Site icon Vistara News

Naked Parade : ಜ.1ರೊಳಗೆ ಸಂತ್ರಸ್ತ ಮಹಿಳೆಗೆ ಭೂಮಿ ಹಸ್ತಾಂತರ ; ಹೈಕೋರ್ಟ್‌ ಗಡುವು

Naked Parade Karnataka High Court

ಬೆಂಗಳೂರು: ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಯುವಕ-ಯುವತಿ ಪರಾರಿಯಾಗಿದ್ದಾರೆ ಎಂಬ ಕಾರಣಕ್ಕಾಗಿ ಯುವಕನ ತಾಯಿಯನ್ನು ಯುವತಿ ಕಡೆಯವರು ವಿವಸ್ತ್ರಗೊಳಿಸಿ (Naked Parade) ವಿದ್ಯುತ್‌ ಕಂಬಕ್ಕೆ ಕಟ್ಟಿ ಹಾಕಿ ಅಮಾನವೀಯವಾಗಿ (Inhuman attack on woman) ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಹೈಕೋರ್ಟ್‌ (Karnataka High Court) ಎರಡು ಮಹತ್ವದ ಆದೇಶಗಳನ್ನು ನೀಡಿದೆ. ಇದರಲ್ಲಿ ಒಂದನೆಯದು, ಅಂದು ಮಹಿಳೆಯನ್ನು ವಿವಸ್ತ್ರಗೊಳಿಸಿದಾಗ ನಿಂತು ನೋಡುತ್ತಿದ್ದವರ ಮೇಲೆ ದಂಡ ವಿಧಿಸಬೇಕು ಎನ್ನುವುದು. ಎರಡನೆಯದು, ರಾಜ್ಯ ಸರ್ಕಾರ ಸಂತ್ರಸ್ತ ಮಹಿಳೆಗೆ ನೀಡುವುದಾಗಿ ಭರವಸೆ ನೀಡಿರುವ 2.03 ಎಕರೆ ಭೂಮಿಯನ್ನು ಜನವರಿ 1, 2024ರಂದು ಹಸ್ತಾಂತರಿಸಬೇಕು (Land transfer) ಎಂದು ರಾಜ್ಯ ಸರ್ಕಾರಕ್ಕೆ (Karnataka Government) ಗಡುವು ನೀಡಿದೆ.

ವಿವಸ್ತ್ರ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ ದಾಖಲಿಸಿಕೊಂಡಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ಸೋಮವಾರ ನಡೆಸಿತು. ಬೆಳಗಾವಿಯ ಸವದತ್ತಿ ತಾಲ್ಲೂಕಿನ ಚಳಕಿ ಗ್ರಾಮದ ವ್ಯಾಪ್ತಿಯಲ್ಲಿ 2.03 ಎಕರೆ ಭೂಮಿಯನ್ನು ಸಂತ್ರಸ್ತೆಗೆ ಮಂಜೂರು ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ಕಂದಾಯ ದಾಖಲೆಗಳನ್ನು 2024ರ ಜನವರಿ 1ರೊಳಗೆ ಸರಿಪಡಿಸಿ ಸಂತ್ರಸ್ತೆಯ ಹೆಸರಿಗೆ ವರ್ಗಾಯಿಸಬೇಕು ಎಂದು ನ್ಯಾಯಪೀಠ ಸೂಚಿಸಿತು.

ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ರೂಪಾಯಿ ಮಂಜೂರು ಮಾಡಲಾಗಿದೆ ಎಂಬುದಕ್ಕೆ ನ್ಯಾಯಾಲಯ ಮೆಚ್ಚುಗೆ ಸೂಚಿಸಿದೆ. ಸಂತ್ರಸ್ತೆಯು ಕನಿಷ್ಠ 6-8 ತಿಂಗಳು ಚಿಕಿತ್ಸೆ ಪಡೆಯಬೇಕು ಎಂದು ವೈದ್ಯರ ತಂಡ ತಿಳಿಸಿರುವುದರಿಂದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು (ಡಿಎಲ್‌ಎಸ್‌ಎ) 50 ಸಾವಿರ ರೂಪಾಯಿಯನ್ನು ತಕ್ಷಣಕ್ಕೆ ನೆರವಿನ ರೂಪದಲ್ಲಿ ಸಂತ್ರಸ್ತೆಗೆ ಬಿಡುಗಡೆ ಮಾಡಬೇಕು ಎಂದು ಆದೇಶದಲ್ಲಿ ದಾಖಲಿಸಿದೆ.

ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿದೆ. 13 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ತಿಳಿಸಿದ್ದಾರೆ ಎಂದು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿದೆ.

ಮೂಕ ಪ್ರೇಕ್ಷಕರಾಗಿ ನಿಲ್ಲುವುದು ಕೂಡಾ ಅಪರಾಧ

ಬೆಳಗಾವಿ ಜಿಲ್ಲೆಯ ವಂಟಮುರಿ ಗ್ರಾಮದಲ್ಲಿ 8 ಸಾವಿರ ಜನಸಂಖ್ಯೆ ಇದ್ದು, 50-60 ಮಂದಿ ಘಟನೆಗೆ ಮೂಕಪ್ರೇಕ್ಷಕರಾಗಿದ್ದಾರೆ. ಈ ಜನರ ಸಮ್ಮುಖದಲ್ಲಿ 13 ಮಂದಿ ಆರೋಪಿಗಳು ಮಹಿಳೆಯನ್ನು ವಿವಸ್ತ್ರಗೊಳಿಸಿ, ವಿದ್ಯುತ್‌ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿದ್ದಾರೆ. ಈ ಗುಂಪಿನಲ್ಲಿ ಜಹಾಂಗೀರ್‌ ಎಂಬ ವ್ಯಕ್ತಿ ಸಂತ್ರಸ್ತೆಯ ನೆರವಿಗೆ ಮುಂದಾಗಿದ್ದು, ಆತನ ಮೇಲೂ ಆರೋಪಿಗಳು ದಾಳಿ ನಡೆಸಿದ್ದಾರೆ ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

“ಘಟನೆಗೆ ಸಾಕ್ಷಿಯಾಗಿರುವ 50-60 ಮಂದಿಯಲ್ಲಿ ಜಹಾಂಗೀರ್‌ ಮಾತ್ರ ಸಂತ್ರಸ್ತೆಯ ನೆರವಿಗೆ ಮುಂದಾಗಿದ್ದು, ಉಳಿದವರು ಮೂಕಪ್ರೇಕ್ಷರಾಗಿದ್ದಾರೆ. ಘಟನೆಗೆ ಸಾಕ್ಷಿಯಾಗಿ ಮೂಕಪ್ರೇಕ್ಷರಂತೆ ನಿಲ್ಲುವುದು ದೌರ್ಜನ್ಯಕ್ಕೆ ಕುಮ್ಮಕ್ಕು ನೀಡಿದಂತೆ ಎಂಬುದು ನಮ್ಮ ಅಭಿಪ್ರಾಯ. ಇಂಥ ಸಂದರ್ಭವನ್ನು ಹೇಗೆ ನೋಡಬೇಕು ಎಂಬುದನ್ನು ಗಂಭೀರವಾಗಿ ಆಲೋಚಿಸಲು ಇದು ಸಕಾಲ” ಎಂದು ನ್ಯಾಯಾಲಯ ಆದೇಶದಲ್ಲಿ ಬೇಸರಿಸಿದೆ.

ಹೈಕೋರ್ಟ್‌ನಿಂದ ಪುಂಡ ದಂಡ ಸಲಹೆ

ಬ್ರಿಟಿಷರ ವಸಹಾತುಷಾಹಿ ಕಾಲದಲ್ಲಿ ವಿಲಿಯಂ ಬೆಂಟಿಂಕ್‌ ಎಂಬ ಗವರ್ನರ್‌ ಜನರಲ್‌ ಕಾಲದಲ್ಲಿ ಕಳ್ಳತನ ಅಥವಾ ದಾಂದಲೆ ನಡೆದರೆ ಸಂಚುಕೋರರ ಊರು ಪತ್ತೆ ಮಾಡಿ, ಇಡೀ ಊರಿಗೆ ದಂಡ ವಿಧಿಸಲಾಗುತ್ತಿತ್ತು. ಇಂಥ ಘಟನೆ ನಡೆಯುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಇಡೀ ಊರಿಗೆ ಶಿಕ್ಷೆ ನೀಡಲಾಗುತ್ತಿತ್ತು. ಇದು ಇಲ್ಲಿಯೂ ಅವಶ್ಯ. ಇದರಿಂದ ಮುಂದೆ ಇಂಥ ಘಟನೆ ನಡೆಯದಂತೆ ಸಂದೇಶ ರವಾನೆಯಾಗಬೇಕು ಎಂದು ನ್ಯಾಯಮೂರ್ತಿ ದೀಕ್ಷಿತ್‌ ಅವರು ಮೌಖಿಕವಾಗಿ ಹೇಳಿದ್ದಕ್ಕೆ ಸಿಜೆ ಬೆಂಬಲ ಸೂಚಿಸಿದರು. ಸಂತ್ರಸ್ತೆಗೆ ಸರ್ಕಾರ ಪರಿಹಾರ ನೀಡಿರುವುದನ್ನು ಪಡೆಯಲು ಮುಂದೆ ಯಾರಾದರೂ ನಕಲಿ ಸನ್ನಿವೇಶ ಸೃಷ್ಟಿಸಬಹುದು. ಇದರ ಬಗ್ಗೆಯೂ ಖಾತರಿವಹಿಸಬೇಕು. ಇದರಿಂದ ನೈಜ ಸಂತ್ರಸ್ತ ಫಲಾನುಭವಿಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ನ್ಯಾಯಾಲಯವು ಮೌಖಿಕ ಸಲಹೆ ನೀಡಿತು.

ಇದನ್ನೂ ಓದಿ: ಮಹಿಳೆ ಮೇಲೆ ಹಲ್ಲೆ ಪ್ರಕರಣ; ಮೂಕ ಪ್ರೇಕ್ಷಕರಾಗಿದ್ದ ಗ್ರಾಮಸ್ಥರಿಗೆ ಹೈಕೋರ್ಟ್ ದಂಡ

ಬೇಟಿ ಪಡಾವೋ ಅಲ್ಲ, ಬೇಟಾ ಪಡಾವೋ!

ಇದು ಭೇಟಿ ಬಚಾವೋ, ಬೇಟಿ ಪಡಾವೋ ಅಲ್ಲ. ಹೆಣ್ಣು ಮಗುವನ್ನು ರಕ್ಷಿಸಲು ಇದು ಬೇಟಾ ಪಡಾವೋ ಎಂಬಂತಾಗಿದೆ… ಗಂಡು ಮಗುವಿಗೆ ಸೂಕ್ತ ಮಾರ್ಗದರ್ಶನ ಮಾಡದ ಹೊರತು ನಾವು ಏನನ್ನೂ ಸಾಧಿಸಲಾಗದು. ಹೆಣ್ಣು ಮಗುವನ್ನು ಕೇಂದ್ರೀಕರಿಸಿದರೆ ಅವರು ಸಹಜವಾಗಿ ಇತರ ಮಹಿಳೆಯರನ್ನು ಗೌರವಿಸುತ್ತಾರೆ. ಗಂಡು ಮಗುವಿಗೆ ಮಹಿಳೆಯನ್ನು ಗೌರವಿಸಿ ಮತ್ತು ರಕ್ಷಿಸಿ ಎಂದು ಹೇಳಬೇಕಿದೆ ಎಂದು ಸಿಜೆ ಮೌಖಿಕವಾಗಿ ಹೇಳಿದರು.

ಘಟನೆಯಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಕಾಕತಿ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ವಿಜಯ್‌ಕುಮಾರ್‌ ಸಿನ್ನೂರ ಅವರನ್ನು ಅಮಾನತು ಮಾಡಲಾಗಿದೆ ಎಂಬ ಅಂಶವನ್ನೂ ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ. ಮುಂದಿನ ವಿಚಾರಣೆಯನ್ನು ಜನವರಿ 17ಕ್ಕೆ ಮುಂದೂಡಲಾಗಿದೆ.

Exit mobile version