ಚಿಕ್ಕಮಗಳೂರು: 2021ರಲ್ಲಿ ಶೃಂಗೇರಿಯಲ್ಲಿ ಸಂಭವಿಸಿ, ರಾಜ್ಯಾವನ್ನೇ ಬೆಚ್ಚಿಬೀಳಿಸಿದ್ದ 15 ವರ್ಷದ ಬಾಲಕಿಯೊಬ್ಬಳ (POCSO Case) ಸಾಮೂಹಿಕ ಮತ್ತು ಅತ್ಯಾಚಾರ ಪ್ರಕರಣಕ್ಕೆ (Physical Abuse) ಸಂಬಂಧಿಸಿ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ಬಾಲಕಿಯ ತಾಯಿ (Mother of girl Sentenced) ಸೇರಿದಂತೆ ನಾಲ್ವರಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ (20 years jail term).
ಬಾಲಕಿಯ ತಾಯಿ ಗೀತಾ, ಗಿರೀಶ್ ಮತ್ತು ದೇವಿ ಶರಣ್‌ಗೆ ತಲಾ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಪ್ರಕರಣದ ಪ್ರಧಾನ ಆರೋಪಿಯಾದ ಅಭಿನಂದನ್ ಅಲಿಯಾನ್ ಸ್ಮಾಲ್ ಅಭಿಗೆ 22 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಎಲ್ಲರಿಗೂ ತಲಾ 25 ಸಾವಿರ ರೂ. ದಂಡ ವಿಧಿಸಿ ಕೋರ್ಟ್ ಶಿಕ್ಷೆ ನೀಡಿದೆ.
ಏನಿದು ಬೆಚ್ಚಿ ಬೀಳಿಸಿದ ಅತ್ಯಾಚಾರ ಪ್ರಕರಣ?
2021ರ ಜನವರಿ 27ರಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಅತ್ಯಂತ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿತ್ತು. 15 ವರ್ಷದ ಬಾಲಕಿಯೊಬ್ಬಳ ಮೇಲೆ 52 ದಿನಗಳ ಕಾಲ ನಿರಂತರ ಅತ್ಯಾಚಾರ ನಡೆಸಿದ ಅತ್ಯಂತ ಹೇಯ ಕೃತ್ಯವದು. ಅತ್ಯಾಚಾರ ಮಾಡಿದ್ದು ಕೂಡಾ ಒಬ್ಬಿಬ್ಬರಲ್ಲ. 52 ಮಂದಿ ಅತ್ಯಾಚಾರ ಮಾಡಿದ್ದಾಗಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.
ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದ ಈ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಮತ್ತೊಂದು ಭಯಾನಕ ಅಂಶವೆಂದರೆ, ಇದು ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವೇ ಆದರೂ ಆ ಹುಡುಗಿಯನ್ನು ಈ ರೀತಿಯಾಗಿ ಅತ್ಯಾಚಾರದ ಭೀಭತ್ಸ ಕೃತ್ಯಕ್ಕೆ ಒಳಪಡಿಸಿದ್ದು ಸ್ವತಃ ಆಕೆಯ ತಾಯಿ ಗೀತಾ! ಎಂಬುದು ಬೆಳಕಿಗೆ ಬಂದಿತ್ತು.
2020ರ ಸೆಪ್ಟೆಂಬರ್ ನಿಂದ 2021ರ ಜನವರಿವರೆಗೆ ಈ ಬಾಲಕಿಯನ್ನು ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ ಮಾಡಲಾಗಿದೆ. ಸ್ವತಃ ತಾಯಿಯೇ ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಾಳೆ ಎನ್ನುವ ಅಂಶ ಬಳಿಕ ಬೆಳಕಿಗೆ ಬಂತು. ಪೊಲೀಸರು 53 ಮಂದಿಯನ್ನು ಆರೋಪಿಗಳೆಂದು ಗುರುತಿಸಲಾಗಿತ್ತು.
ಇದನ್ನೂ ಓದಿ : Physical Abuse : ಚರ್ಚ್ ಧರ್ಮಗುರು ವಿರುದ್ಧ ಎಫ್‌ಐಆರ್; ಪ್ರಾರ್ಥನೆಗೆ ಬಂದವಳ ಮೇಲೆ ಅತ್ಯಾಚಾರ
ಕೋರ್ಟ್‌ನಲ್ಲಿ ನಾಲ್ವರಿಗೆ ಶಿಕ್ಷೆ, 49 ಮಂದಿ ಖುಲಾಸೆ
ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಈ ಪ್ರಕರಣದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ ಹಲವರನ್ನು ಅಮಾನತು ಮಾಡಲಾಗಿತ್ತು. ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಒಂದೇ ಪ್ರಕರಣದಲ್ಲಿ 38 ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದ್ದರು. ಅಂತಿಮವಾಗಿ ಕೋರ್ಟ್ ಎಲ್ಲ ವಿಚಾರಗಳನ್ನು ಪರಿಗಣಿಸಿ ನಾಲ್ಕು ಜನರ ಮೇಲಿನ ಅಪರಾಧ ಸಾಬೀತಾಗಿದೆ ಎಂದು ಹೇಳಿದೆ. ಉಳಿದ 49 ಮಂದಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. ನ್ಯಾಯಮೂರ್ತಿ ಶಾಂತಣ್ಣ ಆಳ್ವ ಅವರು ನಾಲ್ಕು ದಿನಗಳ ಹಿಂದೆ ಈ ನಾಲ್ವರನ್ನು ದೋಷಿಗಳೆಂದು ತೀರ್ಪು ನೀಡಿದ್ದರು ಮತ್ತು ಅವರ ಶಿಕ್ಷೆಯನ್ನು ಸೋಮವಾರ ಪ್ರಕಟಿಸಿದರು.
ತಾಯಿ ಗೀತಾ ಅವಳೇ ಹಣಕ್ಕಾಗಿ ಈ ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಳು. ಆಕೆಯನ್ನು ಮೊದಲ ಬಾರಿ ಬಳಸಿಕೊಂಡಿದ್ದು ಅಭಿ ಎಂಬಾತ. ಬಳಿಕ ಆತನೇ ವಿಡಿಯೊ ಬಳಸಿ ಬ್ಲ್ಯಾಕ್‌ಮೇಲ್ ಮಾಡಿ ಬೇರೆಯವರೂ ಆಕೆಯ ಮೇಲೆ ಅತ್ಯಾಚಾರ ಮಾಡುವಂತೆ ಮಾಡಿದ್ದಾನೆ. ಗಿರೀಶ್ ಹಾಗೂ ದೇವಿಶರಣ್ ಎಂಬವರಿಗೂ ಶಿಕ್ಷೆ ವಿಧಿಸಲಾಗಿದೆ.
ಉಳಿದವರಿಗೆ ಯಾಕೆ ಶಿಕ್ಷೆ ಇಲ್ಲ?
ಬಾಲಕಿಯ ಮೇಲೆ 52 ಮಂದಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ಶಿಕ್ಷೆ ಕೇವಲ ನಾಲ್ವರಿಗೆ ಮಾತ್ರ ಸಿಕ್ಕಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವೇಶ್ಯಾವಾಟಿಕೆಗೆ ದೂಡಿದವರು ಅಪರಾಧಿಗಳೇ ಹೊರತು ಹಣ ನೀಡಿ ಗ್ರಾಹಕರಾಗಿ ಹೋಗುವುದು ತಪ್ಪಲ್ಲ. ಬಲವಂತವಾಗಿ ಬೆದರಿಸಿ, ಪ್ರೇರೇಪಿಸಿ ಅತ್ಯಾಚಾರಕ್ಕೆ ತಳ್ಳುವುದು ತಪ್ಪು ಎಂದು ಹೇಳಿದೆ. ಹೀಗಾಗಿ ಕೋರ್ಟ್ ಉಳಿದವರನ್ನು ಖುಲಾಸೆಗೊಳಿಸಿದೆ ಎನ್ನಲಾಗಿದೆ.