate) ಕಡ್ಡಾಯವಾಗಿ ಬಳಸಬೇಕು ಎಂದು ಆಗ್ರಹಿಸಿ ಡಿಸೆಂಬರ್ 27ರಂದು ನಡೆದ ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ಪ್ರಾಯೋಜಿತ ಪ್ರತಿಭಟನೆ (karave Protest) ವೇಳೆ ಬಂಧನಕ್ಕೆ ಒಳಗಾದ ಕರವೇ ಅಧ್ಯಕ್ಷ ಟಿ.ಎ. ನಾರಾಯಣ ಗೌಡ (TA Narayana Gowda) ಅವರು ಇನ್ನೂ ಕೂಡಾ ಪರಪ್ಪನ ಅಗ್ರಹಾರ ಜೈಲಿನಲ್ಲೇ (Parappana Agrahara Jail) ಇದ್ದಾರೆ.
ಡಿಸೆಂಬರ್ 27ರಂದು ಬಂಧನಕ್ಕೆ ಒಳಗಾದ ಅವರು ಜಾಮೀನು ಪಡೆದು ಹೊರಬಹುದು ಎಂಬ ನಿರೀಕ್ಷೆ ಇತ್ತು. ಕೆಲವು ನಾಯಕರಿಗೆ ಜಾಮೀನು ಕೂಡಾ ಸಿಕ್ಕಿದೆ. ಆದರೆ, ನಾರಾಯಣ ಗೌಡರಿಗೆ ಜೈಲು ಸೇರಿ ಏಳು ದಿನವಾದರೂ ಜಾಮೀನು ಸಿಕ್ಕಿಲ್ಲ. ಇದೀಗ ಜನವರಿ ಎರಡರಂದು (ಮಂಗಳವಾರ) ಅವರ ಜಾಮೀನು ಅರ್ಜಿ ವಿಚಾರಣೆ ನಡೆದರೂ ಕೋರ್ಟ್ ತನ್ನ ತೀರ್ಪನ್ನು ಜನವರಿ ಆರಕ್ಕೆ ಕಾಯ್ದಿರಿಸಿದೆ. ಹೀಗಾಗಿ ಅವರು ಇನ್ನೂ ನಾಲ್ಕು ದಿನ ಜೈಲಿನಲ್ಲೇ ಕಾಯಬೇಕಾಗಿದೆ.
ದೇವನಹಳ್ಳಿಯ 5ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಾರಾಯಣ ಗೌಡ ಅವರು ಜಾಮೀನು ಅರ್ಜಿ ಸಲ್ಲಿಸಿದ್ದರು. ಅವರ ಜಾಮೀನು ಅರ್ಜಿಗೆ ಸಂಬಂಧಿಸಿ ಸರ್ಕಾರಿ ಅಭಿಯೋಜಕರ ಅಭಿಪ್ರಾಯವನ್ನು ಕೋರ್ಟ್ ಕೇಳಿತ್ತು. ಸರ್ಕಾರಿ ಅಭಿಯೋಜಕರು ಮಂಗಳವಾರ ತಮ್ಮ ಅಭಿಪ್ರಾಯವನ್ನು ಕೋರ್ಟ್ ಮುಂದೆ ದಾಖಲಿಸಿದರಾದರೂ ಕೋರ್ಟ್ ತನ್ನ ತೀರ್ಪನ್ನು ಜನವರಿ ಆರಕ್ಕೆ ಕಾದಿರಿಸಿದೆ. ಹೀಗಾಗಿ ಮಂಗಳವಾರವೇ ಜಾಮೀನು ಸಿಗಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಮಂಗಳವಾರ ಅಭಿಯೋಕರು ಮತ್ತು ನಾರಾಯಣ ಗೌಡರ ಪರ ವಕೀಲರು ತಮ್ಮ ವಾದ ಮಂಡಿಸಿದರು. ಅಂತಿಮವಾಗಿ ಕೋರ್ಟ್ ತೀರ್ಪನ್ನು ಕಾದಿರಿಸಿತು.
ಇದನ್ನೂ ಓದಿ: Kannada Name plate: ಕರವೇ ಅಧ್ಯಕ್ಷ ನಾರಾಯಣ ಗೌಡರನ್ನು ಬಿಡುಗಡೆ ಮಾಡದಿದ್ರೆ ಬೆಂಗಳೂರು ಬಂದ್!
ನಾರಾಯಣ ಗೌಡರ ಮೇಲಿನ ಆರೋಪಗಳೇನು?
ಟಿ.ಎ ನಾರಾಯಣ ಗೌಡರು ಡಿಸೆಂಬರ್ 27ರಂದು ಯಲಹಂಕ ಸಮೀಪ ಸಾದಹಳ್ಳಿ ಟೋಲ್‌ಗೇಟ್ ಬಳಿ ಪ್ರತಿಭಟನೆ ನಡೆಸಿದ್ದರು. ಆ ಸಂದರ್ಭದಲ್ಲಿ ಅವರನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದರು. ಸಾದ ಹಳ್ಳಿಯಿಂದ ಮೆರವಣಿಗೆ ಹೊರಡುವುದು ಎಂದು ತೀರ್ಮಾನಿಸಲಾಗಿತ್ತಾದರೂ ಅದಕ್ಕಿಂತ ಮೊದಲೇ ಅವರನ್ನು ಇತರ ಕಾರ್ಯಕರ್ತರು ನಾಯಕರ ಜತೆ ವಶಕ್ಕೆ ಪಡೆಯಲಾಗಿತ್ತು.
ಡಿಸೆಂಬರ್ 27ರ ಮಧ್ಯಾಹ್ನದ ಹೊತ್ತು ವಶಕ್ಕೆ ಪಡೆದ ನಾರಾಯಣ ಗೌಡ ಮತ್ತು ಇತರರನ್ನು ಒಂದು ಕಟ್ಟಡದ ಆವರಣದಲ್ಲಿ ರಾತ್ರಿವರೆಗೂ ಕೂಡಿ ಹಾಕಲಾಗಿತ್ತು. ಸಾಮಾನ್ಯವಾಗಿ ಇಂಥ ಪ್ರತಿಭಟನೆ ಸಂದರ್ಭದಲ್ಲಿ ಹೀಗೆ ವಶಕ್ಕೆ ಪಡೆದು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಪೊಲೀಸರು ರಾತ್ರಿ ಒಂದು ಗಂಟೆವರೆಗೂ ಅವರನ್ನು ಬಿಟ್ಟಿರಲಿಲ್ಲ. ಬಳಿಕ ರಾತ್ರೋರಾತ್ರಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದರು. ಆಗ ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದರು. ಡಿಸೆಂಬರ್ 28ರಂದು ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಹಾಕಲಾಗಿತ್ತು.
ನಾರಾಯಣ ಗೌಡರ ಮೇಲೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪ್ರತಿಭಟನೆ ಮಾಡಿ ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿದ ಆರೋಪವನ್ನು ಹೊರಿಸಲಾಗಿದೆ. ಬೆಂಗಳೂರಿನಲ್ಲಿ ಫ್ರೀಡಂ ಫಾರ್ಕ್ ನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶವಿದೆ. ಆದರೆ, ಕರವೇ ಕಾರ್ಯಕರ್ತರು ನಗರದಾದ್ಯಂತ ಪ್ರತಿಭಟನೆ ನಡೆಸಿದ್ದಲ್ಲದೆ ಕೆಲವೊಂದು ಕಡೆ ದಾಂಧಲೆ ಎಬ್ಬಿಸಿದ್ದರು.
ಟಿಎ ನಾರಾಯಣಗೌಡರ ವಿರುದ್ದ ಎಂಟಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇರುವ ಕಾರಣ ಅವರ ವಿಚಾರಣೆಗೆ ಚಾರಣೆಗೆ ತೊಂದರೆಯಾಗುವ ಕಾರಣ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದರು. ಬಂಧಿಸುವ ಸಂಧರ್ಭದಲ್ಲಿ ಕ್ರಮಬದ್ದ ಬಂಧನಕ್ಕೆ ತಕರಾರು ಒಡ್ಡಿದ್ದರು ಎಂಬ ಆರೋಪವನ್ನೂ ಹೊರಿಸಲಾಗಿದೆ.