ತಿರುವನಂತಪುರಂ: ಕೇರಳದಲ್ಲಿ ಇಸ್ರೇಲ್‌ನ 36 ವರ್ಷದ ಮಹಿಳೆಯೊಬ್ಬರ (Israeli Woman) ಶವ ಮನೆಯಲ್ಲಿ ಪತ್ತೆಯಾಗಿದ್ದು, ಅವರ ಜತೆ ವಾಸವಿದ್ದ ಕೇರಳದ ವ್ಯಕ್ತಿಯೇ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕೊಲ್ಲಂ ಜಿಲ್ಲೆಯ ಮುಕ್ತಥಲ ಗ್ರಾಮದಲ್ಲಿರುವ ಮಹಿಳೆಯ ಶವ ಪತ್ತೆಯಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇಸ್ರೇಲ್ ಮೂಲದ ಮಹಿಳೆಯನ್ನು ಸ್ವಾತಾ ಅಲಿಯಾಸ್ ರಾಧಾ ಎಂಬುದಾಗಿ ಗುರುತಿಸಲಾಗಿದೆ. ಇವರ ಜತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ 70 ವರ್ಷದ ಕೃಷ್ಣ ಚಂದ್ರನ್ ಎಂಬಾತನೇ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಇಸ್ರೇಲ್‌ನಿಂದ ಭಾರತಕ್ಕೆ ಬಂದಿರುವ ಸ್ವಾತಾ ಹಾಗೂ ಕೃಷ್ಣ ಚಂದ್ರನ್ ಒಟ್ಟಿಗೆ ಇದ್ದರು. ಇವರಿಬ್ಬರೂ ಮದುವೆಯಾಗಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬಂದಿವೆ.
ಸ್ವಾತ ಅವರ ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಹತ್ಯೆ ಮಾಡಿದ ಕೃಷ್ಣ ಚಂದ್ರನ್ ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಅಸ್ವಸ್ಥನಾಗಿರುವ ಕೃಷ್ಣ ಚಂದ್ರನ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೃಷ್ಣ ಚಂದ್ರನ್ ಯೋಗ ಶಿಕ್ಷಕನಾಗಿದ್ದ ಎಂದು ತಿಳಿದುಬಂದಿದೆ. ಸ್ವಾತಾ ಅವರು ಇಸ್ರೇಲ್‌ನಿಂದ ಉತ್ತರಾಖಂಡಕ್ಕೆ ಆಗಮಿಸಿ, ಅಲ್ಲಿ 15 ವರ್ಷ ನೆಲೆಸಿದ್ದರು. ಕಳೆದ ಒಂದು ವರ್ಷದಿಂದ ಅವರು ಕೇರಳದಲ್ಲಿ ನೆಲೆಸಿದ್ದರು ಎಂದು ಮೂಲಗಳು ತಿಳಿಸಿವೆ.
ಇಬ್ಬರೂ ಆತ್ಮಹತ್ಯೆಗೆ ಯತ್ನ?
ಸ್ವಾತಾ ಹಾಗೂ ಕೃಷ್ಣ ಚಂದ್ರನ್ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ್ದರು ಎಂದು ತಿಳಿದುಬಂದಿದೆ. ಇದೇ ಕಾರಣಕ್ಕಾಗಿ ಮೊದಲು ಕೃಷ್ಣ ಚಂದ್ರನ್ ಸ್ವಾತಾ ಅವರ ಕತ್ತು ಸೀಳಿದ್ದಾನೆ. ಇದಾದ ಬಳಿಕ ತಾನೂ ಚಾಕು ಚುಚ್ಚಿಕೊಂಡಿದ್ದಾನೆ. ಇದಾದ ಬಳಿಕ ಇಬ್ಬರೂ ಗಾಯಗೊಂಡು ನೆಲದ ಮೇಲೆ ಬಿದ್ದಿದ್ದಾರೆ. ಇದೇ ವೇಳೆ ಇಬ್ಬರೂ ಬಿದ್ದಿದ್ದನ್ನು ಕಂಡ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Self Harming: ಒಂದೇ ಕುಟುಂಬದ ಐವರ ಆತ್ಮಹತ್ಯೆ; ಪಕ್ಕದ್ಮನೆ ಗಂಡ-ಹೆಂಡ್ತಿ ಅರೆಸ್ಟ್
ಇಸ್ರೇಲ್ ಮಹಿಳೆಯು ಹಲವು ವರ್ಷಗಳಿಂದ ಮಾನಸಿಕ ಒತ್ತಡದ ಸಮಸ್ಯೆಯಿಂದ ಬಳಲುತ್ತಿದ್ದರು. ಕೃಷ್ಣ ಚಂದ್ರನ್ ಯೋಗ ತರಗತಿಗೆ ಹಾಜರಾದರೂ ಅವರು ಗುಣಮುಖರಾಗಿರಲಿಲ್ಲ. ಖಿನ್ನತೆಯಿಂದ ಕೊನೆಗೆ ಆತ್ಮಹತ್ಯೆಯ ಹಾದಿ ಹಿಡಿದಿರಬಹುದು ಎನ್ನಲಾಗಿದೆ. ಆದರೆ, ಕೃಷ್ಣ ಚಂದ್ರನ್ ಆತ್ಮಹತ್ಯೆಗೆ ಯತ್ನಿಸಿದ್ದೇಕೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.