Site icon Vistara News

Blackmail Case : ನಿಮ್ಮ ಸಿಮ್‌ನಿಂದ ಆಕ್ಷೇಪಾರ್ಹ ಸಂದೇಶ ಬರ್ತಿದೆ ; ಜಡ್ಜ್‌ಗಳಿಗೇ ‌ ಬ್ಲ್ಯಾಕ್‌ಮೇಲ್‌

Blackmail Case High court

ಬೆಂಗಳೂರು: ನಿಮ್ಮ ಸಿಮ್‌ನಿಂದ ಆಕ್ಷೇಪಾರ್ಹ ಮೆಸೇಜ್‌ (Message from Mobile SIM) ಬರುತ್ತಿದೆ. ನಿಮ್ಮ ಮೇಲೆ ಕೇಸ್‌ ಆಗಿದೆ ಎಂದು ಪೊಲೀಸರ ಸೋಗಿನಲ್ಲಿ ಹೈಕೋರ್ಟ್‌ನ (Karnataka High Court) ಇಬ್ಬರು ನ್ಯಾಯಮೂರ್ತಿಗಳನ್ನೇ ಬ್ಲ್ಯಾಕ್‌ ಮೇಲ್‌ (BlackMail to Judges) ಮಾಡಲಾಗುತ್ತಿದೆಯಂತೆ. ಕರ್ನಾಟಕ ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳಿಗೆ ಮುಂಬೈ ಪೊಲೀಸರ (Mumbai Police) ಸೋಗಿನಲ್ಲಿ ಕರೆ ಮಾಡಿ ಬ್ಲ್ಯಾಕ್‌ಮೇಲ್‌ ಮಾಡಿದ ಅಪರಿಚಿತರ ವಿರುದ್ಧ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ (Blackmail Case) ಎರಡು ಪ್ರಕರಣ ದಾಖಲಿಸಲಾಗಿದೆ.

“ನೀವು ಬಳಸುತ್ತಿರುವ ಸಿಮ್‌ಕಾರ್ಡ್‌ಗಳಿಂದ ಕಾನೂನುಬಾಹಿರ ಜಾಹೀರಾತು ಹಾಗೂ ಆಕ್ಷೇಪಾರ್ಹ ಸಂದೇಶಗಳನ್ನು ಹಾಕುತ್ತಿದ್ದೀರಿ. ಈ ಕಾರಣಕ್ಕಾಗಿ ನಿಮ್ಮ ಮೇಲೆ ಗಂಭೀರ ಪ್ರಕರಣ ದಾಖಲಾಗಲಿದೆ ಎಂದು ಹೆದರಿಸಿ, ನ್ಯಾಯಮೂರ್ತಿಗಳಿಗೆ ಬ್ಲಾಕ್‌ಮೇಲ್‌ ಮಾಡಿದ ಮಾಡಿದ ಪ್ರಕರಣ ಇದಾಗಿದೆ. ಬಗ್ಗೆ ಹೈಕೋರ್ಟ್ ಭದ್ರತಾ ಇನ್‌ಸ್ಪೆಕ್ಟರ್‌ ಜಿ ಶೋಭಾ ಮತ್ತು ಸಬ್‌ಇನ್‌ಸ್ಪೆಕ್ಟರ್‌ ಎ ಆರ್ ರಘುನಾಯ್ಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ

ಪ್ರಕರಣ 1

ನ್ಯಾಯಮೂರ್ತಿ ಎಸ್‌ಜಿ ಪಂಡಿತ್ ಅವರಿಗೆ ಮಾ.15ರಂದು ಸಂಜೆ 4 ಗಂಟೆಗೆ ಅಪರಿಚಿತನೊಬ್ಬ ಕರೆ ಮಾಡಿದ್ದ. ತಾನು ಡಿಒಪಿಟಿ (ಆಡಳಿತ ಸುಧಾರಣೆ ಮತ್ತು ತರಬೇತಿ) ಇಲಾಖೆಯಿಂದ ಕರೆ ಮಾಡುತ್ತಿದ್ದೇನೆ. ನಿಮ್ಮ ಸಿಮ್‌ ಕಾರ್ಡ್‌ನಿಂದ ಕಾನೂನುಬಾಹಿರವಾಗಿ ಜಾಹೀರಾತು ಹಾಗೂ ಆಪೇಕ್ಷಾರ್ಹ ಸಂದೇಶ ಪ್ರಕಟಿಸುತ್ತಿದ್ದೀರಿ. ಹೀಗಾಗಿ ನಿಮ್ಮ ಮೇಲೆ ಮುಂಬೈನಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾತಿಗೆ ಶುರು ಮಾಡಿದ್ದ.

ಬಳಿಕ ಈ ಬಗ್ಗೆ ನೀವು ನಮ್ಮ ಹಿರಿಯ ಅಧಿಕಾರಿಗಳ ಜತೆ ಮಾತನಾಡಿ, ಕರೆ ವರ್ಗಾವಣೆ ಮಾಡುತ್ತೇನೆ ಎಂದು ಹೇಳಿದ್ದ. ಎರಡನೇ ಬಾರಿಗೆ ಮಾತನಾಡಿದ (ಹಿರಿಯ ಪೊಲೀಸ್‌ ಅಧಿಕಾರಿ) ವ್ಯಕ್ತಿ ಏರು ಧ್ವನಿಯಲ್ಲಿ ಮಾತನಾಡಿದ್ದ. ನೀವು ತನಿಖೆಗೆ ಹಾಜರಾಗಬೇಕು, ಇಲ್ಲವಾದರೆ ಇಂತಿಷ್ಟು ಹಣ ಕೊಡಬೇಕು ಎಂದು ಕೇಳಿದ್ದ. ಆದರೆ, ನ್ಯಾಯಮೂರ್ತಿಗಳು ಈ ಕರೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಕರೆ ಸ್ಥಗಿತಗೊಳಿಸಿದ್ದರು ಮತ್ತು ದೂರು ದಾಖಲಿಸುವಂತೆ ಭದ್ರತಾ ಪೊಲೀಸರಿಗೆ ನಿರ್ದೇಶನ ನೀಡಿದ್ದರು.

ಇದನ್ನೂ ಓದಿ : Black Mail Case | ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ವಿಚಾರಣೆಗೆ ಹಾಜರು

ಪ್ರಕರಣ 2

ಅದೇ ದಿನ ಬೆಳಿಗ್ಗೆ 9 ಗಂಟೆಗೆ ಹೈಕೋರ್ಟ್ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಹೇರೂರು ಅವರಿಗೂ ಇದೇ ರೀತಿಯ ಕರೆ ಬಂದಿತ್ತು. ಕರೆ ಮಾಡಿದ್ದ ವ್ಯಕ್ತಿ ನಿಮ್ಮ ಮೇಲೆ ಮುಂಬೈನ ಅಂದೇರಿ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದಿದ್ದ. ಮೊದಲ ಪ್ರಕರಣದಂತೆ ಇಲ್ಲೂ ಹಿರಿಯ ಪೊಲೀಸ್‌ ಅಧಿಕಾರಿ ಜತೆ ಮಾತನಾಡಿ ಎಂದು ಕರೆ ವರ್ಗಾವಣೆ ಮಾಡಿದ್ದ. ಏರುಧ್ವನಿಯಲ್ಲಿ ಮಾತನಾಡಿದ್ದ ಎರಡನೇ ವ್ಯಕ್ತಿ ದುಡ್ಡು ಕೊಟ್ಟರೆ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದನಂತೆ. ಇದೀಗ ಪ್ರದೀಪ್‌ ಸಿಂಗ್‌ ಹೇರೂರು ಅವರೂ ದೂರು ದಾಖಲಿಸಿದ್ದಾರೆ.

ಇದು ಮುಂಬಯಿಯನ್ನು ಕೇಂದ್ರೀಕರಿಸಿಕೊಂಡು ಕಾರ್ಯಾಚರಿಸುತ್ತಿರುವ ತಂಡವಾಗಿದೆ. ನಿಮ್ಮ ಮೇಲೆ ಟ್ರಾಫಿಕ್‌ ಉಲ್ಲಂಘನೆಯ ದೂರಿದೆ, ನಿಮ್ಮ ಸಿಮ್‌ನಿಂದ ಅಶ್ಲೀಲ ವಿಡಿಯೊ ಕಳುಹಿಸಲಾಗಿದೆ ಎಂದೆಲ್ಲ ಹೇಳಿ ವಿಚಾರಣೆಗೆ ಕರೆಯುತ್ತಾರೆ. ತಾವು ಅಂಥ ಯಾವುದೇ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದರೂ ನಿಮ್ಮ ಸಿಮ್‌ ಮೇಲೆ, ನಿಮ್ಮ ವಾಹನದ ಮೇಲೆ ಕೇಸಾಗಿದೆ ಎಂದೇ ಹೇಳುತ್ತಾರೆ. ಕೊನೆಗೆ ಬರಲು ಸಾಧ್ಯವಿಲ್ಲ, ಇತ್ಯರ್ಥ ಮಾಡುವ ಬೇರೆ ದಾರಿಗಳಿವೆಯಾ ಎಂದು ಹೇಳಿದಾಗ ಅವರ ವರಸೆ ಆರಂಭ ಮಾಡುತ್ತಾರೆ ಎನ್ನಲಾಗಿದೆ. ಹಣ ಕೊಟ್ಟರೆ ಎಲ್ಲವನ್ನೂ ಸರಿಪಡಿಸಲಾಗುವುದು ಎಂದು ಅವರು ಹೇಳುತ್ತಾರೆ. ಇದೊಂದು ದೊಡ್ಡ ಜಾಲವಾಗಿದೆ ಎನ್ನಲಾಗಿದೆ. ಹೀಗಾಗಿ ಇಂಥ ಕರೆಗಳೂ ಬಂದಾಗ ಹೆದರಬೇಕಾಗಿಲ್ಲ, ಸಂಬಂಧಿತ ಠಾಣೆಯನ್ನು ವಿಚಾರಿಸಬಹುದಾಗಿದೆ.

Exit mobile version