Site icon Vistara News

5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಂದ ಪಾಪಿ; ಸಿನಿಮೀಯ ರೀತಿಯಲ್ಲಿ ಬಂಧಿಸಿದ ಪೊಲೀಸರು

crime news

crime news

ನವದೆಹಲಿ: ಹೋಳಿ ಹಬ್ಬದ ಮುನ್ನಾ ದಿನ (ಮಾರ್ಚ್‌ 24) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬವಾನಾ ಪ್ರದೇಶದಲ್ಲಿ 5 ವರ್ಷದ ಬಾಲಕಿಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ನಡೆಸಿ ಕೊಲೆ ಮಾಡಿ, ಪರಾರಿಯಾಗುವ ಮೊದಲು ಮಗುವಿನ ಶವವನ್ನು ಕಾರ್ಖಾನೆಯಲ್ಲಿ ಬಚ್ಚಿಟ್ಟಿದ್ದ. ಸದ್ಯ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ (Crime News). 

ಘಟನೆ ಹಿನ್ನೆಲೆ

ಮಾರ್ಚ್ 24ರಂದು ಎಲ್ಲರೂ ಹೋಳಿ ಪೂರ್ವದ ಆಚರಣೆ (ಹೋಲಿಕಾ ದಹನ್)ಯಲ್ಲಿ ತೊಡಗಿದ್ದಾಗ ದೆಹಲಿಯ ಬವಾನಾ ಪೊಲೀಸ್ ಠಾಣೆಗೆ ಬಾಲಕಿ ನಾಪತ್ತೆಯಾಗಿದ್ದಾಳೆ ಎಂದು ರಾತ್ರಿ 10.27ರ ಸುಮಾರಿಗೆ ಕರೆ ಬಂದಿತ್ತು. ಬವಾನಾ ಸೆಕ್ಟರ್ 1ರಿಂದ 5 ವರ್ಷದ ಬಾಲಕಿಯನ್ನು ಅಪಹರಿಸಲಾಗಿದೆ ಎಂದು ಕರೆ ಮಾಡಿದ ವ್ಯಕ್ತಿ ತಿಳಿಸಿದ್ದ. ಚಹಾ ಅಂಗಡಿ ನಡೆಸುತ್ತಿರುವ ಬಾಲಕಿಯ ಪೋಷಕರು, ಸಂಜೆ 5 ಗಂಟೆ ಸುಮಾರಿಗೆ ಬಾಲಕಿಯನ್ನು ಕೊನೆಯದಾಗಿ ನೋಡಿದ್ದಾಗಿಯೂ ಬಳಿಕ ಅವಳನ್ನು ಹುಡುಕಲು ಪ್ರಯತ್ನಿಸಿದರೂ ಕಂಡಿ ಬಂದಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದರು.

ಪ್ರಕರಣ ದಾಖಲಿಸಿದ ಪೊಲೀಸರು ಪೋಷಕರೊಂದಿಗೆ ಶೋಧವನ್ನು ಪ್ರಾರಂಭಿಸಿದ್ದರು. ಬಾಲಕಿಯನ್ನು ಕೊನೆಯದಾಗಿ ನೋಡಿದ ಪ್ರದೇಶಗಳ ಸುತ್ತಲೂ ಇಡೀ ರಾತ್ರಿ ಹುಡಕಾಡಿದರೂ ಪತ್ತೆಯಾಗಿರಲಿಲ್ಲ. ಮಾರನೇ ದಿನ ಮಾರ್ಚ್ 25ರಂದು ಬೆಳಗ್ಗೆ ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಅದರಲ್ಲಿ ಆ ಬಾಲಕಿ ಒಬ್ಬ ವ್ಯಕ್ತಿಯೊಂದಿಗೆ ನಡೆದುಕೊಂಡು ಹೋಗುತ್ತಿರುವುದನ್ನು ಕಂಡುಬಂತು. ಹುಡುಗಿಯ ಪೋಷಕರು ಆ ವ್ಯಕ್ತಿಯನ್ನು ಗುರುತಿಸಿದ್ದರು ತೋಟಾನ್ ಎಂದು ಗುರುತಿಸಿದ್ದರು.

ಕೂಡಲೇ ಪೊಲೀಸರು ತೋಟಾನ್ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ತೆರಳಿದರು. ಆದರೆ ಆತ ಅಲ್ಲಿಂದ ತಪ್ಪಿಸಿಕೊಂಡಿದ್ದ. ಅಲ್ಲಿದ್ದವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ ನವದೆಹಲಿ ರೈಲ್ವೆ ನಿಲ್ದಾಣದಿಂದ ಹೌರಾಗೆ ತೆರಳುವ ಪೂರ್ವಾ ಎಕ್ಸ್‌ಪ್ರೆಸ್‌ ರೈಲಿಗಾಗಿ ಹೋಗಿದ್ದಾನೆ ಎನ್ನುವುದು ತಿಳಿದು ಬಂತು.

ತಕ್ಷಣ ಪೊಲೀಸರು ಕಾರ್ಯ ಪ್ರವೃತ್ತರಾದರೂ ಅವರು ಅಲ್ಲಿಗೆ ತಲುಪುವಾಗ ರೈಲು ಹೊರಟಿತ್ತು. ಬಳಿಕ ಮಾರ್ಚ್ 26ರ ಬೆಳಗ್ಗೆ ಪೊಲೀಸ್ ತಂಡವೊಂದು ಕೋಲ್ಕತಾ ವಿಮಾನ ನಿಲ್ದಾಣಕ್ಕೆ ತೆರಳಿತು. ನಂತರ ಪೊಲೀಸರು ಅಸನ್ಸೋಲ್ ರೈಲ್ವೆ ನಿಲ್ದಾಣಕ್ಕೆ ತಲುಪಿದರು. ಪೂರ್ವಾ ಎಕ್ಸ್‌ಪ್ರೆಸ್‌ ಅನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಅದರಲ್ಲಿ ಆರೋಪಿ ಪತ್ತೆಯಾಗಿದ್ದ. ಮಾರ್ಚ್ 27ರಂದು ಆತನನ್ನು ದೆಹಲಿಗೆ ಕರೆತರಲಾಯಿತು.

ಇದನ್ನೂ ಓದಿ: ಮರೆಯಾದ ಮಾನವೀಯತೆ: ಮಹಿಳೆ ಮೇಲೆ ಹಲ್ಲೆ ನಡೆಸಿ ವಿವಸ್ತ್ರಗೊಳಿಸಿ ಮೆರವಣಿಗೆ; ನಾಲ್ವರು ಮಹಿಳೆಯರ ಬಂಧನ

ತಪ್ಪೊಪ್ಪಿಗೆ

ವಿಚಾರಣೆ ವೇಳೆ ಆರೋಪಿ ತೋಟಾನ್ ತಪ್ಪೊಪ್ಪಿಕೊಂಡಿದ್ದಾನೆ. ಮಾರ್ಚ್ 24ರಂದು ಸಂಜೆ 7.30ರ ಸುಮಾರಿಗೆ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಂದು ಶವವನ್ನು ಬವಾನಾದ ಕಾರ್ಖಾನೆಯಲ್ಲಿ ಎಸೆದಿದ್ದಾಗಿ ತಿಳಿಸಿದ್ದಾನೆ. ಪರಿಶೋಧನೆ ಬಳಿಕ ಬಾಲಕಿಯ ದೇಹವು ಬ್ಲೇಡ್ ಮತ್ತು ಇಟ್ಟಿಗೆಯೊಂದಿಗೆ ಪತ್ತೆಯಾಗಿದೆ. ಹೋಳಿ ಆಚರಣೆ ಹಿನ್ನೆಲೆಯಲ್ಲಿ ಕಾರ್ಖಾನೆಗೆ ರಜೆ ಸಾರಿದ್ದು ಆತನಿಗೆ ಅನುಕೂಲವಾಗಿ ಮಾರ್ಪಟ್ಟಿತ್ತು. ಸದ್ಯ ತೋಟಾನ್ ವಿರುದ್ಧ ಪೋಕ್ಸೊ ಕಾಯ್ದೆಯ ಸೆಕ್ಷನ್ 302 (ಕೊಲೆ) ಮತ್ತು 376 (ಅತ್ಯಾಚಾರ) ದಾಖಲಿಸಲಾಗಿದೆ. ಪೊಲೀಸರು ಪ್ರಕರಣದ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version