ಜೈಪುರ: ದಿನವೂ ಸಾಯುವುದಕ್ಕಿಂತ ಒಮ್ಮೆಲೇ ಸಾಯೋದು ಒಳ್ಳೆಯದಲ್ವಾ?- ಇದು ರಾಜಸ್ಥಾನದ ಜೈಪುರ ಜಿಲ್ಲೆಯ ಡುಡು ಪಟ್ಟಣದ ಬಾವಿಯೊಂದರಲ್ಲಿ ಹೆಣವಾಗಿ ಕಂಡುಬಂದ ಮೂವರು ಸಹೋದರಿಯರ ಪೈಕಿ ಒಬ್ಬಳ ವಾಟ್ಸ್ ಅಪ್ ಸ್ಟೇಟಸ್.
ಇನ್ನೂ ಸಣ್ಣ ವಯಸ್ಸಿನ ಈ ಹೆಣ್ಮಕ್ಕಳು ಒಂದೇ ಕುಟುಂಬದ ಮೂವರು ಅಣ್ಣ ತಮ್ಮಂದಿರನ್ನು ಮದುವೆಯಾಗಿದ್ದು ನಿತ್ಯವೂ ಅನುಭವಿಸಬೇಕಾದ ಕೌಟುಂಬಿಕ ದೌರ್ಜನ್ಯದಿಂದ ಬೇಸತ್ತು ಪ್ರಾಣ ಕಳೆದುಕೊಂಡಿದ್ದಾರೆ. ಅವರಲ್ಲಿ ಇಬ್ಬರು ತುಂಬು ಗರ್ಭಿಣಿಯರು. ಜತೆಗೆ ದೊಡ್ಡ ಅಕ್ಕನ ಇಬ್ಬರು ಪುಟಾಣಿ ಮಕ್ಕಳೂ ಜಲಸಮಾಧಿ ಹೊಂದಿದ್ದಾರೆ. ಮೃತರನ್ನು ಕಾಳೂ ದೇವಿ(27), ಮಮತಾ (23), ಕಮಲೇಶ್ (20) ಮತ್ತು ಕಾಳೂದೇವಿಯ ನಾಲ್ಕು ಮತ್ತು ಕೇವಲ 27 ದಿನದ ಪುಟಾಣಿ ಮಗು ಎಂದು ಗುರುತಿಸಲಾಗಿದೆ. ಮಮತಾ ಮತ್ತು ಕಮಲೇಶ್ ತುಂಬು ಗರ್ಭಿಣಿಯರು.
ಈ ಮೂವರೂ ಹೆಣ್ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಪಡೆದು ಒಳ್ಳೆಯ ಉದ್ಯೋಗದ ಕನಸು ಹೊತ್ತಿದ್ದರು. ಆದರೆ, ಬದುಕಿನ ಅನಿವಾರ್ಯತೆಯಿಂದ ಅವರೆಲ್ಲರೂ ಒಂದೇ ಕುಟುಂಬದ ಮೂವರು ಅಣ್ಣ ತಮ್ಮಂದಿರನ್ನು (ನಾರ್ಸಿ, ಗೋರ್ಯೋ, ಮುಕೇಶ್) ಮದುವೆ ಆಗಬೇಕಾಗಿ ಬಂದಿತ್ತು. ಅಪ್ಪನ ಮಾತಿಗೆ ಮರು ಮಾತಿಲ್ಲದೆ ಮಾಂಗಲ್ಯಕ್ಕೆ ಕೊರಳೊಡ್ಡಿದ ಈ ಮೂವರು ಹೆಣ್ಮಕ್ಕಳ ಬದುಕು ವಸ್ತುಶಃ ನರಕವೇ ಆಗಿ ಹೋಯಿತು. ಮದುವೆ ಆದಾಗ ಈ ಹೆಣ್ಣು ಮಕ್ಕಳು ಇನ್ನೂ ಸಣ್ಣವರು. ಅದು ಬಾಲ್ಯ ವಿವಾಹವೇ ಆಗಿತ್ತು. ಇವರನ್ನು ಮನೆಗೆ ಕರೆತಂದು ಪ್ರೀತಿಯಿಂದ ನೋಡಿಕೊಳ್ಳಬೇಕಾದ ಬಲಿಷ್ಠ ಪುರುಷರು ಆರಂಭದಿಂದಲೇ ದೌರ್ಜನ್ಯ ಶುರು ಮಾಡಿದ್ದರು. ಪ್ರತಿದಿನವೂ ಕುಡಿತದ ಮತ್ತಿನಲ್ಲಿ ಬಂದು ದೈಹಿಕವಾಗಿ ಹಿಂಸಿಸುತ್ತಿದ್ದರು. ಕೇವಲ ಐದು, ಆರನೇ ಕ್ಲಾಸು ಕಲಿತಿದ್ದ ಗಂಡಸರಿಗೆ ಹೆಣ್ಣು ಮಕ್ಕಳ ಆಸೆ, ಆಕಾಂಕ್ಷೆಗಳು ಯಾವುದೂ ಅರ್ಥವಾಗುತ್ತಿರಲಿಲ್ಲ. ಹೀಗಾಗಿ ನಿತ್ಯ ನರಕಯಾತನೆ ಎದುರಾಗಿತ್ತು.
ಹೀಗಿರುತ್ತಾ ಕಳೆದ ಬುಧವಾರ ಈ ಮೂವರು ಹೆಣ್ಮಕ್ಕಳು ಮತ್ತು ಇಬ್ಬರು ಮಕ್ಕಳು ಕಾಣೆಯಾಗಿಬಿಟ್ಟರು. ನಾಲ್ಕು ದಿನಗಳ ಬಳಿಕ ಅವರ ಹೆಣಗಳು ಮನೆಯಿಂದ ಎರಡು ಕಿಲೋಮೀಟರ್ ದೂರದ ಬಾವಿಯಲ್ಲಿ ತೇಲುತ್ತಿರುವುದು ಪತ್ತೆಯಾಯಿತು.
ಈ ಹಂತದಲ್ಲಿ ಅವರ ಮೊಬೈಲ್ ಸ್ಟೇಟಸ್‌ಗಳು ಅಕ್ಕಪಕ್ಕದವರ ಮಾತುಗಳು ಅವರು ಅನುಭವಿಸುತ್ತಿದ್ದ ಯಾತನೆಗೆ ಸಾಕ್ಷಿ ಹೇಳಿದವು. ಇದನ್ನು ಆಧರಿಸಿ ಮೂವರು ಸೋದರರನ್ನು ಬಂಧಿಸಲಾಗಿದೆ. ಇವರ ತಂದೆ ಕೆಲವು ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು.
ʻʻನಾವು ಹೋಗುತ್ತಿದ್ದೇವೆ. ಇನ್ನಾದರೂ ಎಲ್ಲವೂ ಒಳ್ಳೆಯದಾಗಲಿ. ನಮ್ಮ ಸಾವಿಗೆ ಕಾರಣ ನಮ್ಮ ಗಂಡಂದಿರು. ಪ್ರತಿ ದಿನವೂ ಸಾಯುವುದಕ್ಕಿಂತ ಒಮ್ಮೆಗೇ ಜತೆಯಾಗಿ ಸಾಯುವುದು ಮೇಲು ಎಂದು ತೀರ್ಮಾನಿಸಿದ್ದೇವೆ. ಓ ದೇವರೆ ಮುಂದಿನ ಜನ್ಮಾಂತ ಒಂದಿದ್ದರೆ ನಮ್ಮನ್ನು ಸೋದರಿಯರನ್ನಾಗಿಯೇ ಹುಟ್ಟಿಸು. ನಮ್ಮ ಕುಟುಂಬದವರಲ್ಲಿ ವಿನಂತಿ ಏನೆಂದರೆ, ಯಾರೂ ನಮ್ಮ ಬಗ್ಗೆ ಚಿಂತೆ ಮಾಡಬೇಡಿ,ʼʼ ಹೀಗೆಂದು ಕಮಲೇಶ್ ತನ್ನ ಸ್ಟೇಟಸ್‌ನಲ್ಲಿ ಬರೆದುಕೊಂಡಿದ್ದಳು
ವಿಪರೀತಕ್ಕೇರಿದ ಹಿಂಸೆ
ಈ ಹೆಣ್ಮಕ್ಕಳಿಗೆ ನಿತ್ಯ ಹಿಂಸೆ ಇತ್ತಾದರೂ ಇತ್ತೀಚೆಗೆ ವಿಪರೀತಕ್ಕೇರಿತ್ತು ಎಂದು ಪಕ್ಕದ ಮನೆಯವರು ಹೇಳಿದ್ದಾರೆ. ಅದರಲ್ಲೂ ಸ್ವಂತ ಉದ್ಯೋಗ ಪಡೆದು ತಮ್ಮ ಕಾಲ ಮೇಲೆ ನಿಲ್ಲಬೇಕು ಎನ್ನುವ ಅವರ ಬಯಕೆ ಗಂಡಂದಿರನ್ನು ಇನ್ನಷ್ಟು ವ್ಯಗ್ರರನ್ನಾಗಿಸಿತ್ತು. ಈ ನಡುವೆ ಮಮತಾ ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಗೆ ಅರ್ಜಿ ಹಾಕಿದ್ದರು. ಕಾಳೂ ದೇವಿ ಅಂತಿಮ ಬಿಎ ವಿದ್ಯಾಭ್ಯಾಸ ಮಾಡುತ್ತಿದ್ದರು. ಕೊನೆಯವಳಾದ ಕಮಲೇಶ್ ಕೂಡಾ ವಿವಿಯಲ್ಲಿ ಅಧ್ಯಯನಕ್ಕೆ ಮುಂದಾಗಿದ್ದಳು. ಆದರೆ, ಇದಕ್ಕೆ ಗಂಡಂದಿತ ಪ್ರಬಲ ವಿರೋದವಿತ್ತು. ಕಾಳೂ ದೇವಿಗಂತೂ ಇತ್ತೀಚೆಗೆ ಆಕೆಯ ಗಂಡ ಭೀಕರವಾಗಿ ಥಳಿಸಿದ್ದ. ಆಕೆಯ ಕಣ್ಣುಗಳಿಗೆ ಗಾಯವಾಗಿ ಹದಿನೈದು ದಿನ ಆಸ್ಪತ್ರೆ ಸೇರಿದ್ದರು. ಆಸ್ಪತ್ರೆಯಿಂದ ಕೆಲವೇ ದಿನದ ಹಿಂದಷ್ಟೇ ಬಂದಿದ್ದರು. ಕಿರಿಯಳಾದ ಕಮಲೇಶ್ ಯಾರ ಬಳಿಯೇ ಮೊಬೈಲ್‌ನಲ್ಲಿ ಮಾತನಾಡಿದ್ದಕ್ಕೆ ಸಿಕ್ಕಾಪಟ್ಟೆ ಹೊಡೆಯಲಾಗಿತ್ತು.
ದುಡ್ಡಿಗಾಗಿ ಅಲ್ಲ ಪ್ರತಿಷ್ಠೆಗಾಗಿ..
ಈ ಹೆಣ್ಮಕ್ಕಳ ಸಾವಿನ ಹಿಂದೆ ವರದಕ್ಷಿಣೆ ಕಿರುಕುಳವೂ ಇರಬಹುದೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಸ್ಥಳೀಯರ ಪ್ರಕಾರ ಈ ಕುಟುಂಬಕ್ಕೆ ಹಣದ ಅವಶ್ಯಕತೆಯೇನೂ ಇಲ್ಲ. ಸಾಕಷ್ಟು ಸಿರಿವಂತಿಕೆ ಇದೆ. ಆದರೆ, ಹೆಣ್ಮಕ್ಕಳನ್ನು ಹೊರಗೆ ಕಳುಹಿಸಬಾರದು ಎನ್ನುವುದು ಅವರ ದೊಡ್ಡ ಹಠ. ಹೊರಗಿನವರ ಜತೆ ಮಾತನಾಡಬಾರದು ಎನ್ನುವುದು ತಾಕೀತು. ಕಮಲೇಶ್ ಇತ್ತೀಚೆಗೆ ವಿಶ್ವವಿದ್ಯಾಲಯ ಪ್ರವೇಶದ ವೇಳೆ ಪರಿಚಯವಾಗಿದ್ದ ಒಬ್ಬ ಯುವಕನೊಂದಿಗೆ ರಾತ್ರಿ ಒಂದು ಗಂಟೆ ಹೊತ್ತಿಗೆ ಮಾತನಾಡಿದ್ದೂ ಪರಿಸ್ಥಿತಿ ಭುಗಿಲೇಳಲು ಕಾರಣವಾಯಿತು ಎನ್ನಲಾಗಿದೆ. ಈ ನಡುವೆ, ಈ ಗಂಡಸರು ಸಿಕ್ಕಾಪಟ್ಟೆ ಕುಡುಕರಾಗಿದ್ದು, ಅತಿಯಾದ ಕ್ರೂರಿಗಳು ಎಂದು ಜನ ಒಪ್ಪಿಕೊಳ್ಳುತ್ತಾರೆ. ಇದನ್ನು ಪ್ರಶ್ನಿಸಿದರೆ ಹೆಂಡತಿಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದರು ಎನ್ನಲಾಗಿದೆ.
ಅಂತಿಮವಾಗಿ ಇದೀಗ ಅವರೆಲ್ಲರೂ ಜತೆಯಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಹೊಟ್ಟೆಯಲ್ಲಿರುವ ಇಬ್ಬರು ಮಕ್ಕಳು, ಜತೆಗೆ ನಾಲ್ಕು ವರ್ಷದ ಒಂದು ಮಗು, 27 ದಿನದ ಹಸುಗೂಸು ಅನ್ಯಾಯವಾಗಿ ಜೀವ ತೆರಬೇಕಾಗಿ ಬಂದಿದೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಸರ್ವ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ| ಗೃಹಸಚಿವರ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಅತ್ಯಾಚಾರಕ್ಕೆ ಯತ್ನ