ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿ 21 ವರ್ಷದ ಕಾಲೇಜು ವಿದ್ಯಾರ್ಥಿಗೆ ಚಾಕು ಇರಿದು ಹತ್ಯೆ ಮಾಡಲಾಗಿದೆ. ಆತನ ಸಲಿಂಗ ಸಂಗಾತಿಯೇ (Gay Partner) ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪುಣೆಯ ವಾಘೋಲಿಯಲ್ಲಿರುವ ಬಕೋರಿ ರಸ್ತೆ ಬಳಿ ಇಬ್ಬರ ಮಧ್ಯೆ ಜಗಳ ನಡೆದಿದೆ. ಇಬ್ಬರೂ ಸಲಿಂಗ ಸಂಗಾತಿಗಳಾಗಿದ್ದು, ಜಗಳ ಅತಿರೇಕಕ್ಕೆ ಹೋಗಿದೆ. ಆಗ ಒಬ್ಬನು ಮತ್ತೊಬ್ಬನಿಗೆ ಚಾಕು ಇರಿದು ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ 21 ವರ್ಷದ ಬಿಬಿಎ ವಿದ್ಯಾರ್ಥಿಯು (BBA Student) ಬಳಿಕ ಮೃತಪಟ್ಟಿದ್ದಾನೆ ಎಂದು ಪುಣೆ ಪೊಲೀಸರು (Pune Police) ಮಾಹಿತಿ ನೀಡಿದ್ದಾರೆ.
ಮಂಗಳವಾರ ಸಂಜೆ (ನವೆಂಬರ್ 28) ಘಟನೆ ನಡೆದಿದೆ. ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಯುತ್ತಲೇ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಬದುಕುಳಿಯಲಿಲ್ಲ. ಇನ್ನು ವಿದ್ಯಾರ್ಥಿಯು ಉಸಿರು ಚೆಲ್ಲುವ ಮೊದಲು ತನ್ನ ಮೇಲೆ ಹಲ್ಲೆ ನಡೆಸಿದವನ ಹೆಸರು ಹೇಳಿದ್ದಾನೆ. ಹಾಗಾಗಿ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಹತ್ಯೆಗೀಡಾದ ವಿದ್ಯಾರ್ಥಿಯು ಬಿಬಿಎ ಓದುತ್ತಿದ್ದು, ಹಾಸ್ಟೆಲ್‌ನಲ್ಲಿ ಇದ್ದ ಎಂದು ಮೂಲಗಳು ತಿಳಿಸಿವೆ. ಸಲಿಂಗ ಸಂಗಾತಿಗಳಾಗಿದ್ದ ಇವರ ಮಧ್ಯೆ ಬೇರೆ ಯುವತಿ ಜತೆಗಿನ ಪ್ರೀತಿ ವಿಚಾರಕ್ಕಾಗಿ ಜಗಳ ನಡೆದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪ್ರಕರಣದ ಕುರಿತು ತನಿಖೆ ನಡೆಸಲು ಪ್ರತ್ಯೇಕ ತಂಡವನ್ನೂ ರಚಿಸಿದ್ದಾರೆ.
‘ಗೇ’ ಆ್ಯಪ್‌ನಲ್ಲಿ ಸಿಕ್ಕವ ಲೂಟಿ ಮಾಡಿದ
ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ ಆಡುಗೋಡಿಯಲ್ಲಿ ಗ್ರೈಂಡರ್ (GRINDR) ಎಂಬ ಗೇ ಡೇಟಿಂಗ್ ಆ್ಯಪ್ ಮೂಲಕ ಪರಿಚಯ ಆದವನೇ ದರೋಡೆಕೋರನಾಗಿ ಎಲ್ಲವನ್ನೂ ದೋಚಿಕೊಂಡು ಹೋದ ಘಟನೆ ನಡೆದಿತ್ತು. ನದೀಂ ಎಂಬಾತನಿಗೆ ಗ್ರೈಂಡರ್ ಗೇ ಡೇಟಿಂಗ್ ಆ್ಯಪ್‌ನಲ್ಲಿ ಫರ್ಹಾನ್ ಎಂಬಾತ ಪರಿಚಿತನಾಗಿದ್ದ. ಕೆಲ ದಿನಗಳ ಕಾಲ ಮಾತುಕತೆಯಲ್ಲಿದ್ದ ಇವರ ಸ್ನೇಹವು ಮತ್ತೊಂದು ಹಂತಕ್ಕೆ ತಲುಪಿತ್ತು. ಭೇಟಿ ಮಾಡುವ ಉದ್ದೇಶದಿಂದ ಕಳೆದ ನ. 22ರಂದು ನದೀಂ, ಗೇ ಆ್ಯಪ್ ಮೂಲಕ ಫರ್ಹಾನ್‌ನನ್ನು ಕರೆಸಿಕೊಂಡಿದ್ದ.
ಇದನ್ನೂ ಓದಿ: ನೇಣು ಬಿಗಿದುಕೊಂಡು ಮತ್ತೊಬ್ಬ ‘ನೀಟ್’ ವಿದ್ಯಾರ್ಥಿ ಆತ್ಮಹತ್ಯೆ; ವರ್ಷದಲ್ಲಿ 28ನೇ ಪ್ರಕರಣ
ಮನೆಗೆ ಬಂದ ಫರ್ಹಾನ್, ನದೀಂ ಜತೆ ಮಾತನಾಡಿದ್ದ. ಇದೇ ವೇಳೆ ಫರ್ಹಾನ್ ತನ್ನ ಗ್ಯಾಂಗ್ ಸದಸ್ಯರನ್ನು ಕರೆಸಿದ್ದ. ಇದಾದ ಬಳಿಕ ಫರ್ಹಾನ್ ಹಾಗೂ ಆತನ ಗ್ಯಾಂಗ್ ಸದಸ್ಯರು ಬೆದರಿಸಿ, ನದೀಂ ಬಳಿಯಿದ್ದ 45 ಸಾವಿರ ಮೌಲ್ಯದ ಮೊಬೈಲ್, ದುಬಾರಿ ವಾಚ್‌ಗಳು ಸೇರಿ ಗೂಗಲ್ ಹಾಗೂ ಫೋನ್ ಪೇ ಮೂಲಕ ಹಣವನ್ನು ವರ್ಗಾಯಿಸಿಕೊಂಡು ಪರಾರಿ ಆಗಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ