Site icon Vistara News

Sullia Murder : ಕೆವಿಜಿ ಪ್ರಿನ್ಸಿಪಾಲ್‌ ರಾಮಕೃಷ್ಣ ಕೊಲೆ ಕೇಸ್; ರೇಣುಕಾಪ್ರಸಾದ್‌ ಸೇರಿ 6 ಮಂದಿಗೆ ಮತ್ತೆ ಸಂಕಷ್ಟ

Sullia Murder case

ಬೆಂಗಳೂರು: 12 ವರ್ಷದ ಹಿಂದೆ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಸುಳ್ಯ ಕೆವಿಜಿ ಪಾಲಿಟೆಕ್ನಿಕ್‌ (Sullia KVG polytechnic) ಪ್ರಾಂಶುಪಾಲರಾಗಿದ್ದ ಎ.ಎಸ್‌ ರಾಮಕೃಷ್ಣ (former Principal AS Ramakrishna) ಅವರ ಕೊಲೆ ಪ್ರಕರಣಕ್ಕೆ (Sullia Murder) ಮಹತ್ವದ ತಿರುವು ದೊರೆತಿದೆ. ಡಾ.ರೇಣುಕಾ ಪ್ರಸಾದ್‌ (Dr. Renuka prasad) ಸೇರಿದಂತೆ ಆರು ಮಂದಿಯನ್ನು ಕೊಲೆ ಪ್ರಕರಣದಿಂದ ಖುಲಾಸೆಗೊಳಿಸಿದ ಕೆಳ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ (High court Cancels auittal) ರದ್ದು ಮಾಡಿದೆ. ಅಂದರೆ, ಅವರನ್ನು ದೋಷಿಗಳು ( ಎಂದೆ ತೀರ್ಮಾನಿಸಿ ಆದೇಶ ಹೊರಡಿಸಿದೆ.

ಪ್ರಕರಣದಲ್ಲಿ ರೇಣುಕಾ ಪ್ರಸಾದ್‌ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಪುತ್ತೂರಿನ 5ನೇ ಹೆಚ್ಚುವರಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಈ ಹಿಂದೆ ಆದೇಶ ಹೊರಡಿಸಿತ್ತು. ಈ ಆದೇಶವನ್ನು ರದ್ದು ಮಾಡಬೇಕು, ಇವರೇ ಆರೋಪಿಗಳಾಗಿದ್ದು ಅವರಿಗೆ ಶಿಕ್ಷೆ ವಿಧಿಸಬೇಕು ಎಂದು ಕೋರಿ ರಾಜ್ಯ ಸರ್ಕಾರದ ಪರವಾಗಿ ಪುತ್ತೂರು ಉಪ ವಿಭಾಗದ ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ಹೈಕೋರ್ಟ್‌ ಪುರಸ್ಕರಿಸಿದೆ. ನ್ಯಾಯಮೂರ್ತಿಗಳಾದ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಮತ್ತು ಜಿ ಬಸವರಾಜ ಅವರ ನೇತೃತ್ವದ ವಿಭಾಗೀಯ ಪೀಠವು ಎಎಸ್‌ಪಿ ಮನವಿಗೆ ಸಮ್ಮತಿಸಿದೆ.

ಮತ್ತೆ ಸಂಕಷ್ಟಕ್ಕೆ ಸಿಲುಕಿದ ಆರೋಪಿಗಳು ಯಾರು? ಶಿಕ್ಷೆ ತೀರ್ಮಾನ ಯಾವಾಗ?

ಪ್ರಕರಣದ ಒಟ್ಟು ಏಳು ಮಂದಿ ಆರೋಪಿಗಳ ಪೈಕಿ ಡಾ. ರೇಣುಕಾ ಪ್ರಸಾದ್‌, ಮನೋಜ್‌ ರೈ, ಎಚ್‌ ಆರ್ ನಾಗೇಶ್‌, ವಾಮನ ಪೂಜಾರಿ, ಶರಣ್‌ ಪೂಜಾರಿ ಮತ್ತು ಶಂಕರ ಅವರನ್ನು ಮೃತ ಎ ಎಸ್‌ ರಾಮಕೃಷ್ಣ ಅವರ ಹತ್ಯೆ ಮತ್ತು ಕೊಲೆಗೆ ಒಳಸಂಚು ರೂಪಿಸಿದ ಪ್ರಕರಣದಲ್ಲಿ ದೋಷಿಗಳು ಎಂದು ತೀರ್ಮಾನಿಸಿದೆ. ಆದರೆ, ಏಳನೇ ಆರೋಪಿಯಾಗಿದ್ದ ಎಚ್‌ ಯು ನಾಗೇಶ್‌ ಕುಮಾರ್‌ ಅವರನ್ನು ಖುಲಾಸೆಗೊಳಿಸಿದ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಇದೇ ವೇಳೆ ಮಾನ್ಯ ಮಾಡಿದೆ. ಅಲ್ಲದೆ, ದೋಷಿಗಳಿಗೆ ಶಿಕ್ಷೆ ಪ್ರಮಾಣ ನಿಗದಿಪಡಿಸುವ ಕುರಿತು ಅಕ್ಟೋಬರ್‌ 5ರಂದು ವಿಚಾರಣೆ ನಡೆಸುವುದಾಗಿ ಪೀಠ ತಿಳಿಸಿದೆ.

ಕುರುಂಜಿ ವೆಂಕಟರಮಣ ಗೌಡರು ಕಟ್ಟಿದ ಸಾಮ್ರಾಜ್ಯಕ್ಕಾಗಿ…

ಕುರುಂಜಿ ವೆಂಕಟರಮಣ ಗೌಡ ಅವರು ಸುಳ್ಯದ ಕುರುಂಜಿಯ ಬರಡು ನೆಲದಲ್ಲಿ ಶಿಕ್ಷಣದ ಬೀಜ ಬಿತ್ತಿ ರಾಜ್ಯಕ್ಕೆ ಮಾದರಿಯಾದವರು. ಕೆವಿಜಿ ಅಕಾಡೆಮಿ ಆಫ್‌ ಲಿಬರಲ್‌ ಎಜುಕೇಷನ್‌ ಇನ್‌ಸ್ಟಿಟ್ಯೂಷನ್ಸ್‌ ಅನ್ನು ಸ್ಥಾಪಿಸಿದ್ದರು. ಪ್ರಾಥಮಿಕ ಶಾಲೆಯಿಂದ ಆರೋಪಿಸಿ ಕಾಲೇಜಿನವರೆಗೆ, ಸ್ನಾತಕೋತ್ತರ ತರಗತಿಗಳವರೆಗೆ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿದ್ದರು. ಹೆಚ್ಚೇನೂ ಅಕ್ಷರಾಭ್ಯಾಸ ಇಲ್ಲದ ಇವರು ಸುಮಾರು 40 ವರ್ಷಗಳ ಹಿಂದೆಯೇ ಎಂಜಿನಿಯರಿಂಗ್‌ ಕಾಲೇಜು ಕಟ್ಟಿದ್ದರು. ಕಾನೂನು ಕಾಲೇಜು, ಪಾಲಿಟೆಕ್ನಿಕ್‌, ಮೆಡಿಕಲ್‌, ನರ್ಸಿಂಗ್‌ ಸೇರಿದಂತೆ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಕಠಿಣ ಪರಿಶ್ರಮದಿಂದ ಕಟ್ಟಿ ನಿಲ್ಲಿಸಿದ್ದರು.

ವಯಸ್ಸಾದ ಮತ್ತು ಅನಾರೋಗ್ಯ ಕಾಡಿದ ಕಾರಣ ಶೈಕ್ಷಣಿಕ ಸಂಸ್ಥೆಗಳ ನಿರ್ವಹಣೆ ಹೊಣೆಯನ್ನು ಅವರು ಹಿರಿಯ ಪುತ್ರ ಕೆ ವಿ ಚಿದಾನಂದ ಮತ್ತು ಕಿರಿಯ ಪುತ್ರ ರೇಣುಕಾ ಪ್ರಸಾದ್‌ ಅವರಿಗೆ ವಿಭಜನೆ ಮಾಡಿ ಕೊಟ್ಟಿದ್ದರು. ಕುರುಂಜಿ ವೆಂಕಟರಮಣ ಗೌಡರ ಆಪ್ತರಾಗಿದ್ದು, ಆಡಳಿತಾಧಿಕಾರಿಯಾಗಿದ್ದ ಎಎಸ್‌ ರಾಮಕೃಷ್ಣ ಅವರು ಕೆವಿಜಿ ಪಾಲಿಟೆಕ್ನಿಕ್‌ ಕಾಲೇಜು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಆಸ್ತಿ, ಶೈಕ್ಷಣಿಕ ಸಂಸ್ಥೆಗಳ ಹೊಣೆಗಾರಿಕೆ ವಿಭಜನೆಯನ್ನು ರಾಮಕೃಷ್ಣ ಅವರ ಸಲಹೆ ಮೇರೆಗೆ ಮಾಡಲಾಗಿದೆ ಎಂದು ಭಾವಿಸಿದ್ದ ರೇಣುಕಾ ಪ್ರಸಾದ್, ಚಿದಾನಂದ ಅವರು ಸಿಟ್ಟಿಗೆದ್ದಿದ್ದರು. ಕೆವಿಜಿ ಮೆಡಿಕಲ್‌ ಕಾಲೇಜು ವ್ಯವಹಾರಗಳನ್ನು ಸಹ ರಾಮಕೃಷ್ಣ ಅವರೇ ನೋಡಿಕೊಳ್ಳುತ್ತಿದ್ದಾರೆ ಎಂದು ಭಾವಿಸಿ ರಾಮಕೃಷ್ಣ ಕೊಲೆಗೆ ಸುಪಾರಿ ನೀಡಲಾಗಿತ್ತು.

ಆವತ್ತು ಮುಂಜಾನೆ ನಡೆದಿತ್ತು ಕೊಲೆ

2011ರ ಏಪ್ರಿಲ್‌ 28ರಂದು ಬೆಳಗ್ಗೆ 7.45ರ ವೇಳೆಯಲ್ಲಿ ಅಂಬೆತಡ್ಕ ಬಳಿಯ ಶ್ರೀಕೃಷ್ಣ ಆಯುರ್ವೇದಿಕ್‌ ಥೆರಪಿ ಕ್ಲಿನಿಕ್‌ ರಸ್ತೆಯಲ್ಲಿ ವಾಕಿಂಗ್‌ ಮಾಡುತ್ತಿದ್ದ ರಾಮಕೃಷ್ಣ ಅವರ ಮೇಲೆ ಆರೋಪಿಗಳು ದಾಳಿ ನಡೆಸಿ, ಕೊಚ್ಚಿ ಕೊಲೆ ಮಾಡಿದ್ದರು. ಪ್ರಕರಣ ಸಂಬಂಧ ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಮೃತನ ಸಹೋದರ ರೇಣುಕಾ ಪ್ರಸಾದ್‌ ಮೊದಲ ಆರೋಪಿಯಾಗಿದ್ದು ಒಟ್ಟು ಏಳು ಆರೋಪಿಗಳಿದ್ದರು. ಸಾಕ್ಷ್ಯಾಧಾರಗಳ ಕೊರತೆಯಿಂದ ಅವರೆಲ್ಲರನ್ನೂ ಖುಲಾಸೆಗೊಳಿಸಿ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು 2016ರ ಅಕ್ಟೋಬರ್‌ 21ರಂದು ಆದೇಶಿಸಿತ್ತು.

ಈ ಆದೇಶ ಪ್ರಶ್ನಿಸಿ ಸರ್ಕಾರ 2017ರಲ್ಲಿ ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿತ್ತು. ಇದೀಗ ರೇಣುಕಾಪ್ರಸಾದ್‌ ಹಾಗೂ ಇತರೆ ಐವರು ಆರೊಪಿಗಳು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಕ್ಷ್ಯಧಾರಗಳ ಸಮೇತ ದೃಢಪಟ್ಟಿದೆ ಎಂದು ತೀರ್ಮಾನಿಸಿರುವ ಹೈಕೋರ್ಟ್‌, ಎಲ್ಲರನ್ನೂ ಕೊಲೆ ಮತ್ತು ಅಪರಾಧಿಕ ಒಳಸಂಚಿನ ಕೃತ್ಯದಲ್ಲಿ ದೋಷಿ ಎಂದು ತೀರ್ಮಾನಿಸಿದೆ. ಮುಂದಿನ ಅಕ್ಟೋಬರ್‌ 5ರಂದು ಮುಂದಿನ ವಿಚಾರಣೆ ನಡೆಯಲಿದೆ.

Exit mobile version