Site icon Vistara News

Accident Case : ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ನೀರುಪಾಲು; ಟ್ಯಾಕ್ಟರ್‌ಗೆ ಸಿಲುಕಿ ವಿದ್ಯಾರ್ಥಿ ಸಾವು

Road Accident

ಉಡುಪಿ/ಬಾಗಲಕೋಟೆ: ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ನೀರಿಗೆ ಬಿದ್ದು (Drowned in water) ಮೃತಪಟ್ಟಿದ್ದಾರೆ. ಉಡುಪಿಯ ಬೈಂದೂರು ತಾಲೂಕಿನ ಶಿರೂರು ಅಳ್ವೆ ಗದ್ದೆಯಲ್ಲಿ ಘಟನೆ (Accident Case) ನಡೆದಿದೆ. ಅಳ್ವೆ ಗದ್ದೆ ನಿವಾಸಿ ವೆಂಕಟರಮಣ ದುರ್ಗಪ್ಪ ಮೊಗೇರ್ (65) ಮೃತಪಟ್ಟವರು.

ವೆಂಕಟರಮಣ ಪಾತಿ ದೋಣಿಯ ಮೂಲಕ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ನಡೆಸಿ ವಾಪಾಸ್ಸಾಗುತ್ತಿದ್ದಾಗ ದಡದ ಸಮೀಪ ಬರುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ. ಈ ವೇಳೆ ವೆಂಕಟರಮಣರಿಗೆ ಉಸಿರುಗಟ್ಟಿದ್ದು, ದಡ ಸೇರಲು ಸಾಧ್ಯವಾಗಿಲ್ಲ. ಅಲ್ಲಿದ್ದವರು ಕೂಡಲೇ ನೀರಿಗೆ ಬಿದ್ದವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಅಸುನೀಗಿದ್ದಾರೆ. ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಬ್ಬಿನ ಟ್ರ್ಯಾಕ್ಟರ್‌ಗೆ ಸಿಲುಕಿ ವಿದ್ಯಾರ್ಥಿ ಸಾವು

ಶಾಲೆಯಿಂದ ಮನೆಗೆ ತೆರಳುವಾಗ ಟ್ರ್ಯಾಕ್ಟರ್ ಡಬ್ಬಿಗೆ ಸಿಲುಕಿದ ವಿದ್ಯಾರ್ಥಿಯೊಬ್ಬ ದಾರುಣವಾಗಿ ಮೃತಪಟ್ಟಿದ್ದಾನೆ. ನಿಖೀಲ್ ಕೊಳಿ (13) ಮೃತ ದುರ್ದೈವಿ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಗಿರೀಶ್ ಶಾಲೆ ಬಳಿ ಈ ಘಟನೆ ನಡೆದಿದೆ.

ನಿಖೀಲ್‌ ಜಮಖಂಡಿ ನಗರದ ಜ್ಞಾನ ಗಂಗೋತ್ರಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಶಾಲೆ ಮುಗಿಸಿ ಸೈಕಲ್‌ನಲ್ಲಿ ಹೋಗುತ್ತಿದ್ದ ನಿಖೀಲ್‌ಗೆ ಟ್ರ್ಯಾಕ್ಟರ್‌ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಜಮಖಂಡಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: Road Accident: ಮಂಜು ಕವಿದ ಹೆದ್ಧಾರಿಯಲ್ಲಿ ಕೆಟ್ಟು ನಿಂತ ಲಾರಿಗೆ ಕಾರು ಡಿಕ್ಕಿ, ಇಬ್ಬರು ಸಾವು

ಮೈಸೂರಲ್ಲಿ ಬೈಕ್‌ಗೆ ಕಾರು ಡಿಕ್ಕಿ, ಸವಾರ ಗಂಭೀರ

ಕಾರು-ಬೈಕ್ ನಡುವೆ ಡಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡಿದ್ದಾನೆ. ಮೈಸೂರಿನ ಸರಸ್ವತಿಪುರಂನ ಅಗ್ನಿಶಾಮಕದಳದ ಕಚೇರಿ ಮುಂದಿರುವ ವೃತ್ತದಿಂದ ಏಕಲವ್ಯ ವೃತ್ತದ ಕಡೆಗೆ ಕಾರು ಬರುತ್ತಿತ್ತು. ಏಕಲವ್ಯ ವೃತ್ತದಿಂದ ಅಗ್ನಿಶಾಮಕ ದಳ ಕಚೇರಿಯತ್ತ ಬೈಕ್ ಸವಾರ ಸಾಗುತ್ತಿದ್ದ. ಈ ವೇಳೆ ಕಾರು ಚಲಾಯಿಸುತ್ತಿದ್ದ ಮಹಿಳೆ ಮುಂದೆ ಸಾಗುತ್ತಿದ್ದ ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್‌ಗೆ ಗುದ್ದಿದ್ದರಿಂದ ಅಪಘಾತ ಸಂಭವಿಸಿದೆ.

ಕಾರು ಡಿಕ್ಕಿಯೊಡೆದ ರಭಸಕ್ಕೆ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬೈಕ್‌ ಹಾಗೂ ಕಾರಿ‌ನ ಮುಂಭಾಗ ಜಖಂಗೊಂಡಿದೆ. ಸುದ್ದಿ ತಿಳಿಯುತ್ತಿದ್ದಂತೆ ಸಂಚಾರ ವಿಭಾಗದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ, ಎರಡೂ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕೆಆರ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿಯಲ್ಲಿ ಚಲಿಸುತ್ತಿದ್ದ ಕಾರಲ್ಲಿ ಕಾಣಿಸಿಕೊಂಡ ಬೆಂಕಿ

ಹುಬ್ಬಳ್ಳಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ‌ ಏಕಾಏಕಿ ಬೆಂಕಿ ಕಾಣಿಸಿಕೊಂಡು ಧಗಧಗನೆ ಹೊತ್ತಿ ಉರಿದಿದೆ. ಹುಬ್ಬಳ್ಳಿ- ಧಾರವಾಡ ರಸ್ತೆಯ ಉಣಕಲ್ ಕೆರೆಯ ಬಳಿ ಘಟನೆ ನಡೆದಿದೆ. ವೇಗವಾಗಿ ಸಾಗುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನೂ ಗಮನಿಸಿದ ಚಾಲಕ ಕೂಡಲೆ ಕೆಳಗಿಳಿದು ಬಚಾವ್‌ ಆಗಿದ್ದಾನೆ. ನೋಡನೋಡುತ್ತಲೆ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version