Site icon Vistara News

Actor Darshan: ಒಂದಲ್ಲ, ಎರಡಲ್ಲ…. ಬರೋಬ್ಬರಿ 50 ನಿಮಿಷ ರೇಣುಕಾ ಸ್ವಾಮಿ ಮೇಲೆ ದರ್ಶನ್‌ ಕ್ರೌರ್ಯ!

Renuka swamy Murder case actor darshan

ಬೆಂಗಳೂರು: ಪಟ್ಟಣಗೆರೆ ಶೆಡ್‌ನಲ್ಲಿ (Pattanagere Shed) ನಡೆದ ರೇಣುಕಾ ಸ್ವಾಮಿ ಹತ್ಯೆಯ (Renuka Swamy Murder) ವಿವರಗಳು ಇನ್ನೂ ಒಂದೊಂದಾಗಿ ಹೊರಬೀಳುತ್ತಿವೆ. ʼಕೇವಲ ಒಂದೆರಡು ನಿಮಿಷ ಅಲ್ಲಿದ್ದು ಹೊರಬಿದ್ದೆʼ ಎಂದು ಮೊದಲು ಹೇಳಿಕೆ ನೀಡಿದ್ದ ನಟ ದರ್ಶನ್‌ (Actor Darshan), ಬರೋಬ್ಬರಿ 50 ನಿಮಿಷ ಅಲ್ಲಿದ್ದು ರೇಣುಕಾ ಸ್ವಾಮಿಯನ್ನು ಟಾರ್ಚರ್‌ ಮಾಡಿದ್ದು ಬಯಲಾಗಿದೆ. ಬೆಲ್ಟ್‌, ದೊಣ್ಣೆಗಳಿಂದ ಥಳಿಸಿ, ಬೂಟುಗಾಲಿನಿಂದ ಒದ್ದು ದರ್ಶನ್‌ ಕ್ರೌರ್ಯ ಮೆರೆದಿದ್ದಾನೆ.

ದರ್ಶನ್ ಆಂಡ್ ಗ್ಯಾಂಗ್‌ನಿಂದ ನಡೆದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ, ಆತನ ಮೇಲೆ ಡಿ ಹಂತಕ ಪಡೆ ಎಷ್ಟು ಸಮಯ ದಾಳಿ‌ ಮಾಡಿತು ಎಂಬ ವಿವರಗಳು ಸಿಸಿಟಿವಿ ರೆಕಾರ್ಡಿಂಗ್‌ ಮೂಲಕ ಹೊರಬಿದ್ದಿವೆ. ತಾನು ಹಲ್ಲೆ ಮಾಡಿಲ್ಲ ಎಂದ ದರ್ಶನ್‌, ಆ ಐವತ್ತು ನಿಮಿಷದ ಸೀಕ್ರೆಟ್ ಸಿಸಿಟಿವಿಯಿಂದ ರಿವೀಲ್ ಆದ ಬಳಿಕ ನಿಜ ಒಪ್ಪಿಕೊಂಡಿದ್ದಾನೆ. ಪಟ್ಟಣಗೆರೆ ಶೆಡ್‌ಗೆ ಸಂಜೆ 4.30ಕ್ಕೆ ವಿನಯ್ ಜೊತೆಗೆ ಎಂಟ್ರಿಯಾಗಿದ್ದ ದರ್ಶನ್, ಶೆಡ್‌ನಿಂದ ತೆರಳಿದ್ದು 5.20ಕ್ಕೆ ಎಂದು ಗೊತ್ತಾಗಿದೆ.

ರೇಣುಕಾ ಸ್ವಾಮಿ ಮೇಲೆ ನಿರಂತರ 30 ನಿಮಿಷ ಕಾಲ ದರ್ಶನ್‌ ಹಲ್ಲೆ ಮಾಡಿದ್ದ. ನಟನ ಕ್ರೌರ್ಯ ಸಿನಿಮಾ ಮಾದರಿಯಲ್ಲಿಯೇ ಇತ್ತು. ಬೆಲ್ಟ್‌ ಬಿಚ್ಚಿ ಮುಖ ಮೂತಿ ನೋಡದೆ ಬಾರಿಸಿದ್ದ. ʼಅಲ್ಲಿನ ಫೋಟೋ ಕಳಿಸ್ತೀಯಾ?ʼ ಎಂದು ಪ್ರಶ್ನಿಸುತ್ತ ಕಾಲಿನಿಂದ ಮರ್ಮಾಂಗಕ್ಕೆ ಬೂಟ್‌ ಕಾಲಿನಲ್ಲಿ ತುಳಿದಿದ್ದ. ಮನೆಯಿಂದ ಪೊಲೀಸ್‌ ಲಾಠಿ ತರಿಸಿಕೊಂಡು ಅದರಿಂದ ಥಳಿಸಿದ್ದ. ರೇಣುಕಾಸ್ವಾಮಿಯನ್ನು ಅಲ್ಲಿ ನಿಂತಿದ್ದ ವಾಹನಗಳ ಮೇಲೆ ಎತ್ತಿ ಬಿಸಾಡಿದ್ದ. ದರ್ಶನ್‌ ಆರ್ಭಟಕ್ಕೆ ಅಲ್ಲಿದ್ದ ವಾಹನಗಳೇ ಶೇಕ್ ಆಗಿದ್ದವು.

ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಕಳುಹಿಸಿದ್ದ ಮೆಸೇಜ್ ಗ್ಯಾಂಗ್‌ ಓಪನ್ ಮಾಡಿಕೊಂಡಿತ್ತು. ಆತ ಕಳುಹಿಸಿದ್ದ ಮೆಸೆಜ್ ಓದಲು ಹೇಳಿದ್ದ ಪವನ್‌ಗೆ ಹೇಳಿದ್ದ ದರ್ಶನ್, ಪವನ್ ಅವುಗಳನ್ನು ಒಂದೊಂದಾಗಿ ಜೋರಾಗಿ ಓದುತ್ತಾ ಇದ್ದಂತೆ. ಆ ಮೆಸೇಜ್‌ ಓದುತ್ತಿದ್ದ ಟೋನ್‌ನಲ್ಲಿಯೇ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿದ್ದ.

ತನಿಖೆ ಸಂದರ್ಭದಲ್ಲಿ, ಮೊದಮೊದಲು ಎರಡೇಟು ಹೊಡೆದು ಹಣ ಕೊಟ್ಟು ಹೊರಟೆ ಎಂದಿದ್ದ ದರ್ಶನ್. ಆದರೆ ದಚ್ಚು ಐವತ್ತು ನಿಮಿಷ ಶೆಡ್‌ನಲ್ಲಿದ್ದ ಮಾಹಿತಿ ಕಲೆ ಹಾಕಿದ್ದ ಪೊಲೀಸರು ಕೊನೆಗೆ ಸಾಕ್ಷಿ ಮುಂದೆ ಇಟ್ಟು ವಿಚಾರಣೆ ನಡೆಸಿದಾಗ, ಅಷ್ಟೂ ಹೊತ್ತೂ ಹಲ್ಲೆ ಮಾಡಿರುವುದಾಗಿ ಸತ್ಯ ಒಪ್ಪಿಕೊಂಡಿದ್ದಾನೆ. ದರ್ಶನ್ ಹಲ್ಲೆ ಮಾಡಿರುವುದಾಗಿ ಪವಿತ್ರಾ ಗೌಡ ಕೂಡ ಹೇಳಿಕೆ ನೀಡಿದ್ದಾಳೆ.

ಪಟ್ಟಣಗೆರೆ ಶೆಡ್‌ಗೆ ಹೋಗೋಲ್ಲ ಎನ್ನುತ್ತಿರುವ ವಾಹನ ಮಾಲೀಕರು!

ರೇಣುಕಾ ಸ್ವಾಮಿ (Renuka Swamy Murder) ನಟ ದರ್ಶನ್‌ (Actor Darshan) ಗ್ಯಾಂಗ್‌ನಿಂದ ಬರ್ಬರ ಕೊಲೆಯಾದ ಬಳಿಕ, ಪಟ್ಟಣಗೆರೆಯ ವಾಹನ ಶೆಡ್‌ (Pattanagere Shed) ಕಡೆ ಸುಳಿದಾಡಲು ವಾಹನ ಮಾಲಿಕರು ಅಂಜುತ್ತಿದ್ದಾರೆ. ಇಲ್ಲಿ ಸಾಲ ಬಾಕಿ (Loan default) ಉಳಿಸಿಕೊಂಡಿರುವವರ ವಾಹನಗಳನ್ನು ಸೀಜ್‌ (Seize) ಮಾಡಿ ತಂದಿಡಲಾಗುತ್ತಿದೆ. ಈಗ ಈ ವಾಹನಗಳನ್ನು ಬಿಡಿಸಿಕೊಳ್ಳಲು ಕೂಡ ಯಾರೂ ಈ ಶೆಡ್‌ ಕಡೆ ತಲೆ ಹಾಕುತ್ತಿಲ್ಲ.

ಸಾಲ ಬಾಕಿ ಉಳಿಸಿಕೊಂಡ ಪರಿಣಾಮ ಪಟ್ಟಣಗೆರೆ ಶೆಡ್‌ ಪಾಲಾಗಿರುವ ವಾಹನಗಳ ಮಾಲೀಕರಿಗೆ ಈಗ ಪಟ್ಟಣಗೆರೆಯ ಶೆಡ್ ಭಯವೇ ಹೆಚ್ಚಾಗಿದೆ. ರೇಣುಕಾ ಸ್ವಾಮಿ ಕೊಲೆಯ ನಡೆದ ತಾಣ ಹಾಗೂ ಅದರ ಬರ್ಬರತೆ ಇವರ ಕೈಕಾಲು ನಡುಗುವಂತೆ ಮಾಡಿದೆ. ʼನೋ ಆರ್ಗ್ಯುಮೆಂಟ್, ಓನ್ಲಿ ಸೆಟಲ್‌ಮೆಂಟ್‌ʼ ಎನ್ನುತ್ತ ಗಪ್‌ಚುಪ್‌ ಆಗಿ ಹಣ ಕಟ್ಟಿ ಬಿಡಿಸಿಕೊಂಡು ಬರುತ್ತಿದ್ದಾರೆ. ಇದರ ಆಸುಪಾಸಿನಲ್ಲಿ ಓಡಾಡುವವರು ಸಹ, ʼಇದೇ ಆ ಶೆಡ್‌ʼ ಎಂದು ಮಾತಾಡಿಕೊಳ್ಳುತ್ತ ಶೆಡ್ಡನ್ನು ನೋಡುತ್ತ ಬಿರಬಿರನೆ ಸಾಗುತ್ತಾರೆ!

ಪಟ್ಟಣಗೆರೆ ಶೆಡ್‌ಗೆ ಹೋಗಿ ವಾಹನ ಬಿಡಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಮಾಲೀಕರು ಕೆಲವೆಡೆ ಬ್ಯಾಂಕ್‌ಗೆ ಹೋಗಿ ಹಣ ಕಟ್ಟಿ, ʼನೀವೇ ವಾಹನ ತಂದುಕೊಡಿʼ ಎಂದೂ ಬ್ಯಾಂಕ್‌ನವರಿಗೆ ಮನವಿ ಮಾಡುತ್ತಿದ್ದಾರಂತೆ. ನಾವು ಶೆಡ್‌ಗೆ ಹೋಗಲ್ಲ‌ ಸರ್, ನೀವೆ ಹೋಗಿ ಎಂದು ದುಂಬಾಲು ಬೀಳುತ್ತಿದ್ದಾರೆ! ʼʼಕ್ರೂರವಾಗಿ ಸತ್ತವರು ದೆವ್ವಗಳಾಗುತ್ತಾರಂತೆ. ಅವರ ಆತ್ಮಗಳು ಅಲ್ಲೇ ಸುಳಿದಾಡ್ತಾ ಇರುತ್ತಾವಂತೆ, ನಮಗ್ಯಾಕೆ ಬೇಕು ಸಾರ್‌ ಇಲ್ಲದ ಉಪದ್ವ್ಯಾಪʼʼ ಎಂದು ಕೂಡ ಕೆಲವು ಮಾಲೀಕರು ಹೇಳುತ್ತಿದ್ದಾರೆ ಎಂದು ವರದಿಯಾಗಿದೆ.

ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾ ಸ್ವಾಮಿಯನ್ನು ಕೂಡಿಹಾಕಿ ದರ್ಶನ್‌ ಮತ್ತು ಗ್ಯಾಂಗ್‌ ಭೀಕರವಾಗಿ ಹಲ್ಲೆ ನಡೆಸಿತ್ತು. ವಾಹನಗಳಿಗೆ ರೇಣುಕಾ ಸ್ವಾಮಿಯ ತಲೆ ಜಪ್ಪಿ, ದೊಣ್ಣೆಗಳಿಂದ ಥಳಿಸಿ, ಮರ್ಮಾಂಗಕ್ಕೆ ಒದ್ದು ಹಿಂಸಿಸಿತ್ತು. ಈ ಪೀಡನೆಯನ್ನು ತಾಳಲಾರದೆ ರೇಣುಕಾ ಸ್ವಾಮಿ ಜೀವ ಶೆಡ್‌ನಲ್ಲಿಯೇ ಹೋಗಿತ್ತು. ಕೆಲಕಾಲ ಶವವನ್ನು ಶೆಡ್‌ನಲ್ಲೇ ಇಟ್ಟಿದ್ದ ಡಿ ಗ್ಯಾಂಗ್‌, ನಂತರ ಅದನ್ನು ಸುಮನಹಳ್ಳಿ ರಾಜಕಾಲುವೆಗೆ ಎಸೆದಿತ್ತು.

ಇದನ್ನೂ ಓದಿ | Actor Darshan: ರೇಣುಕಾಸ್ವಾಮಿ ಹಲ್ಲೆಗೆ ಬಳಸಿದ್ದ ʻಪೊಲೀಸ್ ಲಾಠಿʼ ಪತ್ತೆ! ʻಡಿ ಗ್ಯಾಂಗ್‌ʼಗೆ ಸಿಕ್ಕಿದ್ದು ಹೇಗೆ?

Exit mobile version