Site icon Vistara News

ನ್ಯಾಯ ಪಡೆಯಲು ಅನ್ಯಾಯದ ಮಾರ್ಗ ಹಿಡಿದರು: ವೃದ್ಧನ ಮನೆಯಲ್ಲಿ ₹2 ಕೋಟಿ ಕದ್ದರು

ಬೆಂಗಳೂರು: ಪ್ರಕರಣವೊಂದರಲ್ಲಿ ನ್ಯಾಯ ತಮ್ಮದಾಗಲೆಂದು ವಕೀಲರಿಗೆ ಶುಲ್ಕ ನೀಡುವ ಸಲುವಾಗಿ ಕಳ್ಳತನದ ಅನ್ಯಾಯ ಮಾರ್ಗ ಹಿಡಿದ ಇಬ್ಬರು ಕುಖ್ಯಾತ ಕಳ್ಳರು ವೃದ್ಧರ ಮನೆಗೆ ಕನ್ನ ಹಾಕಿ ₹2 ಕೋಟಿ ರೂ. ಕದ್ದಿದ್ದಾರೆ. ಕುಮಾರಸ್ವಾಮಿ ಲೇಔಟ್‌ನ ಸಾಗರ್‌ ಆಸ್ಪತ್ರೆ ಬಳಿಯಲ್ಲಿದ್ದ ಮಧ್ಯಪ್ರದೇಶ ಮೂಲದ ವೃದ್ಧ ಸಂದೀಪ್‌ ಲಾಲ್‌ ಎಂಬುವವರ ಮನೆಗೆ ಕನ್ನ ಹಾಕಿ ಮೂಟೆಗಟ್ಟಲೆ ಹಣ ದೋಚಿದ್ದ ಮಂಡ್ಯ ಮೂಲದ ಸುನೀಲ್‌ ಹಾಗೂ ಮಾಗಡಿ ಮೂಲದ ದಿಲೀಪ್‌ ಈಗ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ.

ಸುನೀಲ್‌ ಅಲಿಯಾಸ್‌ ತೊರೆ ಈ ಹಿಂದೆಯೂ ಅನೇಕ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲುಪಾಲಾಗಿದ್ದ. ಇತ್ತ ದಿಲೀಪ್‌ ಮಾದಕವಸ್ತು ಪ್ರಕರಣದಲ್ಲಿ ಜೈಲು ಸೇರಿದ್ದ. ಇಬ್ಬರೂ ಜೈಲಿನಲ್ಲೆ ಪರಿಚಯವಾಗಿದ್ದರು. ನಿನಗೆ ಹೊಸ ಜೀವ ತೋರಿಸುತ್ತೇನೆ ಎಂದಿದ್ದ ಸುನೀಲ್‌, ಪ್ರಕರಣವೊಂದರ ಸಂಬಂಧ ಲಾಯರ್‌ ಫೀಸ್‌ ನೀಡಲು ಹಣವನ್ನು ಕಳ್ಳತನದ ಮಾರ್ಗದ ಮೂಲಕ ಪಡೆಯುವ ಪ್ಲಾನ್‌ ಹಾಕಿದ್ದ.

ಜೈಲಿನಿಂದ ಹೊರಬಂದವರೇ ಕಳ್ಳತನ ಮಾಡಲು ಮನೆಗಳ ಹುಡುಕಾಟ ನಡೆಸಿದರು. ಕುಮಾರಸ್ವಾಮಿ ಲೇಔಟ್‌ನ ಸಾಗರ್‌ ಆಸ್ಪತ್ರೆ ಬಳಿಯ ಮನೆಯೊಂದರ ಹೊರಗೆ ಐಷಾರಾಮಿ ಬೈಕ್‌ಗಳು ನಿಂತಿರುತ್ತಿದ್ದವು. ಸ್ವಲ್ಪ ದಿನ ಅಲ್ಲೇ ಸುತ್ತಾಡಿದಾಗ, ಮನೆಯಲ್ಲಿ ವೃದ್ಧರೊಬ್ಬರೇ ಇದ್ದಾರೆ ಎನ್ನುವುದು ಗೊತ್ತಾಯಿತು. 15 ದಿನ ಸಂದೀಪ್‌ ಲಾಲ್‌ ಅವರನ್ನು ಹಿಂಬಾಲಿಸಿದ ಆರೋಪಿಗಳು ಅವರು ಯಾವಾಗ ಮನೆಯಿಂದ ಹೊರ ಹೋಗುತ್ತಾರೆ, ಯಾವಾಗ ಬರುತ್ತಾರೆ ಎಂಬುದನ್ನೆಲ್ಲ ತಿಳಿದುಕೊಂಡರು.

ವೃದ್ಧ ಮನೆಯಿಂದ ಹೊರ ಹೋಗಿದ್ದಾಗ ಒಳನುಗ್ಗಿದ ಆರೋಪಿಗಳು ಅಪಾರ ಪ್ರಮಾಣದಲ್ಲಿದ್ದ ಹಣವನ್ನು ದೋಚಿದ್ದರು. ಹಣದ ಪ್ರಮಾಣ ಎಷ್ಟಿತ್ತೆಂದರೆ ಅದನ್ನು ಎಣಿಸಿಕೊಂಡು ಭಾಗ ಮಾಡಿಕೊಳ್ಳುವಷ್ಟು ಸಮಯ ಇರಲಿಲ್ಲ. ಎಲ್ಲ ಹಣವನ್ನೂ ಗುಡ್ಡೆ ಹಾಕಿ, ಅರ್ಧರ್ಧ ಹಂಚಿಕೊಂಡಿದ್ದರು. ಒಟ್ಟಾರೆ ₹2 ಕೋಟಿ ಹಣ ಹಾಗೂ 188 ಗ್ರಾಂ ಚಿನ್ನವನ್ನು ಕದ್ದೊಯ್ದಿದ್ದರು ಎನ್ನುವುದು ಸಂದೀಪ್‌ ಲಾಲ್‌ ಪೊಲೀಸ್‌ ಠಾಣೆಗೆ ದೂರು ಕೊಟ್ಟಾಗ ತಿಳಿದುಬಂದಿತು.

ಮಾದಪ್ಪನ ಬೆಟ್ಟದಲ್ಲಿ ವಾಸ

ಎರಡು ಲಕ್ಷ ರೂಪಾಯಿಗೆಂದು ಬಂದವರಿಗೆ ಎರಡು ಕೋಟಿ ಸಿಕ್ಕಾಗ ಕಕ್ಕಾಬಿಕ್ಕಿಯಾಗಿದ್ದರು. ಅಪಾರ ಪ್ರಮಾಣದ ಹಣವನ್ನು ಮನೆಯಲ್ಲೆ ಚೀಲದಲ್ಲಿ ತುಂಬಿಟ್ಟಿದ್ದರು. ಲಾಯರ್‌ ಫೀಸ್‌ ಮಾತ್ರವಲ್ಲದೆ ಹಳೆಯ ಸಾಲವೆಲ್ಲವನ್ನೂ ತೀರಿಸಿ ತಮಗೂ ಒಂದಷ್ಟು ಖರ್ಚು ಮಾಡಿಕೊಂಡು ಒಟ್ಟು ₹25 ಲಕ್ಷ ಖರ್ಚು ಮಾಡಿದರು. ಉಳಿದ ಹಣವೆಲ್ಲವನ್ನೂ ಮನೆಯಲ್ಲೆ ಬಿಟ್ಟು ಚಾಮರಾಜನಗರದ ಮಾದಪ್ಪನ ಬೆಟ್ಟದಲ್ಲಿ ಅಡಗಿ ಕುಳಿತರು. ಕಳ್ಳತನವಾದ ಮನೆಯಲ್ಲಿ ಬೆರಳಚ್ಚನ್ನು ಸಂಗ್ರಹಿಸಿದ ಪೊಲೀಸರು ಅದರ ಜಾಡು ಹಿಡಿದು ಹೊರಟಾದ ಹಳೆಕಳ್ಳರ ಕೈಚಳಕ ಬಯಲಾಗಿತ್ತು.

ಇದೀಗ ಇಬ್ಬರನ್ನೂ ಬಂಧಿಸಿರುವ ಕುಮಾರಸ್ವಾಮಿ ಲೇಔಟ್‌ ಪೊಲೀಸರು ₹1.76 ಕೋಟಿ ನಗದು, 188 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ.

ಮತ್ತಷ್ಟು ಓದಿ: ಪ್ರೇಯಸಿಗಾಗಿ ಜೈಲು ಸೇರಿದ ಭೂಪ: ಆರೋಪಿಯ‌ ರಾಜಸ್ಥಾನ ʻಚೈನ್‌ʼ ಲಿಂಕ್‌ ನೋಡಿ ಪೊಲೀಸರಿಗೇ ಶಾಕ್!

Exit mobile version