ಮುಂಬಯಿ: ಮನೆಯಲ್ಲಿದ್ದ ಚಿನ್ನಾಭರಣ ದೋಚಿಕೊಂಡು ಓಡುತ್ತಿದ್ದ ಕಳ್ಳರನ್ನು ರಸ್ತೆಯಲ್ಲಿ ಬೆನ್ನಟ್ಟಿದ 9ವರ್ಷದ ಬಾಲೆಯ ಸಾಹಸದ ಸ್ಟೋರಿ ಇದು. ಸುಮಾರು ಒಂದೂವರೆ ತಾಸು ಮೂವರು ಕಳ್ಳರನ್ನು ಧೈರ್ಯದಿಂದಲೇ ಅಟ್ಟಿಸಿಕೊಂಡು ಹೋದ ಹುಡುಗಿಗೆ ಅವರನ್ನು ಹಿಡಿಯಲು ಸಾಧ್ಯವಾಗದಿದ್ದರೂ, ಪೊಲೀಸರಿಗೆ ಕಳ್ಳರ ಸಂಪೂರ್ಣ ವಿವರಣೆ ಕೊಟ್ಟಿದ್ದಾಳೆ. ಆ ಮೂವರು ಕಳ್ಳರು ಹಲವು ಕೇಸ್ಗಳಲ್ಲಿ ತಮಗೆ ಬೇಕಾದವರಾಗಿದ್ದಾರೆ, ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಪೊಲಿಸರು ಹೇಳಿದ್ದಾರೆ.
ಈ ಸಂಪೂರ್ಣ ಸ್ಟೋರಿ ಹೇಳುವುದಕ್ಕೂ ಮೊದಲು ಬಾಲಕಿ ಹೆಸರು ಹೇಳಿಬಿಡುತ್ತೇವೆ. ಆಕೆ ಹೆಸರು ಹರ್ಷಿತಾ. ಇವಳು ಕಳ್ಳರನ್ನು ಬೆನ್ನಟ್ಟಿದ್ದು ಯಾಕೆ? ಡಿಸೆಂಬರ್ 22ರಂದು ಬಾಲಕಿ ಶಾಲೆಯಿಂದ ಬರುತ್ತಿದ್ದಂತೆ ಏನಾಯಿತು?-ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಮಹಾರಾಷ್ಟ್ರದ ಚಿತಾಲ್ಸರ್ನ ಧರ್ಮವೀರ್ನಗರದ ಶ್ರದ್ಧಾ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ಅಪಾರ್ಟ್ಮೆಂಟ್ನ ಫ್ಲ್ಯಾಟ್ವೊಂದರಲ್ಲಿ ಸುಷ್ಮಾ ಪಾಂಡೆ (36) ಎಂಬುವರ ಕುಟುಂಬ ವಾಸವಾಗಿತ್ತು. ಇವರಿಗೆ ಹರ್ಷಿತಾ ಜತೆ 12ವರ್ಷದ ಅವಳಿ ಹೆಣ್ಣುಮಕ್ಕಳು ಇದ್ದಾರೆ. ಡಿ.22ರಂದು ಸಂಜೆ ಹೊತ್ತಿಗೆ ತಾವು ಹರ್ಷಿತಾಳನ್ನು ಶಾಲೆಯಿಂದ ಕರೆದುಕೊಂಡು ಬರಲು ಹೊರಟ ಸುಷ್ಮಾ, ತಮ್ಮ ಅವಳಿ ಹೆಣ್ಣುಮಕ್ಕಳ ಬಳಿ ‘ನೀವು ಇನ್ನು ಟ್ಯೂಷನ್ಗೆ ಹೊರಡಿ ಎಂದು ಹೇಳಿ ಮನೆಯಿಂದ ಹೊರಟರು. ಅಮ್ಮ ಹೊರಡುತ್ತಲೇ, ಆ ಅವಳಿ ಮಕ್ಕಳೂ ತಮ್ಮ ಮನೆಯ ಬಾಗಿಲು ಹಾಕಿ ಅಲ್ಲಿಂದ ತೆರಳಿದರು.
ಸ್ವಲ್ಪ ಸಮಯದ ಬಳಿಕ ಸುಷ್ಮಾ ತನ್ನ ಮಗಳು ಹರ್ಷಿತಾಳೊಟ್ಟಿಗೆ ಮನೆಗೆ ಬಂದಾಗ ಆಘಾತ ಕಾದಿತ್ತು. ಮನೆಯ ಬೀಗ ಒಡೆದಿತ್ತು. ಮೂವರು ಕಳ್ಳರು ಮನೆ ದೋಚುತ್ತಿದ್ದರು. ಸುಷ್ಮಾ ಬಾಯ್ಬಿಡುವ ಮುಂಚೆಯೇ, ಆ ಕಳ್ಳರಲ್ಲಿ ಒಬ್ಬಾತ ಬಂದು ಆಕೆಯನ್ನು ಕೆಳಗೆ ನೂಕಿದ್ದ. ಸುಷ್ಮಾ ಕೆಳಗೆ ಬಿದ್ದರೂ ಮತ್ತೊಬ್ಬ ಕಳ್ಳನ ಕಾಲು ಹಿಡಿದುಕೊಂಡರು. ಆದರೆ ಅವನೂ ಆಕೆಯನ್ನು ಕಾಲಿನಿಂದ ಒದ್ದಿದ್ದ. ಹೀಗಾಗಿ ಸುಷ್ಮಾ ಮೆಟ್ಟಿಲುಗಳ ಕೆಳಗೆ ಹೋಗಿ ಬಿದ್ದರು. ಆ ಮೂವರು ಕಳ್ಳರು ತಮ್ಮ ಬ್ಯಾಗ್ನಲ್ಲಿ ಸುಷ್ಮಾಳ ಮನೆಯಲ್ಲಿದ್ದ ಸುಮಾರು 120 ಗ್ರಾಂ ಚಿನ್ನವನ್ನು ತುಂಬಿಕೊಂಡು ಓಡಲು ಶುರು ಮಾಡಿದರು.
ಅಮ್ಮನೊಂದಿಗೆ ಶಾಲೆಯಿಂದ ಬಂದಿದ್ದ ಹರ್ಷಿತಾ ಇದನ್ನೆಲ್ಲ ನೋಡುತ್ತಲೇ ಇದ್ದಳು. ತನ್ನ ತಾಯಿಯನ್ನು ಕಳ್ಳರು ನೂಕಿ, ಹೊಡೆದು ಓಡಿಹೋಗಿದ್ದನ್ನು ಅವಳಿಗೆ ಸಹಿಸಲು ಸಾಧ್ಯವಾಗಲೇ ಇಲ್ಲ. ಕೂಡಲೇ ಕಳ್ಳರ ಹಿಂದೆ ಓಡಲು ಪ್ರಾರಂಭಿಸಿದಳು. ಆಕೆ ಶಾಲಾ ಸಮವಸ್ತ್ರದಲ್ಲೇ ಇದ್ದಳು. ಹೆಗಲಿಗೆ ಬ್ಯಾಗ್ ಹಾಗೇ ಇತ್ತು, ಕೈಯಲ್ಲಿ ನೀರಿನ ಬಾಟಲಿಯೂ ಇತ್ತು. ಕಳ್ಳರನ್ನು ಬೆನ್ನಟ್ಟಿದ ಹುಡುಗಿ ಜೋರಾಗಿ ‘ಕಳ್ಳ, ಕಳ್ಳ..’ ಎಂದು ಕೂಗುತ್ತಲೇ ಇದ್ದಳು. ಹುಡುಗಿ ಹೀಗೆ ಕಳ್ಳರ ಹಿಂದೆ ಓಡುತ್ತಿದ್ದರೂ ಒಬ್ಬೇಒಬ್ಬರೂ ಸಹಾಯಕ್ಕೆ ಬರಲಿಲ್ಲ. ಆ ಕಳ್ಳರನ್ನು ಹಿಡಿಯಲು ಯಾರೂ ಮುಂದೆ ಬರಲಿಲ್ಲ. ಆ ಕಳ್ಳರ ಕೈಯಲ್ಲಿ ಚಾಕುವಿನಂತ ಮಾರಕಾಸ್ತ್ರಗಳು ಇದ್ದಿದ್ದರಿಂದಲೇ ಎಲ್ಲರೂ ಹೆದರಿದ್ದರು. ಸುಮಾರು ಒಂದೂವರೆ ಕಿಲೋಮೀಟರ್ ದೂರ ಹೀಗೆ ಓಡಿದ ನಂತರ ಕಳ್ಳರು ಒಂದು ರಿಕ್ಷಾ ಹತ್ತಿ ಪರಾರಿಯಾದರು.
ಈ ಬಗ್ಗೆ ಹರ್ಷಿತಾ ಪೊಲೀಸರಿಗೆ ದೂರು ನೀಡಿದ್ದಾಳೆ. ‘ನಾನು ಮೊದಲು ನೆರೆಹೊರೆಯವರ ಬಳಿ ಸಹಾಯ ಕೇಳಿದೆ. ಆದರೆ ಕಳ್ಳರ ಕೈಯಲ್ಲಿ ಚಾಕು ನೋಡಿ ಯಾರೂ ಹತ್ತಿರ ಬರಲಿಲ್ಲ. ನಾನು ಅವರ ಹಿಂದೆ ಕಳ್ಳರು ಕಳ್ಳರು ಎಂದು ಓಡುತ್ತಿದ್ದಾಗ ಅವರು ಜನರ ದಿಕ್ಕುತಪ್ಪಿಸಲು ಮುಂದಾದರು. ಅಲ್ಲಿಯೇ ಹೋಗುತ್ತಿದ್ದ ಒಬ್ಬನನ್ನು ಸುಮ್ಮನೆ ಥಳಿಸಿದರು. ಆತ ಕಳ್ಳ, ತಾವಲ್ಲ ಎಂದು ಬಿಂಬಿಸುವ ನಾಟಕವಾಡಿದರು’ ಎಂದೂ ಆಕೆ ಪೊಲೀಸರಿಗೆ ತಿಳಿಸಿದ್ದಾಳೆ. ‘ನಾವು ಸಿಸಿಟಿವಿ ಫೂಟೇಜ್ಗಳನ್ನೆಲ್ಲ ವಶಪಡಿಸಿಕೊಂಡಿದ್ದೇವೆ. ಆದಷ್ಟು ಶೀಘ್ರದಲ್ಲೇ ಕಳ್ಳರನ್ನು ಬಂಧಿಸುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಗಿರೀಶ್ ಗೊಂಡೆ ಹೇಳಿದ್ದಾರೆ.
ಇದನ್ನೂ ಓದಿ: Delhi School | 5ನೇ ತರಗತಿ ಬಾಲಕಿಯನ್ನು ಶಾಲೆಯ ಮೊದಲನೆ ಅಂತಸ್ತಿನಿಂದ ಹೊರಗೆ ಎಸೆದ ಶಿಕ್ಷಕಿ!