Site icon Vistara News

DK Shivakumar :ವಿಜಯೇಂದ್ರ ವಿರುದ್ಧ ಪ್ರಚೋದನಾಕಾರಿ ಪೋಸ್ಟ್‌; ಡಿಕೆಶಿ ವಿರುದ್ಧ FIRಗೆ ಕೋರ್ಟ್‌ ಆದೇಶ

DK Shivakumar BY Vijayendra FIR Case

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಮತ್ತು ಬಿಜೆಪಿಯ ಇತರ ಹಲವು ಹಿರಿಯ ನಾಯಕರ ವಿರುದ್ಧ ಸುಳ್ಳು ಮತ್ತು ಪ್ರಚೋದನಾಕಾರಿ ಪೋಸ್ಟ್‌ (Provocative post) ಮಾಡಿದ ಆರೋಪ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಅವರನ್ನು ಸುತ್ತಿಕೊಂಡಿದೆ. ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ತನಿಖೆಗೆ ಆದೇಶ ನೀಡಲಾಗಿದೆ ಎಂದು ತಿಳಿದುಬಂದಿದೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ಬಿ.ಆರ್‌. ನಾಯ್ಡು ಎಂಬವರು ತಮ್ಮ ಫೇಸ್‌ ಬುಕ್‌ ಖಾತೆಯಲ್ಲಿ ಬಿ.ವೈ ವಿಜಯೇಂದ್ರ ಮತ್ತು ಬಿ.ಎಸ್‌. ಯಡಿಯೂರಪ್ಪ ಅವರ ವಿರುದ್ಧ ಪ್ರಚೋದನಾಕಾರಿ ಮತ್ತು ಸುಳ್ಳು ಮಾಹಿತಿಗಳಿರುವ ಪೋಸ್ಟ್‌ ಹಾಕಿದ್ದಾರೆ ಎಂಬ ಆರೋಪದಡಿಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ (Peoples Representatives court) ದೂರು ದಾಖಲಾಗಿತ್ತು. ಯೋಗೇಂದ್ರ ಹೊಡಗಟ್ಟ ಎಂಬವರು ಖಾಸಗಿ ದೂರು ದಾಖಲಿಸಿದ್ದರು.

ಇದೀಗ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಡಿ.ಕೆ. ಶಿವಕುಮಾರ್‌ ಮತ್ತು ಬಿ.ಆರ್‌. ರೆಡ್ಡಿ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆ ಪೊಲೀಸರಿಗೆ ಸೂಚನೆ ನೀಡಿದೆ. ತನಿಖೆ ನಡೆಸಿದ ಬಳಿಕ ಮಾರ್ಚ್‌ 30ರಂದು ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ.

ವಿಜಯೇಂದ್ರ ಅವರ ಪರವಾಗಿ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ದೂರು ನೀಡಲಾಗಿತ್ತು. ಅದನ್ನು ಕೋರ್ಟ್‌ ಪರಿಶೀಲಿಸಿ ಹೈಗ್ರೌಂಡ್ಸ್‌ ಪೊಲೀಸರಿಗೆ ಸೂಚನೆಯನ್ನು ನೀಡಿದೆ.

ಈಶ್ವರಪ್ಪ ವಿರುದ್ಧದ ಪ್ರತಿಭಟನೆ: ಸಿಎಂ, ಸುರ್ಜೆವಾಲಾಗೆ ತಲಾ 10 ಸಾವಿರ ರೂ. ದಂಡ

ಬೆಂಗಳೂರು: ಗುತ್ತಿಗೆದಾರರೊಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಈ ಹಿಂದಿನ ಬಿಜೆಪಿ ಸರ್ಕಾರ ಅವಧಿಯಲ್ಲಿ ಸಚಿವರಾಗಿದ್ದ ಕೆ ಎಸ್‌ ಈಶ್ವರಪ್ಪ ರಾಜೀನಾಮಗೆ ಆಗ್ರಹಿಸಿ ನಡೆಸಿದ್ದ ಪ್ರತಿಭಟನೆ ಸಂಬಂಧ ದಾಖಲಾಗಿದ್ದ ಪ್ರಕರಣವನ್ನು ವಜಾ ಮಾಡಲು ಮಂಗಳವಾರ ನಿರಾಕರಿಸಿರುವ ಕರ್ನಾಟಕ ಹೈಕೋರ್ಟ್‌ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಂ ಬಿ ಪಾಟೀಲ್‌, ರಾಮಲಿಂಗಾರೆಡ್ಡಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲಾ ಅವರಿಗೆ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆದೇಶ ಮಾಡಿದೆ. ಅಲ್ಲದೇ, ತೀರ್ಪಿಗೆ ತಡೆ ಕೋರಿರುವ ಮನವಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಂ ಬಿ ಪಾಟೀಲ್‌, ರಾಮಲಿಂಗಾರೆಡ್ಡಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲಾ ಅವರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

“ನಿಮ್ಮೆಲ್ಲರ ವಾದವನ್ನು ಪರಿಗಣಿಸಿದ್ದೇನೆ. ಅಮೆರಿಕಾದ ಒಂದು ತೀರ್ಪು ಮತ್ತು ಸುಪ್ರೀಂ ಕೋರ್ಟ್‌ನ ಮೂರು ತೀರ್ಪುಗಳನ್ನು ಉಲ್ಲೇಖಿಸಿದ್ದು, ಎಲ್ಲಾ ಅರ್ಜಿಗಳನ್ನು ವಜಾ ಮಾಡಲಾಗಿದೆ” ಎಂದು ನ್ಯಾ. ದೀಕ್ಷಿತ್‌ ಹೇಳಿದರು.

“ಅರ್ಜಿದಾರರು ಅಧೀನ ನ್ಯಾಯಾಲಯಕ್ಕೆ ಒಂದೇ ದಿನ ಹೋದರೆ ಗದ್ದಲವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ವಿಭಿನ್ನ ದಿನಾಂಕಗಳನ್ನು ನಿಗದಿಪಡಿಸಿದ್ದೇನೆ. ನಿಗದಿಪಡಿಸಿರುವ ದಿನದಂದು ಅರ್ಜಿದಾರರು ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರಾಗಿ ಆದೇಶ ಪಡೆಯಬಹುದು” ಎಂದಿದ್ದಾರೆ.

“ಸಿದ್ದರಾಮಯ್ಯ ಮಾರ್ಚ್‌ 6ರಂದು, ರಣದೀಪ್‌ ಸುರ್ಜೇವಾಲಾ ಅವರು ಮಾರ್ಚ್‌ 7ರಂದು, ಎಂ ಬಿ ಪಾಟೀಲ್‌, ರಾಮಲಿಂಗಾ ರೆಡ್ಡಿ ಅವರು ಮಾರ್ಚ್‌ 15ರಂದು ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿ, ಆದೇಶ ಪಡೆಯಬೇಕು” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

“ಎಲ್ಲಾ ಅರ್ಜಿದಾರರು ತಲಾ 10 ಸಾವಿರ ರೂಪಾಯಿಗಳನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಸಲ್ಲಿಸಬೇಕು. ಪೊಲೀಸ್‌ ಅಧಿಕಾರಿಯನ್ನು ಯಾವುದೇ ಸಮರ್ಥನೆ ನೀಡದೆ ಪ್ರತಿವಾದಿಯಾಗಿಸಿರುವುದಕ್ಕೆ ದಂಡ ವಿಧಿಸಲಾಗಿದ್ದು, ಆಕೆಯನ್ನು ವ್ಯಕ್ತಿಗತವಾಗಿ ಪ್ರತಿವಾದಿಯನ್ನಾಗಿಸಲಾಗಿದೆ. ರಾಜಕೀಯ ಪ್ರೇರಿತ ಎಂದು ಅರ್ಜಿಯಲ್ಲಿ ಹೇಳಿರುವುದನ್ನು ಬಿಟ್ಟರೆ ಪೊಲೀಸ್‌ ಅಧಿಕಾರಿಯನ್ನು ಏಕೆ ಪ್ರತಿವಾದಿಯನ್ನಾಗಿಸಲಾಗಿದೆ ಎಂಬುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿಲ್ಲ” ಎಂದು ನ್ಯಾಯಾಲಯ ವಿವರಿಸಿದೆ.

Exit mobile version