ಮುಂಬೈ: ಎಪ್ಪತ್ತೈದು ವರ್ಷದ ವೃದ್ಧನೊಬ್ಬ 35 ವರ್ಷದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಗ್ಯಾಂಗ್ ಸ್ಟರ್‌ಗಳ ಮೂಲಕ ಬೆದರಿಕೆಯನ್ನೂ ಹಾಕಿಸಿದ ಘಟನೆ ಮುಂಬಯಿಯಲ್ಲಿ ನಡೆದಿದೆ. ಸಾಲ ಮರುಪಾವತಿಯ ವಿಚಾರಕ್ಕೆ ಹುಟ್ಟಿಕೊಂಡ ವಿವಾದವೊಂದು ಹಲವು ತಿರುವುಗಳನ್ನು ಪಡೆದು ಈ ಹಂತಕ್ಕೆ ಬಂದಿದೆ ಎನ್ನಲಾಗಿದೆ.
75 ವರ್ಷದ ವೃದ್ಧ ಮುಂಬಯಿಯ ಒಬ್ಬ ಉದ್ಯಮಿಯಾಗಿದ್ದಾರೆ. ಮಹಿಳೆ ಒಬ್ಬ ಬರಹಗಾರ್ತಿ ಎನ್ನಲಾಗಿದೆ. ಇಬ್ಬರೂ ಪರಿಚಿತರೇ ಆಗಿದ್ದಾರೆ. ಇವರ ನಡುವೆ ಹಣಕಾಸಿನ ವ್ಯವಹಾರವೂ ಇತ್ತು. ಉದ್ಯಮಿ ಮಹಿಳೆ ಕೈಯಿಂದ ಸುಮಾರು ಎರಡು ಕೋಟಿ ರೂ.ಯನ್ನು ಸಾಲವಾಗಿ ಪಡೆದಿದ್ದರು. ಆದರೆ, ಸಾಕಷ್ಟು ಸಮಯ ಕಳೆದು, ಗಡುವುಗಳು ಮುಗಿದರೂ ಅದನ್ನು ವಾಪಾಸು ನೀಡಲಿಲ್ಲ ಎನ್ನಲಾಗಿದೆ.
ಮಹಿಳೆ ನಿರಂತರವಾಗಿ ಹಣ ಮರಳಿಸುವಂತೆ ಮನವಿ ಮಾಡಿದರೂ ಕಿವಿಗೆ ಹಾಕಿಕೊಳ್ಳದ ವೃದ್ಧ ಇತ್ತೀಚೆಗೆ ಆಕೆಯನ್ನು ಮುಂಬೈನ ಜುಹು ಪ್ರದೇಶದ 5 ಸ್ಟಾರ್ ಹೋಟೆಲ್ ಗೆ ಬಂದು ಹಣ ಪಡೆಯುವಂತೆ ಹೇಳಿದ್ದಾನೆ.
ಸಂತ್ರಸ್ತ ಮಹಿಳೆ ದುಡ್ಡು ಸಿಗುತ್ತದೆ ಎಂಬ ಕಾರಣಕ್ಕೋ ಏನೋ ಹೋಟೆಲ್‌ಗೆ ಹೋದಾಗ ವೃದ್ಧ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಮಹಿಳೆ ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಬೊಬ್ಬೆ ಹೊಡೆದು ಪ್ರತಿಭಟಿಸಿದಾಗ ವೃದ್ಧ ಬೆದರಿಕೆ ಹಾಕಿದ್ದಾನೆ.
ʻʻಪೋಲಿಸರಿಗೆ ಮಾಹಿತಿ ನೀಡಿದರೆ ನಿನಗೆ ಅಪಾಯ ಕಟ್ಟಿಟ್ಟ ಬುತ್ತಿ. ದಾವುದ್ ಇಬ್ರಾಹಿಂ ಹಾಗೂ ನನಗೆ ತುಂಬಾ ಪರಿಚಯ ಇದೆ, ನಿನ್ನ ಕಥೆಯನ್ನೇ ಮುಗಿಸಿಬಿಡುತ್ತೇನೆʼʼ ಅಂತ ಹೆದರಿಸಿದ್ದಾನೆ. ಆನಂತರ ದಾವೂದ್ ಇಬ್ರಾಹಿಂನ ಬಂಟರೆಂದು ಹೇಳಿಕೊಂಡ ಕೆಲವರು ಆಕೆಗೆ ಕರೆ ಮಾಡಿ, ಯಾರಿಗಾದರೂ ಏನಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಈಗ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಗೋವಾದಲ್ಲಿ ಘೋರ ಕೃತ್ಯ: ಬ್ರಿಟಿಷ್ ಮಹಿಳೆ ಮೇಲೆ ಸಂಗಾತಿ ಎದುರೇ ಅತ್ಯಾಚಾರ