ಬೆಂಗಳೂರು: 11 ವರ್ಷಗಳ ಹಿಂದೆ ನಡೆದ ಧರ್ಮಸ್ಥಳದ ಸೌಜನ್ಯಾ ಕೊಲೆ (Soujanya Case) ಮತ್ತು ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಸಂತೋಷ್ ರಾವ್‌ನನ್ನು (Santhosh Rao) ಖುಲಾಸೆಗೊಳಿಸಿದ ಕೇಂದ್ರೀಯ ತನಿಖಾ ದಳವು (Central Bureau of Investigation-CBI) ವಿಶೇಷ ನ್ಯಾಯಾಲಯದ (CBI Special court) ಆದೇಶವನ್ನು ಪ್ರಶ್ನಿಸಿ ಸಿಬಿಐ ರಾಜ್ಯ ಹೈಕೋರ್ಟ್‌ಗೆ (Karnataka High court) ಮೇಲ್ಮನವಿ ಸಲ್ಲಿಸಿದೆ. ಇದರೊಂದಿಗೆ ಸಂತೋಷ್ ರಾವ್‌ನೇ ಅರೋಪಿ ಎಂಬ ಬಗ್ಗೆ ಪೂರ್ಣ ಸಾಕ್ಷ್ಯ ನೀಡಲು ವಿಫಲವಾಗಿದ್ದ ಸಿಬಿಐ ಮತ್ತೊಂದು ಸುತ್ತಿನ ಪ್ರಯತ್ನಕ್ಕೆ ಇಳಿದಿದೆ.
ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ತನಿಖೆ ನಡೆದಿತ್ತು. ಅದರ ವಿಚಾರಣೆ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ನಡೆದಿತ್ತು. ನ್ಯಾಯಾಲಯವು ಸಂತೋಷ್ ರಾವ್ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಸಿಬಿಐ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ತೀರ್ಮಾನಕ್ಕೆ ಬಂದು ಆತನನ್ನು ನಿರಪರಾಧಿ ಎಂದು ಬಿಡುಗಡೆ ಮಾಡಿತ್ತು. 2023ರ ಜುಲೈ 16ರಂದು ನೀಡಿದ ತೀರ್ಪಿನ ವಿರುದ್ಧ ಈಗ ಮೇಲ್ಮನವಿ ಸಲ್ಲಿಸಲಾಗಿದೆ.
ಚರ್ಚೆಗೆ ಕಾರಣವಾದ ಸಿಬಿಐ ಕೋರ್ಟ್ ತೀರ್ಪು
ಧರ್ಮಸ್ಥಳದಲ್ಲಿ ನಡೆದ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೊದಲಿನಿಂದಲೂ ಭಾರಿ ವಾದ ವಿವಾದಗಳು ಇದ್ದವು. ಆರಂಭದಿಂದಲೂ ಒಂದು ಗುಂಪು ಧರ್ಮಸ್ಥಳದ ಕೆಲವು ಗಣ್ಯ ವ್ಯಕ್ತಿಗಳನ್ನು ಬೆಟ್ಟು ಮಾಡಿ ಅವರು ಮತ್ತು ಅವರ ಬಂಧುಗಳು ಈ ಕೃತ್ಯದ ರೂವಾರಿಗಳು ಎಂದು ಆಪಾದಿಸಿದ್ದರು. ಆದರೆ, ಪೊಲೀಸರು ಕಾರ್ಕಳ ಮೂಲದ ಸಂತೋಷ್ ರಾವ್‌ನನ್ನು ಆರೋಪಿ ಎಂದು ಬಂಧಿಸಿದ ಬಳಿಕ ಅದರ ತೀವ್ರತೆ ಸ್ವಲ್ಪ ತಣ್ಣಗಾಗಿತ್ತು. ಆದರೆ, ಯಾವಾಗ ಸಿಬಿಐ ನ್ಯಾಯಾಲಯವು ಸಂತೋಷ್ ರಾವ್ ನಿರಪರಾಧಿ ಎಂದು ಘೋಷಿಸಿತೋ ಆಗ ನಿಜವಾದ ಆರೋಪಿಗಳು ಯಾರು ಎನ್ನುವ ಪ್ರಶ್ನೆ ಬೃಹದಾಕಾರವಾಗಿ ಎದ್ದು ನಿಂತಿತ್ತು.
ಜತೆಗೆ ಕರಾವಳಿಯಲ್ಲಿ ಈ ಪ್ರಕರಣದ ಮರು ತನಿಖೆ ನಡೆಯಬೇಕು ಎಂಬ ಒತ್ತಾಯ ಒಂದು ವರ್ಗದಿಂದ ಬಲವಾಗಿ ಕೇಳಿಬಂತು. ಇನ್ನೊಂದು ಗುಂಪು ಸಂತೋಷ್ ರಾವ್‌ನೇ ಅಪರಾಧಿ, ಆದರೆ, ಸಿಬಿಐಗೆ ಅದನ್ನು ಪೂರ್ಣ ಪ್ರಮಾಣದಲ್ಲಿ ಸಾಬೀತುಪಡಿಸಲು ಸಾಧ್ಯವಾಗಿಲ್ಲ ಅಷ್ಟೆ ಎಂದು ಹೇಳುತ್ತಿದೆ. ಒಟ್ಟಿನಲ್ಲಿ ಧರ್ಮ ಸಂಘರ್ಷದ ರೂಪ ತಳೆಯುತ್ತಿರುವ ಹೊತ್ತಿನಲ್ಲಿ ಸಿಬಿಐ ಇದೀಗ ನ್ಯಾಯಾಲಯದ ಆದೇಶದ ವಿರುದ್ಧ ಹೈಕೋರ್ಟ್ ಕದ ತಟ್ಟಿದೆ.
ಮರು ತನಿಖೆ ಕೋರಿದ್ದ ದಾವೆ ವಜಾಗೊಳಿಸಿದ್ದ ಹೈಕೋರ್ಟ್
ಹಿಂದೊಮ್ಮೆ ಈ ಪ್ರಕರಣದ ಮರು ತನಿಖೆ ಕೋರಿ ಬೆಂಗಳೂರಿನ ಶೇಷಾದ್ರಿಪುರದ ಸಾಮಾಜಿಕ ಕಾರ್ಯಕರ್ತ ಗಿರೀಶ್ ಭಾರದ್ವಾಜ್, ಬೆಳ್ತಂಗಡಿಯ ಜಿ ನವೀನ್ ಕುಮಾರ್ ಮತ್ತು ಪುತ್ತೂರಿನ ವಿನಾಯಕ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಆ ಸಂದರ್ಭದಲ್ಲಿ ಅದು ಕೆಲವೊಂದು ಪರ್ಯಾಯ ಮಾರ್ಗಗಳನ್ನು ಸೂಚಿಸಿತ್ತು. ಪ್ರಕರಣದಲ್ಲಿ ಸರ್ಕಾರ, ಮೂಲ ದೂರುದಾರರು ಅಥವಾ ಸಂತ್ರಸ್ತ ಕುಟುಂಬವು ಆರೋಪಿಯನ್ನು ದೋಷಮುಕ್ತಗೊಳಿಸಿದ ವಿಚಾರಣಾಧೀನ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ. ಮೇಲ್ಮನವಿಯಲ್ಲಿ ತನಿಖಾ ಲೋಪಗಳನ್ನು ಪರಿಗಣಿಸಬಹುದಾಗಿದೆ ಎಂದು ಹೇಳಿತ್ತು. ಆದರೆ, ಮನೆಯವರು ಈ ಅವಕಾಶವನ್ನು ಬಳಸಿಕೊಂಡಿಲ್ಲ.
ಅವಧಿ ಮುಗಿದ ಮೇಲೆ ಮೇಲ್ಮನವಿ ಸಲ್ಲಿಸಿದ ಸಿಬಿಐ
ಜುಲೈ 16ರಂದು ಸಂತೋಷ್ ರಾವ್ ನಿರ್ದೋಷಿ ಎಂದು ತೀರ್ಪು ನೀಡಿದ್ದ ಬೆಂಗಳೂರು ಸಿಬಿಐ ವಿಶೇಷ ನ್ಯಾಯಾಲಯವು ಮೇಲ್ಮನವಿ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಿತ್ತು. ಆದರೆ, ಈಗ ನಾಲ್ಕು ತಿಂಗಳ ಬಳಿಕ ಮನವಿ ಮಾಡಿರುವುದರಿಂದ ಇದನ್ನು ಹೈಕೋರ್ಟ್ ಮಾನ್ಯ ಮಾಡುವುದೇ ಎಂದು ಕಾದು ನೋಡಬೇಕಾಗಿದೆ.
ಸಂತೋಷ್ ರಾವ್‌ನೇ ನಿಜವಾದ ಆರೋಪಿ ಎಂದು ಸಿಬಿಐ ಮೇಲ್ಮನವಿಯಲ್ಲಿಯೂ ವಾದ ಮಾಡಿದೆ ಮತ್ತು ಮರು ವಿಚಾರಣೆಯ ವೇಳೆ ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಒದಗಿಸುವ ಭರವಸೆ ನೀಡಿದೆ ಎನ್ನಲಾಗಿದೆ.
ಏನಿದು ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ?
2012ರ ಅಕ್ಟೋಬರ್ 10ರಂದು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಪಾಂಗಾಳ ಎಂಬಲ್ಲಿ ಸೌಜನ್ಯ ಎಂಬ 17 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ನಡೆದಿತ್ತು. ಉಜಿರೆಯ ಎಸ್‌ಡಿಎಂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಆಕೆ ಕಾಲೇಜು ಮುಗಿಸಿ ಧರ್ಮಸ್ಥಳಕ್ಕೆ ಬಂದು ಬಸ್‌ನಿಂದ ಇಳಿದು ಮನೆಗೆ ಹೋಗುತ್ತಿದ್ದಾಗ ದಾರಿಯಲ್ಲಿ ಆಕೆಯ ಕೊಲೆ ಮತ್ತು ಅತ್ಯಾಚಾರ ನಡೆದಿತ್ತು.
ಪ್ರಕರಣವನ್ನು ಮೊದಲಿಗೆ ಬೆಳ್ತಂಗಡಿ ಠಾಣಾ ಪೊಲೀಸರು ತನಿಖೆ ನಡೆಸಿದ್ದರು. ತನಿಖಾಧಿಕಾರಿಗಳು ಕಾರ್ಕಳ ಮೂಲದ ಸಂತೋಷ್ ರಾವ್ ಎಂಬಾತನನ್ನು ಆರೋಪಿಯಾಗಿ ಗುರುತಿಸಿದ್ದರು. ಮುಂದೆ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು. ಸಿಬಿಐ ವಿಶೇಷ ನ್ಯಾಯಾಲಯವು 2023ರ ಜುಲೈ 16ರಂದು ಆರೋಪಿಯನ್ನು ಖುಲಾಸೆಗೊಳಿಸಿತ್ತು. ಇದರಿಂದ ವಿವಿಧ ಸಂಘಟನೆಗಳು ರಾಜಕೀಯ ಪಕ್ಷಗಳು ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿವೆ. ಹೀಗಾಗಿ, ಮರು ತನಿಖೆಗೆ ಆದೇಶಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದರು. ಕೋರ್ಟ್ ಈಗ ಮೇಲ್ಮನವಿಗೆ ಸೂಚನೆ ನೀಡಿದೆ.