Site icon Vistara News

MP Pratapsimha : ಪ್ರತಾಪ್‌ಸಿಂಹ ವಿರುದ್ಧ ಹೇಳಿಕೆ ನೀಡದಂತೆ ಕಾಂಗ್ರೆಸ್‌ ವಕ್ತಾರ ಲಕ್ಷ್ಮಣ್‌ಗೆ ಕೋರ್ಟ್‌ ನಿರ್ಬಂಧ

MP Pratapsimha M Lakshman

ಬೆಂಗಳೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್‌ ಸಿಂಹ (MP Pratapsimha) ಮತ್ತು ಕಾಂಗ್ರೆಸ್‌ ವಕ್ತಾರ ಎಂ. ಲಕ್ಷ್ಮಣ್‌ (KPCC Spokesperson M Lakshman) ನಡುವಿನ ಕಾನೂನು ಸಮರ ಮುಂದುವರಿದಿದೆ. ಇದೀಗ ರಾಜ್ಯ ಹೈಕೋರ್ಟ್‌ (Karnataka High Court) ಪ್ರತಾಪ್‌ ಸಿಂಹ ವಿರುದ್ಧ ಯಾವುದೇ ಮಾಧ್ಯಮ ಗೋಷ್ಠಿ ನಡೆಸದಂತೆ ಹಾಗೂ ಮಾನಹಾನಿ ಹೇಳಿಕೆಯನ್ನು (Defamatory Statement) ಯಾವುದೇ ಮಾಧ್ಯಮದ ಮೂಲಕ ಪ್ರಕಟಿಸದಂತೆ ಕೆಪಿಸಿಸಿ ವಕ್ತಾರ ಎಂ ಲಕ್ಷಣ್‌ ಅವರಿಗೆ ಆದೇಶ ನೀಡಿದೆ.

ಕೆಲವು ದಿನಗಳ ಹಿಂದೆ ಸಂಸದ ಪ್ರತಾಪ್‌ ಸಿಂಹ ಅವರು ಲಕ್ಷಣ್‌ ಅವರ ವಿರುದ್ಧ ಕೋರ್ಟ್‌ಗೆ ದಾವೆ ಸಲ್ಲಿಸಿದ್ದರು. ಆಗ ಕೋರ್ಟ್‌ ಪ್ರತಾಪ್‌ಸಿಂಹ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡದಂತೆ ಪತ್ರಿಕಾಗೋಷ್ಠಿ ನಡೆಸದಂತೆ ನಿರ್ಬಂಧಿಸಿತ್ತು. ಅದಾದ ಬಳಿಕ ಲಕ್ಷ್ಮಣ್‌ ಅವರು ಮೇಲ್ಮನವಿ ಸಲ್ಲಿಸಿದಾಗ ತಡೆಯಾಜ್ಞೆಯನ್ನು ತೆರವು ಮಾಡಿತ್ತು.

ತಮ್ಮ ವಿರುದ್ಧ ಸುದ್ದಿಗೋಷ್ಠಿ ನಡೆಸದಂತೆ ವಿಧಿಸಿದ್ದ ಏಕಪಕ್ಷೀಯ ಪ್ರತಿಬಂಧಕಾದೇಶವನ್ನು ತೆರವುಗೊಳಿಸಿ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ಮಾರ್ಚ್‌ 6ರಂದು ಮಾಡಿದ್ದ ಆದೇಶ ಪ್ರಶ್ನಿಸಿ ಪ್ರತಾಪ್‌ ಸಿಂಹ ಸಲ್ಲಿಸಿದ್ದ ಮಿಸಲೇನಿಯಸ್‌ ಫಸ್ಟ್‌ ಅಪೀಲ್‌ (ಎಂಎಫ್‌ಎ) ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಆರ್‌ ನಟರಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಗುರುವಾರ ವಿಚಾರಣೆ ನಡೆಸಿತು.

ಈ ಬಾರಿ ಕೋರ್ಟ್‌ ಹೇಳಿದ್ದೇನು?

  1. ದೇಶದ ಪ್ರತಿಯೊಬ್ಬ ನಾಗರಿಕನಿಗೂ ವಾಕ್‌ ಸ್ವಾತಂತ್ರ್ಯದ ಮೂಲಕ ಮೂಲಭೂತ ಹಕ್ಕು ಖಾತರಿಪಡಿಸಲಾಗಿದ್ದು, ವಾಕ್‌ ಸ್ವಾತಂತ್ರ್ಯ ಬಳಕೆ ಮಾಡುವಾಗ ಆರೋಪ ರುಜುವಾತುಪಡಿಸುವುದಕ್ಕೆ ಸೂಕ್ತವಾದ ದಾಖಲೆ ಇಲ್ಲದಿದ್ದಾಗ ಇನ್ನೊಬ್ಬ ವ್ಯಕ್ತಿಯ ವೃತ್ತಿಪರ ಘನತೆಗೆ ಯಾರೂ ಹಾನಿ ಮಾಡಲಾಗದು.
  2. ಪ್ರತಾಪ್‌ ಸಿಂಹ ಅವರ ವಿರುದ್ದ ಲಕ್ಷ್ಮಣ್‌ ಅವರು ಕಾನೂನಾತ್ಮವಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗಿದೆ. ಆದರೆ, ಲಕ್ಷ್ಮಣ್‌ ಅವರು ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಪ್ರತಾಪ್‌ ವಿರುದ್ಧ ಬಳಕೆ ಮಾಡಿದ್ದಾರೆ.
  3. ಹೀಗಾಗಿ, ಮುಂದೆ ಅವರು ಪ್ರತಾಪ್‌ ಸಿಂಹ ಅವರ ಮಾನಹಾನಿ ಮಾಡುವುದನ್ನು ನಿಲ್ಲಿಸಬೇಕಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಲಕ್ಷ್ಮಣ್‌ಗೆ ನೋಟಿಸ್‌ ಜಾರಿ ಮಾಡಿದ ಕೋರ್ಟ್‌

“ಪ್ರತಿವಾದಿ ಲಕ್ಷ್ಮಣ್‌ ಅವರು ಅರ್ಜಿದಾರ ಪ್ರತಾಪ್‌ ಸಿಂಹ ಅವರ ವಿರುದ್ಧ ಮೇಲ್ಮನವಿ ಇತ್ಯರ್ಥವಾಗುವವರೆಗೆ ಯಾವುದೇ ತೆರನಾದ ಮಾಧ್ಯಮ ಗೋಷ್ಠಿ/ಪ್ರಸಾರ/ಹಂಚಿಕೆಯನ್ನು ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮ ಅಥವಾ ಇನ್ನಾವುದೇ ಮಾಧ್ಯಮದಲ್ಲಿ ಪ್ರಸಾರ/ಪ್ರಕಟ ಮಾಡಬಾರದು. ಪ್ರತಿವಾದಿ ಲಕ್ಷ್ಮಣ್‌ ಅವರು ಈ ಆದೇಶದಲ್ಲಿ ಮಾರ್ಪಾಡು ಕೋರುವ ಹಕ್ಕು ಹೊಂದಿದ್ದಾರೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದ್ದು, ಲಕ್ಷ್ಮಣ್‌ ಅವರಿಗೆ ನೋಟಿಸ್‌ ಜಾರಿ ಮಾಡಲು ಆದೇಶಿಸಿದೆ.

ಇದನ್ನೂ ಓದಿ : MP Pratapsimha : ರಾಮನ ಪೇಟೆಂಟನ್ನು ಬಿಜೆಪಿಗೆ ಕೊಟ್ಟಿದ್ದೇ ಕಾಂಗ್ರೆಸ್‌ ಎಂದ ಪ್ರತಾಪ್‌ಸಿಂಹ

ಪ್ರತಾಪ್‌ಸಿಂಹ ಪರ ವಕೀಲರು ಹೇಳಿದ್ದೇನು?

ಪ್ರತಾಪ್‌ ಸಿಂಹ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಅರುಣ ಶ್ಯಾಮ್‌ ಅವರು “ಲಕ್ಷ್ಮಣ್‌ ಅವರು ಪ್ರತಾಪ್‌ ಸಿಂಹ ಅವರ ವಿರುದ್ಧ ದೋಷಪೂರಿತ ಮತ್ತು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್‌ ಮುಖಂಡರಾದ ಲಕ್ಷ್ಮಣ್‌ ಅವರು ಮೇಲಿಂದ ಮೇಲೆ ಮಾಧ್ಯಮ ಗೋಷ್ಠಿ ನಡೆಸುವ ಮೂಲಕ ಪುಕಾರು ಎಬ್ಬಿಸುವ ಆರೋಪಗಳನ್ನು ಮಾಡುತ್ತಿದ್ದಾರೆ. ಇವು ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಈ ಆರೋಪಗಳು ಪ್ರತಾಪ್‌ ಅವರ ವರ್ಚಸ್ಸಿಗೆ ಧಕ್ಕೆ ಮಾಡುವುದಲ್ಲದೇ ಅವರ ರಾಜಕೀಯ ಬದುಕಿಗೆ ಹಾನಿ ಮಾಡುತ್ತವೆ” ಎಂದು ವಾದಿಸಿದ್ದರು.

ಲಕ್ಷ್ಮಣ್‌ ಬಗ್ಗೆ‌ ಪ್ರತಾಪ್‌ಸಿಂಹ ತಕರಾರೇನು?

  1. ಲಕ್ಷ್ಮಣ್‌ ಅವರು ಇದುವರೆಗೂ ಯಾವುದೇ ಪ್ರಾಧಿಕಾರ ಅಥವಾ ನ್ಯಾಯಾಲಯದಲ್ಲಿ ಪ್ರತಾಪ್‌ ಸಿಂಹ ಅವರ ವಿರುದ್ಧ ದೂರು ದಾಖಲಿಸಿಲ್ಲ.
  2. ವಾಕ್‌ ಸ್ವಾತಂತ್ರ್ಯದ ಅನುಕೂಲ ಬಳಸಿ, ಪ್ರತಾಪ್‌ ಸಿಂಹ ಅವರ ವರ್ಚಸ್ಸಿಗೆ ಹಾನಿಯುಂಟು ಮಾಡುತ್ತಿದ್ದಾರೆ.
  3. ಮಾನಹಾನಿ ಮಾಧ್ಯಮ ಗೋಷ್ಠಿ ನಡೆಸಿದ್ದಕ್ಕಾಗಿ ಲಕ್ಷ್ಮಣ್‌ ವಿರುದ್ಧ ಪ್ರತಾಪ್‌ ಸಿಂಹ ಈಗಾಗಲೇ ಎರಡು ಖಾಸಗಿ ದೂರುಗಳನ್ನು ದಾಖಲಿಸಿದ್ದು, ಅವುಗಳು ವಿಚಾರಣೆಗೆ ಬಾಕಿ ಇವೆ.
  4. ಮೊದಲಿಗೆ ವಿಚಾರಣಾಧೀನ ನ್ಯಾಯಾಲಯವು ಏಕಪಕ್ಷೀಯ ಪ್ರತಿಬಂಧಕಾದೇಶ ಮಾಡಿದ್ದು, ಆನಂತರ ಅದನ್ನು ತೆರವುಗೊಳಿಸಿದೆ. ಇದನ್ನು ಹಾಲಿ ಮೇಲ್ಮನವಿಯಲ್ಲಿ ಪ್ರಶ್ನಿಸಲಾಗಿದೆ.
  5. ವಿಚಾರಣಾಧೀನ ನ್ಯಾಯಾಲಯವು ಮಾಡಿರುವ ಆದೇಶವನ್ನು ಇನ್ನಷ್ಟೇ ಪಡೆಯಬೇಕಿದ್ದು, ಮೇಲ್ಮನವಿ ಇತ್ಯರ್ಥಕ್ಕೆ ಒಳಪಟ್ಟು ಸೂಕ್ತ ಆದೇಶ ಮಾಡಬೇಕು.
Exit mobile version